ಮೊಗರ್ನಾಡ್ ನ ದೇವ ಮಾತಾ ಚರ್ಚ್ ನಲ್ಲಿ ಸಂಭ್ರಮದಿಂದ ‘ಹಿರಿಯರ ದಿನ’ ಆಚರಣೆ

ಹಿರಿಯರ ತ್ಯಾಗ, ಬಲಿದಾನವನ್ನು ಬಣ್ಣಿಸಲು ಅಸಾಧ್ಯ. ವೃದ್ಧಾಪ್ಯದಲ್ಲಿ ಸೇವಾ ಮನೋಭಾವ ಇರಬೇಕು – ಫಾದರ್ ಮನೋಹರ್ ಡಿಸೋಜ
ಬಂಟ್ವಾಳ : 250ನೇ ವರ್ಷದ ಬೆಳ್ಳಿಹಬ್ಬದ ಆಚರಣೆಯಲ್ಲಿರುವ ಮೊಗರ್ನಾಡ್ ಕರಿಂಗಾನ ದೇವ ಮಾತಾ ಚರ್ಚ್ ನಲ್ಲಿ ಫೆಬ್ರವರಿ 16ರಂದು ಆದಿತ್ಯವಾರ ಹಿರಿಯರ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಳೆದ 250 ವರ್ಷಗಳಲ್ಲಿ ದೇವರು ನೀಡಿದ ಆಶೀರ್ವಾದಗಳಿಗೆ ಕೃತಜ್ಞತಾಪೂರ್ವಕವಾಗಿ ದಿವ್ಯ ಬಲಿಪೂಜೆಯನ್ನು ನಡೆಸಲಾಯಿತು. ಪ್ರಧಾನ ಧರ್ಮಗುರುಗಳಾಗಿ ಫರಂಗಿಪೇಟೆಯ ಕಾಪುಚಿನ್ ಧರ್ಮಗುರು ವಂದನೀಯ ಫಾದರ್ ಮನೋಹರ್ ಡಿಸೋಜ ಹಾಗೂ ಮೊಗರ್ನಾಡ್ ಚರ್ಚ್ ನ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊರವರು ದಿವ್ಯ ಬಲಿಪೂಜೆಯನ್ನು ಅರ್ಪಿಸಿ ಬಲಿಪೂಜೆಯಲ್ಲಿ ಭಾಗವಹಿಸಿದ ಎಲ್ಲಾ ಹಿರಿಯರಿಗೆ ದೇವರ ಆಶೀರ್ವಾದಗಳನ್ನು ನೀಡಿದರು.
ಬಲಿಪೂಜೆಯ ಬಳಿಕ ಸಾಂಸ್ಕೃತಿಕ ಕಾರ‍್ಯಕ್ರಮವನ್ನು ಚರ್ಚ್ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂತೋಷ್ ಡಿಸೋಜ ನೆರೆದ ಎಲ್ಲರಿಗೂ ಸ್ವಾಗತಿಸಿದರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಚರ್ಚ್ ಪ್ರಧಾನ ಧರ್ಮಗುರು ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಫರಂಗಿಪೇಟೆಯ ಕಾಪುಚಿನ್ ಧರ್ಮಗುರು ವಂದನೀಯ ಫಾದರ್ ಮನೋಹರ್ ಡಿಸೋಜ, ದೇವಮಾತಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ವಂದನೀಯ ಫಾದರ್ ನವೀನ್ ಪ್ರಕಾಶ್ ಪಿಂಟೊ, ವಂದನೀಯ ಡೀಕನ್ ಮೆಲ್ವಿನ್ ಡಿಸೋಜ, ಬ್ರದರ್ ಜೊಯೆಲ್, ಬ್ರದರ್ ಆಶ್ವಿನ್, ಪಾಲನಾ ಸಮಿತಿಯ ಉಪಾಧ್ಯಕ್ಷ ಸಂತೋಷ್ ಡಿಸೋಜ, ಕಾರ‍್ಯದರ್ಶಿ ವಿಲ್ಫೆçಡ್ ಲೋಬೊ, ಆಯೋಗಗಳ ಸಂಯೋಜಕಿ ಎಮಿಲಿಯಾನ ಡಿಕುನ್ಹಾ, ಬೆಳ್ಳಿಹಬ್ಬ ಸಮಿತಿಯ ಸಂಚಾಲಕ ನವೀನ್ ರಾಜೇಶ್ ಡಿಕುನ್ಹಾ ಹಾಗೂ ಎಲ್ಲಾ ಆಯೋಗಗಳ ಸಂಚಾಲಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದೇವಮಾತಾ ಚರ್ಚ್ ಚರಿತ್ರೆಯ ಒಂದು ಕಿರುಪರಿಚಯವನ್ನು ಶಿಕ್ಷಕಿ ಎಮಿಲಿಯಾನಾ ಡಿಕುನ್ಹಾ ನೀಡಿದರು. ಐ.ಸಿ.ವೈ.ಎಂ. ಸಂಘಟನೆಯ ಸದಸ್ಯರಿಂದ ನೃತ್ಯ ಹಾಗೂ ಹಿರಿಯರಿಗೆ ಕೆಲವು ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಿದರು.
ಮುಖ್ಯ ಅತಿಥಿಗಳಾದ ವಂದನೀಯ ಫಾದರ್ ಮನೋಹರ್ ಡಿಸೋಜರವರು “ಹಿರಿಯರ ತ್ಯಾಗ, ಬಲಿದಾನವನ್ನು ಬಣ್ಣಿಸಲು ಅಸಾಧ್ಯ. ಅವರ ಈ ವೃದ್ಧಾಪ್ಯದಲ್ಲಿ ಸೇವಾ ಮನೋಭಾವ ಇರಬೇಕು. ಜೀವನದಲ್ಲಿ ಭರವಸೆ, ಪ್ರೀತಿ ತುಂಬಿದ ಮನುಷ್ಯರಾಗಬೇಕು. ಈ ಬೆಳ್ಳಿಹಬ್ಬವು ಪ್ರೀತಿಯ ಸಂಭ್ರಮ ಎಂದು ಅವರ ಸಂದೇಶವನ್ನು ನೀಡಿದರು. ಅಧ್ಯಕ್ಷ ಸ್ಥಾನದಿಂದ ಮಾತಾಡಿದ ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊರವರು ಹಿರಿಯರನ್ನು ಉದ್ದೇಶಿಸಿ, “ಒಳ್ಳೆಯ ಆರೋಗ್ಯ, ಹಾಗೂ ಒಳ್ಳೆಯ ಚರ್ಚ್ ಅನ್ನು ನಮಗೆ ದಯಪಾಲಿಸಿದ ದೇವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಬಡತನವನ್ನು ಹೋಗಲಾಡಿಸಲು ಶ್ರೀಮಂತಿಕೆ ಬೇಕು, ಆದರೆ ದೇವರ ಸಾನಿಧ್ಯದಲ್ಲಿ, ದೇವರಲ್ಲಿ ಭರವಸೆಯನ್ನಿಟ್ಟು, ದೇವರಲ್ಲಿ ಪ್ರಾರ್ಥಿಸುತ್ತಾ ಜೀವಿಸುವ ಎಂಬ ಸಂದೇಶವನ್ನು ನೀಡಿದರು.
ಕಾರ‍್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಹಿರಿಯರಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು. ನೆರೆದ ಎಲ್ಲರಿಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ವಂದನೀಯ ಫಾದರ್ ನವೀನ್ ಪ್ರಕಾಶ್ ಪಿಂಟೊರವರು ಭೋಜನದ ಮೇಲೆ ದೇವರ ಆಶೀರ್ವಾದವನ್ನು ಬೇಡಿದರು. ನಂತರ ದೇವರಿಗೆ ಕೃತಜ್ಞತೆಗಳನ್ನು ಸಲ್ಲಿಸುವ ಲಾವ್ದಾತೆ ಎಂಬ ಗೀತೆಯನ್ನು ಎಲ್ಲರೂ ಹಾಡಿದರು. ಕಾರ‍್ಯಕ್ರಮವನ್ನು ನೋಯೆಲ್ ಲೋಬೊ ನಿರೂಪಿಸಿದರು.