ಶಿಕ್ಷಕಿಯ ಮೇಲೆ ಹಗೆ ತೀರಿಸಿಕೊಳ್ಳಲು ಸ್ಕೂಲ್ ವಾಶ್ ರೂಮ್‌ನಲ್ಲಿ ಬಾಂಬ್ ಬ್ಲಾಸ್ಟ್ ಸಂಚು

ವಿದ್ಯಾರ್ಥಿನಿಯರ ಮಾಸ್ಟರ್ ಪ್ಲ್ಯಾನ್ ಬಯಲು – ಬೆಚ್ಚಿಬಿದ್ದ ಪೊಲೀಸರು
ನಾಲ್ವರು ವಿದ್ಯಾರ್ಥಿನಿಯರ ಬಂಧನ
ಟೀಚರ್ ಮೇಲಿನ ಕೋಪಕ್ಕೆ ವಾಶ್‌ರೂಮ್‌ನಲ್ಲಿ ಬಾಂಬ್ ಬ್ಲಾಸ್ಟ್ ಮಾಡಲು ಹೋಗಿ ಐದು ವಿದ್ಯಾರ್ಥಿಗಳು ಪೊಲೀಸರ ಅತಿಥಿಯಾಗಿರುವ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಭಾವನಾತ್ಕಕ ಸಂಬಂಧ ಇರಬೇಕು. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ ಎಂದು ಹೇಳುತ್ತಾರೆ. ಆದರೆ ಶಿಕ್ಷಕರೊಬ್ಬರ ನಡೆಯಿಂದ ತೀವ್ರವಾಗಿ ಬೇಸರಗೊಂಡಿದ್ದ ವಿದ್ಯಾರ್ಥಿಗಳು, ಅವರ ಮೇಲೆಯೇ ಸಂಚು ರೂಪಿಸಿದ್ದು ವಿಪರ್ಯಾಸವೇ ಸರಿ.
ಈ ದುರ್ಘಟನೆಯಲ್ಲಿ 9 ವರ್ಷದ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ಮೂವರು ಹುಡುಗಿಯರು ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಿದ್ದು, ಇನ್ನೊರ್ವ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಶಿಕ್ಷಕಿಯೊಬ್ಬರ ನಡೆಯಿಂದ ತೀವ್ರವಾಗಿ ಬೇಸರಗೊಂಡಿದ್ದ ವಿದ್ಯಾರ್ಥಿಗಳು ಅವರಿಗೆ ಬುದ್ದಿ ಕಲಿಸಬೇಕೆಂದು ಯೋಜನೆ ರೂಪಿಸಿದ್ದರು. ಅದರಂತೆ ಆನ್‌ಲೈನ್‌ನಲ್ಲಿ ಸೋಡಿಯಂ ತರಿಸಿಕೊಂಡ ವಿದ್ಯಾರ್ಥಿಗಳು ಸ್ಕೂಲ್ ವಾಶ್ ರೂಮ್‌ನಲ್ಲಿ ಅದನ್ನು ಇರಿಸಿ ಬ್ಲಾಸ್ಟ್ ಮಾಡಲು ಮುಂದಾಗಿದ್ದರು. ಆದರೆ, ಶಿಕ್ಷಕಿಯ ಬದಲು 9 ವರ್ಷದ ವಿದ್ಯಾರ್ಥಿನಿ ಟಾಯ್ಲೆಟ್ ಬಳಸಿದ ಪರಿಣಾಮ ಆಕೆ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುವಿನ ಪೋಷಕರು ನೀಡಿದ ದೂರನ್ನು ಆಧರಿಸಿ ತನಿಖೆ ನಡೆಸಿದಾಗ ವಿದ್ಯಾರ್ಥಿಗಳ ಕೈವಾಡ ಇರುವುದು ಬೆಳಕಿಗೆ ಬಂದಿದೆ.
ಘಟನೆ ಕುರಿತು ಮಾತನಾಡಿದ ಬಿಲಾಸ್‌ಪುರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಜನೇಶ್ ಸಿಂಗ್, ಕೂಡಲೇ ಶಾಲೆಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದ್ದು, ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಘಟನೆ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೊರ್ವ ಆರೋಪಿ ಸಂಬಂಧಿಕರೊಬ್ಬರ ಮನೆಗೆ ತೆರಳಿದ್ದು, ವಾಪಸ್ ಬಂದ ಕೂಡಲೇ ಬಂಧಿಸಲಾಗುವುದು. ತನಿಖೆ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.