ಬ್ರಹ್ಮರಕೊಟ್ಲು ಟೋಲ್‌ಗೇಟ್ ವಿರುದ್ಧ ಧರಣಿ ಸತ್ಯಾಗ್ರಹದ ಮೂಲಕ ಹೋರಾಟ ಮುಂದುವರಿಸಿದ SDPI

ನಾಡಿನ ಸಾಮಾಜಿಕ ಹೋರಾಟಗಾರರು, ಧರ್ಮ ಗುರುಗಳು ಭಾಗಿ
ಬಿ.ಸಿ. ರೋಡ್: ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ಅಸಮರ್ಪಕ ಹಾಗೂ ಅವೈಜ್ಞಾನಿಕ ಬ್ರಹ್ಮರಕೊಟ್ಲು ಟೋಲ್‌ಗೇಟ್ ತೆರವುಗೊಳಿಸಲು ಆಗ್ರಹಿಸಿ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ವತಿಯಿಂದ ಫೆಬ್ರವರಿ 25ರಂದು ಬ್ರಹ್ಮರಕೊಟ್ಲು ಟೋಲ್‌ಗೇಟ್ ಬಳಿ ಬೆಳಗ್ಗಿನಿಂದ ಸಂಜೆಯವರೆಗೆ ಧರಣಿ ಸತ್ಯಾಗ್ರಹ ನಡೆಸಲಾಯಿತು. ನ್ಯಾಯವಾದಿಗಳು ಹಾಗೂ ಮಡಿಕೇರಿ ಬೆಟ್ಟಳ್ಳಿ ಚರ್ಚ್ ಧರ್ಮಗುರುಗಳಾದ ಜೆರಾಲ್ಡ್ ಸಿಕ್ವೇರಾರವರು ಬ್ಯಾಂಡ್ ಬಾರಿಸುವ ಮೂಲಕ ಧರಣಿ ಸತ್ಯಾಗ್ರಹಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು ಮತ್ತು ಧರಣಿಯ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರರೂ, ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು, ‘ಅಸಮರ್ಪಕ ಹಾಗೂ ಅವೈಜ್ಞಾನಿಕ ಟೋಲ್‌ಗೇಟನ್ನು ತೆರವುಗೊಳಿಸುವವರೆಗೂ ಎಸ್‌ಡಿಪಿಐ ವಿಶ್ರಮಿಸುವುದಿಲ್ಲ. ಈಗಾಗಲೇ ಈ ಕುರಿತು ಜಿಲ್ಲಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯಸ್ಥರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಬ್ರಹ್ಮರಕೊಟ್ಲು ಟೋಲ್‌ಗೇಟ್‌ನ್ನು ತೆರವುಗೊಳಿಸಲು ಒತ್ತಾಯಿಸಿದ್ದೇವೆ. ಜಿಲ್ಲೆಯಾದ್ಯಂತ ಸಾರ್ವಜನಿಕ ಸಹಿ ಸಂಗ್ರಹ ಅಭಿಯಾನ ನಡೆಸಿ ಜನಾಭಿಪ್ರಾಯ ಸಂಗ್ರಹ ಮಾಡಿದ್ದೇವೆ. ಜಿಲ್ಲೆಯ ಸರ್ವ ಜನರೂ ಈ ಟೋಲ್‌ಗೇಟ್ ವಿರುದ್ಧ ತಿರುಗಿ ಬಿದ್ದಿದ್ದಾರೆ’ ಎಂದು ಕಿಡಿಕಾರಿದರು.
ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫಾನ್ಸೋ ಫ್ರಾಂಕೊ ಮಾತನಾಡಿ, ಬ್ರಹ್ಮರಕೊಟ್ಲು ಎಂಬ ಟೋಲ್ ಗೇಟ್ ಒಂದು ವ್ಯವಹಾರ ಸಂಸ್ಥೆಯಾಗಿ ಮಾರ್ಪಟ್ಟಿದೆ. ಇದೊಂದು ರೀತಿಯ ರೌಡಿಸಂ ಮಾಫಿಯವೂ ಆಗಿದೆ. ಈ ಅನಗತ್ಯ ಟೋಲ್ ಗೇಟನ್ನು ಕೂಡಲೇ ತೆರವುಗೊಳಿಸಬೇಕು ಎಂದು ಅವರು ಆಕ್ರೋಶ ಹೊರಹಾಕಿದರು. ಧರಣಿಯುದ್ದಕ್ಕೂ ಬ್ರಹ್ಮರಕೊಟ್ಲು ಟೋಲ್‌ಗೇಟ್ ವಿರುದ್ಧ ಘೋಷಣೆಗಳು, ಕ್ರಾಂತಿ ಗೀತೆಗಳು ಮೊಳಗಿತು.
ನಿವೃತ್ತ ಪ್ರಧಾನ ಅಂಚೆ ಪಾಲಕರಾದ ಡಿ. ಗಂಗಾಧರ್ ನಾಯಕ್, ಎಸ್.ಡಿ.ಪಿ.ಐ. ರಾಜ್ಯ ಸಮಿತಿ ಕಾರ್ಯದರ್ಶಿ ಅಂಗಡಿ ಚಂದ್ರು, ಎಸ್.ಡಿ.ಪಿ.ಐ. ರಾಜ್ಯ ಉಪಾಧ್ಯಕ್ಷೆ ಶಾಹಿದಾ ತಸ್ನೀಂ ಹಾಗೂ ರಾಜ್ಯ ಸಮಿತಿ ಸದಸ್ಯ ಶಾಹಿದ್ ಅಲಿ ಉಡುಪಿಯವರು ಧರಣಿಯ ಕುರಿತು ಸಂದೇಶ ಭಾಷಗೈದರು ಮತ್ತು ಹಲವು ಗಣ್ಯರು ಭಾಷಣ ಮಾಡುವುದರ ಮೂಲಕ ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ. ರಾಜ್ಯ ಸಮಿತಿ ಸದಸ್ಯೆ ಮಿಸ್ರಿಯ ಕಣ್ಣೂರು, ಮಂಗಳೂರು ನಗರ ಜಿಲ್ಲಾ ಅಧ್ಯಕ್ಷ ಅಬ್ದುಲ್ ಜಲೀಲ್ ಕೆ., ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್ ಪುತ್ತೂರು, ವಿಮೆನ್ ಇಂಡಿಯಾ ಮೂಮೆಂಟ್ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷೆ ನೌರೀನ್ ಆಲಂಪಾಡಿ, ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಹಾಗೂ ಬಂಟ್ವಾಳ ಪುರಸಭಾ ಉಪಾಧ್ಯಕ್ಷ ಮೂನಿಶ್ ಅಲಿ, ಜಿಲ್ಲಾ ಉಪಾಧ್ಯಕ್ಷರಾದ ಇನಾಸ್ ರೊಡ್ರಿಗಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಅಲೆಕ್ಕಾಡಿ, ಕಾರ್ಯದರ್ಶಿಗಳಾದ ನವಾಝ್ ಶರೀಫ್ ಕಟ್ಟೆ, ಶಾಕಿರ್ ಅಳಕೆ ಮಜಲು, ಕೋಶಾಧಿಕಾರಿ ರಹೀಮ್ ಇಂಜಿನಿಯರ್, ಎಸ್‌ಡಿಪಿಐ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಫಿಲಿಪ್ ಹೆನ್ರಿ ಡಿಸೋಜ, ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರುಗಳು ಮತ್ತು ಸಮಿತಿ ಸದಸ್ಯರು, ಸಾಮಾಜಿಕ ಹೋರಾಟಗಾರರು ಮತ್ತಿತರರು ಉಪಸ್ಥಿತರಿದ್ದರು. ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ ಸ್ವಾಗತಿಸಿ, ನಿರೂಪಿಸಿದರು.