ಮೊಗರ್ನಾಡ್ ದೇವ ಮಾತ ಚರ್ಚ್ ನಲ್ಲಿ ಸಂಭ್ರಮದ ಚರ್ಚ್ ವಾರ್ಷಿಕ ಹಬ್ಬ ಆಚರಣೆ

ವಿಶ್ವಾಸದ ಜೀವನದ ಪಯಣದಲ್ಲಿ ದೇವರ ಮಾತೆಯು ಭರವಸೆಯ ಕಿರಣ – ಫಾದರ್ ಐವನ್ ಮೈಕಲ್ ರೊಡ್ರಿಗಸ್
ಮೊಗರ್ನಾಡ್ ಕರಿಂಗಾನ ದೇವ ಮಾತ ಚರ್ಚ್ ನಲ್ಲಿ ಚರ್ಚ್ ವಾರ್ಷಿಕ ಹಬ್ಬವನ್ನು ಬಹಳ ಸಡಗರದಿಂದ ಆಚರಿಸಲಾಯಿತು. ಮಂಗಳೂರು ಧರ್ಮಕ್ಷೇತ್ರದ ವಿಟ್ಲ ವಲಯದ ಪ್ರಧಾನ ಧರ್ಮಗುರು ಅತೀ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ಇವರು ದಿವ್ಯ ಬಲಿಪೂಜೆಯ ನೇತೃತ್ವವನ್ನು ವಹಿಸಿದ್ದರು. ದೇವರು ಕನ್ಯಾ ಮಾತೆಯ ಮುಖಾಂತರ ಭಕ್ತಾಧಿಗಳಿಗೆ ವರ್ಷವಿಡೀ ನೀಡಿದ ಆಶೀರ್ವಾದಗಳನ್ನು ಸ್ಮರಿಸುತ್ತಾ ಇತರ ಧರ್ಮಗುರುಗಳೊಂದಿಗೆ ದೇವರಿಗೆ ಕೃತಜ್ಞತೆಗಳನ್ನು ಸಲ್ಲಿಸಿ, ವಿಶ್ವಾಸದ ಜೀವನದ ಪಯಣದಲ್ಲಿ ದೇವರ ಮಾತೆಯು ಭರವಸೆಯ ಕಿರಣವಾಗಲಿ. ಮರಿಯಮ್ಮನ ಪ್ರಾರ್ಥನೆಯ ಮತ್ತು ಸೇವೆಯ ಹಾದಿಯಲ್ಲಿ ನಮ್ಮ ಜೀವನ ಕುಟುಂಬದಲ್ಲಿ ಮತ್ತು ಪವಿತ್ರ ಸಭೆಯಲ್ಲಿ ಹಾಗೆಯೇ ಸಮಾಜದಲ್ಲಿ ಸೇವೆಯ ಮುಖಾಂತರ ಭರವಸೆಯ ಮನುಷ್ಯರಾಗಲು ಕರೆ ನೀಡಿದರು.
ಮೊಗರ್ನಾಡ್ ಚರ್ಚ್ ಪ್ರಧಾನ ಧರ್ಮಗುರು ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊ ದಿವ್ಯ ಬಲಿಪೂಜೆಯ ಮೊದಲು ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ, ಕಾರ್ಯದರ್ಶಿ, ಆಯೋಗಗಳ ಸಂಯೋಜಕರು, ಸದಸ್ಯರಿಗೆ, ಚರ್ಚ್ ಆರ್ಥಿಕ ಸಮಿತಿಯ ಸದಸ್ಯರಿಗೆ ಮತ್ತು ಚರ್ಚ್ ವ್ಯಾಪ್ತಿಯ ಪ್ರತಿಯೊಂದು ಕುಟುಂಬದ ಯಜಮಾನನಿಗೆ ವಾರ್ಷಿಕ ಹಬ್ಬದ ಬಾಬ್ತು ಮೊಂಬತ್ತಿಯನ್ನು ವಿತರಿಸಿದರು. ಪೂಜೆಯ ಬಳಿಕ ವಾರ್ಷಿಕ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಸಹಕರಿಸಿದ ಎಲ್ಲಾ ದಾನಿಗಳನ್ನು ಸ್ಮರಿಸುತ್ತಾ ಹೃದಯಂತರಾಳದಿಂದ ಕೃತಜ್ಞತೆಯನ್ನು ಸಲ್ಲಿಸಿದರು. ಸುಮಾರು 22 ಧರ್ಮಗುರುಗಳು ದಿವ್ಯ ಬಲಿಪೂಜೆಯಲ್ಲಿ ಭಾಗವಹಿಸಿದ್ದರು. ಹಲವಾರು ಧರ್ಮಭಗಿನಿಯರು, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಸಂತೋಷ್ ಡಿಸೋಜ, ಕಾರ್ಯದರ್ಶಿ ವಿಲ್ಫ್ರೆಡ್ ಲೋಬೊ, ಆಯೋಗಗಳ ಸಂಯೋಜಕಿ ಎಮಿಲಿಯಾನಾ ಡಿಕುನ್ಹಾ, ವಾರ್ಡ್ ಗಳ ಗುರಿಕಾರರು ಹಾಗೂ ಸಾವಿರಾರು ಭಕ್ತಾಧಿಗಳು ಪೂಜೆಯ ಸಮಯದಲ್ಲಿ ಉಪಸ್ಥಿತರಿದ್ದರು. ಚರ್ಚ್ ವ್ಯಾಪ್ತಿಗೆ ಒಳಪಟ್ಟ ಕುಟುಂಬಗಳು ತಮ್ಮ ತಮ್ಮ ಮನೆಗಳಲ್ಲಿ ವಾರ್ಷಿಕ ಹಬ್ಬವನ್ನು ಆಚರಿಸಿದರು.