ಸುರತ್ಕಲ್ 2ನೇ ವಾರ್ಡ್ ನಲ್ಲಿ 3.5 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ

ಸುರತ್ಕಲ್ ಪೂರ್ವ 2ನೇ ವಾರ್ಡ್ ದುರ್ಗಾಂಬಾ ದೇವಸ್ಥಾನದ ಬಳಿ 3 ಕೋಟಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ವಾರ್ಡಿನ ವಿವಿಧ ಭಾಗದಲ್ಲಿ ನಡೆಯಲಿರುವ ರಸ್ತೆ ಕಾಂಕ್ರೀಟಿಕರಣ, ರಸ್ತೆ ಡಾಮರೀಕರಣ, ಮಳೆ ನೀರಿನ ಚರಂಡಿ ಕಾಮಗಾರಿ ಹಾಗೂ ವಿದ್ಯುತ್ಕರಣ ಕಾಮಗಾರಿಗಳಿಗೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ. ಅವರು ಫೆಬ್ರವರಿ 26ರಂದು ಬುಧವಾರ ಸಂಜೆ ಗುದ್ದಲಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ಬಳಿಕ ಮಾತಾಡಿದ ಅವರು, “ಮಂಗಳೂರು ಉತ್ತರ ಕ್ಷೇತ್ರದಲ್ಲಿ ಈ ಅವಧಿಯಲ್ಲಿ ನಮ್ಮ ಸರಕಾರ ಇಲ್ಲದೆ ಇದ್ದರೂ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಮಂಗಳೂರು ಮಹಾನಗರ ಪಾಲಿಕೆಯ ಅನುದಾನ ಬಳಸಿಕೊಂಡು ಈ ಭಾಗದ ಕಾರ್ಪೊರೇಟರ್ ಶ್ವೇತಾ ಪೂಜಾರಿ ಅವರು ಜನರ ಬಹುಮುಖ್ಯ ಬೇಡಿಕೆಗಳಾದ ಕುಡಿಯುವ ನೀರು, ರಸ್ತೆ, ಚರಂಡಿ ಅಭಿವೃದ್ಧಿಗೆ ಶ್ರಮವಹಿಸಿ ದುಡಿದಿದ್ದಾರೆ. ಇದಕ್ಕಾಗಿ ಪಾಲಿಕೆ ಕಾರ್ಪೋರೇಟರ್, ಅಧಿಕಾರಿಗಳಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಪ್ರತೀ ಕಾಮಗಾರಿ ಸಂದರ್ಭದಲ್ಲಿ ಕ್ಷೇತ್ರದ ಜನರು, ಕಾರ್ಯಕರ್ತರು ಸ್ವಲ್ಪ ಕಾಲ ಅಡೆತಡೆ ಎದುರಾದರೂ ಅದನ್ನು ಸಹಿಸಿಕೊಂಡು ಸಹಕರಿಸಿದ್ದಾರೆ. ಮುಂದೆಯೂ ಅದೇ ರೀತಿ ಸಹಕಾರ ನೀಡಿ” ಎಂದರು.
ಈ ಸಂದರ್ಭದಲ್ಲಿ ಮಂಗಳೂರು ಮೇಯರ್ ಮನೋಜ್ ಕುಮಾರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆಶ್ರಿತ್ ನೋಂಡಾ, ಮಂಗಳೂರು ನಗರ ಪಾಲಿಕೆ ಸದಸ್ಯೆ ಶ್ವೇತಾ ಪೂಜಾರಿ, ಉತ್ತರ ಮಂಡಲ ಸಹಕಾರಿ ಪ್ರಕೋಷ್ಠ ಸಂಚಾಲಕ ಅಶೋಕ್ ಶೆಟ್ಟಿ, ಲೋಕೇಶ್ ಬೊಳ್ಳಾಜೆ, 2ನೇ ವಾರ್ಡ್ ಅಧ್ಯಕ್ಷ ಸುರೇಂದ್ರ ಸುವರ್ಣ, ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ದಿನಕರ್ ಇಡ್ಯಾ, ಮಂಗಳೂರು ಉತ್ತರ ಕೋಶಾಧಿಕಾರಿ ಪುಷ್ಪರಾಜ್ ಕರ್ಕೇರ ಮುಕ್ಕ, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ಸರಿತಾ ಶಶಿಧರ್, ಬೂತ್ ಅಧ್ಯಕ್ಷರು, ಕಾರ್ಯದರ್ಶಿ, ಸಾರ್ವಜನಿಕರು ಕಾರ್ಯಕರ್ತರು ಉಪಸ್ಥಿತರಿದ್ದರು.