ಸುಳ್ಯದಲ್ಲಿ ಗಾಂಜಾ ಪ್ರಕರಣಗಳ ತೀವ್ರ ಹೆಚ್ಚಳ – ಒಂದೇ ದಿನ ಎರಡು ಪ್ರಕರಣ ದಾಖಲು

ಮಂಗಳೂರು ಫೆಬ್ರವರಿ 27: ಮಂಗಳೂರು ಆಸುಪಾಸು ಅಮಲು ಪಧಾರ್ಥ ಮಾರಾಟ ಹಾಗೂ ಸೇವನೆಯ ಜಾಲ ದಿನನಿತ್ಯ ಹೆಚ್ಚಾಗುತ್ತಾ ಇದೆ. ಇದಕ್ಕೆ ಪೂರಕವೆಂಬಂತೆ ಫೆಬ್ರವರಿ 26ರಂದು ಒಂದೇ ದಿನ ಗಾಂಜಾ ಪೂರೈಕೆ ಮತ್ತು ಸೇವನೆಯ 2 ಪ್ರಕರಣಗಳು ದಾಖಲಾಗಿವೆ.
ನಿನ್ನೆ ಸುಳ್ಯದ ಕೆವಿಜಿ ವೃತ್ತದ ಬಳಿ ನಿಂತಿದ್ದ ವ್ಯಕ್ತಿಯೊಬ್ಬನನ್ನು ಸಂಶಯದ ಮೇಲೆ ತಡೆದು ವಿಚಾರಿಸಿದಾಗ ಆತ ಗಾಂಜಾ ಸೇವನೆ ಮಾಡಿದ್ದು ತಿಳಿದುಬಂದಿದೆ. ಕೂಡಲೆ ಸುಳ್ಯ ಠಾಣಾ ಪೋಲಿಸ್ ಉಪನಿರೀಕ್ಶಕ ಸಂತೋಷ್ ಬಿ.ಪಿ. ರವರು ವ್ಯಕ್ತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅಮಲು ಪದಾರ್ಥ ಗಾಂಜಾ ಸೇವನೆ ಮಾಡಿರುವುದು ದ್ರಢಪಟ್ಟಿತು.
ಹೆಚ್ಚುವರಿ ತನಿಖೆಗೆ ಒಳಪಡಿಸಿದಾಗ ಈತನು ಮಂಡ್ಯ ಜಿಲ್ಲೆಯ ಪಾಂಡವಪುರದ ತಿಮ್ಮನ ಕೊಪ್ಪಲು ಗ್ರಾಮದ 23 ವರ್ಷ ಪ್ರಾಯದ ದರ್ಶನ್ ಟಿ.ಎಂ. ಎಂದು ತಿಳಿದು ಬಂದಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ: 26/2025 ಕಲಂ: 27(ಬಿ) ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಂದೇ ಮದ್ಯಾಹ್ನ, ಸುಳ್ಯ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕ ಸಂತೋಷ್ ಬಿ.ಪಿ. ರವರು, ಖಚಿತ ಮಾಹಿತಿಯ ಮೇರೆಗೆ ಸುಳ್ಯ ತಾಲೂಕು ಸುಳ್ಯ ಕಸ್ಬಾ ಗ್ರಾಮದ ಕುರುಂಜಿ ಬಾಗ್ ಎಂಬಲ್ಲಿ ದಾಳಿ ಮಾಡಿ, ಆರೋಪಿತನಾದ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ 22 ವರ್ಷ ಪ್ರಾಯದ ತುಷಾರ್ ಬಿ.ಕೆ. ಎಂಬಾತನನ್ನು ಅಂದಾಜು 510 ಗ್ರಾಂ ತೂಕದ ಗಾಂಜಾದೊಂದಿಗೆ ವಶಕ್ಕೆ ಪಡೆದಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ: 27/2025 ಕಲಂ: 8(c),20(b) (ii)(A) NDPS ACT ರಂತೆ ಪ್ರಕರಣ ದಾಖಲಿಸಲಾಗಿರುತ್ತದೆ.
ಈತನಕ ಸ್ಥಳೀಯರೇ ಸೇವಿಸಿ ಮಾರಾಟ ಮಾಡುತ್ತಿದ್ದ ಗಾಂಜಾವನ್ನು ಜಿಲ್ಲೆಯ ಹೊರಗಿನವರು ಇಲ್ಲಿಗೆ ಬಂದು ವಾತಾವರಣವನ್ನೇ ಕುಲುಷಿತಗೊಳಿಸುವುದು ಕಂಡುಬಂದಿದೆ. ಇದರಿಂದಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಹೆಚ್ಚಿನ ಮುತುವರ್ಜಿ ವಹಿಸಿ ಗಾಂಜಾದಿಂದ ಯುವಜನತೆಯನ್ನು ಪಾರು ಮಾಡಲು ಶ್ರಮಿಸಬೇಕಾಗಿದೆ. ಅಷ್ಟೇ ಅಲ್ಲದೆ ಇವರು ಶಿಕ್ಷೆಯಿಂದ ಪಾರಾಗದಂತೆ ಕಠಿಣ ಕಲಂಗಳನ್ನು ಬಳಸಿ ನ್ಯಾಯಾಲಯಕ್ಕೆ ಸಾಕ್ಷಿ ಒದಗಿಸುವುದು ಅತ್ಯಾವಶ್ಯಕವಾಗಿದೆ.