ಪುತ್ತೂರಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಅಜ್ಜಿ ಹಾಗೂ ಮೊಮ್ಮಗ ಸ್ಥಳದಲ್ಲೇ ಸಾವು

ಇನ್ನೊಂದು ರಿಕ್ಷಾವನ್ನು ಹಿಂದಿಕ್ಕಲು ವೇಗವಾಗಿ ರಿಕ್ಷಾವನ್ನು ಚಲಾಯಿಸಿದ್ದು ಅಪಘಾತಕ್ಕೆ ಕಾರಣ
ಪುತ್ತೂರಿನ ನೆಹರೂ ನಗರದಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಂಜಲಪಡ್ಪು ಪೆಟ್ರೋಲ್ ಪಂಪ್ ಸಮೀಪ ಓವರ್ ಟೆಕ್ ಮಾಡಲು ಹೋದ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಮುಗುಚಿ ಎದುರಿನಿಂದ ಬರುತ್ತಿದ್ದ KSRTC ಬಸ್ ಗೆ ಢಿಕ್ಕಿ ಸಂಭವಿಸಿದ ಪರಿಣಾಮ ರಿಕ್ಷಾದಲ್ಲಿದ್ದ ಮಹಿಳೆ ಮತ್ತು ಮಗು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಮಾರ್ಚ್ 2ರಂದು ಆದಿತ್ಯವಾರ ಸಂಜೆ ಸಂಭವಿಸಿದೆ. ಇತರ ಮೂವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುತ್ತೂರು ತಾಲ್ಕಿನ ಕೆದಂಬಾಡಿ ಗ್ರಾಮದ ಗುಡ್ಡೆ ಪಡ್ಪು ನಿವಾಸಿ ಮೇಸ್ತ್ರಿ ಮಹಮ್ಮದ್ ಅವರ ಪತ್ನಿ 50ವರ್ಷ ಪ್ರಾಯದ ಜಮೀಲಾ ಮತ್ತು ಮೊಮ್ಮಗ 4ವರ್ಷ ಪ್ರಾಯದ ತಪ್ಸಿಬ್ ಮೃತಪಟ್ಟಿದ್ದಾರೆ. ರಿಕ್ಷಾ ಚಾಲಕ ಮಹಮ್ಮದ್, ಬಲ್ಕಿಸ್ ಮತ್ತು ಇನ್ನೊಂದು ಮಗು ಮಹಮ್ಮದ್ ಜಾಬಿದ್ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಮಹಮ್ಮದ್ ಮತ್ತು ಮನೆಯವರು ಮಾರ್ಚ್ 2ರಂದು ಬೆಳಗ್ಗೆ ತೊಕ್ಕೊಟ್ಟಿಗೆ ತೆರಳಿದ್ದು, ಸಂಜೆ ವಾಪಸಾಗುತ್ತಿದ್ದಾಗ ಮಂಜಲಪಡ್ಪಿನಲ್ಲಿ ಇನ್ನೊಂದು ರಿಕ್ಷಾವನ್ನು ಹಿಂದಿಕ್ಕಲು ಯತ್ನಿಸಿದಾಗ ಈ ಅಪಘಾತ ಸಂಭವಿಸಿ ಪುತ್ತೂರಿನಿಂದ ಬರುತ್ತಿದ್ದ KSRTC ಬಸ್ಸನ್ನು ನೋಡಿ ರಿಕ್ಷಾ ಚಾಲಕ ಏಕಾ ಏಕಿ ರಿಕ್ಷಾ ತನ್ನ ವಾಹನವನ್ನು ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿದ್ದಾನೆ.
ಈ ಸಂದರ್ಭ ಬಸ್ಸಿನ ಸಮೀಪದಲ್ಲಿ ರಿಕ್ಷಾ ಸ್ಕಿಡ್ ಆಗಿ ಬಸ್ ಮುಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಚಾಲಕ ಏಕಾಏಕಿ ಬ್ರೇಕ್ ಹಿಡಿದಿರುವ ಕಾರಣ ರಿಕ್ಷಾ ಪಲ್ಟಿಯಾಗಿದೆ ಎನ್ನಲಾಗಿದ್ದು, ಈ ದೃಶ್ಯ ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಲಭ್ಯ ಮಾಹಿತಿ ಪ್ರಕಾರ ರಿಕ್ಷಾ ಚಾಲಕ ಮಹಮ್ಮದ್‌ಗೆ ಕಣ್ಣು ಕತ್ತಲು ಬಂದಂತೆ ಆಗಿರುವುದು ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಮಹಮ್ಮದ್ ರವರ ಪುತ್ರ ಶನಿವಾರ ವಿದೇಶದಿಂದ ಬಂದಿದ್ದರು. ಸದ್ಯದಲ್ಲೇ ಮನೆಯಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿತ್ತು. ಜತೆಗೆ ರಂಜಾನ್ ತಿಂಗಳೂ ಆಗಿದ್ದ ಕಾರಣ ಮನೆ ಮಂದಿ ರಿಕ್ಷಾ ಮತ್ತು ಕಾರಿನಲ್ಲಿ ಮಂಗಳೂರಿನ ತೊಕ್ಕೊಟ್ಟಿಗೆ ಬಟ್ಟೆ ಬರೆ ಖರೀದಿಗೆಂದು ತೆರಳಿದ್ದರು. ಮೃತ ಜಮೀಲಾ ಅವರ ಪುತ್ರಿಯನ್ನು ಕೂರ್ನಡ್ಕಕ್ಕೆ ವಿವಾಹ ಮಾಡಿಕೊಡಲಾಗಿದ್ದು, ಆಕೆಯ ಪುತ್ರ ತಪ್ಸಿಬ್ ಜಮೀಲಾ ಅವರ ಜತೆ ರಿಕ್ಷಾದಲ್ಲಿ ಬಂದಿದ್ದ. ಅಜ್ಜಿಯ ಮಡಿಲಿನಲ್ಲಿ ಕುಳಿತಿದ್ದ ಈ ಮಗು ಕೂಡ ಸಾವನ್ನಪ್ಪಿದೆ.