ಮಂಗಳೂರು ಧರ್ಮಕ್ಷೇತ್ರದಲ್ಲಿ ಕ್ರಿಸ್ತ ಜಯಂತಿ 2025 ಜ್ಯುಬಿಲಿ ವರುಷದ ಮಹೋತ್ಸವದ ಮಹಾ ಬೈಬಲ್ ಸಮ್ಮೇಳನ

ಮಾರ್ಚ್ 20 ರಿಂದ 23 ರ ತನಕ ಕುಲಶೇಕರದ ಹೋಲಿ ಕ್ರೋಸ್ ಚರ್ಚ್ ಮೈದಾನಲ್ಲಿ ಆಯೋಜನೆ
ಮಂಗಳೂರು ಕಥೊಲಿಕ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನಾರವರ ನೇತೃತ್ವದಲ್ಲಿ ಮಂಗಳೂರು ಧರ್ಮಕ್ಷೇತ್ರದ ಬೈಬಲ್ ಆಯೋಗ ಮತ್ತು ಕಥೊಲಿಕ್ ಕಾರೆಜ್ಮಾಟಿಕ್ ಸೇವಾ ಸಂಚಲನದಿಂದ, “ವಿಶ್ವಾಸದ ಯಾತ್ರಿಕರು” ಎಂಬ ಕಥೊಲಿಕ ಧರ್ಮ ಸಭೆಯ ಈ ವರುಷದ ಧ್ಯೇಯ ವಾಕ್ಯದೊಂದಿಗೆ ‘ಭರವಸೆಯು ನಮ್ಮನ್ನು ನಿರಾಶೆಗೊಳಿಸುವುದಿಲ್ಲ’ ಎಂಬ ಬೈಬಲ್ ವಾಕ್ಯದೊಂದಿಗೆ ಕ್ರಿಸ್ತ ಜಯಂತಿ 2025 ಜ್ಯುಬಿಲಿ ವರುಷದ ಮಹೋತ್ಸವದ ಮಹಾ ಬೈಬಲ್ ಸಮ್ಮೇಳನವನ್ನು ಮಂಗಳೂರು ಧರ್ಮಕ್ಷೇತ್ರದಲ್ಲಿ ನಡೆಸಲು ಆಯೋಜಿಸಲಾಗಿದೆ. ಸಮ್ಮೇಳನದ ಲೋಗೋವನ್ನು ಇಂದು ಮಾರ್ಚ್ 3ರಂದು ಸೋಮವಾರ ಧರ್ಮಾಧ್ಯಕ್ಷರ ನಿವಾಸದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಅನಾವರಣ ಗೊಳಿಸಲಾಯಿತು.
ಈ ಸಮ್ಮೇಳನದ ಉದ್ಘಾಟನೆಯು ಮಂಗಳೂರು ಕುಲಶೇಕರದ ಹೋಲಿ ಕ್ರೋಸ್ ಧರ್ಮಕೇಂದ್ರದ ಮೈದಾನದಲ್ಲಿ ಮಾರ್ಚ್ 20 ರಂದು ಗುರುವಾರ ಪ್ರಾರಂಭವಾಗಿ 23 ರಂದು ಆದಿತ್ರವಾರದ ವರೆಗೆ ಸಂಜೆ 4:00 ಗಂಟೆಯಿಂದ ರಾತ್ರಿ 8:30 ರ ವರೆಗೆ ಜರುಗಲಿರುವುದು. ಈ ಧಾರ್ಮಿಕ ಸಮ್ಮೇಳನದಲ್ಲಿ ದಿವ್ಯ ಬಲಿಪೂಜೆ, ಪರಮ ಪ್ರಸಾದದ ಆರಾಧನೆ, ಪ್ರವಚನ ಹಾಗೂ ವಿಶೇಷ ಪ್ರಾರ್ಥನಾ ವಿಧಿ ಇರುವುದು.
ಆ ಪ್ರಯುಕ್ತ ವಿಶೇಷ ಆಹ್ವಾನಿತರಾಗಿ, ಅನಕ್ಕರ ಮೇರಿಯನ್ ರಿಟ್ರಿಟ್ ಸೆಂಟರಿನ ನಿರ್ದೇಶಕರಾಗಿರುವ ಧರ್ಮಗುರು ವಂದನೀಯ ಫಾದರ್ ಡೊಮಿನಿಕ್ ವಲಮನಲ್ ರವರು ಪ್ರಭೋದನೆ ನೀಡಲಿರುವರು. ಕುಟುಂಬ ಕಲ್ಯಾಣಕ್ಕಾಗಿ, ಜಾಗತಿಕ ಶಾಂತಿಗಾಗಿ ಹಾಗೂ ಸರ್ವ ಜನರ ಒಳಿತಿಗಾಗಿ, ದೇವರ ಕೃಪಾ, ವರದಾನ, ಆಶೀರ್ವಾದಗಳಿಗಾಗಿ ವಿಶೇಷ ಪ್ರಾರ್ಥನೆ ಇರುವುದು. ಈ ಮಹಾ ಬೈಬಲ್ ಸಮ್ಮೇಳನದಲ್ಲಿ ಸರಿಸುಮಾರು 10 ಸಾವಿರದಿಂದ 15 ಸಾವಿರ ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆ ಇದೆ. ಕಳೆದ ವರುಷ ಕ್ರಿಸ್ತ ಜಯಂತಿ 2025 ಜ್ಯುಬಿಲಿ ವರುಷದ ಪೂರ್ವ ಸಿದ್ಧತೆಯಾಗಿ ನಡೆಸಿದ ಮಹಾ ಬೈಬಲ್ ಸಮ್ಮೇಳನವು ದೇವರ ಕೃಪಾ ಆಶೀರ್ವಾದದೊಂದಿಗೆ ಅಭೂತಪೂರ್ವ ಯಶಸ್ಸನ್ನು ಕಂಡಿತ್ತು ಎಂದು ಇಂದು ಮಾರ್ಚ್ 3ರಂದು ಸೋಮವಾರ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾರವರು ಹೇಳಿದರು.
ಧರ್ಮಕ್ಷೇತ್ರದ ಶ್ರೇಷ್ಠ ಗುರು MSGR ಮ್ಯಾಕ್ಸಿಂ ಎಲ್. ನೊರೊನ್ಹಾ, ರಾಕ್ಣೊ ಕೊಂಕಣಿ ವಾರ ಪತ್ರಿಕೆಯ ಸಂಪಾದಕರಾದ ವಂದನೀಯ ಫಾದರ್ ರೂಪೇಶ್ ಮಾಡ್ತಾ, ಕುಲಶೇಕರ ಧರ್ಮಕೇಂದ್ರದ ಪ್ರಧಾನ ಧರ್ಮಗುರು ಹಾಗೂ ಧರ್ಮಕ್ಷೇತ್ರದ ಕಾರೆಜ್ಮಾಟಿಕ್ ಸಂಚಲನದ ಆದ್ಯಾತ್ಮಿಕ ನಿರ್ದೇಶಕರಾದ ವಂದನೀಯ ಫಾದರ್ ಕ್ಲಿಫರ್ಡ್ ಫೆರ್ನಾಂಡಿಸ್, ಧರ್ಮಕ್ಷೇತ್ರದ PRO ರೋಯ್ ಕ್ಯಾಸ್ತೆಲಿನೊ, ಪತ್ರಕರ್ತ ಎಲಿಯಾಸ್ ಫೆರ್ನಾಂಡಿಸ್, ಕಾರೆಜ್ಮಾಟಿಕ್ ಸಂಚಲನದ ಅಧ್ಯಕ್ಷ ಕೇವನ್ ಡಿಸೋಜ ಹಾಗೂ ಸದಸ್ಯ ಆಲ್ವಿನ್ ಡಿಸೋಜ ಉಪಸ್ಥಿತರಿದ್ದರು.