‘ಎಫ್ಫತಾ’ ಕಾರ್ಯಕ್ರಮದ ಪೋಸ್ಟರ್ ಮತ್ತು ಟೀಸರ್ ಅನಾವರಣ

ಮಂಗಳೂರು : ‘ದೈವಿಕ್ ಅಮೃತ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಈ ಸಂಸ್ಥೆಯು ಯೇಸು ಕ್ರಿಸ್ತರ ಜನನದ ಜುಬಿಲಿ ವರ್ಷದ ಪ್ರಯುಕ್ತ, ಆರೋಗ್ಯ ಮತ್ತು ಶಿಕ್ಷಣನಿಧಿ ಯೋಜನೆಗಾಗಿ ಇದೇ ಎಪ್ರಿಲ್ 27ರಂದು ಮಂಗಳೂರಿನ ಕುಲಶೇಖರ ದೇವಾಲಯದ ಮೈದಾನದಲ್ಲಿ ಆಯೋಜಿಸಲು ಯೋಜಿಸಿದ ‘ಎಫ್ಫತಾ’ಹೆಸರಿನ ಸಂಗೀತ-ನೃತ್ಯ-ಅಭಿನಯ ಕಾರ್ಯಕ್ರಮದ ಪೋಸ್ಟರನ್ನು ಮಾರ್ಚ್ 2ರಂದು ಭಾನುವಾರ, ಮಂಗಳೂರಿನ ಡಾನ್ ಬೊಸ್ಕೊ ಕೆಎನ್‌ಎಸ್ ಸ್ಟುಡಿಯೊ ಹಾಲ್‌ನಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸ್ಟ್ಯಾನಿ ಅಲ್ವಾರಿಸ್ ಅನಾವರಣಗೊಳಿಸಿದರು.
ಕಾರ್ಯಕ್ರಮದ ಮಾಹಿತಿ ಒಳಗೊಂಡ ಟೀಸರನ್ನು ‘ದೈವಿಕ್ ಅಮೃತ್’ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಆ್ಯಂಡ್ರು ಡಿಸೋಜಾ ಉದ್ಘಾಟಿಸಿದರು. ಯೇಸುಕ್ರಿಸ್ತರು ಭೋದಿಸಿದ ಸಾಮತಿಗಳ ಹಾಗೂ ಪವಿತ್ರ ಬೈಬಲಿನ ಬೋಧನೆಗಳ ಆಧಾರದಲ್ಲಿ ಮಕ್ಕಳಿಗೆ, ಯುವಜನಾಂಗಕ್ಕೆ, ದಂಪತಿಗಳಿಗೆ ಹಾಗೂ ಹಿರಿಯರಿಗೆ ಸಂದೇಶವನ್ನು ಈ ಸಂಗೀತ-ನೃತ್ಯ-ಅಭಿನಯ-ಧ್ವನಿ-ಬೆಳಕಿನ ವಿಶಿಷ್ಟ ಕಾರ್ಯಕ್ರಮದಲ್ಲಿ ಕೊಡಲಾಗುವುದು. ರೋಹನ್ ಅಡ್ಕಬಾರೆ ಇವರು ಈ ನಾಟಕವನ್ನು ರಚಿಸಿ, ಕ್ರಿಸ್ಟೋಫರ್ ನೀನಾಸಂ ಇವರು ನಿರ್ದೇಶನ ಹಾಗೂ ರೋಶನ್ ಡಿಸೋಜಾ ಆಂಜೆಲೊರ್ ಇವರು ನಾಟಕಕ್ಕೆ ಸಂಗೀತವನ್ನು ಸಂಯೋಜಿಸಿದ್ದಾರೆ.
ಕುಲಶೇಖರ ದೇವಾಲಯದ ಪಾಲನಾ ಮಂಡಳಿಯ ಉಪಾಧ್ಯಕ್ಷೆ ಸಿಲ್ವಿಯಾ ರೂತ್ ಕ್ಯಾಸ್ತೆಲಿನೊ, ಕಾರ್ಯದರ್ಶಿ ಅನಿಲ್ ಡೇಸಾ, ಕಾರ್ಯಕ್ರಮದ ಸಂಯೋಜಕರಾದ ಸುಜಯ್ ಡಿಸಿಲ್ವ, ದೈವಿಕ್ ಅಮೃತ್ ಸಂಸ್ಥೆಯ ವ್ಯವಸ್ಥಾಪಕ ಸಂತೋಷ್ ಲೋಬೊ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಪೋಸ್ಟರ್ ಅನಾವರಣಗೈದ ಸ್ಟ್ಯಾನಿ ಅಲ್ವಾರಿಸ್ ಇವರು ಕಾರ್ಯಕ್ರಮಕ್ಕೆ ಶುಭಸಂಶನೆಗೈದರು. ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಆ್ಯಂಡ್ರು ಡಿಸೋಜಾ ಇವರು ಎಲ್ಲರ ಸಹಕಾರವನ್ನು ಕೋರಿದರು. ಸಂಯೋಜಕರಾದ ಸುಜಯ್ ಡಿಸಿಲ್ವ ಇವರು ನಾಟಕದ ಬಗ್ಗೆ ಮಾಹಿತಿಯನ್ನು ನೀಡಿದರು.
ಕಳೆದ 20 ವರ್ಷಗಳಿಂದ ದೈವಿಕ್ ಅಮೃತ್ ಕೊಂಕಣಿ ಮಾಸಿಕ ಪತ್ರಿಕೆಯ ಮುಖೇನ ಆರಂಭವಾದ ಈ ಸಂಸ್ಥೆಯು ದೈವಿಕ್ ಅಮೃತ್ ಮೀಡಿಯಾ, ದೈವಿಕ್ ಅಮೃತ್ ಯಾತ್ರಾ ಸಂಸ್ಥೆಯ ಮೂಲಕ ತನ್ನದೇ ಆದ ಛಾಪನ್ನು ಮೂಡಿಸಿದೆ. ವಿವಿಧ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರಲ್ಲಿ ಪರಿಸರ, ಆರೋಗ್ಯ ಜಾಗೃತಿ ಹಾಗೂ ಬಡ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಧನಸಹಾಯ, ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ಹಣಕಾಸು ನೆರವನ್ನು ಸಂಸ್ಥೆಯು ನೀಡುತ್ತಾ ಬಂದಿದೆ.