October 31, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಾಣಿ ಗ್ರಾಮದಲ್ಲಿ ತಿಂಗಳಿನಿಂದ ಗ್ರಾಮ ಲೆಕ್ಕಾಧಿಕಾರಿ ಇಲ್ಲದೆ ಸಾರ್ವಜನಿಕರು ಕಂಗಾಲು

ಸಾಮಾಜಿಕ ಕಾರ್ಯಕರ್ತ ಸ್ಟೀವನ್ ಪ್ರಕಾಶ್ ಮಾರ್ಟಿಸ್ ಇವರಿಂದ ಜಿಲ್ಲಾಧಿಕಾರಿಗೆ ದೂರು

ಮಾಣಿ ಗ್ರಾಮ ಪಂಚಾಯತಿಗೆ ಒಳಪಟ್ಟ ಮಾಣಿ ಗ್ರಾಮಕರಣಿಕರ ಕಚೇರಿ ದಿಕ್ಕು ದೆಸೆ ಇಲ್ಲದ ಗ್ರಾಮ ಕರಣಿಕರ ಕಚೇರಿ ಆಗಿದೆ. ವಿದ್ಯಾರ್ಥಿಗಳು, ಸ್ಥಳೀಯರು, ಜಮೀನು ಖರೀದಿಸಿದವರು, ಪಹಣಿ ಪತ್ರಿಕೆಯಲ್ಲಿ ತಿದ್ದುಪಡಿಯವರು, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಹೀಗೆ ನೂರಾರು ಕೆಲಸಗಳಿಗೋಸ್ಕರ ಪ್ರತಿದಿನವೂ ಗ್ರಾಮಸ್ಥರು ಮಾಣಿ ಗ್ರಾಮ ಪಂಚಾಯತ್ ಕಚೇರಿಗೆ ಬಂದು “ಬಂದ ದಾರಿಗೆ ಸುಂಕವಿಲ್ಲ” ಎಂಬಂತೆ ಬೇಸರದಿಂದ ಹಿಂದೆ ಹೋಗುತ್ತಿದ್ದಾರೆ.

ಸ್ಥಳೀಯ ಶಾಸಕರು, ಸಂಸದರು, ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಗಳು ಮಾಣಿ ಗ್ರಾಮ ಪಂಚಾಯತ್ ಇಲ್ಲಿ ಗ್ರಾಮ ಲೆಕ್ಕಿಗರನ್ನು ನೇಮಿಸುವ ಬಗ್ಗೆ ಯಾವ ಕ್ರಮವನ್ನು ಕೈಗೊಂಡಿಲ್ಲ. ಈ ಕಡೆ ತಿರುಗಿ ಕೂಡ ನೋಡಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಸ್ಟೀವನ್ ಪ್ರಕಾಶ್ ಮಾರ್ಟಿಸ್ ಕಳವಳ ವ್ಯಕ್ತಪಡಿಸಿದ್ದಾರೆ.

ಮಾಣಿ – ಪೆರಾಜೆ ಗ್ರಾಮಕ್ಕೆ ಚಂದ್ರಲೇಖ ಎಂಬವರು ಕಳೆದ ಐದು ತಿಂಗಳಿಂದ ಗ್ರಾಮ ಲೆಕ್ಕಿಗರಾಗಿ ನೇಮಕಗೊಂಡಿದ್ದರು. ಇವರು ನಿಷ್ಟಾವಂತ ಅಧಿಕಾರಿಯಾಗಿದ್ದರೂ ವಾರಕ್ಕೆ ಎರಡೇ ದಿನ ಮಂಗಳವಾರ ಹಾಗೂ ಶುಕ್ರವಾರ ಮಾತ್ರ ಅವರು ಕಚೇರಿಗೆ ಬರುತ್ತಿದ್ದರು. ಆಗಲೇ ಸ್ಥಳೀಯರು ವಾರಕ್ಕೆ ಎರಡು ದಿನ ಮಾತ್ರ ನೇಮಕಗೊಳಿಸಿದ ಬಗ್ಗೆ ಅಸಮಾಧಾನಗೊಂಡು ಬಂಟ್ವಾಳ ತಹಶೀಲ್ದಾರರಿಗೆ ತಿಳಿಸಿದ್ದರು ಎನ್ನಲಾಗಿದೆ. ಆದರೂ ಕೂಡ ತಹಶೀಲ್ದಾರರು ವಾರದ ಆರು ದಿನವೂ ಕಚೇರಿ ಕೆಲಸಕ್ಕೆ ಬರುವಂತೆ ಆದೇಶವನ್ನು ಹೊರಡಿಸಿರಲಿಲ್ಲ.

ಇದೀಗ ಸುಮಾರು ತಿಂಗಳ ಹಿಂದಿನಿಂದ ಅವರು ಅನಾರೋಗ್ಯದ ನಿಮಿತ್ತ ರಜೆ (ಸಿಕ್ ಲೀವ್) ನಲ್ಲಿದ್ದಾರೆ. ನಿಯಮಾನುಸಾರ ಈ ವಿಚಾರವನ್ನು ಗ್ರಾಮ ಲೆಕ್ಕಿಗ ಚಂದ್ರಲೇಖ ಅವರು, ಬಂಟ್ವಾಳ ತಹಶೀಲ್ದಾರರು ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ತಿಳಿಸಿ, ತನಗೆ ಕಚೇರಿ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ, ಆದುದರಿಂದ ಕೂಡಲೇ ಬದಲಿ ಗ್ರಾಮ ಲೆಕ್ಕಿಗ ನೇಮಕ ಮಾಡುವಂತೆ ವಿನಂತಿಸಿದ್ದರು.  ಸ್ಥಳೀಯ ಶಾಸಕರಿಗೂ ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರೋರ್ವರು ದೂರು ನೀಡಿದ್ದಾರೆ ಎನ್ನಲಾಗಿದೆ ಆದರೆ ಪರಿಣಾಮ ಮಾತ್ರ ಶೂನ್ಯ.

ಇದರಿಂದಾಗಿ ಈ ತಿಂಗಳೊಳಗೆ ನೀಡಬೇಕಾದ ಆದಾಯ ಪ್ರಮಾಣಪತ್ರ, ಜಾತಿ ಪ್ರಮಾಣ ಪತ್ರ ಹೀಗೆ ಬಹಳಷ್ಟು ಗ್ರಾಮ ಲೆಕ್ಕಾಧಿಕಾರಿಗಳಿಂದಾಗುವ ಕೆಲಸಗಳು ಬಾಕಿ ಉಳಿದಿದ್ದು ಬಾಕಿ ಉಳಿದ ಎಲ್ಲಾ ಕಡತಗಳನ್ನು ಒಂದು ಕಡೆ ಗುಡ್ಡೆ ಹಾಕಲಾಗಿದೆ ಎನ್ನಲಾಗಿದೆ.

ಸರಕಾರ ತಿಳಿಸಿದ ದಿನಾಂಕದೊಳಗೆ ಹಾಗೂ ಕ್ಲಪ್ತ ಸಮಯದಲ್ಲಿ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಯಿಂದ ವಿವಿಧ ಪ್ರಮಾಣ ಪತ್ರವನ್ನು ತೆಗೆದುಕೊಂಡು, ಅದನ್ನು ಸರಕಾರಕ್ಕೆ ಸಲ್ಲಿಸಬೇಕಾದ ಅವಧಿ ಮೀರಿ ಹೋದರೆ, ಸ್ಥಳೀಯ ಗ್ರಾಮಸ್ಥರಿಗೆ ಆಗುವ ನಷ್ಟವನ್ನು ಸರಕಾರವು ಹೇಗೆ ಭರ್ತಿ ಮಾಡಿಕೊಡಲಿದೆ? ಮಾಣಿ ಪೆರಾಜೆ ಗ್ರಾಮ ಪಂಚಾಯತ್ ಗೆ ಗ್ರಾಮ ಲೆಕ್ಕಿಗರು ಇಲ್ಲದಿರುವುದರಿಂದ, ಹೊಸ ಗ್ರಾಮ ಲೆಕ್ಕಿಗರು ನೇಮಕಗೊಳ್ಳದಿರುವುದರಿಂದ, ಹಾಗೂ ಇದು ಸರಕಾರದ ತಪ್ಪು ಆದುದರಿಂದ ಈ ಗ್ರಾಮಕ್ಕೆ ಮಾತ್ರ ಸಂಬಂಧ ಪಟ್ಟಂತೆ ಸರಕಾರಕ್ಕೆ ಸಲ್ಲಿಸಬೇಕಾದ ಪ್ರಮಾಣ ಪತ್ರಗಳ ದಿನಾಂಕವನ್ನು ಮುಂದೂಡಲಿದೆಯೇ? ಎಂಬ ಪ್ರಶ್ನೆಯನ್ನು ಗ್ರಾಮಸ್ಥರು ಕೇಳುತ್ತಿದ್ದಾರೆ.

ಸಾವಿರಾರು ಕುಟುಂಬಗಳಿರುವ ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರ  ಬಹುತೇಕ ಕೆಲಸ ಕಾರ್ಯಗಳು ಸ್ತಬ್ಧಗೊಂಡಿವೆ. ಇದರಿಂದಾಗಿ ಬಹಳಷ್ಟು ಬಾರಿ ಗ್ರಾಮ ಪಂಚಾಯಿತಿಗೆ ಬಂದು ಹೋದ ಸ್ಥಳೀಯರು ಹಿಡಿ ಶಾಪ ಹಾಕುತ್ತಿದ್ದಾರೆ. ಕೂಡಲೇ ಮಾಣಿ ಗ್ರಾಮಕ್ಕೆ ಗ್ರಾಮಕರಣಿಕರನ್ನು ನೇಮಕ ಮಾಡುವಂತೆ ಸಾಮಾಜಿಕ ಕಾರ್ಯಕರ್ತ ಸ್ಟೀವನ್ ಪ್ರಕಾಶ್ ಮಾರ್ಟಿಸ್ ಜಿಲ್ಲಾಧಿಕಾರಿಯವರಿಗೆ ಲಿಖಿತ ದೂರನ್ನು ಸಲ್ಲಿಸಿದ್ದಾರೆ.

You may also like

News

ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಘೋಷಣೆ

ಸಮಾಜಸೇವೆ, ಕಲೆ, ಕ್ರೀಡೆ, ವ್ಯವಹಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಕೊಡುಗೆ ನೀಡಿದ 94 ಸಾಧಕರಿಗೆ ಗೌರವ ದಕ್ಷಿಣ ಕನ್ನಡ ಜಿಲ್ಲಾ ಆಡಳಿತವು 2025ನೇ ವರ್ಷದ ಜಿಲ್ಲಾ
News

ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ವಿರುದ್ಧದ ಆರೋಪ ಖಂಡನೀಯ — AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್

ರಾಜಕೀಯ ಲಾಭಕ್ಕಾಗಿ ವ್ಯಕ್ತಿತ್ವ ಹಾನಿಗೆ ಯತ್ನಿಸುವಂತ ಹೇಳಿಕೆಗಳನ್ನು ತಕ್ಷಣ ಹಿಂಪಡೆಯಬೇಕು ವಿಧಾನಸಭಾ ಸ್ಪೀಕರ್ ಸನ್ಮಾನ್ಯ ಯು.ಟಿ. ಖಾದರ್ ರವರ ವಿರುದ್ಧ ಶಾಸಕರಾದ ಭರತ್ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ಮಾಡಿದ್ದ

You cannot copy content of this page