ಮಂಗಳೂರು ಉಡುಪಿ ಮಧ್ಯೆ ಮೆಟ್ರೋ ರೈಲು ಯೋಜನೆಗೆ ರಾಜ್ಯ ಸರಕಾರ ಚಿಂತನೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ‘ನಮ್ಮಮೆಟ್ರೋ’ ಮಂಗಳೂರು-ಉಡುಪಿಗೂ ಬರುವ ಸಾಧ್ಯತೆ ಇದೆ. ಮಂಗಳೂರು ಮತ್ತು ಉಡುಪಿ ನಡುವೆ ಮೆಟ್ರೋ ಆರಂಭಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಅದಕ್ಕಾಗಿ ವಿಸ್ಕೃತ ಯೋಜನಾ ವರದಿ ಸಿದ್ದಪಡಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಕರಾವಳಿ ನಗರಗಳಾಗಿರುವ ಮಂಗಳೂರು ಮತ್ತು ಉಡುಪಿ ನಡುವೆ ಮೆಟ್ರೋ ಕಾರಿಡಾರ್ ಹಂತ-1ನ್ನು ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಉಭಯ ನಗರಗಳ ನಡುವೆ 60 ಕಿಲೋ ಮೀಟರ್ ಉದ್ದದ ಮೆಟ್ರೋ ಮಾರ್ಗ ಆರಂಭಿಸಲು ಚಿಂತನೆಗಳು ನಡೆದಿವೆ ಎಂದು ತಿಳಿದುಬಂದಿದೆ.
ಯೋಜನೆ ಸಂಬಂಧ ಯೋಜನಾ ಟಿಪ್ಪಣಿ ಮತ್ತು ವಿಸ್ಕೃತ ಯೋಜನಾ ವರದಿ ರೂಪಿಸಲು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್) ರಾಜ್ಯ ಸರ್ಕಾರ ಸೂಚಿಸಿದೆ. ಅಲ್ಲದೆ, ಯೋಜನೆಯ ಬಗ್ಗೆ ದಕ್ಷಿಣ ಕನ್ನಡ (ಮಂಗಳೂರು) ಮತ್ತು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಪತ್ರವನ್ನೂ ಬರೆದಿದೆ ಎಂದು ವರದಿಯಾಗಿದೆ.
ಇತ್ತೀಚೆಗೆ, ಮಂಗಳೂರು-ಉಡುಪಿ ನಡುವೆ ಮೆಟ್ರೋ ರೈಲು ಯೋಜನೆ ರೂಪಿಸಬೇಕೆಂದು ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ಗೆ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಮೋಹನ್ ದಾಸ್ ಹೆಗ್ಡೆ ಪತ್ರ ಬರೆದಿದ್ದರು. ಮಂಗಳೂರು-ಉಡುಪಿ-ಮಣಿಪಾಲ ನಡುವೆ ಪ್ರಮುಖ ನಗರಗಳು, ಪಟ್ಟಣಗಳು ಹಾಗೂ ಕೈಗಾರಿಕಾ ವಲಯಗಳು ಇರುವುದರಿಂದ ಈ ಮಾರ್ಗದಲ್ಲಿ ಮೆಟ್ರೋ ರೈಲು ಯೋಜನೆ ರೂಪಿಸಬೇಕು. ಇದು ಆರ್ಥಿಕ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಮೋಹನ್ ದಾಸ್ ವಿವರಿಸಿದ್ದರು.