ವಿಟ್ಲ ಮಾಡತ್ತಡ್ಕದಲ್ಲಿ ಸ್ಪೋಟ – ಮುಂದುವರಿದ ಪೊಲೀಸ್ ತನಿಖೆ

ಬಂಟ್ವಾಳ : ವಿಟ್ಲ ಮುಡ್ನೂರು ಗ್ರಾಮದ ಮಾಡತ್ತಡ್ಕ ಎಂಬಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಮನೆಗಳು ಹಾನಿಗೊಂಡ ಘಟನೆ ಸಂಬಂಧಿಸಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಇಂದು ಮಾರ್ಚ್ 5ರಂದು ಬುಧವಾರ ಬಾಂಬ್ ನಿಷ್ಕ್ರಿಯ ದಳ ಮತ್ತು ಅಪರಾಧ ಸ್ಥಳ ಪರಿಶೀಲನೆ ತಂಡ ಆಗಮಿಸಿ ತನಿಖೆ ನಡೆಸಿದೆ.
ವಿಟ್ಲ ಮುಡ್ನೂರು ಗ್ರಾಮದ ಮಾಡತ್ತಡ್ಕ ಎಂಬಲ್ಲಿರುವ ಕೋರೆ ಸಮೀಪದ ಕಲ್ಲಿನ ರಾಶಿಯ ನಡುವಿನಲ್ಲಿ ಒಂದು ಬಾಕ್ಸ್ ಡೆಟೋನೇಟರ್ಸ್ ಹಾಗೂ 200 ಜೆಲಿಟಿನ್ ಕಡ್ಡಿಗಳನ್ನು ಒಟ್ಟಿಗೇ ಇಡಲಾಗಿತ್ತೆನ್ನಲಾಗಿದೆ. ಸುಮಾರು 1.30ರ ಹೊತ್ತಿಗೆ ಏಕಾಏಕಿ ಸ್ಪೋಟಗೊಂಡಿದೆ. ಸ್ಪೋಟ ನಡೆದ ಸ್ಥಳದಿಂದ ಸುಮಾರು ನೂರು ಮೀಟರ್ ದೂರದಲ್ಲಿದ್ದ ಈಶ್ವರ ನಾಯ್ಕ ಹಾಗೂ ಅವರ ಪುತ್ರ ವಸಂತ ಮೋಹನ್ ಅವರಿಗೆ ಸೇರಿದ ಮನೆಗಳಿಗೆ ಹಾನಿಯಾಗಿದೆ. 1 ಕಿ.ಮೀ. ಆಸುಪಾಸಿನ ಸುಮಾರು 15ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿತ್ತು.
ಘಟನೆ ಸಂಬಂಧಿಸಿ ಬಂಟ್ವಾಳ ಕಾವಳಪಡೂರು ಶ್ರೀರಾಮ ಕನ್ಸ್ಟಕ್ಷನ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬುಧವಾರ ಬೆಳಿಗ್ಗೆ ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಮತ್ತು ಅಪರಾಧ ಸ್ಥಳ ಪರಿಶೀಲನೆ ತಂಡ ಆಗಮಿಸಿ ತನಿಖೆಗೆ ಸಹಕಾರ ನೀಡಿದೆ. ವಿಟ್ಲ ಠಾಣಾ ಉಪನಿರೀಕ್ಷಕರಾದ ವಿದ್ಯಾ ಮತ್ತು ಸಿಬ್ಬಂದಿಗಳು ಕೂಡಾ ತನಿಖೆ ಚುರುಕುಗೊಳಿಸಿದ್ದಾರೆ.
ವಿಟ್ಲ ಮುಡ್ನೂರು ಗ್ರಾಮದ ಮಾಡತ್ತಡ್ಕ ಎಂಬಲ್ಲಿರುವ ಎನ್.ಎಸ್. ಕೋರೆಯ ಗಣಿಗಾರಿಕೆಗಾಗಿ ಬೇಕಾಗಿರುವ ಅಪಾಯಕಾರಿಯಾದ ಸ್ಪೋಟಕಗಳನ್ನು ಬಂಟ್ವಾಳದ ಶ್ರೀ ರಾಮ್ ಕನ್‌ಸ್ಟ್ಟ್ರಕ್ಷನ್ ನ ಅಶೋಕ ಮತ್ತು ಅದರ ಬ್ಲಾಸ್ಟರ್ ಕೆಲಸ ಮಾಡುತ್ತಿದ್ದಾತ, ಬಂಟ್ವಾಳ ತಾಲೂಕು ವಿಟ್ಲ ಮುಡ್ನೂರು ಗ್ರಾಮದ ಮಾಡತ್ತಡ್ಕ ಎಂಬಲ್ಲಿರುವ ಎನ್.ಎಸ್. ಕೋರೆಯ ಬಳಿಯಿರುವ ಮೋನಪ್ಪ ಪೂಜಾರಿರವರ ಜಾಗದಲ್ಲಿರುವ ಕಲ್ಲು ಬಂಡೆಗಳ ಮೇಲೆ ಯಾವುದೇ ಮುಂಜಾಗ್ರತಾ ಕ್ರಮ ಹಾಗೂ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯತನದಿಂದ ಮತ್ತು ಬೇಜವಾಬ್ದಾರಿಯಿಂದ ಇಟ್ಟಿದ್ದು, ಸ್ಪೋಟಕಗಳು ಬಿಸಿಲಿನ ತಾಪದಿಂದ ಸ್ಪೋಟಗೊಂಡು ಸುತ್ತಮುತ್ತಲಿನ ಮರಗಿಡಗಳು ಛಿದ್ರಗೊಂಡಿದ್ದು, ಹಾಗೂ ಪರಿಸರದ ಈಶ್ವರ ನಾಯ್ಕ ಮತ್ತು ವಸಂತ ಮೋಹನ ಎಂಬವರುಗಳ ಮನೆಗಳಿಗೆ ಹಾನಿಯಾದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 36/2025 ಕಲಂ: 9B Explossive Act 1884 ಮತ್ತು 288 BNS 2023 ರಂತೆ ಪ್ರಕರಣ ದಾಖಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.