ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಅಕ್ಷರ ದಾಸೋಹ ನೌಕರರಿಂದ ಪ್ರತಿಭಟನೆ

ಬಂಟ್ವಾಳ : ಅಕ್ಷರ ದಾಸೋಹ ನೌಕರರಿಗೆ ರಾಜ್ಯ ಸರ್ಕಾರವು ವಿಧಾನಸಭಾ ಚುನಾವಣೆಯಲ್ಲಿ ಘೋಷಣೆ ಮಾಡಿದಂತೆ 6000 ವೇತನ ಹೆಚ್ಚಳ ಮಾಡಬೇಕೆಂದು ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಗತಿಪರ ಅಕ್ಷರ ದಾಸೋಹ ನೌಕರರ ಸಂಘ (ಎ.ಐ.ಸಿ.ಸಿ.ಟಿ.ಯು) ವತಿಯಿಂದ ಬಿ.ಸಿ. ರೋಡು ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಎ.ಐ.ಸಿ.ಸಿ.ಟಿ.ಯು ದಕ್ಷಿಣ ಕನ್ನಡ ಜಿಲ್ಲಾ ಅದ್ಯಕ್ಷ ಕಾಮ್ರೇಡ್ ರಾಮಣ್ಣ ವಿಟ್ಲ ಮಾತನಾಡಿ ನಮ್ಮ ದೇಶದ ಅಭಿವೃದ್ಧಿಗೆ ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ಆಹಾರ ಪೂರೈಸಲು ಬೇಕಾದ ಸಂಪನ್ಮೂಲವನ್ನು ಕೇಂದ್ರ ಸರ್ಕಾರವು ಸಂಪೂರ್ಣವಾಗಿ ಕಡೆಗಣಿಸಿದ್ದು, ದೇಶದ ದುಡಿಯುವ ಜನ ವಿಭಾಗದ ಬಿಸಿಯೂಟ ಯೋಜನೆಯನ್ನು ಕೇಂದ್ರ ಸರ್ಕಾರವು 2010ರಿಂದ ಕಡೆಗಣಿಸುತ್ತಲೇ ಬಂದಿದೆ ರಾಜ್ಯದಲ್ಲಿ ಕೆಲಸದ ಒತ್ತಡ ಹೆಚ್ಚಳವಾಗಿದೆ. ಆದರೆ ಕೆಲಸಕ್ಕೆ ತಕ್ಕ ವೇತನ ಮಾತ್ರ ಸಿಗದೇ ನೌಕರರು ಸಂಕಷ್ಟದ ಪರಿಸ್ಥಿತಿಯಲ್ಲಿ ನರಳುವಂತೆ ಮಾಡಿದೆ. ಬಿಸಿಯೂಟ ನೌಕರರಿಗೆ ರಾಜ್ಯ ಸರ್ಕಾರವು ವಿಧಾನಸಭಾ ಚುನಾವಣೆಯಲ್ಲಿ ಘೋಷಣೆ ಮಾಡಿದಂತೆ 6000 ವೇತನ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿದರು.
ಎ.ಐ.ಸಿ.ಸಿ.ಟಿ.ಯು ರಾಜ್ಯ ಸಮಿತಿ ಗೌರವಾದ್ಯಕ್ಷ ಕಾಮ್ರೇಡ್ ಮೋಹನ್ ಕೆ.ಇ., ಎ.ಐ.ಸಿ.ಸಿ.ಟಿ.ಯು. ತಾಲೂಕು ಮುಖಂಡ ಕಾಮ್ರೇಡ್ ರಾಜಾ ಚೆಂಡ್ತಿಮಾರ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಎ.ಐ.ಸಿ.ಸಿ.ಟಿ.ಯು. ಮುಖಂಡರಾದ ಕಾಮ್ರೇಡ್ ಸಜೇಶ್ ವಿಟ್ಲ, ಕಾಮ್ರೇಡ್ ಸುಲೈಮಾನ್ ಕೆಳಿಂಜ, ಅಕ್ಷರ ದಾಸೋಹ ಸಂಘಟನೆಯ ತಾಲೂಕು ಅದ್ಯಕ್ಷೆ ಜಯಶ್ರೀ ಆರ್.ಕೆ., ಕಾರ್ಯದರ್ಶಿ ವಾಣಿಶ್ರೀ ಕನ್ಯಾನ, ಉಪಾದ್ಯಕ್ಷರುಗಳಾದ ವಿನಯ ನಡುಮೊಗರು, ಸೇವಂತಿ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಬೇಡಿಕೆಗಳು:
2010 ರಿಂದ ಕೇಂದ್ರ ಸರ್ಕಾರ ಯಾವುದೇ ಗೌರವಧನ ಹೆಚ್ಚಳ ಮಾಡಿಲ್ಲವಾದ್ದರಿಂದ ಕೇಂದ್ರ ಸರ್ಕಾರವು 26.000 ರೂಪಾಯಿಗಳಿಗೆ ಗೌರವಧನ ಹೆಚ್ಚಿಸಬೇಕು. ಹೆಚ್ಚಿಸುವ ತನಕ ಕೇರಳ ಪಾಂಡಿಚೇರಿ, ತಮಿಳುನಾಡು ಮತ್ತು ಹರಿಯಾಣ ರಾಜ್ಯದಲ್ಲಿರುವಂತೆ 7 ಸಾವಿರದಿಂದ 12 ಸಾವಿರ ವೇತನ ಕೊಡಬೇಕು. ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯದ ಮಾನ್ಯ ಹೈಕೋರ್ಟ್ ತೀರ್ಮಾನಿಸಿದಂತೆ ವರ್ಷದ 12 ತಿಂಗಳು ಕೆಲಸ ಮತ್ತು ಕನಿಷ್ಟ ಕೂಲಿ ಜಾರಿಯಾಗಬೇಕು. ಕೆಲಸದ ಅವಧಿಯನ್ನು 4 ಗಂಟೆಯಿಂದ 6 ಗಂಟೆಗೆ ಅಕ್ಷರ ದಾಸೋಹ ಕೈಪಿಡಿಯಲ್ಲಿ ಬದಲಾಯಿಸಬೇಕು. ಅಕ್ಷರ ದಾಸೋಹ ಯೋಜನೆಯನ್ನು ಸಂಪೂರ್ಣವಾಗಿ ಶಿಕ್ಷಣ ಇಲಾಖೆಯಡಿಯಲ್ಲಿಯೇ ನಡೆಯಬೇಕು. ಕೆಲಸದ ಸ್ಥಳದಲ್ಲಿ ಮರಣ ಹೊಂದಿದರೆ 25 ಲಕ್ಷ ರೂಪಾಯಿಗಳ ಪರಿಹಾರ ಕೊಡಬೇಕು. 2024 ಮಾರ್ಚ್ 31ಕ್ಕೆ ಬಿಸಿಯೂಟ ನೌಕರರನ್ನು ಬಿಡುಗಡೆಗೊಳಿಸಲು ಹೊರಡಿಸಿರುವ ಸುತ್ತೋಲೆಯನ್ನು ಬದಲಾಯಿಸಿ 2025 ಎಪ್ರಿಲ್ 10 ಕ್ಕೆ ಮರು ಆದೇಶ ನೀಡಬೇಕು.
ಹಾಜರಾತಿ ಆಧಾರದಲ್ಲಿ ಕೆಲಸದಿಂದ ತೆಗೆಯುವ ಕ್ರಮ ಹಿಂಪಡೆಯಬೇಕು. ಬಿಸಿಯೂಟ ಯೋಜನೆಯನ್ನು ಖಾಯಂ ಮಾಡಬೇಕು ಖಾಯಂ ಮಾಡುವ ತನಕ 45 ಮತ್ತು 46ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನಂತೆ ಇವರನ್ನು ಕಾರ್ಮಿಕರೆಂದು ಗುರುತಿಸಬೇಕು. ಬಿಸಿಯೂಟ ಯೋಜನೆಯನ್ನು ಯಾವುದೇ ಖಾಸಗಿ ಸಂಸ್ಥೆಗಳಿಗೆ ಯಾವುದೇ ಸ್ವರೂಪದ ಜವಾಬ್ದಾರಿ ಕೊಡಬಾರದು. ಶಾಲೆಗಳಲ್ಲಿ ಗ್ರೂಪ್ ಡಿ ನೌಕರರು ಇಲ್ಲರಿರುವುದರಿಂದ ಈ ನೌಕರರಿಂದಲೇ ಶಾಲಾ ಸ್ವಚ್ಚತೆ, ಕೈತೋಟ ನಿರ್ವಹಣೆ ಶಾಲಾ ಸಮಯದ ಗಂಟೆ ಬಾರಿಸುವುದು ಇನ್ನಿತರ ಕೆಲಸ ನೀಡಿ ಈ ನೌಕರರಿಗೆ ಶಾಲಾ ಸಿಬ್ಬಂದಿಗಳೆಂದು ನೇಮಿಸಿ ನೇಮಕಾತಿ ಆದೇಶ ನೀಡಬೇಕು. ಬೇಸಿಗೆ ಮತ್ತು ದಸರಾ ರಜೆಗಳ ವೇತನ ವನ್ನು ಕಡ್ಡಾಯವಾಗಿ ನೀಡಬೇಕು. ಶಾಲಾ ಅವಧಿಯ ನಂತರ ನರೆಗಾ ಯೋಜನೆಯಡಿ ಶಾಲಾ ಕೈತೋಟದ ಕೆಲಸ ಇವರಿಗೆ ನೀಡಿ ಈ ಯೋಜನೆಯಿಂದ ವೇತನ ನೀಡಬೇಕು. ಅಪಘಾತದಲ್ಲಿ ಮರಣ ಹೊಂದಿದ ಅಡುಗೆ ಸಿಬ್ಬಂದಿಗಳ ಕುಟುಂಬದವರಿಗೆ ಕೆಲಸ ನೀಡಬೇಕು. ನಿವೃತ್ತಿ ಹೊಂದಿದ ಅಡುಗೆ ಸಿಬ್ಬಂದಿಗಳ ಕುಟುಂಬದವರಿಗೆ ಕೆಲಸ ನೀಡಬೇಕು. ಪ್ರತಿ ಶಾಲೆಯಲ್ಲಿ ಕನಿಷ್ಟ ಎರಡು ಜನ ಅಡುಗೆಯವರು ಇರಲೇಬೇಕು.