ಮಾಣಿ – ಪೆರಾಜೆ ಗ್ರಾಮ ಪಂಚಾಯತ್ ಗೆ ತಹಶೀಲ್ದಾರ್ ರವರಿಂದ ಗ್ರಾಮ ಲೆಕ್ಕಿಗರ ನೇಮಕ – ಗ್ರಾಮಸ್ಥರ ಮೊಗದಲ್ಲಿ ಮಂದಹಾಸ

ಸಾಮಾಜಿಕ ಕಾರ್ಯಕರ್ತನ ಮನವಿಗೆ ತಕ್ಷಣ ಸ್ಪಂಧಿಸಿದ ಜಿಲ್ಲಾಧಿಕಾರಿಗಳು
ವಾರದಲ್ಲಿ ಮೂರು ದಿವಸ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶ
ಮಾಣಿ – ಪೆರಾಜೆ ಗ್ರಾಮ ಪಂಚಾಯತ್ ಇಲ್ಲಿ ಕಳೆದೊಂದು ತಿಂಗಳಿನಿಂದ ಗ್ರಾಮ ಲೆಕ್ಕಿಗರಿಲ್ಲದೆ ಗ್ರಾಮಸ್ಥರು ಕಂಗಾಲಾದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ಟೀವನ್ ಪ್ರಕಾಶ್ ಮಾರ್ಟಿಸ್ ಇವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಲಿಖಿತವಾಗಿ ದೂರು ಸಲ್ಲಿಸಿದ್ದರು. ಗ್ರಾಮ ಲೆಕ್ಕಿಗರಿಲ್ಲದೆ ದಿಕ್ಕುದೆಸೆ ಇಲ್ಲದ ಗ್ರಾಮ ಪಂಚಾಯತ್ ನ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು, ವಾರದ ಮೂರು ದಿವಸ ಮಂಗಳವಾರ, ಗುರುವಾರ ಹಾಗೂ ಶನಿವಾರ ಕರಿಬಸಪ್ಪ ಎಂಬವರನ್ನು ಗ್ರಾಮಲೆಕ್ಕಿಗರಾಗಿ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಬಂಟ್ವಾಳ ತಹಶೀಲ್ದಾರ್ ಇವರ ಮುಖಾಂತರ ನಿಯೋಜನೆಗೊಳಿಸಿ ಆದೇಶ ಹೊರಡಿಸಿದ್ದಾರೆ.
ಮಾಣಿ – ಪೆರಾಜೆ ಗ್ರಾಮ ಪಂಚಾಯತ್ ಗ್ರಾಮಲೆಕ್ಕಿಗರಾಗಿ ಕರಿಬಸಪ್ಪ ಇವರು ಇಂದು ಮಾರ್ಚ್ 6ರಂದು ಬೆಳಿಗ್ಗೆ 10:00 ಗಂಟೆಗೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆದ್ಯತೆಯ ಮೇರೆಗೆ ತಮಗೆ ಗ್ರಾಮಲೆಕ್ಕಿಗರು ಸಿಗಬಹುದೆಂದು ಎನಿಸಿದ ಗ್ರಾಮಸ್ಥರಿಗೆ ಇಂದು ಮಾಣಿ – ಪೆರಾಜೆ ಗ್ರಾಮ ಪಂಚಾಯತ್ ನ ಒಂದು ತಿಂಗಳಿನಿಂದ ಮುಚ್ಚಿದ ಬಾಗಿಲು ತೆರೆದದ್ದು ಕಂಡು ಗ್ರಾಮಸ್ಥರ ಮೊಗದಲ್ಲಿ ಮಂದಹಾಸ ಮೂಡಿದೆ.
ತುರ್ತಾಗಿ ತಮ್ಮ ಕೆಲಸ ಆಗಲೇಬೇಕಾದವರು, ಈ ಕೂಡಲೇ ಮಾಣಿ – ಪೆರಾಜೆ ಗ್ರಾಮ ಪಂಚಾಯತ್ ಕಚೇರಿಗೆ ಹೋಗಿ ಸಂಬಂಧಪಟ್ಟ ಕೆಲಸವನ್ನು ಶೀಘ್ರವಾಗಿ ಮಾಡಿಸಿಕೊಂಡು ಬರಲು ಈಗ ಸಾಧ್ಯವಾಗಿದೆ.
ಸಾಮಾಜಿಕ ಕಾರ್ಯಕರ್ತ ಸ್ಟೀವನ್ ಪ್ರಕಾಶ್ ಮಾರ್ಟಿಸ್ ಇವರಿಗೆ ಹಾಗೂ ಲಿಖಿತ ಮನವಿಗೆ ಕೂಡಲೇ ಸ್ಪಂದಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ., ಇವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಮಾಣಿ – ಪೆರಾಜೆ ಗ್ರಾಮಸ್ಥರು ಆರ್ಪಿಸುತ್ತಿದ್ದಾರೆ.
ದಕ್ಷ ಅಧಿಕಾರಿ ಇದ್ದಲ್ಲಿ ಯಾವುದೇ ಕ್ಲಿಷ್ಟಕರ ಸಮಸ್ಯೆಗಳಿಗೆ ಪರಿಹಾರ ಕೂಡಲೇ ಸಿಗುತ್ತದೆ ಎಂಬುದಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಮಾದರಿಯಾಗಿದ್ದಾರೆ.