ಮೊಬೈಲ್ ಬಿಟ್ಟು ಓದು ಎಂದ ಪೋಷಕರ ಮಾರಣಾಂತಿಕ ಹಲ್ಲೆ ಮಾಡಿದ ಮಗ

ತಾಯಿ ಮೃತ್ಯು – ತಂದೆ ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು
ಈಗಿನ ಕಾಲದ ಮಕ್ಕಳಿಗೆ ಹಾಗಲ್ಲ ಹೀಗೆ ಎಂದು ಹೇಳಲು ಇಲ್ಲ. ಅಷ್ಟರಲ್ಲೇ ಆವೇಶಕ್ಕೊಳಗಾಗುತ್ತಾರೆ. ಹೆತ್ತವರು ಹೇಳುವ ಬುದ್ಧಿಮಾತುಗಳು ಸಹ ಬೇರೊಂದು ಅನಾಹುತಗಳನ್ನು ಸೃಷ್ಠಿಸಿರುವ ಅದೆಷ್ಟೋ ಘಟನೆಗಳನ್ನು ನಾವು ನೋಡಿದ್ದೇವೆ. ಇದೀಗ ನಡೆದಿರುವ ಘಟನೆಯೂ ಅಂತಹದ್ದೇ ಆಗಿದೆ. ಮೊಬೈಲ್ ಫೋನನ್ನು ಹೆಚ್ಚು ನೋಡುವುದನ್ನು ಬಿಟ್ಟು, ನೀಟ್ ಪರೀಕ್ಷೆಗೆ ಸಿದ್ಧತೆ ಮಾಡು ಎಂದು ಬುದ್ಧಿವಾದ ಹೇಳಿದ ತಾಯಿ ಮತ್ತು ತಂದೆಯ ಮೇಲೆ ಪುತ್ರನೊಬ್ಬ ಮರಣಾಂತಿಕ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಮಧ್ಯ ಪ್ರದೇಶದ ವಾರಸಿಯೋನಿ ಪ್ರದೇಶದ ಸಿಕಂದರ ಗ್ರಾಮದಲ್ಲಿ ನಡೆದಿದೆ.
ಮಗ ಮಾಡಿದ ಹಲ್ಲೆಯಿಂದ ತೀವ್ರ ಗಾಯಗೊಂಡ ತಾಯಿ ಮೃತ ಪಟ್ಟಿದ್ದಾರೆ ಹಾಗೂ ತಂದೆ ತೀವ್ರ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 20 ವರ್ಷ ಪ್ರಾಯದ ಸತ್ಯಂ ಕತ್ರೆ ತನ್ನ ಹೆತ್ತವರ ಮೇಲೆ ಹಲ್ಲೆ ನಡೆಸಿದ ಆರೋಪಿ. ಪ್ರತಿಭಾ ಕತ್ರೆ ಹಲ್ಲೆಯಿಂದ ಮೃತ ಪಟ್ಟ ಆತನ ತಾಯಿ. ಕಿಶೋರ್ ಕತ್ರೆ ಸಾವು ಬದುಕಿನ ಹೋರಾಟದಲ್ಲಿರುವ ಆತನ ತಂದೆ.
ಕಿಶೋರ್ ಮತ್ತು ಪ್ರತಿಭಾ ಕತ್ರೆ ಇಬ್ಬರೂ ಶಿಕ್ಷಕರಾಗಿದ್ದು, ಸತ್ಯಂ ಈ ಶಿಕ್ಷಕ ದಂಪತಿಯ ಏಕೈಕ ಪುತ್ರ. ಪುತ್ರ ಸತ್ಯಂ ದಿನದ ಹೆಚ್ಚಿನ ಸಮಯವನ್ನು ಮೊಬೈಲ್ ಫೋನ್ ನಲ್ಲೇ ಕಳೆಯುತ್ತಿದ್ದ ಕಾರಣ ಮಾರ್ಚ್ 3ರಂದು ಸೋಮವಾರ ತಂದೆ ಕಿಶೋರ್ ಮಗನ ಮೊಬೈಲ್ ನ ಸಿಮ್ ತೆಗೆದು ಮುಂಬರುವ ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸುವಂತೆ ತಿಳಿಸಿದ್ದರು. ಇದರಿಂದ ಕೋಪಗೊಂಡ ಸತ್ಯಂ ಕಬ್ಬಿಣದ ರಾಡ್ ನಿಂದ ತಂದೆ ಮತ್ತು ತಾಯಿ ಸೇರಿದಂತೆ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾನೆ. ತೀವ್ರ ಗಾಯಗೊಂಡ ಇಬ್ಬರನ್ನೂ ಸುಮಾರು 50 ಕಿಲೋ ಮೀಟರ್ ದೂರದ ಮಹಾರಾಷ್ಟ್ರದ ಗೊಂಡಿಯಾದಲ್ಲಿರುವ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಪ್ರತಿಭಾ ಅವರು ಮಾರ್ಚ್ 4ರಂದು ಮಂಗಳವಾರ ರಾತ್ರಿ ಮೃತ ಪಟ್ಟಿದ್ದಾರೆ. ಕಿಶೋರ್ ಐಸಿಯುನಲ್ಲಿ ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾರೆ.
ಘಟನೆ ನಡೆದ ಬಳಿಕ ಪುತ್ರ ಸತ್ಯಂ ಸ್ವತ: ಪೊಲೀಸ್ ಠಾಣೆಗೆ ಕರೆ ಮಾಡಿ ತಂದೆ ತಾಯಿಯ ಮೇಲೆ ಹಲ್ಲೆ ನಡೆಸಿರುವ ವಿಷಯವನ್ನು ತಿಳಿಸಿ ತಪ್ಪೊಪ್ಪಿಕೊಂಡು ತಾನು ಶರಣಾಗತಿ ಆಗುವುದಾಗಿ ತಿಳಸಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ವಶಕ್ಕೆ ಪಡೆದು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಸದ್ಯ ಈ ಘಟನೆ ಕುರಿತು ತನಿಖೆ ನಡೆಯುತ್ತಿದೆ.