ದ್ವಿತೀಯ ಪಿಯುಸಿ ಪರೀಕ್ಷೆ ಎದುರಿಸಲು ಆಗದೆ ಮನೆ ಬಿಟ್ಟ ದಿಗಂತ್ – ಜಿಲ್ಲಾ ಎಸ್.ಪಿ. ಪತ್ರಿಕಾ ಗೋಷ್ಠಿ

ಉಡುಪಿಯಲ್ಲಿ ಸಿಕ್ಕ ದಿಗಂತ್ ನನ್ನು ಮಂಗಳೂರಿಗೆ ಕರೆತಂದ ಪೊಲೀಸರು ವಿವಿಧ ಆಯಾಮಗಳಲ್ಲಿ ವಿಶೇಷ ತಂಡಗಳು ತನಿಖೆ ನಡೆಸಿದಾಗ ದಿಗಂತ್ ಅವನಿಗೆ ಮಾರ್ಚ್ 3ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಇದ್ದು, ಅದನ್ನು ಎದುರಿಸಲು ಆಗದೆ, ಮನೆ ಬಿಟ್ಟು ಹೋಗಿದ್ದಾನೆ ಎಂದು ಇಂದು ಮಾರ್ಚ್ 9ರಂದು ಆದಿತ್ಯವಾರ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಎಸ್. ಪಿ. ಯತೀಶ್ ಎನ್. ಹೇಳಿದ್ದಾರೆ.
ಇಡೀ ರಾಜ್ಯಾದ್ಯಂತ ಸುದ್ದಿಯಾಗಿದ್ದ ಫೆಬ್ರವರಿ 25ರಂದು ನಿಗೂಢವಾಗಿ ಕಾಣೆಯಾದ 17 ವರ್ಷದ ದಿಗಂತ್ ಕೊನೆಗೂ ಉಡುಪಿ ಪರಿಸರದಲ್ಲಿ ಪೊಲೀಸರಿಗೆ ಸಿಕ್ಕಿದ್ದಾನೆ. ಆತನನ್ನು ಹುಡುಕಲು ವಿಧಾನಸಭೆಯ ಸ್ಪೀಕರ್ ಸನ್ಮಾನ್ಯ ಯು.ಟಿ. ಖಾದರ್ ರವರು ಆಡಳಿತ ಪಕ್ಷಕ್ಕೆ ಸೂಚನೆ ನೀಡಿದ್ದರು. ಇದರಿಂದಾಗಿ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯವರ ನೇತೃತ್ವದಲ್ಲಿ ಏಳು ವಿಶೇಷ ಪೊಲೀಸರ ತಂಡ ರಚಿಸಲಾಗಿತ್ತು.
ನಗರದ ಕಪಿತಾನಿಯೊ ಕಾಲೇಜಿನಲ್ಲಿ, ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದ ದಿಗಂತ್, ಫೆಬ್ರವರಿ 25ರ ಸಂಜೆ ದೇವಸ್ಥಾನಕ್ಕೆ ಹೋಗುವೆ ಎಂದು ಮನೆಯವರಲ್ಲಿ ತಿಳಿಸಿ ದೇವಸ್ಥಾನಕ್ಕೂ ಹೋಗದೆ, ಮನೆಗೂ ಬಾರದೇ ನಾಪತ್ತೆಯಾಗಿದ್ದನು. ಮನೆ ಸಮೀಪದ ರೈಲ್ವೆ ಹಳಿಯಲ್ಲಿ ಆತನ ಮೊಬೈಲ್ ಹಾಗೂ ಚಪ್ಪಲಿ ಪತ್ತೆಯಾಗಿತ್ತು.
ರೈಲ್ವೆ ಹಳಿಯ ಬಳಿ ತನ್ನ ಚಪ್ಪಲಿಯನ್ನು ಬಿಟ್ಟು, ಅರ್ಕುಳ ತನಕ ನಡೆದು, ಬೈಕಲ್ಲಿ ಲಿಫ್ಟ್ ಕೇಳಿದ್ದ. ಆನಂತರ ಮಂಗಳೂರು ಬಸ್ ನಿಲ್ದಾಣದಿಂದ ಖಾಸಗಿ ಬಸ್ಸಲ್ಲಿ ಶಿವಮೊಗ್ಗ, ಆನಂತರ ರೈಲಲ್ಲಿ ಮೈಸೂರು, ಕೆಂಗೇರಿ, ಚಿಕ್ಕಬಳ್ಳಾಪುರದ ನಂದಿ ಹಿಲ್ಸ್ ಗೆ ಹೋಗಿ ಅಲ್ಲಿನ ರೆಸಾರ್ಟ್ ಒಂದರಲ್ಲಿ ಎರಡು ದಿನ ಕೆಲಸ ಮಾಡಿ ಹಣ ಸಂಪಾದಿಸಿ, ವಾಪಸ್ಸು ಮೈಸೂರು ಮುಖಾಂತರ ಶನಿವಾರ ಮುರುಡೇಶ್ವರ ಎಕ್ಸ್ ಪ್ರೆಸ್ ಮೂಲಕ ರೈಲಿನಲ್ಲಿ ಬಂದು ಉಡುಪಿಯಲ್ಲಿ ಇಳಿದಿದ್ದಾನೆ.
ರೈಲಿನಲ್ಲಿ ಉಡುಪಿಗೆ ಪ್ರಯಾಣಿಸುವಾಗ, ತನ್ನ ಮನೆಯ ಮುಂದೆಯೇ ರೈಲು ಹಾದು ಹೋಗುವಾಗ ಮನೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕರು ಹಾಗೂ ಪೊಲೀಸರು ಇದ್ದುದ್ದನ್ನು ನೋಡಿದ್ದೇನೆ ಎಂದು ದಿಗಂತ್ ತಿಳಿಸಿದ್ದಾನೆ ಎಂದು ವರದಿಯಾಗಿದೆ. ಕುತೂಹಲಕ್ಕೆ ಕಾರಣವಾಗಿದ್ದ ದಿಗಂತ್ ಕಾಣೆಯಾದ ಸ್ಥಳದಿಂದ ಪೊಲೀಸರ ತಂಡ ಇಂಚಿಂಚು ಶೋಧ ಕಾರ್ಯ ನಡೆಸಿತ್ತು.
ನಿನ್ನೆ ಮಾರ್ಚ್ 8ರಂದು ಉಡುಪಿಯ ಅಂಗಡಿಯೊಂದರಲ್ಲಿ ದಿಗಂತ್ ಬಟ್ಟೆಗಳನ್ನು ಖರೀದಿಸಿ ಅದಕ್ಕೆ ನೀಡಲು ಹಣ ಇಲ್ಲದಾಗ, ಅಲ್ಲಿಂದ ಓಡಲು ಪ್ರಯತ್ನ ಪಟ್ಟಿದ್ದನು. ಅದನ್ನು ಕಂಡ ಸಿಬ್ಬಂದಿ ವಿಚಾರಿಸಿದಾಗ ತಾನು ದಿಗಂತ್ ಎಂದು ತಿಳಿಸಿದ್ದಾನೆ. ಅಂಗಡಿಯ ಸಿಬ್ಬಂದಿ ಈ ಬಗ್ಗೆ ಉಡುಪಿ ಪೊಲೀಸರಿಗೆ ತಿಳಿಸಿದ್ದಾರೆ. ಆನಂತರ ದಕ್ಷಿಣ ಕನ್ನಡ ಪೊಲೀಸರು ಅಲ್ಲಿಗೆ ಹೋಗಿ ಅವನನ್ನು ಮಂಗಳೂರಿಗೆ ಕರೆತಂದಿದ್ದಾರೆ. ಕಳೆದ 12 ದಿನಗಳ ಶೋಧ ಕಾರ್ಯದಲ್ಲಿ ಅಗ್ನಿಶಾಮಕ ದಳ, ರೈಲ್ವೆ ಪೊಲೀಸ್, ಹಲವು ಪೊಲೀಸರ ತಂಡ, ಶ್ವಾನದಳ, ಎಫ್.ಎಸ್.ಎಲ್. ದಳ ಹಾಗೂ ಡ್ರೋನ್ ಬಳಸಿ ದಿಗಂತ್ ಗಾಗಿ ಹುಡುಕಾಟ ನಡೆಸಿದ್ದರು. ಬಾಲಕರ ಕಾನೂನು ಕ್ರಮದಡಿ ನ್ಯಾಯಾಲಯದ ಮುಂದಿನ ಆದೇಶದಂತೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ನಗರದ ಫರಂಗಿಪೇಟೆಯ, ಕಿದೆಬೆಟ್ಟು ಪದ್ಮನಾಭ ಮಡಿವಾಳರ ಪುತ್ರ ದಿಗಂತ್ ಗಾಗಿ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಅವರ ಮಾರ್ಗದರ್ಶನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಎಸ್.ಪಿ. ಯತೀಶ್ ಎನ್. ರವರ ನೇತೃತ್ವದಲ್ಲಿ, ತನಿಖೆಯನ್ನು ತೀವ್ರವಾಗಿ ಕೈಗೊಳ್ಳಲಾಗಿತ್ತು. ಜಿಲ್ಲೆಯ ಎಲ್ಲಾ ಠಾಣೆಗಳ ಸಬ್ ಇನ್ಸ್ಪೆಕ್ಟರ್ ಹಾಗೂ ಕ್ರೈಂ ವಿಭಾಗದ ಪೊಲೀಸರು ಅಹೋರಾತ್ರಿ ತನಿಖೆ/ ಹುಡುಕಾಟ ನಡೆಸಿ ಕೂಬಿಂಗ್ ಮಾಡಿದ್ದರು.
ದಿಗಂತ್ ಪತ್ತೆಯಾದ ನಂತರ ಸಮಸ್ತ ನಾಗರಿಕರು ಸಮಾಧಾನದ ನಿಟ್ಟಿಸಿರು ಬಿಟ್ಟಿದ್ದಾರೆ. ರಾಜ್ಯಾದ್ಯಂತ ಸುದ್ದಿಯಾಗಿದ್ದ ಭಾರಿ ತಲ್ಲಣ ಸೃಷ್ಟಿಸಿದ ಈ ಪ್ರಕರಣವು ಹೀಗೆ ತಾರ್ಕಿಕ ಅಂತ್ಯ ಕಂಡಿದೆ.