ಮದುವೆಯಾದ ರಾತ್ರಿಯೇ ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತ

ಮದುವೆಯಾದ ರಾತ್ರಿಯೇ ಪತ್ನಿಯನ್ನು ಕೊಂದು ನವವಿವಾಹಿತನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆಯು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಅಯೋಧ್ಯೆ ಪೊಲೀಸ್ ಠಾಣೆ ವ್ಯಾಪ್ತಿಯ ಸಾದತ್ ಗಂಜ್ ಪ್ರದೇಶದ ಪ್ರದೀಪ್ ಎಂಬಾತ ಶಿವಾಣಿ ಎಂಬ ಯುವತಿಯನ್ನು ಮಾರ್ಚ್ 8ರಂದು ಶನಿವಾರ ವಿವಾಹವಾಗಿದ್ದ. ವಿವಾಹ ಸಮಾರಂಭ ಮುಗಿದ ಬಳಿಕವೇ ಇಬ್ಬರೂ ಮೃತಪಟ್ಟಿದ್ದಾರೆ.
ಮದುವೆ ಸಮಾರಂಭದ ಬಳಿಕ ಎಲ್ಲರೂ ಮಧ್ಯಾಹ್ನದ ವೇಳೆಗೆ ವರನ ಮನೆಗೆ ಆಗಮಿಸಿದ್ದರು. ಮನೆಯಲ್ಲಿ ಕೆಲವು ಶಾಸ್ತ್ರಗಳನ್ನು ನಡೆಸಲಾಗಿದೆ. ಎಲ್ಲಾ ಶಾಸ್ತ್ರಗಳು ಮುಗಿದ ಬಳಿಕ ವಧು ಮತ್ತು ವರ ರಾತ್ರಿ ಅವರ ಕೋಣೆಗೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ ರಾಜ್ ಕರಣ್ ನಯ್ಯಾರ್, ಮಾರ್ಚ್ 9ರಂದು ಭಾನುವಾರ ಬೆಳಿಗ್ಗೆ ಎಷ್ಟು ಬಾಗಿಲು ತಟ್ಟಿದರೂ ದಂಪತಿ ಬಾಗಿಲು ತೆರೆದಿಲ್ಲ. ಆದ್ದರಿಂದ ಕುಟುಂಬಸ್ಥರು ಬಾಗಿಲು ಒಡೆದು ಒಳಗೆ ನೋಡಿದಾಗ ಶಿವಾಣಿ ಮೃತದೇಹ ಹಾಸಿಗೆಯಲ್ಲಿ ಕಂಡುಬಂದಿದೆ. ಪ್ರದೀಪ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿಸಿದ್ದಾರೆ.
ಕೋಣೆಯ ಬಾಗಿಲಿನ ಚಿಲಕವನ್ನು ಒಳಭಾಗದಿಂದಲೇ ಹಾಕಲಾಗಿತ್ತು. ಆದ್ದರಿಂದ ಪ್ರಾಥಮಿಕ ತನಿಖೆಯಲ್ಲಿ ವರ ವಧುವನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.