ಬಂಟ್ವಾಳ ಪುರಸಭೆಯಲ್ಲಿ ಡೇನಲ್ಮ್ ಅಭಿಯಾನದಡಿ ಬೀದಿ ಬದಿ ವ್ಯಾಪಾರಿಗಳಿಗೆ ಡಿಜಿಟಲ್ ವಹಿವಾಟಿನ ಬಗ್ಗೆ ಮಾಹಿತಿ ಕಾರ್ಯಕ್ರಮ

ಬಂಟ್ವಾಳ ಪುರಸಭೆಯಲ್ಲಿ ಡೇನಲ್ಮ್ ಅಭಿಯಾನದಡಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ, ಪಿ.ಯಂ. ಸ್ವನಿಧಿ ಸಮೃದ್ಧಿ ಮೇಳ ಹಾಗೂ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮೂಲಕ ಡಿಜಿಟಲ್ ವಹಿವಾಟಿನ ಬಗ್ಗೆ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಪುರಸಭೆಯ ಅಧ್ಯಕ್ಷ ವಾಸು ಪೂಜಾರಿ ಲೊರೆಟ್ಟೊ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಬೀದಿ ಬದಿ ವ್ಯಾಪಾರಿಗಳು ಸರ್ಕಾರದಿಂದ ನೀಡುವಂತಹ ಸವಲತ್ತುಗಳನ್ನು ಬಳಸಿಕೊಂಡು ಭಾರತ ದೇಶವನ್ನು ಸರಳ ಭಾರತವನ್ನಾಗಿ ರೂಪಿಸುವಲ್ಲಿ ತಮ್ಮೆಲ್ಲರ ಸಹಕಾರ ಅಗತ್ಯ. ಮೊಬೈಲ್ ಮೂಲಕ ಹಣ ಪಾವತಿಸಲು ಡಿಜಿಟಲ್ ಪಾವತಿ ಒಳ್ಳೆಯ ಅವಕಾಶ ಎಂದರು.
ಪುರಸಭೆಯ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಮಾತನಾಡಿ ಡಿಜಿಟಲ್ ವ್ಯವಹಾರದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು. ಡಿಜಿಟಲ್ ಆ್ಯಪ್‌ಗಳನ್ನು ಬಳಸುವಾಗ ಜಾಗೃತರಾಗಿರಬೇಕು. ಇದರ ಬಗ್ಗೆ ತಿಳಿದುಕೊಂಡು ವ್ಯವಹರಿಸಬೇಕು. ಎಲ್ಲರೂ ಡಿಜಿಟಲ್ ವ್ಯವಹಾರದಲ್ಲಿ ತೊಡಗಿಸಿಕೊಂಡು ಸಧೃಡರಾಗಿರಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜ ಮಾತನಾಡಿ ಎಲ್ಲಾ ಬೀದಿ ಬದಿ ವ್ಯಾಪಾರಿಗಳು ಡಿಜಿಟಲ್ ವ್ಯಹಾರದಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು. ಆರೋಗ್ಯ ನೀರೀಕ್ಷಕರಾದ ರತ್ನ ಪ್ರಸಾದ್ ಸ್ವಚ್ಛತೆಯ ಬಗ್ಗೆ ಹಾಗೂ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಮಾಹಿತಿ ನೀಡಿದರು. ಅಭಿಯಾನ ವ್ಯವಸ್ಥಾಪಕಿ ಐರಿನ್ ರೆಬೆಲ್ಲೊ ಡೇನಲ್ಮ್ ಯೋಜನೆ ಹಾಗೂ ಪಿ.ಯಂ. ಸ್ವನಿಧಿಯ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.
ಬೀದಿಬದಿ ವ್ಯಾಪಾರಿಗಳಿಗೆ ಹಾಗೂ ಸ್ವ ಸಹಾಯ ಸಂಘದವರಿಗೆ ಪ್ಲಾಸ್ಟಿಕ್ ಉಪಯೋಗಿಸದಂತೆ ಬಟ್ಟೆ ಚೀಲಗಳನ್ನು ವಿತರಿಸಲಾಯಿತು. ಪುರಸಭಾ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳ ಗುರುತಿಸುವಿಕೆಗೆ ಗುರುತು ಪತ್ರ ವಿತರಿಸಲಾಯಿತು. ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ನ ಮ್ಯಾನೇಜರ್ ಶ್ರೀಹಾಸ್ ಹಾಗೂ ಸಿಬ್ಬಂದಿಗಳು ಭಾಗವಹಿಸಿ ಪೋಸ್ಟ್ ಪೇಮೆಂಟ್ ಬ್ಯಾಂಕ್ ಬಗ್ಗೆ ಮಾಹಿತಿ ನೀಡಿದರು. ಬೀದಿ ಬದಿ ವ್ಯಾಪಾರಿಗಳು ಹಾಗೂ ಸ್ವ ಸಹಾಯ ಸಂಘದ ಸದಸ್ಯರು ಮರ್ಚೆಂಟ್ ಕ್ಯೂ ಆರ್ ಕೋಡ್ ಹಾಗೂ ಪೋಸ್ಟ್ ಪೇಮೆಂಟ್ ಬ್ಯಾಂಕಿಂಗ್ ನ ಸದುಪಯೋಗ ಪಡೆದುಕೊಂಡರು.
ಈ ಕಾರ್ಯಕ್ರಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಿ.ಸಿ. ರೋಡ್ ಶಾಖೆಯ ಸಿಬ್ಬಂದಿ, ಒಕ್ಕೂಟದ ಅಧ್ಯಕ್ಷೆ ವಸಂತಿ ಮತ್ತು ಪಟ್ಟಣ ಮಾರಾಟ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಸಿ.ಆರ್.ಪಿ. ಗೀತಾ ಸ್ವಾಗತಿಸಿ, ಸಮುದಾಯ ಸಂಘಟಕಿಯಾದ ಉಮಾವತಿ ಕಾರ್ಯಕ್ರಮ ನಿರೂಪಿಸಿ, ಸಿ.ಆರ್.ಪಿ. ಮಂಗಳ ಧನ್ಯವಾದವಿತ್ತರು.