March 26, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

2024ನೇ ಸಾಲಿನ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪುರಸ್ಕಾರ – ಪತ್ರಿಕಾ ಗೋಷ್ಠಿ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ವರ್ಷವಾರು ಕೊಂಕಣಿ ಸಾಹಿತ್ಯ, ಕಲೆ, ಜಾನಪದ ಈ ಮೂರು ಕ್ಷೇತ್ರದಲ್ಲಿ ಸಾಧನೆಗೈದ ಕೊಂಕಣಿ ಮಹನೀಯರನ್ನು ಗೌರವಿಸಲಾಗುತ್ತಿದ್ದು ಪ್ರಸ್ತುತ ಸಾಲಿನಲ್ಲಿ 2024 ನೇ ಸಾಲಿನ ಗೌರವ ಪ್ರಶಸ್ತಿಗಾಗಿ ಹಾಗೂ ಪುಸ್ತಕ ಪುರಸ್ಕಾರಕ್ಕಾಗಿ ಈ ಕೆಳಗಿನ ಮಹಾನಿಯರನ್ನು ಆಯ್ಕೆ ಮಾಡಲಾಗಿದೆ.

  1. 2024ನೇ ಸಾಲಿನ ಗೌರವ ಪ್ರಶಸ್ತಿ:

ಕೊಂಕಣಿ ಸಾಹಿತ್ಯ  : ಎಂ. ಪ್ಯಾಟ್ರಿಕ್‌ ಮೊರಾಸ್, ಮಂಗಳೂರು

     ಕೊಂಕಣಿ ಕಲೆ   :  ಜೊಯಲ್‌ ಪಿರೇರಾ, ಮಂಗಳೂರು

     ಕೊಂಕಣಿ ಜಾನಪದ : ಸೊಬೀನಾ ಮೊತೇಶ್ ಕಾಂಬ್ರೆಕರ್, ಹಳಿಯಾಳ.

  1. 2024ನೇ ಸಾಲಿನ ಪುಸ್ತಕ ಪುರಸ್ಕಾರ :

      ಕೊಂಕಣಿ – ಕವನ ಪುಸ್ತಕ : “ಪಾಲ್ವಾ ಪೊಂತ್”‌  –  ಫೆಲ್ಸಿ ಲೋಬೊ, ದೆರೆಬೈಲ್‌

      ಕೊಂಕಣಿ ಲೇಖನ ಪುಸ್ತಕ : ಶೆತಾಂ ಭಾಟಾಂ ತೊಟಾಂನಿ – ವಲೇರಿಯನ್ ಸಿಕ್ವೇರಾ, ಕಾರ್ಕಳ.

ಗೌರವ ಪ್ರಶಸ್ತಿಯು ರೂಪಾಯಿ 50,000/- ನಗದು, ಪ್ರಮಾಣ, ಪತ್ರ, ಶಾಲು, ಹಾರ, ಪೇಟ, ಸ್ಮರಣಿಕೆ, ಫಲಪುಷ್ಪಗಳನ್ನು, ಒಳಗೊಂಡಿದೆ. ಪುಸ್ತಕ ಪುರಸ್ಕಾರವು ರೂಪಾಯಿ 25,000/- ನಗದು, ಪ್ರಮಾಣ ಪತ್ರ, ಶಾಲು, ಹಾರ, ಸ್ಮರಣಿಕೆ ಫಲಪುಷ್ಪಗಳನ್ನು ಒಳಗೊಂಡಿದೆ.

ಸಮಾರಂಭ:

ಕರ್ನಾಟಕ ಕೊಂಕಣಿ ಸಾಹಿತ್ಯ ಕೊಂಕಣಿ ಕ್ರಿಶ್ಚಿಯನ್‌ ಅಸೋಸಿಯೇಶನ್‌ ಮೈಸೂರು ಸಹಯೋಗದೊಂದಿಗೆ 23 ಮಾರ್ಚ್ 2025, ಆದಿತ್ಯವಾರ ಸಂಜೆ 5.00 ಗಂಟೆಗೆ ಕೊಂಕಣ್‌ ಭವನ್‌, ವಿಜಯನಗರ್‌ 2nd ಸ್ಟೇಜ್‌, ಮೈಸೂರಿನಲ್ಲಿ ಜರುಗಲಿರುವುದು. ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಹರೀಶ್‌ ಗೌಡ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿರುವರು.

ಅಕಾಡೆಮಿ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ ಇವರ ಅಧ್ಯಕ್ಷತೆಯಲ್ಲಿ, ವಿಧಾನಪರಿಷತ್‌ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಡಾ. ಡಿ. ತಿಮ್ಮಯ್ಯ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ವಲೇರಿಯನ್‌ ಡಿಸೋಜ (ವಲ್ಲಿ ವಗ್ಗ), ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕ ವಿ.ಎನ್‌. ಮಲ್ಲಿಕಾರ್ಜುನ ಸ್ವಾಮಿ- ಗೌರವ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಿದ್ದಿ ಸಮುದಾಯದ ಸಾಂಸ್ಕೃತಿಕ ನೃತ್ಯ, ಬ್ರಾಸ್‌ ಬ್ಯಾಂಡ್‌, ಕೊಂಕಣಿ ಸಂಗೀತ ರಸಮಂಜರಿ ಕಾರ್ಯಕ್ರಮವು ನಡೆಯಲಿರುವುದು. ಕೊಂಕಣಿ ಜಿ.ಎಸ್.ಬಿ. ಸಭಾ, ಮೈಸೂರು ಮತ್ತು ಮುರುಡೇಶ್ವರ ನವಾಯತ್‌ ಅಸೋಸಿಯೇಶನ್‌ ಮೈಸೂರು ಇವರು ಈ ಕಾರ್ಯಕ್ರಮಕ್ಕೆ ಸಹಕಾರ ನೀಡಲಿದ್ದಾರೆ.

ಪ್ರಶಸ್ತಿ ಪುರಸ್ಕೃತರ ಪರಿಚಯ:

ಕೊಂಕಣಿ ಸಾಹಿತ್ಯ ಗೌರವ ಪ್ರಶಸ್ತಿ: 

ಪ್ರಶಸ್ತಿ ಪುರಸ್ಕೃತರು:   ಪ್ಯಾಟ್ರಿಕ್‌ ಕಾಮಿಲ್‌  ಮೊರಾಸ್‌ (ಎಮ್.‌ ಪ್ಯಾಟ್ರಿಕ್)

ಕೊಂಕಣಿ ಸಾಹಿತ್ಯ ಹಾಗೂ ಪತ್ರಿಕಾರಂಗದ ಓರ್ವ ಅರ್ಪಣಾ ಮನೋಭಾವದ ಸಾಹಿತಿ. ಕೊಂಕಣಿ ಸಾಹಿತ್ಯ ಭಂಡಾರಕ್ಕೆ 400ಕ್ಕೂ ಮಿಕ್ಕಿ ಕಥೆಗಳನ್ನು, ಪ್ರಸ್ತುತ ಪರಿಸ್ಥಿತಿ ವಿಷಯಗಳ ಮೇಲೆ ಲೇಖನಗಳನ್ನು, 8 ಕಾದಂಬರಿಗಳನ್ನು ಹಾಗೂ 2 ನಾಟಕಗಳನ್ನು ರಚಿಸಿದ್ದಾರೆ. ಮಳೆ ಬಿಸಿಲು ಲೆಕ್ಕಿಸದೆ, ಕೊಂಕಣಿ ಪುಸ್ತಕಗಳನ್ನು ತಲೆ ಮೇಲೆ ಹೊತ್ತುಕೊಂಡು ಮನೆಮನೆಗಳಲ್ಲಿ ಕೊಂಕಣಿ ಪುಸ್ತಕಗಳನ್ನು ಮುಟ್ಟಿಸಿದಂತಹ ಪ್ರಥಮ ವ್ಯಕ್ತಿ. ತಮ್ಮದೇ ಆದ ʼನಿತ್ಯಾಧರ್‌ ಪ್ರಕಾಶನ್‌ʼ ಸ್ಥಾಪಿಸಿ ಪುಸ್ತಕಗಳನ್ನು ಪ್ರಕಟಿಸುತ್ತಾರೆ.

ತಿರಸ್ಕಾರ್‌, ಹಾಂವ್‌ ತುಕಾ ಭಾಗಿ ಕರ್ತಲೊಂ, ಮಸ್ತಿಲ್ಲೆಂ ಫುಲ್‌, ತುಂ ಮ್ಹಜೆಂಚ್‌ ಬಾ, ಒಲಿವಿಯಾ ವಜ್ರಾಂಚೊ ಕುರೊವ್‌, ಬೆಸಾಂವ್‌, ನರ್ಸ್‌ ಗ್ಲೋರಿಯಾ, ಕಾದಂಬರಿಗಳು, ಲಿಪ್ಲಲೊ ಸಾಳಿಯೊ ಪತ್ತೇದಾರಿ ಕಾದಂಬರಿ, ಆವಯ್ಚೆಂ ಕಾಳಿಜ್‌ ಮತ್ತು ಇತರ ಕಥೆಗಳು ಪ್ರಕಟಗೊಂಡಿವೆ. ವಾಗ್‌ ಮಾರ್ಲೊ ವಿನೋದಿತ ಕಿರುನಾಟಕ, ತುಂವೆಂಚ್‌ ವಿಕ್ರೀತ್‌ ಕೆಲೆಂಯ್‌, ಪತ್ತೇದಾರಿ ನಾಟಕ, ಫಾರಿಕ್ಪಣ್‌ ಮುಂತಾದ ನಾಟಕಗಳನ್ನು ರಚಿಸಿದ್ದಾರೆ.

ಕೊಂಕಣಿ ಕಲಾ ಗೌರವ ಪ್ರಶಸ್ತಿ :

ಪ್ರಶಸ್ತಿ ಪುರಸ್ಕೃತರು : ಅಲೆಕ್ಸಾಂಡರ್‌ ಜೋಯೆಲ್‌ ಪಿರೇರಾ:

ಸಂಗೀತ ಗುರು ಬಿರುದಾಂಕಿತ ಜೊಯೆಲ್‌ ಪಿರೇರಾ ಮಂಗಳೂರಿನ ಬಿಜೈನಲ್ಲಿ ಜನಿಸಿದರು. ಇವರು ಬಾಲ್ಯದಿಂದಲೇ ಸಂಗೀತ ಆಸಕ್ತಿ ಹೊಂದಿದವರು. ಸಂಗೀತ ಕ್ಷೇತ್ರದಲ್ಲಿ ಪ್ರಾಬಲ್ಯವನ್ನು ಹೊಂದಿರುವ ಇವರು ಪಿಯಾನೊ, ಅಕಾರ್ಡಿಯನ್‌, ವಯೊಲಿನ್‌, ಮ್ಯಾಂಡೊಲಿನ್‌, ಟ್ಯೂಬ್ಯುಲರ್‌, ಯುಪೋನಿಯಮ್‌, ಕಾರ್ನೆಟ್‌, ಸರ್ಕಲ್ ಬಾಸ್‌, ಸಿತಾರಾ ಮುಂತಾದ ಹಿತ್ತಾಳೆ ವಾದ್ಯಗಳನ್ನು ನುಡಿಸುತ್ತಾರೆ. ಕೊಂಕಣಿ ಕ್ರಿಶ್ಚಿಯನ್‌ ಸಮುದಾಯದಲ್ಲಿ ಉಳಿದಿರುವ ಎಕೈಕ ಜಾನಪದ ಸಂಗೀತ ಸಾಧನವಾದ “ಗುಮಟ್”‌ ಅನ್ನು ಬಾರಿಸುತ್ತಾ “ಗುಮ್ಟಾಂ ಹಾಡುಗಳನ್ನು ಹಾಡುವುದು. ಕೊಂಕಣಿ, ಇಂಗ್ಲೀಷ್‌, ಮಲಯಾಳಂ, ಕನ್ನಡ, ತುಳು ಭಾಷೆಗಳಲ್ಲಿ ಸುಮಾರು 400 ಕ್ಕೂ ಹೆಚ್ಚಿನ ಆಲ್ಬಮ್ ಗಳಿಗೆ ಸಂಗೀತ ಸಂಯೋಜನೆ/ವ್ಯವಸ್ಥೆ ಮಾಡಿರುವ ಇವರು 2007 ರಲ್ಲಿ ಕಲಾಂಗಣ್‌ ನಲ್ಲಿ 40 ಗಂಟೆಗಳ ಕಲಾ ನಡೆದ ನಿರಂತರ ಗಾಯನ “ಕೊಂಕಣಿ ನಿರಂತರಿ” ಸಂಗೀತ ಕಾರ್ಯಕ್ರಮ ನಿರ್ದೇಶಕರಾಗಿ, ಗಿನ್ನಿಸ್‌ ವಿಶ್ವದಾಖಲೆ ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ. ಕೊಂಕಣ ಬೈಬಲ್‌ ನಾಟಕಗಳು-6 ಸಾಮಾಜಿಕ ನಾಟಕಗಳು-4 ಮಾಟಮಂತ್ರ ಆಚರಣೆಗಳು/ಮಾನಸಿಕ/ವೈಜ್ಞಾನಿಕ ವಿಶ್ಲೇಷಣೆಯ ಕುರಿತು ಸರ್ಣೆತಾಂ ಶೀರ್ಷಿಕೆಯ ಕೊಂಕಣಿ ಕಾದಂಬರಿ, ಇವರು ರಚಿಸಿರುವ ಸಾಹಿತ್ಯ ಕೃತಿಗಳಾಗಿರುತ್ತವೆ. ಸಿನೇಮಾ ಕ್ಷೇತ್ರದಲ್ಲಿಯೂ ಇವರು ದುಡಿದಿದ್ದಾರೆ.

ಕೊಂಕಣಿ ಜಾನಪದ ಗೌರವ ಪ್ರಶಸ್ತಿ:

ಸೊಬೀನ ಮೊತೇಶ್ ಕಾಂಬ್ರೆಕರ್‌

ಇವರು ಸಿದ್ದಿ ಬುಡಕಟ್ಟು ಸಮುದಾಯದ ಮಹಿಳೆ ಇವರು ಸಿದ್ದಿ ಸಂಸ್ಕೃತಿ ಕಕಲಾತಂಡದ ಅಧ್ಯಕ್ಷರು. ಇವರು ಸುಮಾರು 20 ವರ್ಷ ಮೇಲ್ಪಟ್ಟು ತನ್ನ ಕಲೆಯನ್ನ ಬಿತ್ತರಿಸುವಲ್ಲಿ ಸಾಕಷ್ಟು ಶ್ರಮ ವಹಿಸಿದ್ದಾರೆ.  ಜಿಲ್ಲೆಗಳಲ್ಲಿ, ಹೊರನಾಡುಗಳಲ್ಲಿ,ಹೊರರಾಜ್ಯಗಳಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಕಲೆಯನ್ನು ಬಿತ್ತರಿಸಿದ್ದಾರೆ. ತಮ್ಮ ಕಲೆಯನ್ನು ಹಸ್ತಾಂತರಿಸುವಂತಹ ಗುರು-ಶಿಷ್ಯ ಪರಂಪರೆ ಅಡಿಯಲ್ಲಿ ತರಬೇತಿಗಳನ್ನು ನೀಡಿರುತ್ತಾರೆ. ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಸ್ಪೃಶ್ಯತಾ ನಿವಾರಣ ಕಾರ್ಯಕ್ರಮ, ಆರೋಗ್ಯದ ಕುರಿತಂತೆ ಜನ ಜಾಗ್ರತಿ ಕಾರ್ಯಕ್ರಮಗಳು ಹೀಗೆ ಹಲವಾರು ವಿಚಾರಗಳ ಬಗ್ಗೆ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸುವಂತಹ ಕೆಲಸದಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡಿದ್ದಾರೆ. ಇವರು ದಮಾಮಿ ನೃತ್ಯ, ಪುಗಡಿ ನೃತ್ಯ ಹಾಗೂ ಸಿಗ್ಮೋ ನೃತ್ಯ ಹಾಗೂ ವಾದ್ಯಗಳನ್ನು ನುಡಿಸುವುದರಲ್ಲಿ ಪರಿಣಿತರಾಗಿದ್ದಾರೆ. ಇವರಿಗೆ ದಮಾಮಿ  ನೃತ್ಯಕ್ಕೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2015 ಲಭಿಸಿರುತ್ತದೆ. ಜಾನಪದ ಅಕಾಡೆಮಿ ಪ್ರಶಸ್ತಿ ಕೂಡ ಲಭಿಸಿದೆ.

ಪುಸ್ತಕ ಪುರಸ್ಕೃತ  ಕವನ  ಪುಸ್ತಕ :   “ಪಾಲ್ವಾ ಪೊಂತ್‌”  

ಲೇಖಕರು :  ಫೆಲ್ಸಿ ಲೋಬೊ, ದೆರೆಬಯ್ಲ್

ಶಾಲಾ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸಲು ವಿವಿಧ ಕೊಂಕಣಿ ಕಾರ್ಯಕ್ರಮ ಹಮ್ಮಿಕೊಂಡಿರುತ್ತಾರೆ, ಎಲ್ಲಾ ಕೊಂಕಣಿ ಪತ್ರಿಕೆಗಳಲ್ಲಿ ಲೇಖನ, ಕವಿತೆ, ವಿಡಂಬನೆ, ಲಲಿತಪ್ರಬಂಧ ಪ್ರಕಟಿಸುತ್ತಾ ಬಂದಿರುತ್ತಾರೆ.  ಕೊಂಕಣಿ ಸಾಹಿತ್ಯ ಕೃಷಿಯಲ್ಲಿ ಕ್ರೀಯಾಶೀಲರಾಗಿರುವ ಇವರು “ಗರ್ಜೆ ತೆಕಿದ್ ಗಜಾಲಿ” ಲೇಖನ ಪ್ರಕಟಿಸಿರುತ್ತಾರೆ. ಹಾಗೂ ಇವರು ಬರೆದಿರುವ “ಆಪಾಲಿಪಾ” ಮಕ್ಕಳ ಕವಿತೆ ಪುಸ್ತಕವನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿರುತ್ತದೆ. ಇವರ ಲೇಖನಗಳು ಹೆಚ್ಚಾಗಿ ಎಲ್ಲಾ ಕೊಂಕಣಿ ಪತ್ರಗಳಲ್ಲಿ ಮತ್ತು ಹಲವು ಜಾಲತಾಣಗಳಲ್ಲಿ ಸರಾಗವಾಗಿ ಪ್ರಸಾರಗೊಳ್ಳುತ್ತವೆ. ವಿನೋದ,  ಲಲಿತ ಪ್ರಬಂಧ,  ಕವಿತೆ ಮತ್ತು ಲೇಖನ ವಿಭಾಗಗಳಲ್ಲಿ‌ ಅನೇಕ ಬಹುಮಾನಗಳು ಲಭಿಸಿವೆ. ಆಕಾಶವಾಣಿ ಮಂಗಳೂರು, ರೇಡಿಯೊ ಹಾಗೂ ರೇಡಿಯೊ ಸಾರಂಗ್ ಇವುಗಳಲ್ಲಿ ಭಾಷಣ, ಕವಿತೆಗಳು, ಪ್ರಸಾರಗೊಂಡಿವೆ. ಅನೇಕ ಕವಿಗೋಷ್ಟಿಗಳಲ್ಲಿ ಇವರು ಕೊಂಕಣಿ, ಕನ್ನಡ ಮತ್ತು ತುಳು ಭಾಷೆಗಳಲ್ಲಿ ಕವಿತೆ ಪ್ರಸ್ತುತ ಪಡಿಸಿರುತ್ತಾರೆ.

 ಪುಸ್ತಕ ಪುರಸ್ಕೃತ  ಕೊಂಕಣಿ ಲೇಖನ  ಪುಸ್ತಕ :   “ಶೆತಾಂ ಭಾಟಾಂ ತೊಟಾಂನಿ”

ಲೇಖಕರು: ವಲೇರಿಯನ್‌ ಸಿಕ್ವೇರಾ (ವಲ್ಲಿ ಬೋಳ)

ವಲ್ಲಿ ಬೋಳ ನಾಮಾಂಕಿತದಲ್ಲಿ ಬರೆಯುವ ವಲೇರಿಯನ್‌ ಸಿಕ್ವೇರಾ 4 ಆಗಸ್ಟ್‌ 1959 ಇಸವಿಯಲ್ಲಿ ಕಾರ್ಕಳ ತಾಲೂಕಿನ ಬೋಳ ಎಂಬಲ್ಲಿ ಜನಿಸಿದರು. ಇವರದು ಸಾಂಪ್ರದಾಯಿಕ ಕೃಷಿ ಕುಟುಂಬ.  1983ರಲ್ಲಿ ಪಯ್ಣಾರಿ ಪತ್ರಿಕೆಗೆ ಬರೆಯುವ ಮುಖಾಂತರ ಸಾಹಿತ್ಯ ಕ್ಷೇತ್ರಕ್ಕೆ ಕಾಲಿರಿಸಿದ ಇವರು ಸಾಮಾಜಿಕ, ಕೃಷಿ, ಸಂಪ್ರದಾಯ, ಪರಿಸರ, ಜಾಗೃತಿ ಮತ್ತು ಜೀವನದ ಸತ್ಯಗಳು. ಹೀಗೆ ಅನೇಕ ವಿಷಯಗಳಲ್ಲಿ ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ.

ಕಳೆದ 41 ವರುಷಗಳಿಂದ ಇವರ ಸಾವಿರಕ್ಕೂ ಮಿಕ್ಕಿ ಕೊಂಕಣಿ, ತುಳು, ಕನ್ನಡ ಭಾಷೆಗಳಲ್ಲಿ ಲೇಖನ, ಕಥೆ, ಕವಿತೆ, ವಿಡಂಬನೆ, ಪ್ರಬಂಧ, ಚುಟುಕು, ಹಾಗೂ ನುಡಿಗಟ್ಟುಗಳು ವಿವಿಧ ಮಾಧ್ಯಮಗಳಲ್ಲಿ ಪ್ರಸಾರಗೊಂಡಿವೆ. ಸಾಂಗ್ಣ್ಯಾ ತುಪೆಂ (ಎರಡು ಆವೃತ್ತಿ), ಗಾದ್ಯಾ ಮೆರೆರ್‌, ಜಗ್ಲಾಣೆ, ಎಂಬ ಕೊಂಕಣಿ ಹಾಗೂ ಪೂಂಬೆ ಎಂಬ ತುಳು ಪುಸ್ತಕಗಳು ಪ್ರಕಟಗೊಂಡಿವೆ. ನಾಡಾಕ್‌ ವಚುಯಾಂ, ಪಾಚ್ವಿ ಪಾಂತ್‌, ಲಾಂಪ್ಯಾಂವ್‌, ಮಯ್ಲಾ ಫಾತರ್‌,‌ ಲಿಸಾಂವ್ ಆನಿ ಸ್ಥೆಸಾಂವ್‌, ಜಾಣ್ವಾಯೆಚ್ಯೊ ಸಾಂಗ್ಣ್ಯೊ, ಮಾತಿ ಆನಿ ಸತಾಂ, ಮಾಸ್ಳೆಚಿಂ ಮೆಟಾಂ, ಕೃಷಿ-ಕಶಿ ಎಂಬ ಕೊಂಕಣಿ ಹಾಗೂ ಪಚ್ಚನಿರೆ ಎಂಬ ತುಳು ಅಂಕಣಗಳನ್ನು ಬರೆದಿದ್ದಾರೆ.

2024-25ನೇ  ಸಾಲಿನ ಅಕಾಡೆಮಿ ಕಾರ್ಯಚಟುವಟಿಕೆಗಳ ವಿವರ :-

  1. ಅಧ್ಯಕ್ಷರ ಅಧಿಕಾರ ಸ್ವೀಕಾರ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಸರ್ಕಾರದ ಅಧಿಸೂಚನೆ ಸಂಖ್ಯೆ : ಕಸಂವಾ 204 ಕಸಧ 2023, ದಿನಾಂಕ 15.03.2024 ರಂತೆ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ ಇವರನ್ನು ಮೂರು ವರ್ಷಗಳ ಅವಧಿಗೆ ಅಧ್ಯಕ್ಷರನ್ನಾಗಿ ಹಾಗೂ ಇತರ ಸದಸ್ಯರನ್ನು ನೇಮಿಸಲಾಗಿರುತ್ತದೆ. ಇವರು ಅಧಿಕೃತವಾಗಿ ದಿನಾಂಕ 14.06.2024 ರಂದು ಪೂರ್ವಾಹ್ನ 11.00 ಗೆ ಅಕಾಡೆಮಿ ಕಡತಕ್ಕೆ ಸಹಿ ಹಾಕುವ ಮೂಲಕ ಅಕಾಡೆಮಿ ಅಧ್ಯಕ್ಷತೆಯ ಅಧಿಕಾರವನ್ನು ವಹಿಸಿಕೊಂಡರು.

  1. ಅದ್ಯಕ್ಷರ ಪದಗ್ರಹಣ ಸಮಾರಂಭ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ನೂತನ ಸಮಿತಿಯಿ ಪದಗ್ರಹಣ ಕಾರ್ಯಕ್ರಮವು ದಿನಾಂಕ 18.06.2024 ರಂದು ಅಕಾಡೆಮಿ ಕಚೇರಿಯ ಆವರಣದಲ್ಲಿ ನಡೆಯಿತು. ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ ಇವರು ಕೃಷಿ ಸಲಕರಣೆ ““ನೊಗ” ವನ್ನು ಸ್ವೀಕರಿಸುವ ಮೂಲಕ ಅಧಿಕಾರ ವಹಿಸಿಕೊಂಡರು. ಸದಸ್ಯರಾದ ವಂದನೀಯ ಡಾ. ಪ್ರಶಾಂತ್ ಮಾಡ್ತಾ, ರೊನಾಲ್ಡ್ ಕ್ರಾಸ್ತಾ, ನವೀನ್ ಲೋಬೋ, ಸಪ್ನಾ ಮೇ ಕ್ರಾಸ್ತಾ, ಸಮರ್ಥ ಭಟ್, ಸುನಿಲ್ ಸಿದ್ದಿ ಯಲ್ಲಾಪುರ, ಜೇಮ್ಸ್ ಲೋಪಿಸ್ ಹೊನ್ನಾವರ, ದಯಾನಂದ ಮಡೇಕರ್ ಕಾರ್ಕಳ, ಪ್ರಮೋದ್ ಪಿಂಟೋ ಚಿಕ್ಕಮಗಳೂರು ಉಪಸ್ಥಿತರಿದ್ದರು.

  1. ಸೌಹಾರ್ಧತಾ ಭೇಟಿ ಹಾಗೂ ಸಮಾಲೋಚನಾ ಸಭೆ

ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ಶಿವರಾಜ್‌ ಎಸ್‌ ತಂಗಡಗಿ ಇವರ ಅಧ್ಯಕ್ಷತೆಯಲ್ಲಿ ದಿನಾಂಕ 21.06.2024 ರಂದು ಬೆಂಗಳೂರಿನ ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಅಕಾಡೆಮಿ, ಪ್ರಾಧಿಕಾರಗಳಿಗೆ ನಾಮನಿರ್ದೇಶಿರಾಗಿರುವ ಅಧ್ಯಕ್ಷರು ಮತ್ತು ಸದಸ್ಯರ ಸೌಹಾರ್ಧತಾ ಭೇಟಿ ಹಾಗೂ ಸಮಾಲೋಚನಾ ಸಭೆಯನ್ನು ಏರ್ಪಡಿಸಲಾಗಿತ್ತು.

  1. ಸಂಘ ಸಂ‍ಸ್ಥೆಗಳೊಂದಿಗೆ ಕೊಂಕಣಿ ಮಾನ್ಯತಾ ದಿನಾಚರಣೆ  ಕುರಿತು ಸಭೆ

ಕೊಂಕಣಿ ಭಾಷೆಗೆ ಸಾಂವಿಧಾನಿಕ ಮಾನ್ಯತೆ ದೊರೆತ ಸವಿನೆನಪಿಗಾಗಿ ಪ್ರತಿ ವರ್ಷ ಆಗಸ್ಟ್‌ 20 ರಂದು ಕೊಂಕಣಿ ಮಾನ್ಯತಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. 2024 ರ ಆಗಸ್ಟ್‌ 20 ರಂದು ಎಲ್ಲಾ ಕೊಂಕಣಿ ಸಂಘ ಸಂ‍ಸ್ಥೆಗಳ ಸಹಯೋಗದಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆಯನ್ನು ಆಚರಿಸಲು ದಿನಾಂಕ 08.07.2024 ರಂದು ವಿಶೇಷ ಪೂರ್ವಾಭಾವಿ ಸಭೆಯನ್ನು ಆಯೋಜಿಸಲಾಗಿತ್ತು.

  1. ಪ್ರಾಧಿಕಾರ ಮತ್ತು ಅಕಾಡೆಮಿ ಅಧ್ಯಕ್ಷರುಗಳ ಸಮನ್ವಯ ಸಭೆ

ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರ ಅಧ್ಯಕ್ಷತೆಯಲ್ಲಿ ದಿನಾಂಕ 10.07.2024 ರಂದು ಪೂರ್ವಾಹ್ನ 11.30 ಕ್ಕೆ ಕನ್ನಡ ಭವನದ ಅಂತರಂಗದಲ್ಲಿ ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರ ಸಮನ್ವಯ ಸಭೆಯನ್ನು ಆಯೋಜಿಸಲಾಗಿತ್ತು.

  1. ಕರ್ನಾಟಕ ಸಂ‍ಭ್ರಮ 50 ಪೂರ್ವಾಭಾವಿ ಸಭೆ

ಕರ್ನಾಟಕ ಸಂ‍ಭ್ರಮ 50 ರ ಕಾರ್ಯಕ್ರಮವನ್ನು ವಿವಿಧ ಅಕಾಡೆಮಿಗಳ ಸಹಯೋಗದಲ್ಲಿ ಮಂಗಳೂರಿನಲ್ಲಿ ಆಚರಿಸಲು ದಿನಾಂಕ 13.07.2024 ರಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ, ತುಳು ಸಾಹಿತ್ಯ, ಬ್ಯಾರಿ ಸಾಹಿತ್ಯ, ಕೊಡವ ಸಾಹಿತ್ಯ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಹಾಗೂ ಯಕ್ಷಗಾನ ಅಕಾಡೆಮಿಗಳ ಅಧ್ಯಕ್ಷರುಗಳ ಸಭೆಯನ್ನು ಆಯೋಜಿಸಲಾಗಿತ್ತು.

  1. ಪ್ರಾಧಿಕಾರ ಮತ್ತು ಅಕಾಡೆಮಿ ಅಧ್ಯಕ್ಷರುಗಳ ಸಮನ್ವಯ ಸಭೆ

ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರ ಅಧ್ಯಕ್ಷತೆಯಲ್ಲಿ ದಿನಾಂಕ 18.07.2024 ರಂದು ಅಪರಾಹ್ನ 4.00 ಗಂಟೆಗೆ ಬೆಂಗಳೂರಿನ ವಿಕಾಸ ಸೌಧದಲ್ಲಿ ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರ ಸಮನ್ವಯ ಸಭೆಯನ್ನು ಆಯೋಜಿಸಲಾಗಿತ್ತು.

  1. ಕೊಂಕ್ಣಿ ಲೇಖಕಾಂಚಿ ಜಮಾತ್ (ಕೊಂಕಣಿ ಲೇಖಕರ ಜೊತೆ ಸಂವಾದ)

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ನೇತೃತ್ವದಲ್ಲಿ 21.07.2024 ರಂದು ನಂತೂರಿನ ಸಂದೇಶ ಪ್ರತಿಷ್ಠಾನದಲ್ಲಿ ಕೊಂಕಣಿ ಲೇಖಕರ ಸಂವಾದ ಕಾರ್ಯಕ್ರಮ ನಡೆಯಿತು. ಸಂವಾದ ಕಾರ್ಯಕ್ರಮದಲ್ಲಿ ಕೊಂಕಣಿಯ ಸರಿಸುಮಾರು 75ಕ್ಕೂ ಮಿಗಿಲಾಗಿ ಲೇಖಕರು ಹಾಗೂ ಕವಿಗಳು ಭಾಗವಹಿಸಿ ಉತ್ತಮ ರೀತಿಯಲ್ಲಿ ವಿಚಾರಗಳನ್ನು ಮಂಡಿಸಿದರು.

  1. ಕವಿಗೋಷ್ಟಿ ಚಾರೋಳಿ 1000:

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು 20 ವರ್ಷ ಪೂರೈಸಿದ ‘ಪಿಂಗಾರ’ ವಾರ ಪತ್ರಿಕೆಯ ಸಹಯೋಗದಲ್ಲಿ ‘ಚಾರೊಳಿ’ 1000 ದ ಸಂಭ್ರಮ ನಗರದ ಬಜ್ಜೋಡಿಯ ಸಂದೇಶ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕೊಂಕಣಿ ಹಾಗೂ ಇತರ ಭಾಷೆಗಳಲ್ಲಿ ಹಲವಾರು ಸಾಹಿತ್ಯ ಕೃತಿ ರಚಿಸಿದ ಕೊಂಕಣಿ ಕವಿ ರಿಚಾರ್ಡ್‌ ಲಸ್ರಾದೊ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೇರಳ, ಗೋವಾ, ಆಂಧ್ರ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಹಲವು ಮಂದಿ ಕವಿಗಳು ಹಾಗೂ ಚಾರೊಳಿಯಲ್ಲಿ ನಿಪುಣರಾದ ಸಾಹಿತಿಗಳು ಭಾಗವಹಿಸಿದ್ದರು.

  1. ಗಾದ್ಯಾಂತ್‌ ಉಡ್ಕಾಂಣಾಂ-2024

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಹೋಲಿ ಸ್ಪಿರಿಟ್‌ ಚರ್ಚ್‌, ಸಿ.ಎಲ್.ಸಿ. ಬಜಾಲ್‌ ಇವರ ಸಹಯೋಗದಲ್ಲಿ ದಿನಾಂಕ 28.07.2024ರಂದು ಮಂಗಳೂರಿನ ಬಜಾಲ್‌ನಲ್ಲಿ “ಗಾದ್ಯಾಂತ್‌ ಉಡ್ಕಾಂಣಾಂ-2024” ಸಾಂಪ್ರದಾಯಿಕ ಕ್ರೀಡೋತ್ಸವ ಹಾಗೂ ಸಂಗೀತ ಮನೋರಂಜನಾ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದ ಶೀರ್ಷಿಕೆಯಂತೆ ಕೆಸರಿನ ಗದ್ದೆಯಲ್ಲಿ ವಿವಿಧ ಸಾಂಪ್ರದಾಯಿಕ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಕೊಂಕಣಿಯ ವಿವಿಧ ಗಾಯಕರಿಂದ ಸಂಗೀತ ಕಾರ್ಯಕ್ರಮ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

  1. ಶೈಕ್ಷಣಿಕ ಸಂವಾದ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರ ಅದ್ಯಕ್ಷತೆಯಲ್ಲಿ ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನ ಸಭಾಂಗಣದಲ್ಲಿ ಆಗಸ್ಟ್ 02, 2024 ರಂದು ಕೊಂಕಣಿ ಎಂ.ಎ. ಹಾಗೂ ಕೊಂಕಣಿ ಭಾಷೆ ಅಧ್ಯಯನದ ಕುರಿತು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಮಂಗಳೂರು ಯುನಿವರ್ಸಿಟಿಯ ಉಪ ಕುಲಪತಿ ವಿ.ಎಲ್. ಧರ್ಮರವರು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹಾಜರಾಗಿದ್ದರು.

  1. ಕೊಂಕಣಿ ಉತ್ಸವ:

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಕಥೊಲಿಕ್‌ ಕೊಂಕ್ಣಿ ರಾಕಣ್‌ ಸಂಚಾಲನ್‌ (ರಿ.) ಚಿಕ್ ಮಗಳೂರು- ಹಾಸನ್ ಇದರ ಸಹಯೋಗದಲ್ಲಿ ತಾ. 16-09-2024ರಂದು ಸಕಲೇಶಪುರದ ಹಳ್ಳಿಮನೆ ಎಸ್ಟೇಟ್‌ನಲ್ಲಿ ಕೊಂಕಣಿ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.‌ ಸಾಂಸ್ಕೃತಿಕ ಕಾರ್ಯಕ್ರಮಗಳಾಗಿ “ಆಮ್ಚೊ ಮೂಳ್‌ ಸಿದ್ದಿ ಸಾಂಸ್ಕೃತಿಕ್‌ ಕಲಾಪಂಗಡ್‌” ಹಳಿಯಾಳ್‌ ತಂಡದಿಂದ ಸಿದ್ದಿ ನೃತ್ಯ ಮತ್ತು ಪ್ರಾನ್ಸಿಸ್‌ ವಾಸ್‌ ಮ್ಯೂಸಿಕಲ್‌ ಬ್ಯಾಂಡ್‌, ಮಂಗಳೂರು ತಂಡದಿಂದ ಬ್ರಾಸ್‌ ಬ್ಯಾಂಡ್‌, ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

  1. ಕರ್ನಾಟಕ 50:

ಕರ್ನಾಟಕ 50 ಸುವರ್ಣ ಸಂಭ್ರಮವು 20-09-2024ರಂದು ಮೈಸೂರಿನಲ್ಲಿ ನೆರವೇರಿತು. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯವರಾದ ಮಾನ್ಯ ಸಿದ್ದರಾಮಯ್ಯರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಸಂಸ್ಕೃತಿ ಇಲಾಖೆಯ ಮಂತ್ರಿ ಶಿವರಾಜ್‌ ತಂಗಡಗಿ, ಇಲಾಖೆ ನಿರ್ದೇಶಕಿ ಧರಣಿ ದೇವಿ, ಇತರೆ ಮಂತ್ರಿಗಳು, ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ ಹಾಗೂ ಇತರ ಅಕಾಡೆಮಿಯ ಅಧ್ಯಕ್ಷರು ಹಾಜರಿದ್ದರು.

  1. ಕೊಂಕ್ಣಿ ಉತ್ಸವ್:

ಆಗಸ್ಟ್ 22, 2024ರಂದು ಕೊಂಕಣಿ ಮಾನ್ಯತಾ ದಿನಾಚರಣೆ ಪ್ರಯುಕ್ತ ಬಾಲಾ ಯೇಸುವಿನ ಪುಣ್ಯಕ್ಷೇತ್ರದ ಸಭಾಂಗಣದಲ್ಲಿ ಕೊಂಕ್ಣಿ ಉತ್ಸವ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಂದನೀಯ ಫಾದರ್ ಮೆಲ್ವಿನ್ ಡಿಕುನ್ಹಾ ಕಾರ್ಯಕ್ರಮದ ಅಧ್ಯಕ್ಷರಾಗಿ, ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಮುಖ್ಯ ಅತಿಥಿಯಾಗಿಕೊಂಕಣಿಯ ಬಾವುಟವನ್ನು ಏರಿಸುವುದರ ಮೂಲಕ ಉದ್ಘಾಟನೆ ಮಾಡಿದರು, ಜೋಸೆಫ್ ಮತಾಯಸ್ ಗೌರವ ಅತಿಥಿಯಾಗಿ ಉಪಸ್ಥಿತರಿದ್ದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರ ವಿವೇಚನೆಯಡಿ ಈ ಕಾರ್ಯಕ್ರಮ ನಡೆಯಿತು.

  1. ಕೊಂಕಣಿ ಕಲಾ ಸಂಭ್ರಮ:

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಸಾಂಗಾತಿ ವಾಮಂಜೂರ್‌ ಇವರ ಆಶ್ರಯದಲ್ಲಿ ತಾ.  22-09-2024ರಂದು ಸಂತ ಜೋಸೆಫ್‌ ಚರ್ಚ್‌ಹಾಲ್, ವಾಮಂಜೂರಿನಲ್ಲಿ ಕೊಂಕಣಿ ಕಲಾ ಸಂಭ್ರಮ ನಡೆಯಿತು. ಬೆಳಿಗ್ಗೆ ಕೊಂಕಣಿ ಸಂಸ್ಕೃತಿಯ ರೋಸ್‌ನ ಬಗ್ಗೆ  ಜೇಮ್ಸ್‌ ಡಿಸೋಜ ಬೊಂದೆಲ್‌ ರವರು ಕಾರ್ಯಾಗಾರವನ್ನು ನಡೆಸಿದರು. ಅರುಣ್‌ ರಾಜ್‌ ರೊಡ್ರಿಗಸ್‌ರವರು ನಾಯಕತ್ವ, ಸಂಘಟನೆ ಮತ್ತು ಕಾರ್ಯಕ್ರಮದ ನಿರ್ವಹಣೆ ವಿಷಯದಲ್ಲಿ ಯುವಜನರಿಗೆ ತರಬೇತಿ ನೀಡಿದರು. ಸಂಜೆ ಸಮಾರೋಪದಲ್ಲಿ ಕೊಂಕಣಿ ಜಾನಪದ ಮತ್ತು ಇತರ ಕೊಂಕಣಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

  1. ಸುವರ್ಣ ಕರ್ನಾಟಕ 50 :

ಕರ್ನಾಟಕ ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಬಂದು 50 ವರ್ಷ ಆಗಿದ್ದರಿಂದ ಕರ್ನಾಟಕ 50 ಸುವರ್ಣ ಸಂಭ್ರಮ ಇದರ ಕಾರ್ಯಕ್ರಮವನ್ನು 30 ಸಪ್ಟೆಂಬರ್, 2024ರಂದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನಲ್ಲಿ ದಾನಮ್ಮ ದೇವಿ ದೇವಾಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ʼಹೊನ್ನಬಿತ್ತೇವುʼ ನೃತ್ಯವನ್ನು ರಾಹುಲ್‌ ಪಿಂಟೊ ಮತ್ತು ತಂಡದಿಂದ ಪ್ರದರ್ಶಿಸಲಾಯಿತು. ಅಕಾಡೆಮಿ ಆದ್ಯಕ್ಷರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.

  1. ನಾಟಕ ಕಾರ್ಯಾಗಾರ:

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ದಿನಾಂಕ 30.09.2024‌ ರಿಂದ 06.10.2024ರವರೆಗೆ ಸೇಫ್‌ಸ್ಟಾರ್‌ ಸೌಹಾರ್ದ ಸಹಕಾರಿ ನಿಯಮಿತ ಹಾಲ್‌, ಹೊನ್ನಾವರದಲ್ಲಿ ನಾಟಕ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಮನೀಷ್‌ ಪಿಂಟೊ ಹಾಗೂ ಸುಪ್ರಸಿದ್ದ ವಿದ್ದು ಉಚ್ಚಿಲ್‌ ಇವರು ನಾಟಕ ಕಾರ್ಯಾಗಾರವನ್ನು ನೆರವೇರಿಸಿದರು. ಕಾರ್ಯಾಗಾರದಲ್ಲಿ 15 ಶಿಬಿರಾರ್ಥಿಗಳು ಭಾಗವಹಿಸಿದ್ದರು.

  1. ಸುವರ್ಣ ಕರ್ನಾಟಕ 50 :

ಕರ್ನಾಟಕ 50 ಸುವರ್ಣ ಸಂಭ್ರಮ ಇದರ ಮೂರನೇ ಕಾರ್ಯಕ್ರಮವು ಅಕ್ಟೋಬರ್ 05, 2024ರಂದು ರಾಯಚೂರಿನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ವಿವಿಧ ಕಲಾ ತಂಡದಿಂದ ಕಲಾ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ನಮ್ಮ ಅಕಾಡೆಮಿಯಿಂದ ‘ಹೊನ್ನಬಿತ್ತೇವು’ ನೃತ್ಯವನ್ನು ರಾಹುಲ್‌ ಪಿಂಟೊ ಮತ್ತು ತಂಡದಿಂದ ಪ್ರದರ್ಶಿಸಲಾಯಿತು.

  1. ರಚನಾ:ಸಂಸ್ಥೆಯ ಬೆಳ್ಳಿ ಹಬ್ಬದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

‘ರಚನಾ’ ಕಥೊಲಿಕ್ ವಾಣಿಜ್ಯ ಮತ್ತು ಉದ್ಯಮಗಳ ಸಂಘದ ವತಿಯಿಂದ, ಕೊರ್ಡೆಲ್ ಹಾಲ್, ಕುಲಶೇಖರದಲ್ಲಿ 03.11.2024ರಂದು 25ನೇ ವರ್ಷದ ಬೆಳ್ಳಿಹಬ್ಬದ ಆಚರಣೆ ನಡೆಯಿತು. ಈ ಕಾರ್ಯಕ್ರಮದಲ್ಲಿ, ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಅಧ್ಯಕ್ಷರ ವಿವೇಚನೆ ಮೇರೆಗೆ ಇವರು ನಡೆಸಿರುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಹಕಾರ ನೀಡಲಾಯಿತು.

20. ನಾಟಕ ಕಾರ್ಯಾಗಾರ (1)

ಕಾಲೇಜಿನ ವಿಧ್ಯಾರ್ಥಿಗಳಿಗೆ ನಾಟಕದಲ್ಲಿ ಉತ್ಸಾಹ ತುಂಬಲು ನವೆಂಬರ್ 8, 2024ರಂದು ಸೈಂಟ್. ಅಲೋಶಿಯಸ್‌ ಕೊಲೇಜಿನ ಸಭಾಂಗಣದಲ್ಲಿ ಪಿಯುಸಿ ವಿಧ್ಯಾರ್ಥಿಗಳಿಗಾಗಿ ನಾಟಕ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಾಗಾರದಲ್ಲಿ 25 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ಮನೀಷ್‌ ಪಿಂಟೊ NSD ಇವರು ತರಬೇತುದಾರರಾಗಿ ಕಾರ್ಯಗಾರವನ್ನು ನಡೆಸಿಕೊಟ್ಟರು.

  1. ಕೊಂಕಣಿ ಸಾಹಿತ್ಯ ಇತರ ಭಾಷೆಯೊಂದಿಗೆ ಕೊಡುಕೊಳ್ಳುವಿಕೆ ಸಭೆ:

“ಕೊಂಕಣಿ ಸಾಹಿತ್ಯ ಇತರೆ ಭಾಷೆಯೊಂದಿಗೆ ಕೊಡುಕೊಳ್ಳುವಿಕೆʼ ಬಗ್ಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ 9-11-2024 ರಂದು ಸಭೆ ನಡೆಯಿತು. ಮುಂದಿನ ದಿನಗಳಲ್ಲಿ ಇತರ ಭಾಶಿಕರೊಂದಿಗೆ ಸಾಹಿತ್ಯ, ಜಾನಪದ ಸಾಹಿತ್ಯ ಮತ್ತು ಇತರೆ ವಿಷಯಗಳಲ್ಲಿ ಕೊಂಕಣಿ ಭಾಷೆಯನ್ನು ಇತರೆ ಭಾಷೆಗಳಿಗೆ ಪರಿಚಯಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಹಾಗೂ ಎಲ್ಲಾ ಅಕಾಡೆಮಿಯ ಮುಖ್ಯಸ್ಥರೊಂದಿಗೆ ಈ ಬಗ್ಗೆ ಸಭೆ ನಡೆಸಲಾಗುವುದು ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು.

  1. ಗೌರವ ಪ್ರಶಸ್ತಿ ಮತ್ತು ಪುಸ್ತಕ ಪುರಸ್ಕಾರ- 2023:‌

2023 ವರ್ಷದ ಗೌರವ ಪ್ರಶಸ್ತಿ ಮತ್ತು ಪುಸ್ತಕ ಪುರಸ್ಕಾರ ಕಾರ್ಯಕ್ರಮವು ಹೊನ್ನಾವರದ ಕಾಸರಕೋಡಿನ ಶ್ಯಾನ್‌ಭಾಗ್‌ ರೆಸಿಡೆನ್ಸಿಯಲ್ಲಿ ‌ ದಿನಾಂಕ 10-11-2024ರಂದು ನಡೆಯಿತು. ಬೆಳಿಗ್ಗೆ 10.00 ಗಂಟೆಗೆ ಗೌರವ ಪ್ರಶಸ್ತಿ ಮತ್ತು ಪುಸ್ತಕ ಪುರಸ್ಕೃತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ  ಮಾರ್ಸೆಲ್‌ ಎಮ್.‌ ಡಿಸೋಜ ಮಂಗಳೂರು, ಕೊಂಕಣಿ ಕಲಾ ಕ್ಷೇತ್ರದಲ್ಲಿ ಹ್ಯಾರಿ ಫೆರ್ನಾಂಡಿಸ್‌ ಮುಂಬಯಿ, ಕೊಂಕಣಿ ಜಾನಪದ ಕ್ಷೇತ್ರದಲ್ಲಿ ಆಶೋಕ್‌ ದಾಮು ಕಾಸರಕೋಡ್ ಇವರಿಗೆ ಗೌರವ  ಪ್ರಶಸ್ತಿ ನೀಡಲಾಯಿತು. ಕೊಂಕಣಿ ಕವಿತಾ ವಿಭಾಗದಲ್ಲಿ ಮೇರಿ ಸಲೋಮಿ ಡಿಸೋಜ, ಮೊಗರ್ನಾಡ್‌ ಇವರು ಬರೆದ “ಅಟ್ವೊ ಸುರ್”‌ ಪುಸ್ತಕಕ್ಕೆ, ಕೊಂಕಣಿ ಸಣ್ಣ ಕಥೆ ವಿಭಾಗದಲ್ಲಿ, ವಂದನೀಯ ಫಾದರ್ ರೊಯ್ಸನ್‌ ಫೆರ್ನಾಂಡಿಸ್, ಹಿರ್ಗಾನ್‌ರವರ “ಪಯ್ಲಿ ಭೆಟ್” ಪುಸ್ತಕಕ್ಕೆ, ಕೊಂಕಣಿ ಭಾಷಾಂತರ ವಿಭಾಗದಲ್ಲಿ, ಸ್ಟೀಫನ್‌ ಮಸ್ಕರೇನ್ಹಸ್ (ಹೇಮಾಚಾರ್ಯ) “ಎಕ್ಲೊ ಎಕ್ಸುರೊ”  ಪುಸ್ತಕಕ್ಕೆ 2023ನೇ ವರ್ಷದ ಪುಸ್ತಕ ಪುರಸ್ಕಾರʼ ಲಭಿಸಿದೆ. ಸಂಜೆ 4.30 ಗಂಟೆಗೆ ವಿವಿಧ‌ ಕಲಾ ತಂಡದಿಂದ ಸಾಂಸ್ಕೃತಿಕ ಮೆರವಣಿಗೆ ಮತ್ತು ಸಾಂಸ್ಕೃತಿಕ ವೈಭವದಲ್ಲಿ ಕಾರ್ಯಕ್ರಮಗಳು ಜರಗಿದವು.

  1. ನಾಟಕ ಕಾರ್ಯಗಾರ (2)

ಮಿಲಾಗ್ರಿಸ್‌ ಕಾಲೇಜು, ಮಂಗಳೂರು ಇಲ್ಲಿ ನವೆಂಬರ್ 12, 2024ರಂದು ಎರಡನೇ ನಾಟಕ ಕಾರ್ಯಾಗಾರವು ನಡೆಯಿತು. 30 ವಿಧ್ಯಾರ್ಥಿಗಳು ಈ ಕಾರ್ಯಗಾರದಲ್ಲಿ ಭಾಗವಹಿಸಿದ್ದರು. ಶಿಬಿರದಲ್ಲಿ ಭಾಗವಹಿಸಿದ್ದವರು ಕಲಿಕಾ ಶಯ್ಲಿ ಬಗ್ಗೆ ಉತ್ತಮ ಅಭಿಪ್ರಾಯವನ್ನು ನೀಡಿದರು. ಕಾರ್ಯಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ಮನೀಷ್‌ ಪಿಂಟೊ NSD ಇವರು ತರಬೇತುದಾರರಾಗಿ ಕಾರ್ಯಗಾರವನ್ನು ನಡೆಸಿಕೊಟ್ಟರು.

  1. ಯುವ ಲೇಖಕರಿಗೆ ತರಬೇತಿ ಕಾರ್ಯಾಗಾರ:

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಬಂಟ್ವಾಳ ವಲಯ ಸಹಯೋಗದಲ್ಲಿ ಯುವ ಲೇಖಕರಿಗೆ ತರಬೇತಿ ಕಾರ್ಯಾಗಾರವನ್ನು 24-11-2024 ರಂದು ಮೊಡಂಕಾಪ್ ಕನ್ನಡ ಮೀಡಿಯಂ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಾಗಾರಾದ ತರಬೇತುದಾರರಾಗಿ ಹೆಸರಾಂತ ಕವಯಿತ್ರಿ ಡಿಂಪಲ್ ಜೆನಿಫರ್ ಫೆರ್ನಾಂಡಿಸ್‌ ಕವಿತಾ ರಚನೆ ಬಗ್ಗೆ,  ಗ್ಲ್ಯಾನಿಶ್ ಮಾರ್ಟಿಸ್ ಅಲಂಗಾರ್‌ರವರು ಸಣ್ಣ ಕಥೆ ಬರೆಯುವ ಬಗ್ಗೆ ಮಾಹಿತಿಯನ್ನು ನೀಡಿದರು.

  • ನಾಟಕ ಕಾರ್ಯಗಾರ:(3)

ನಾಟಕ ಕಾರ್ಯಾಗಾರದ ಭಾಗವಾಗಿ ಮೂರನೇ ಕಾರ್ಯಾಗಾರವು ನವೆಂಬರ್ 28ರಂದು ಪಾದುವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಪಿ.ಯು.ಸಿ. ಮತ್ತು ಡಿಗ್ರಿ ಕೊಲೇಜಿನ 42 ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಕಾರ್ಯಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ಮನೀಷ್‌ ಪಿಂಟೊ NSD ಇವರು ತರಬೇತುದಾರರಾಗಿ ಕಾರ್ಯಗಾರವನ್ನು ನಡೆಸಿಕೊಟ್ಟರು.‌

  1. ನಾಟಕ ಕಾರ್ಯಗಾರ: (4)

ನಾಟಕ ಕಾರ್ಯಾಗಾರದ ಭಾಗವಾಗಿ ನಾಲ್ಕನೇ ಕಾರ್ಯಾಗಾರವನ್ನು ಡಿಸೆಂಬರ್‌ 9ರಂದು ಸಂತ ಅಲೋಶಿಯಸ್‌ ಡಿಗ್ರಿ ಕಾಲೇಜು, ಮಂಗಳೂರುನಲ್ಲಿ ನಡೆಯಿತು. ಕಾರ್ಯಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ಮನೀಷ್‌ ಪಿಂಟೊ NSD ಇವರು ತರಬೇತುದಾರರಾಗಿ ಕಾರ್ಯಗಾರವನ್ನು ನಡೆಸಿಕೊಟ್ಟರು.

  1. ಕರಾವಳಿ ಉತ್ಸವ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಮಂಗಳೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಕರಾವಳಿ ಉತ್ಸವವನ್ನು ದಿನಾಂಕ 21-12-2024ರಿಂದ 19-01-2025ರವರೆಗೆ ಕರಾವಳಿ ಉತ್ಸವ ಮೈದಾನ, ಲಾಲ್‌ಭಾಗ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಮೆರವಣಿಗೆ ಮತ್ತು ವೇದಿಕೆಯಲ್ಲಿ ಸಿದ್ದಿ ಜಾನಪದ ನೃತ್ಯ, ಕುಡುಬಿ ಜಾನಪದ ನೃತ್ಯ, ಬ್ರಾಸ್‌ ಬ್ಯಾಂಡ್‌ ಕಾರ್ಯಕ್ರಮವನ್ನು ನೀಡಲಾಗಿತ್ತು, ಅಕಾಡೆಮಿಯಿಂದ ಪುಸ್ತಕ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗಿತ್ತು.

  1. ಬಹುಸಂಸ್ಕೃತಿ ಸಂಭ್ರಮ (ಕರ್ನಾಟಕ ಸುವರ್ಣ ಸಂಭ್ರಮ- 50):

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಮತ್ತು ತುಳು, ಬ್ಯಾರಿ, ಕೊಂಕಣಿ, ಅರೆಭಾಷೆ, ಕೊಡವ ಮತ್ತು ಯಕ್ಷಗಾನ ಅಕಾಡೆಮಿ, ಜಿಲ್ಲಾಡಳಿತ- ದಕ್ಷಿಣ ಕನ್ನಡ, ಉಡುಪಿ ಮತ್ತು ಇವರ ಸಹಯೋಗದಲ್ಲಿ ಬಹುಸಂಸ್ಕೃತಿ ಉತ್ಸವವು ದಿನಾಂಕ 17.01.2025ರಂದು ಮಂಗಳೂರಿನ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ನಡೆಯಿತು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಸಿದ್ದಿ ಜಾನಪದ ನೃತ್ಯ, ಬ್ರಾಸ್‌ ಬ್ಯಾಂಡ್‌ ಮತ್ತು ಬೈಲಾ ನೃತ್ಯ ಮತ್ತು ಹಾಡು ಪ್ರದರ್ಶಿಸಲಾಯಿತು. ಅಕಾಡೆಮಿಯಿಂದ ಪುಸ್ತಕ ಪ್ರದರ್ಶನ ಮತ್ತು ಪುಸ್ತಕಗಳ ಮಾರಾಟವನ್ನು ಏರ್ಪಡಿಸಲಾಗಿತ್ತು.

  1. ನಾ. ಡಿಸೋಜರವರಿಗೆ ಶೃದ್ಧಾಂಜಲಿ ಸಭೆ:

18.01.2025ರಂದು ಬೆಳಿಗ್ಗೆ 10.30 ಗಂಟೆಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ದಿ| ನಾ. ಡಿಸೋಜರವರಿಗೆ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು. ಈ ಸಂಧರ್ಭದಲ್ಲಿ ದೈವಾಧೀನರಾದ ಕೊಂಕಣಿ ಸಾಹಿತಿಗಳಾದ ಲುವಿಸ್‌ ಡಿ. ಅಲ್ಮೆಡಾ ಮತ್ತು ಎಮ್.‌ ಪಿ. ರೊಡ್ರಿಗಸ್‌ರವರಿಗೂ ಶ್ರದ್ದಾಂಜಲಿ ಸಮರ್ಪಿಸಿದರು. ದಿ| ನಾ. ಡಿಸೋಜರವರ ಜೀವನ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅವರು ನೀಡಿದ ಕೊಡುಗೆಗಳ ಬಗ್ಗೆ ಕವಿ, ಸಾಹಿತಿಗಳಾದ ವಿಕ್ಟರ್‌ ಮಥಾಯಸ್‌ (ವಿತೊರಿ ಕಾರ್ಕಳ)ರವರು ಶ್ರದ್ಧಾಂಜಲಿ ಭಾಷಣವನ್ನು ಮಾಡಿದರು.

  1. ಗಾಂಧಿ ಸ್ಮೃತಿ ಕಾರ್ಯಕ್ರಮ

ದಿನಾಂಕ 30 ಜನವರಿ 2025 ರಂದು ಸಂತ ಅಲೋಷಿಯಸ್‌ ಪರಿಗಣಿತ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಸಂತ ಎಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಜಂಟಿ ಆಶ್ರಯದಲ್ಲಿ ಗಾಂಧಿ ಸ್ಮೃತಿ ಕಾರ್ಯಕ್ರಮ ನಡೆಸಲಾಯಿತು. ಮಹಾತ್ಮ ಗಾಂಧೀಜಿಯವರ ಕುರಿತು ಬರೆದ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮ ವಿಜ್ರಂಬಣೆಯಿಂದ ಜರುಗಿತು.

  1. ಕೊಂಕಣಿ ಕನ್ನಡ ಭಾಷಾಂತರ ಕಾರ್ಯಾಗಾರ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ‘ಕೊಂಕಣಿ ಥಾವ್ನ್ ಕನ್ನಡಾಕ್ ಅನುವಾದ್’   ಎಂಬ ಒಂದು ದಿನದ ಭಾಷಾಂತರ ಕಾರ್ಯಾಗಾರವನ್ನು ಫೆಬ್ರವರಿ 26, 2025 ರಂದು ಶಕ್ತಿನಗರದ ಕಲಾಂಗಣ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.  ಪ್ರೊಫೆಸರ್ ಸ್ಟೀವನ್ ಕ್ವಾಡ್ರಸ್, ಡಾ. ಆಲ್ವಿನ್ ಡೆಸಾ, ಡಾ. ವಿನ್ಸೆಂಟ್ ಆಳ್ವ ಇವರುಗಳು ಭಾಷಾಂತರದ ಬಗ್ಗೆ ಮಾಹಿತಿ ನೀಡಿದರು.

  1. ʼಆಬೊಲಿಂʼ ಕೊಂಕಣಿ ಮಹಿಳಾ ಕವಿಗೋಷ್ಟಿ

       ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಅಕಾಡೆಮಿ ಸಭಾಂಗಣದಲ್ಲಿ ಮಾರ್ಚ್‌ 07, 2025ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ʼಆಬೊಲಿಂʼ ಶೀರ್ಷಿಕೆಯಡಿ ಮಹಿಳಾ ಕವಿಗೋಷ್ಟಿಯನ್ನು ಹಮ್ಮಿಕೊಂಡಿತ್ತು,

ಮುಂದಿನ ಕಾರ್ಯಕ್ರಮಗಳು:

ಸಿದ್ದಿ ಸಮಾವೇಶ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಸಿದ್ದಿ ಸಮುದಾಯದವರನ್ನು ಮುಖ್ಯ ನೆಲೆಗೆ ತರುವ ಉದ್ದೇಶದಿಂದ ಮುಂಡುಗೋಡಿನ ಲೊಯೊಲಾ ವಿಕಾಸ ಕೇಂದ್ರದಲ್ಲಿ ಮಾರ್ಚ್ 15 ಮತ್ತು 16, 2025ರಂದು ಸಿದ್ದಿ ಸಮಾವೇಶ ಸಮಾರಂಭವವನ್ನು ವಿಜೃಂಭಣೆಯಿಂದ ನಡೆಸಲು ಯೋಜನೆ ಹಾಕಿದೆ. ಈ ಸಮಾರಂಭದಲ್ಲಿ ಸಿದ್ದಿ ಸಂಸ್ಕೃತಿ ಬಿಂಬಿಸುವ ಜಾನಪದ ಕಲಾತಂಡಗಳ ಪ್ರದರ್ಶನವು ಮೆರವಣಿಗೆಯೊಂದಿಗೆ ವೈಭವಯುತವಾಗಿ ನಡೆಯಲಿರುವುದು.

ಈ ಸಮಾವೇಶದಲ್ಲಿ, ಸಿದ್ದಿ ಪರಂಪರೆ, ಸಿದ್ದಿಗಳ ಬದುಕಿನ ಆಯಾಮಗಳು (ಕಲೆ, ಸಂಸ್ಕೃತಿ), ಸಿದ್ದಿಗಳ ಬದುಕು ನಿನ್ನೆ, ಇಂದು ಮತ್ತು ನಾಳೆ, 21ನೇ ಶತಮಾನದಲ್ಲಿ ಸಿದ್ದಿಗಳಿಗೆ ಎದುರಾಗುತ್ತಿರುವ ಸಮಸ್ಯೆಗಳು/ಸವಾಲುಗಳು ಮತ್ತು ಸಕಾರಾತ್ಮಕ ಸಾಧ್ಯತೆಗಳು ಎಂಬ ವಿಷಯಗಳಲ್ಲಿ ವಿಚಾರಗೋಷ್ಟಿಯು ನಡೆಯಲಿರುವುದು. ಕಾರ್ಯಕ್ರಮದ ನಂತರ ವಿವಿಧ ಸಿದ್ದಿ ಜಾನಪದ ಕಲಾತಂಡಗಳಿಂದ ನೃತ್ಯ ಪ್ರದರ್ಶನವು ನಡೆಯಲಿರುವುದು.

 

                ರಿಜಿಸ್ಟ್ರಾರ್‌                                                                                   ಅಧ್ಯಕ್ಷರು

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ                                 ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ

ಪ್ರತಿಕಾ ಗೋಷ್ಟಿಯಲ್ಲಿ ಭಾಗವಹಿಸಿದವರು:

ಜೋಕಿಂ ಸ್ಟ್ಯಾನಿ ಆಲ್ವಾರಿಸ್‌  –  ಅಧ್ಯಕ್ಷರು

ನವೀನ್‌ ಕೆನ್ಯುಟ್‌ ಲೋಬೊ  – ಸದಸ್ಯರು

‍ರೊನಾಲ್ಡ್‌ ಕ್ರಾಸ್ತಾ                – ಸದಸ್ಯರು

ಹಾಗೂ  ಎಲಿಯಾಸ್‌ ಫೆರ್ನಾಂಡಿಸ್

You may also like

News

Rev. Fr Gerald Pinto (72) of Mangalore Diocese Passes Away – Funeral on March 28 at Valencia

Mangalore: The Diocese of Mangalore deeply mourns the passing of Rev. Fr Gerald Pinto (72 years), who entered eternal rest
News

ಸಂತ ಫಿಲೋಮಿನಾ ಕಾಲೇಜಿನಲ್ಲಿ “ನಾವೀನ್ಯತೆಯಲ್ಲಿ ಮಹಿಳೆಯರ ಪಾತ್ರ” ಎಂಬ ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮ

ಸಂತ ಫಿಲೋಮಿನಾ ಕಾಲೇಜಿನ ಇನ್‌ಸ್ಟಿಟ್ಯೂಶನ್ಸ್‌ ಇನ್ನೊವೇಶನ್‌ ಕೌನ್ಸಿಲ್‌ (ಐಐಸಿ) ಹಾಗೂ ಗಣಕವಿಜ್ಞಾನ ವಿಭಾಗಗಳ  ಸಂಯುಕ್ತ ಆಶ್ರಯದಲ್ಲಿ  ನಾವೀನ್ಯತೆಯಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು

You cannot copy content of this page