ಮಾಣಿ ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆ

ಜನರಿಗೆ ಸಿಗಬಹುದಾದ ಸವಲತ್ತುಗಳ ಬಗ್ಗೆ ಸರಿಯಾದ ಮಾಹಿತಿ ನೀಡಿದಾಗ ಗ್ರಾಮ ಸಭೆಗಳು ಅರ್ಥಪೂರ್ಣ – ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ
ಇಲಾಖಾಧಿಕಾರಿಗಳು ಸರ್ಕಾರದಿಂದ ಸಿಗಬಹುದಾದ ಸವಲತ್ತುಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಜನರಿಗೆ ನೀಡಿದಾಗ ಗ್ರಾಮ ಸಭೆಗಳು ಅರ್ಥಪೂರ್ಣವಾಗಿ ನಡೆಯಲು ಸಾಧ್ಯ ಎಂದು ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಹೇಳಿದರು. ಅವರು ಇಂದು ಮಾರ್ಚ್ 13ರಂದು ಗುರುವಾರ ಮಾಣಿ ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾಣಿ ಗ್ರಾಮ ಪಂಚಾಯತ್ ಕಳೆದ ಮೂರ್ನಾಲ್ಕು ವರ್ಷಗಳಿಂದ ಗ್ರಾಮದ ಅಭಿವೃದ್ಧಿಯ ದೃಷ್ಟಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡು ಬಂದಿದೆ. ಗ್ರಾಮದ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎನ್ನುವ ಸಂತೃಪ್ತಿ ನಮಗಿದೆ ಎಂದು ಹೇಳಿದರು. ಗ್ರಾಮ ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ರೇಣುಕಾ ನಾಯಕ್ ಗ್ರಾಮ ಸಭೆಯ ನಡಾವಳಿಯನ್ನು ನಡೆಸಿಕೊಟ್ಟರು. ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರಿಜಾ ಆರು ತಿಂಗಳ ಅವಧಿಯ ವಿವಿಧ ಹಂತದ ಲೆಕ್ಕ ಪತ್ರಗಳನ್ನು ಮಂಡಿಸಿದರು.
ಪಂಚಾಯತ್ ಉಪಾಧ್ಯಕ್ಷೆ ಸುಜಾತಾ, ಸದಸ್ಯರಾದ ಇಬ್ರಾಹಿಂ ಕೆ. ಮಾಣಿ, ನಾರಾಯಣ ಶೆಟ್ಟಿ ತೋಟ, ರಮಣಿ ಡಿ. ಪೂಜಾರಿ, ಪ್ರೀತಿ ಡಿನ್ನಾ ಪಿರೇರಾ, ಮಿತ್ರಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ಭಾಗವಹಿಸಿದ್ದರು.
ಮಾಣಿ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.