ಮಂಗಳೂರು ಧರ್ಮಕ್ಷೇತ್ರದ ಮಹಿಳಾ ಆಯೋಗದಿಂದ ಮಹಿಳೆಯರ ಜ್ಯೂಬಿಲಿ ಆಚರಣೆ – ಸಬಲೀಕರಣಕ್ಕಾಗಿ ‘ಮಾತ್ರೋನ್ನತಿ ನಿಧಿ’ ಚಾಲನೆ

ಮಂಗಳೂರು ಧರ್ಮಕ್ಷೇತ್ರದ ಮಹಿಳಾ ಆಯೋಗವು 2025ರ ಮಾರ್ಚ್ 16 ರ ಭಾನುವಾರದಂದು “ಸಬಲೀಕರಣದ ಧ್ಯೇಯಕ್ಕೆ ಬೆಂಬಲ” ಎಂಬ ವಿಷಯದ ಅಡಿಯಲ್ಲಿ ಬೆಂದೂರಿನ ಸೈಂಟ್ ಸೆಬಾಸ್ಟಿಯನ್ ಶತಮಾನೋತ್ಸವ ಸಭಾಂಗಣದಲ್ಲಿ ಭವ್ಯವಾದ ಮಹಿಳಾ ದಿನಾಚರಣೆಯನ್ನು ಆಯೋಜಿಸಿತು. “ಭರವಸೆಯ ವರ್ಷ” ದಲ್ಲಿ ನಡೆದ ಈ ಸಮಾರಂಭವು ‘ಮಹಿಳೆಯರ ಜ್ಯೂಬಿಲಿ’ಯಾಗಿ ಆಚರರಿಸಲಾಗಿದ್ದು, ಧರ್ಮಸಭೆಗೆ, ಸಮಾಜ ಮತ್ತು ಕುಟುಂಬ ಜೀವನಕ್ಕೆ ಮಹಿಳೆಯರ ಅಮೂಲ್ಯ ಕೊಡುಗೆಗಳನ್ನು ಗುರುತಿಸುವ ವೇದಿಕೆಯಾಗಿ ಈ ಕಾರ್ಯಕ್ರಮವು ಮೂಡಿಬಂತು.
ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾನಿಣಿ ಮಹಿಳಾ ರಾಜ್ಯಮಟ್ಟದ ಒಕ್ಕೂಟದ ಸಂಪನ್ಮೂಲ ಕ್ರೋಢೀಕರಣ ಅಧಿಕಾರಿ ಜಾನೆಟ್ ಬಾರ್ಬೋಜ ಮುದರಂಗಡಿ ಮುಖ್ಯ ಅತಿಥಿಗಳಾಗಿದ್ದರು.
ಸಿಸಿಬಿಐ ಮಹಿಳಾ ಆಯೋಗದ ಕಾರ್ಯಕಾರಿ ಕಾರ್ಯದರ್ಶಿ ಸಿಸ್ಟರ್ ಲಿಡ್ವಿನ್ ಫೆರ್ನಾಂಡಿಸ್ ಯುಎಫ್‌ಎಸ್, ಕರ್ನಾಟಕ ಪ್ರದೇಶ ಮಹಿಳಾ ಆಯೋಗದ ಕಾರ್ಯಕಾರಿ ಕಾರ್ಯದರ್ಶಿ ಸಿಸ್ಟರ್ ನ್ಯಾನ್ಸಿ ಲೋಬೋ, ಧರ್ಮಕ್ಷೇತ್ರದ ಪಾಲನಾ ಆಯೋಗಗಳ ಸಂಯೋಜಕರಾದ ವಂದನೀಯ ಫಾದರ್ ಫಾವುಸ್ತಿನ್ ಲೋಬೋ, ಬೆಂದೂರು ಚರ್ಚ್ ಧರ್ಮಗುರು ವಂದನೀಯ ಫಾದರ್ ವಾಲ್ಟರ್ ಡಿಸೋಜಾ, ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕ ಅಧಿಕಾರಿ ರೋಯ್ ಕ್ಯಾಸ್ಟೆಲಿನೋ, ಸಿಒಡಿಪಿ ನಿರ್ದೇಶಕರಾದ ವಂದನೀಯ ಫಾದರ್ ವಿನ್ಸೆಂಟ್ ಡಿಸೋಜಾ, ಕೆನರಾ ಸಂವಹನ ಕೇಂದ್ರದ ನಿರ್ದೇಶಕರಾದ ವಂದನೀಯ ಫಾದರ್ ಅನಿಲ್ ಐವನ್ ಫೆರ್ನಾಂಡಿಸ್, ಧರ್ಮಕ್ಷೇತ್ರದ ಐ.ಸಿ.ವೈ.ಯಂ. ನಿರ್ದೇಶಕರಾದ ವಂದನೀಯ ಫಾದರ್ ಅಶ್ವಿನ್ ಕಾರ್ಡೋಜಾ, ವಂದನೀಯ ಫಾದರ್ ವಿನ್ಸೆಂಟ್ ಮೊಂತೇರೊ, ಸಿಸ್ಟರ್ ಸೆವ್ರಿನ್ ಮಿನೇಜಸ್ ಅಧ್ಯಕ್ಷರು, ಸಿಆರ್‌ಐ ಮಂಗಳೂರು, ವಂದನೀಯ ಫಾದರ್ ಫ್ರಾನ್ಸಿಸ್ ಡಿಸೋಜಾ ಮತ್ತು ವಂದನೀಯ ಫಾದರ್ ವಿವೇಕ್ ಪಿಂಟೋ ಮತ್ತಿತರು ಉಪಸ್ಥಿತರಿದ್ದರು.
ಪ್ರಾರ್ಥನಾ ಗೀತೆ ಮತ್ತು ಮಹಿಳೆಯರಿಂದ ಸ್ವಾಗತ ನೃತ್ಯದೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಉಷಾ ಫೆರ್ನಾಂಡಿಸ್ ರವರು ಆತ್ಮೀಯವಾಗಿ ಸ್ವಾಗತಿಸಿದರು. ನಂತರ ಜೇಷ್ಮಾ ಡಿಸೋಜಾರವರು ಮಹಿಳಾ ಸಬಲೀಕರಣಕ್ಕಾಗಿ ಆಯೋಗದ ವತಿಯಿಂದ ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ಒಳನೋಟವುಳ್ಳ ವರದಿಯನ್ನು ಮಂಡಿಸಿದರು. ಗಣ್ಯರಿಂದ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾರವರು ಮಾತನಾಡಿ, ಲಿಂಗ ಸಮಾನತೆಯನ್ನು ಬೆಳೆಸಲು ಧರ್ಮಸಭೆಯ ಬದ್ಧತೆಯನ್ನು ಪುನರುಚ್ಚರಿಸಿದರು. ಅನಿತಾ ಫ್ರಾಂಕ್ ಮತ್ತು ಮಹಿಳಾ ಆಯೋಗದ ಕಾರ್ಯಕಾರಿ ಸಮಿತಿಯ ನಾಯಕತ್ವವನ್ನು ಶ್ಲಾಘಿಸಿದರು ಮತ್ತು ಧರ್ಮಕ್ಷೇತ್ರದ ಎಲ್ಲಾ 21 ಆಯೋಗಗಳು ಅವರ ಮಾದರಿಯನ್ನು ಅನುಸರಿಸುವಂತೆ ಒತ್ತಾಯಿಸಿದರು. ಮಹಿಳಾ ಸಬಲೀಕರಣವು ನಂಬಿಕೆ ಮತ್ತು ಸಾಮೂಹಿಕ ಸೇವಾಕ್ರಿಯೆಯಲ್ಲಿ ಬೇರೂರಬೇಕು ಎಂದು ಒತ್ತಿ ಹೇಳಿದರು. “ಮಹಿಳೆಯರ ಘನತೆಯು ನಮ್ಮ ನಂಬಿಕೆಯಲ್ಲಿ ಆಳವಾಗಿ ಬೇರೂರಿದೆ. ನಿಜವಾದ ಸಬಲೀಕರಣ ಎಂದರೆ ಮಹಿಳೆಯರು ಪುರುಷರೊಂದಿಗೆ ಸ್ಪರ್ಧಿಸಬೇಕು ಎಂದಲ್ಲ, ಆದರೆ ಅವರ ಕುಟುಂಬಗಳು, ಕೆಲಸದ ಸ್ಥಳಗಳು ಮತ್ತು ಸಮಾಜದಲ್ಲಿ ಬೆಳೆಯಲು ಅವರಿಗೆ ಸರಿಯಾದ ಸ್ಥಳವನ್ನು ನೀಡಬೇಕು. ಸಮುದಾಯಗಳನ್ನು ರೂಪಿಸುವಲ್ಲಿ ಮತ್ತು ಶಾಂತಿಯನ್ನು ಬೆಳೆಸುವಲ್ಲಿ ಮಹಿಳೆಯರ ಅನನ್ಯ ಕೊಡುಗೆಯನ್ನು ಧರ್ಮಸಭೆ ಗುರುತಿಸುತ್ತದೆ. ಮಹಿಳೆಯರನ್ನು ಬೆಂಬಲಿಸಲು ಮತ್ತು ಉನ್ನತೀಕರಿಸಲು ನಿಜವಾದ, ಅರ್ಥಪೂರ್ಣ ಕ್ರಮಗಳನ್ನು ತೆಗೆದುಕೊಳ್ಳುವ ಆಗತ್ಯವಿದೆ” ಎಂದು ಹೇಳಿದರು.
ಮುಖ್ಯ ಭಾಷಣ ಮತ್ತು ಸ್ಪೂರ್ತಿದಾಯಕ ಮಾತುಗಳು:
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಾನೆಟ್ ಬಾರ್ಬೋಜ ಮುದರಂಗಡಿ, ಮಾನಿಣಿ ಮಹಿಳಾ ರಾಜ್ಯಮಟ್ಟದ ಒಕ್ಕೂಟದ ಸಂಪನ್ಮೂಲ ಕ್ರೋಢೀಕರಣ ಅಧಿಕಾರಿ, ಧರ್ಮಸಭೆ, ಮಹಿಳಾ ಸಂಘ ಮತ್ತು ಮಹಾಸಂಘದ ಮೂಲಕ ದೊರೆತ ನಾಯಕತ್ವದಿಂದ ರಾಜ್ಯಾಮಟ್ಟಕ್ಕೆ ಪ್ರತಿನಿಧಿಸಲು ಸಿಕ್ಕಂತಹ ಆನುಭವ ಮತ್ತು ಅವಕಾಶವನ್ನು ಹಂಚಿಕೊಂಡರು. ಅವರು ತಮ್ಮ ಆರಂಭಿಕ ಹೋರಾಟಗಳು ಮತ್ತು ತಮ್ಮ ಹಾದಿಯನ್ನು ರೂಪಿಸುವಲ್ಲಿ ವಿವಿಧ ಸಮುದಾಯಗಳ ಮತ್ತು ಪ್ರಭಾವಿ ಗಣ್ಯರ ಅಪಾರ ಪಾತ್ರವನ್ನು ನೆನಪಿಸಿಕೊಂಡರು.
“ನನ್ನ ಚರ್ಚಿನ ಮಹಿಳಾ ಸಂಘವು ನನ್ನ ನಾಯಕತ್ವದ ಅಡಿಪಾಯವಾಗಿತ್ತು. ಅಲ್ಲಿಯೇ ನಾನು ಮೊದಲು ನನ್ನ ಧ್ವನಿ, ನನ್ನ ಆತ್ಮವಿಶ್ವಾಸ ಮತ್ತು ನನ್ನ ಉದ್ದೇಶವನ್ನು ಕಂಡುಕೊಂಡೆ” ಎಂದು ಅವರು ಹೇಳುತ್ತಾ ಎಲ್ಲಾ ಹಂತಗಳಲ್ಲಿ ನಾಯಕತ್ವದ ಪಾತ್ರಗಳನ್ನು ವಹಿಸಲು ಮಹಿಳೆಯರನ್ನು ಒತ್ತಾಯಿಸಿದರು. ಮಹಿಳೆಯರು ಪರಸ್ಪರ ಬೆಂಬಲಿಸಬೇಕಾದ ಅಗತ್ಯವನ್ನು ಸಹ ಅವರು ಹೇಳಿದರು.
ಚರ್ಚೆಗಳಿಗೆ ಹೆಚ್ಚಿನ ಆಳವನ್ನು ಸೇರಿಸುತ್ತಾ, ಮಹಿಳಾ ಆಯೋಗದ ಪ್ರಾದೇಶಿಕ ಕಾರ್ಯದರ್ಶಿ ಸಿಸ್ಟರ್ ನ್ಯಾನ್ಸಿ ಲೋಬೋ ಅವರು ಆಡಳಿತ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯಲ್ಲಿ ಲಿಂಗ ಸಮಾನತೆಗೆ ಕರೆ ನೀಡಿದರು. ನಿಜವಾದ ಸಬಲೀಕರಣ ಎಂದರೆ ನೀತಿ ನಿರೂಪಣೆಯಲ್ಲಿ ಮಹಿಳೆಯರ ಧ್ವನಿಯನ್ನು ಹೆಚ್ಚಿಸುವುದು ಎಂದು ಹೇಳಿದರು.
ಧರ್ಮಕ್ಷೇತ್ರದ ಪಾಲನಾ ಆಯೋಗಗಳ ಸಂಯೋಜಕ ವಂದನೀಯ ಫಾದರ್ ಫಾವುಸ್ತಿನ್ ಲೋಬೋ ಅವರು ಶಿಕ್ಷಣ, ಆರ್ಥಿಕ ಸ್ವಾತಂತ್ರ‍್ಯ ಮತ್ತು ನಾಯಕತ್ವ ತರಬೇತಿಯ ಮೂಲಕ ಸಮಗ್ರ ಸಬಲೀಕರಣವನ್ನು ಪ್ರತಿಪಾದಿಸುವ ಭಾವನೆಗಳನ್ನು ಪ್ರತಿಧ್ವನಿಸಿದರು. “ನಾವು ಇಂದು ನಮ್ಮ ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳಿಗೆ ಶಿಕ್ಷಣ ನೀಡುವ ವಿಧಾನವು ನಾಳೆ ನಾವು ರೂಪಿಸುವ ಸಮಾಜವನ್ನು ವ್ಯಾಖ್ಯಾನಿಸುತ್ತದೆ” ಎಂದು ಅವರು ಹೇಳುತ್ತಾ ಮಹಿಳೆಯರ ಸಾಮರ್ಥ್ಯವನ್ನು ಮಿತಿಗೊಳಿಸುವ ಸಾಂಪ್ರದಾಯಿಕ ಮನಸ್ಥಿತಿಗಳಲ್ಲಿ ಬದಲಾವಣೆಗೆ ಕರೆ ನೀಡಿದರು. “ಮಕ್ಕಳು ಮಹಿಳೆಯರನ್ನು ಘನತೆಯಿಂದ ನಡೆಸಿಕೊಳ್ಳುವುದನ್ನು ನೋಡಿದಾಗ, ಅವರು ಆ ಮೌಲ್ಯವನ್ನು ಜಗತ್ತಿಗೆ ಕೊಂಡೊಯ್ಯುತ್ತಾರೆ.” ಬಾಲ್ಯದಿಂದಲೇ ಗೌರವ ಮತ್ತು ಜವಾಬ್ದಾರಿಯನ್ನು ಪೋಷಿಸಲು ಅವರು ಕುಟುಂಬಗಳನ್ನು ಒತ್ತಾಯಿಸಿದರು. “ಮಹಿಳೆಯರು ಶಕ್ತಿಯುತರು, ಆದರೆ ಅವರ ಸಾಮರ್ಥ್ಯಗಳನ್ನು ಬೆಳಕಿಗೆ ತರಲು ಉದ್ದೇಶಪೂರ್ವಕ ಪ್ರಯತ್ನಗಳು ಇರಬೇಕು. ಪುರುಷರು ಮತ್ತು ಮಹಿಳೆಯರು ಒಂದೇ ಅಲ್ಲ, ಆದರೆ ಅವರು ಘನತೆ ಮತ್ತು ಗೌರವದ ವಿಷಯದಲ್ಲಿ ಸಮಾನರು” ಎಂದು ಹೇಳಿದರು.
ಮಹಿಳಾ ಸಬಲೀಕರಣಕ್ಕಾಗಿ ಮೈಲಿಗಲ್ಲು- ಯೋಜನೆಗಳ ಚಾಲನೆ:
- ‘ಮಹಿಳಾ ಸಂಪರ್ಕ’ ಪ್ರಾರಂಭ – ಮಹಿಳಾ ಬೆಂಬಲ ಜಾಲ
ಏಕತೆ, ಮಾರ್ಗದರ್ಶನ ಮತ್ತು ಸಹಯೋಗವನ್ನು ಬೆಳೆಸುವ ಮಹಿಳಾ ಬೆಂಬಲ ಜಾಲವಾದ ‘ಮಹಿಳಾ ಸಂಪರ್ಕ’ವನ್ನು ವಂದನೀಯ ಫಾದರ್ ಫಾವುಸ್ತಿನ್ ಲೋಬೋ ಅವರು ಉದ್ಘಾಟಿಸಿದರು. ಮಹಿಳೆಯರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು, ಮಾರ್ಗದರ್ಶನ ಪಡೆಯಲು ಮತ್ತು ಪರಸ್ಪರರನ್ನು ಉನ್ನತೀಕರಿಸಲು ಸುರಕ್ಷಿತ ಮತ್ತು ಬೆಂಬಲದ ಸ್ಥಳವನ್ನು ಒದಗಿಸುವ ಗುರಿಯನ್ನು ಹೊಂದಿದೆ.
- ಮಹಿಳಾ ಆಯೋಗಕ್ಕಾಗಿ ಹೊಸ ವೆಬ್‌ಸೈಟ್: ಸಿಸ್ಟರ್ ನ್ಯಾನ್ಸಿ ಲೋಬೋ ಅವರು ಮಹಿಳಾ ಆಯೋಗದ ಅಧಿಕೃತ ವೆಬ್‌ಸೈಟ್ www.wcmangalore.in ನ್ನು ಅನಾವರಣಗೊಳಿಸಿದರು.
- ‘ಮಾತ್ರೋನ್ನತಿ ನಿಧಿ’ ಪ್ರಾರಂಭ – ಮಹಿಳೆಯರಿಗೆ ಆರ್ಥಿಕ ಬೆಂಬಲ: ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ‘ಮಾತ್ರೋನ್ನತಿ ನಿಧಿ’ಗೆ ಚಾಲನೆ ನೀಡಿದರು. ಇದು ವಿಧವೆಯರು ಮತ್ತು ಆರ್ಥಿಕವಾಗಿ ಹಿಂದುಳಿದ ವ್ಯಕ್ತಿಗಳು ಸೇರಿದಂತೆ 29 ಬಡ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಯೋಜನೆಯಾಗಿದೆ. ಪ್ರೊ. ಎಡ್ಮಂಡ್ ಫ್ರ್ಯಾಂಕ್, ಜಾನ್ ಸ್ಯಾಮ್ಯುಯೆಲ್ ಮತ್ತು ಅನಿಲ್ ಲೋಬೋ ಅಧ್ಯಕ್ಷರು, ಎಂಸಿಸಿ ಬ್ಯಾಂಕ್ ಅವರಂತಹ ಪ್ರಮುಖ ಪೋಷಕರು ಈ ನಿಧಿಗೆ ಕೊಡುಗೆ ನೀಡಿದವರು.
- ಧರ್ಮಕ್ಷೇತ್ರದ ಮಹಿಳಾ ಸಂಪನ್ಮೂಲ ತಂಡದ ರಚನೆ: ಮಹಿಳೆಯರಿಗೆ ಅವರ ಸಬಲೀಕರಣ ಪ್ರಯಾಣದಲ್ಲಿ ಮಾರ್ಗದರ್ಶನ ನೀಡಲು 13 ಸದಸ್ಯರ ಸಂಪನ್ಮೂಲ ತಂಡವನ್ನು ಪರಿಚಯಿಸಲಾಯಿತು. ಮಹಿಳಾ ಆಯೋಗದ ರಾಷ್ಟ್ರೀಯ ಸಂಚಾಲಕಿ ಸಿಸ್ಟರ್ ಲಿಡ್ವಿನ್ ಫೆರ್ನಾಂಡಿಸ್ ರವರು ಪ್ರತಿ ಸಂಪನ್ಮೂಲ ವ್ಯಕ್ತಿಗೆ ಬೆಳಗಿದ ಮೇಣದಬತ್ತಿಯನ್ನು ನೀಡಿದರು, ಇತರರಿಗೆ ಮಾರ್ಗವನ್ನು ಬೆಳಗಿಸುವಲ್ಲಿ ಅವರ ಪಾತ್ರವನ್ನು ಸಂಕೇತಿಸಿದರು.
ಸಂವಾದಾತ್ಮಕ ಅಧಿವೇಶನ – ಕುಟುಂಬ ಮತ್ತು ಸಮಾಜದಲ್ಲಿ ಮಹಿಳೆಯರ ಪಾತ್ರ: ಸಿಸ್ಟರ್ ಲಿಡ್ವಿನ್ ಫೆರ್ನಾಂಡಿಸ್ ರವರು ತಮ್ಮ ಸಂವಾದಾತ್ಮಕ ಅಧಿವೇಶನದಲ್ಲಿ ಸ್ತ್ರೀತ್ವದ ಮನೋಭಾವವನ್ನು ಹುಟ್ಟುಹಾಕಿದರು. ಕುಟುಂಬ ಮತ್ತು ಸಮಾಜದಲ್ಲಿ ಮಹಿಳೆಯರ ಸಂತೋಷಗಳು, ಸವಾಲುಗಳು ಮತ್ತು ಜವಾಬ್ದಾರಿಗಳನ್ನು ಎತ್ತಿ ತೋರಿಸಿದರು. ನಗರ ಚರ್ಚ್ ಗಳನ್ನು ಮೀರಿ ಧರ್ಮಕ್ಷೇತ್ರದ ಅತ್ಯಂತ ದೂರದ ಭಾಗಗಳಲ್ಲಿರುವ ಪ್ರತಿಯೊಬ್ಬ ಮಹಿಳೆಯನ್ನು ತಲುಪಲು ಮಹಿಳಾ ಆಯೋಗವನ್ನು ಒತ್ತಾಯಿಸಿದರು. ಮಹಿಳಾ ಆಯೋಗದ ಪಾತ್ರವು ನಗರ ಸಭೆಗಳಿಗೆ ಸೀಮಿತವಾಗಿರಬಾರದು. ಗ್ರಾಮೀಣ ಮತ್ತು ಅಂಚಿನಲ್ಲಿರುವ ಸಮುದಾಯಗಳಲ್ಲಿನ ಪ್ರತಿಯೊಬ್ಬ ಮಹಿಳೆಯನ್ನು ಉನ್ನತೀಕರಿಸಲು ಮತ್ತು ಸಬಲೀಕರಣಗೊಳಿಸಲು ಅದು ಗಡಿಗಳನ್ನು ಮೀರಿ ವಿಸ್ತರಿಸಬೇಕು. ಪ್ರತಿಯೊಬ್ಬ ಮಹಿಳೆಯು ತನ್ನೊಳಗೆ ಹೋರಾಟ ಮತ್ತು ವಿಜಯದ ಕಥೆಯನ್ನು ಹೊಂದಿದ್ದಾಳೆ. ಯಾವುದೇ ಮಹಿಳೆ ಆ ಪ್ರಯಾಣವನ್ನು ಒಂಟಿಯಾಗಿ ನಡೆಯುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ನಮ್ಮ ಕರ್ತವ್ಯ” ಎಂದು ಹೇಳಿದರು, ನಿರಂತರ ಒಗ್ಗಟ್ಟು ಮತ್ತು ಪ್ರಸಾರವನ್ನು ಒತ್ತಾಯಿಸಿದರು.
ದಿವ್ಯ ಬಲಿಪೂಜೆಯನ್ನು ನಡೆಸುವ ಮುಖಾಂತರ ಕಾರ್ಯಕ್ರಮವು ಮುಕ್ತಾಯಗೊಂಡಿತು. ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾರವರು ಬಲಿಪೂಜೆಯ ನೇತೃತ್ವವನ್ನು ವಹಿಸಿದ್ದರು. ಮಹಿಳಾ ಆಯೋಗದ ಧರ್ಮಕ್ಷೇತ್ರದ ಕಾರ್ಯದರ್ಶಿ ಅನಿತಾ ಡೆಸಾ ಫ್ರಾಂಕ್ ಅವರು ವಂದಿಸಿದರು.