September 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಇಂಡಿಯನ್ ಸಮೂಹ ಸಂಸ್ಥೆಗಳ 20 ವರ್ಷದ ಸಂಭ್ರಮಾಚರಣೆ

ನಮ್ಮ ಕುಡ್ಲ 24×7 ಸಹಯೋಗದಲ್ಲಿ ಮಾಸ್ ಮೀಡಿಯಾ ತರಬೇತಿ |  LAPT ಅಂತರಾಷ್ತ್ರೀಯ ಪ್ರಶಸ್ತಿ ಮಾನ್ಯತೆ  | ರಾಜಮ್ಮ ಮೆಮೊರಿಯಲ್ ಟ್ರಸ್ಟ್ ನ ಉದ್ಘಾಟನೆ

ಇಂಡಿಯನ್ ಸಮೂಹ ಸಂಸ್ಥೆಗಳ 20ನೇ ವರ್ಷದ ಸಂಭ್ರಮಾಚರಣೆ IGI – ಸಂಭ್ರಮ್ 2025, ಮಂಗಳೂರಿನ ಹೋಟೆಲ್ ದೀಪಾ ಕಂಫರ್ಟ್ಸ್‌ನ ಶಹನಾಯಿ ಸಭಾಂಗಣದಲ್ಲಿ ಮಾರ್ಚ್ 16 ರಂದು ಸಂಜೆ 4.00 ಗಂಟೆಗೆ ಬಹಳ ವಿಜೃಂಭಣೆಯಿಂದ ಜರುಗಿತು. 2005ರಲ್ಲಿ ಮಂಗಳೂರಿನ ಪಂಪ್ ವೆಲ್‌ನಲ್ಲಿ ಸ್ಥಾಪನೆಯಾದ ಇಂಡಿಯನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ಸಂಸ್ಥೆಯನ್ನು, ಆಂದಿನ ಸೇವಾದಳದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಮತ್ತು ಈಗಿನ ಕರ್ನಾಟಕ ಸರ್ಕಾರದ ಸ್ಪೀಕರ್ ಆದ ಸನ್ಮಾನ್ಯ ಯು.ಟಿ. ಖಾದರ್ ಉದ್ಘಾಟಿಸಿದ್ದರು. ಕಳೆದ 20 ವರ್ಷಗಳ ಅವಧಿಯಲ್ಲಿ ಸಂಸ್ಥೆಯು ಕಂಪ್ಯೂಟರ್, ತಾಂತ್ರಿಕ, ಏವಿಯೇಶನ್, ಹಾಸ್ಪಿಟಾಲಿಟಿ, ಲೋಜಿಸ್ಟಿಕ್ ಮತ್ತು ಸಪ್ಲೈ ಚೈನ್ ಮ್ಯಾನೇಜ್ಮೆಂಟ್, ಏರ್ಪೋರ್ಟ್ ಮ್ಯಾನೇಜ್ಮೆಂಟ್, ಕ್ಯಾಬಿನ್ ಕ್ರೂ ತರಬೇತಿ, ಇಂಗ್ಲಿಷ್ ತರಬೇತಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಹೆಸರಾಂತ ಸಂಸ್ಥೆಯಾಗಿದೆ.

ಈ ಸಂಭ್ರಮಾಚರಣೆಯ ಪ್ರಮುಖ ಅಂಶಗಳಲ್ಲಿ ಒಂದು LAPT (ಲಂಡನ್ ಅಕಾಡಮಿ ಆಫ್ ಪ್ರೊಫೆಷನಲ್ ಟ್ರೇನಿಂಗ್) ಅಂತರಾಷ್ಟ್ರೀಯ ಮಾನ್ಯತೆ ಸ್ವೀಕಾರವಾಗಿತ್ತು. 180ಕ್ಕೂ ಹೆಚ್ಚು ದೇಶಗಳಲ್ಲಿ ಮಾನ್ಯತೆ ಹೊಂದಿರುವ ಈ ಸಂಸ್ಥೆಯು, ಇಂಡಿಯನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್‌ಗೆ ತಮ್ಮ ಪ್ರಮಾಣೀಕರಣ ನೀಡಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಉದ್ಯೋಗ ಅವಕಾಶಗಳ ಹೆಚ್ಚಳಕ್ಕೆ ಮಾರ್ಗವಾಗಿ ನಿಲ್ಲಲಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮುರಳಿ ಹೊಸಮಜಲು ಅವರಿಗೆ ಏವಿಯೇಶನ್ ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಸೇವೆಗಾಗಿ LAPT ವತಿಯಿಂದ ಮಾಸ್ಟರ್ ಟ್ರೇನರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮತ್ತೊಂದು ಪ್ರಮುಖ ಘಟ್ಟವೆಂದರೆ, ಕರಾವಳಿ ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ನಮ್ಮ ಸಂಸ್ಥೆಯು ಕರಾವಳಿಯ ಪ್ರಮುಖ ಮಾಧ್ಯಮ ವಾಹಿನಿಯಾಗಿರುವ ನಮ್ಮ ಕುಡ್ಲ 24×7 ಸಹಭಾಗಿತ್ವದಲ್ಲಿ ಮಾಸ್ ಮೀಡಿಯಾ ಮತ್ತು ಸಂವಹನ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಇದುವರೆಗೆ ಇಲ್ಲದ ಖಾಸಗಿ ಸಂಸ್ಥೆ ಮತ್ತು ಮಾಧ್ಯಮ ವಾಹಿನಿಯ ಸಹಭಾಗಿತ್ವದ ವಿಶಿಷ್ಟ ಮಾದರಿಯಾಗಿದೆ. ಈ ಕೋರ್ಸ್ ಪತ್ರಿಕಾ ಮಾಧ್ಯಮ, ವೀಡಿಯೋ ಪ್ರೊಡಕ್ಷನ್, ಸೋಶಿಯಲ್ ಮೀಡಿಯಾ ಮತ್ತು ಡಿಜಿಟಲ್ ಮಾರ್ಕೆಟಿಂಗ್, ಪಬ್ಲಿಕ್ ರಿಲೇಶನ್, ಮಾಧ್ಯಮ ನಿರೂಪಣೆ, ಕ್ಯಾಮೆರಾ ತಂತ್ರಜ್ಞಾನ ಹಾಗೂ ಮಲ್ಟಿಮೀಡಿಯಾ ತಂತ್ರಜ್ಞಾನಗಳಲ್ಲಿ ಕೈಗಾರಿಕೆ-ಆಧಾರಿತ ತರಬೇತಿಯನ್ನು ಒದಗಿಸುತ್ತದೆ.

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ಮುರಳಿ ಹೊಸಮಜಲು ಅವರ ಮಾತೃಶ್ರೀಯವರಾದ ದಿ. ರಾಜಮ್ಮ ಅವರ ಸ್ಮರಣಾರ್ಥವಾಗಿ ‘ಶ್ರೀಮತಿ ರಾಜಮ್ಮ ಸ್ಮಾರಕ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್’ ಉದ್ಘಾಟನೆಯಾಯಿತು. ಪುತ್ತೂರು ತಾಲೂಕಿನ ಕೌಕ್ರಾಡಿ ಗ್ರಾಮದಲ್ಲಿ ಜನಿಸಿದ ರಾಜಮ್ಮ, ಸಮಾಜ ಸೇವೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದು, ದುರ್ಬಲ ಮಹಿಳೆಯರ ಹಾಗೂ ಬಡವರ ಹಕ್ಕುಗಳಿಗಾಗಿ ಶ್ರಮಿಸಿದ ಪ್ರಮುಖ ವ್ಯಕ್ತಿಯಾಗಿದ್ದರು. ಈ ಟ್ರಸ್ಟ್ ಯುವಕರು ಮತ್ತು ಮಹಿಳೆಯರ ಸಬಲೀಕರಣದ ಗುರಿಯನ್ನು ಹೊಂದಿದ್ದು, ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಈ ಸಂದರ್ಭ ಪತ್ರಿಕಾ ರಂಗದಲ್ಲಿ ಭಾಸ್ಕರ್ ರೈ, ಕಲಾ ಕ್ಷೇತ್ರದಲ್ಲಿ ವಿಪಿನ್ ಪುರುಷು, ಸಮಾಜ ಸೇವೆಯಲ್ಲಿ ಶಾರದ ಕದ್ರಿ ಮತ್ತು ಆಕಾಶ್ ಕರ್ಕೇರ, ಹಾಗೆಯೇ CDS ಪರೀಕ್ಷೆಯಲ್ಲಿ 100ನೇ ಶ್ರೇಣಿಯಲ್ಲಿ ಉತ್ತೀರ್ಣರಾದ ಅದ್ವೈತ್ ನಾರಾಯಣ್ ಅವರನ್ನು ಗೌರವಿಸಲಾಯಿತು. ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು, aviation, computer science, logistics ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಸನ್ಮಾನಿಸಲಾಯಿತು.

ಈ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮುರಳಿ ಹೊಸಮಜಲು ವಹಿಸಿಕೊಂಡಿದ್ದು, ನಿರ್ದೇಶಕಿ ಸಜಿತಾ ಎಂ. ನಾಯರ್ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕರ್ನಾಟಕ ವಿಧಾನಸಭಾ ಸದಸ್ಯ ವೇದವ್ಯಾಸ ಕಾಮತ್, ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, LAPT – UK ಸಂಸ್ಥೆಯ ಅಧ್ಯಕ್ಷ ವಿಜಯ್ ಭಾಗವಹಿಸಿದರು. ವಿಶೇಷ ಆಹ್ವಾನಿತರಾಗಿ ನಮ್ಮ ಕುಡ್ಲ 24×7 ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕದ್ರಿ ನವನೀತ್ ಶೆಟ್ಟಿ, ಹಿರಿಯ ಪತ್ರಕರ್ತ ಹಾಗೂ ಲೇಖಕರಾದ ಜಯಂತ್ ಕೊಡ್ಕಣಿ, ಚಲನಚಿತ್ರ ನಿರ್ದೇಶಕ ವಿಜಯ್ ಕುಮಾರ್, ನಟ ಮತ್ತು ನಿರ್ದೇಶಕ ಸ್ವರಾಜ್ ಶೆಟ್ಟಿ, ಚಲನಚಿತ್ರ ಹಾಗೂ ನಾಟಕ ಕಲಾವಿದೆ ಮಿಸ್ ರೂಪ ವರ್ಕಾಡಿ, ಸಂತ ಜಾರ್ಜ್ ಸಮೂಹ ಸಂಸ್ಥೆಗಳ ಮಾಜಿ ಪ್ರಾಂಶುಪಾಲ ಅಬ್ರಾಹಂ ವರ್ಗೀಸ್, ಕರ್ನಾಟಕ ಪಾಲಿಟೆಕ್ನಿಕ್ ಮಾಜಿ ಪ್ರಾಂಶುಪಾಲ ಡಾ. ಅಬ್ದುಲ್ ಖಾದರ್, ಮತ್ತು ವಕೀಲ ಪ್ರಸಾದ್ ರೈ ಭಾಗವಹಿಸಿದ್ದರು.

ಈ ಸಂಭ್ರಮಾಚರಣೆಯಲ್ಲಿ ಶಿಕ್ಷಣ ತಜ್ಞರು, ಕಾಲೇಜುಗಳ ಮುಖ್ಯಸ್ಥರು, ಮಾಧ್ಯಮ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದು, ಸಮಾರಂಭದ ಕೊನೆಯ ಭಾಗದಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ಹಿನ್ನೆಲೆ ಗಾಯಕರಾದ ಪ್ರಕಾಶ್ ಮಹಾದೇವನ್ ಹಾಗೂ ಗಾಯಕಿ ರೂಪ ಪ್ರಕಾಶ್ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಶಿಕ್ಷಕಿ ಚೈತ್ರಾ ಸ್ವಾಗತಿಸಿ, ಶಿಕ್ಷಕಿ ಅವನಿ ಪಾರ್ವತಿ ವಂದಿಸಿದರು ಮತ್ತು ಕಾರ್ಯಕ್ರಮವನ್ನು ಕದ್ರಿ ನವನೀತ್ ಶೆಟ್ಟಿ ಹಾಗೂ ಸಿಂಧು ಎನ್. ನಿರೂಪಿಸಿದರು.

You may also like

News

10 ವರ್ಷಗಳ ಸಮಾಜಸೇವೆ – ‘ಅವೇಕ್ ಕುಡ್ಲ’ ಅಭಿಯಾನ ವಿಸ್ತರಣೆಗೆ ಸಜ್ಜು

ಮಂಗಳೂರಿನ ಸ್ವಚ್ಛತೆ, ಪರಿಸರ ಸಂರಕ್ಷಣೆ, ತ್ಯಾಜ್ಯ ಹಾಗೂ ಸಂಚಾರ ನಿರ್ವಹಣೆ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ಕಳೆದ ಒಂದು ದಶಕದಿಂದ ತೊಡಗಿಸಿಕೊಂಡಿರುವ ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್
News

ಮಿಲಾಗ್ರಿಸ್ ಕಾಲೇಜ್ ಆಫ್ ನರ್ಸಿಂಗ್‌ನಲ್ಲಿ ‘PALLINEXUS 2026’ – 113 ಭವಿಷ್ಯದ ಶುಶ್ರೂಷಕಿಯರಿಗೆ ಕರುಣಾಮಯ ಆರೈಕೆಯ ತರಬೇತಿ

ಕರುಣೆಯೊಂದಿಗೆ ಕೌಶಲ್ಯಪೂರ್ಣ ಶುಶ್ರೂಷಕಿಯರ ರೂಪಿಸುವುದು ಅಗತ್ಯ – ಫಾದರ್ ಐವನ್ ಮೈಕಲ್ ರೊಡ್ರಿಗಸ್ ಮಂಗಳೂರು: ಪ್ಯಾಲಿಯೇಟಿವ್ ಕೇರ್ ಕ್ಷೇತ್ರದಲ್ಲಿ ಭವಿಷ್ಯದ ಶುಶ್ರೂಷಕಿಯರಿಗೆ ಅಗತ್ಯವಾದ ಜ್ಞಾನ, ಕೌಶಲ್ಯ ಹಾಗೂ

You cannot copy content of this page