April 27, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಜೀವನ ಮೌಲ್ಯವನ್ನು ಪ್ರತಿಪಾದಿಸುವ ಕಾರ್ಯಕ್ರಮಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಳ – ಜಯಲಕ್ಷ್ಮೀ ರಾಯಕೋಡ್

ಬಿ.ಸಿ. ರೋಡಿನಲ್ಲಿ ಭಾರತಾಂಬೆ ಸಂಜೀವಿನಿ ತಾಲೂಕು ಮಟ್ಟದ ಮಹಿಳಾ ಒಕ್ಕೂಟದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಬಂಟ್ವಾಳ:- ಜೀವನ ಮೌಲ್ಯವನ್ನು ಪ್ರತಿಪಾದಿಸುವ ಕಾರ್ಯಕ್ರಮಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗುತ್ತಿದ್ದು ಅತ್ಯಂತ ಸಂತಸ ಸಂಗತಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಜಯಲಕ್ಷ್ಮೀ ರಾಯಕೋಡ್ ಹೇಳಿದ್ದಾರೆ.


ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಬಂಟ್ವಾಳ, ಭಾರತಾಂಬೆ ಸಂಜೀವಿನಿ ತಾಲೂಕು ಮಟ್ಟದ ಮಹಿಳಾ ಒಕ್ಕೂಟ (ರಿ.) ಬಂಟ್ವಾಳ ಸಹಯೋಗದಲ್ಲಿ ಇಂದು ಮಾರ್ಚ್ 18ರಂದು ಮಂಗಳವಾರ ಬಿ.ಸಿ. ರೋಡಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸ್ವಸಹಾಯ ಸಂಘಗಳಿಗೆ ಬ್ಯಾಂಕ್ ಸಾಲ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಪ್ರತಿಯೊಂದು ವಿಚಾರದಲ್ಲಿ ಸಮಾಜ ಸಾಕಷ್ಟು ಮುಂದುವರಿದರೂ ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ ಎಂಬುದು ಮಾಧ್ಯಮಗಳ ವರದಿಗಳು ತಿಳಿಸುತ್ತವೆ. ಇದು ಅತ್ಯಂತ ಬೇಸರ ತರುವಂತಹ ‌ವಿಚಾರವಾಗಿದ್ದು, ಸಂಸ್ಕಾರದ ಕೊರತೆಯೇ ಕಾರಣವಾಗಿದೆ ಎಂದ ಅವರು, ರೋಗಗಳು ಬಾರದಂತೆ ಲಸಿಕೆಗಳನ್ನು ತೆಗೆದುಕೊಳ್ಳುವ ನಾವು ಸಂಸ್ಕಾರ ಎಂಬ ಲಸಿಕೆಯನ್ನು ಹಾಕಿಸಿಕೊಳ್ಳದೆ ಉತ್ತಮ ವ್ಯಕ್ತಿತ್ವದಿಂದ ವಿಮುಖರಾಗುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.

ಶೈಕ್ಷಣಿಕವಾಗಿ, ಸಾಮಾಜಿಕ ಮತ್ತು ಅರ್ಥಿಕ ಸಮಾನತೆ ಕೊಡಲು ಸಾಧ್ಯವಾದರೆ ದೇಶದ ಆರ್ಥಿಕ ವ್ಯವಸ್ಥೆಯ ಜಿಡಿಪಿಯಲ್ಲಿ ಏರಿಕೆಯನ್ನು ಕಾಣಲು ಸಾಧ್ಯವಾಗುತ್ತದೆ. ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುವ ಮಹಿಳೆಗೆ ಸ್ವಾತಂತ್ರ್ಯ ನೀಡದೆ ಹೋದರೆ ಪ್ರಗತಿ ಸಾಧ್ಯವಿಲ್ಲ ಎಂದ ಅವರು,
ಸ್ವಾವಲಂಬನೆ ಬೇಕು,‌‌‌‌‌ ಸ್ವೇಚ್ಛಾಚಾರ ಬೇಡ, ಚೌಕಟ್ಟಿನೊಳಗೆ ಕೆಲಸ ನಿರ್ವಹಿಸಿ, ಅದನ್ನು ಮೀರಿದರೆ ಅಪಾಯ ಕಟ್ಟಿಟ್ಟ ಬುತ್ತಿ, ನಂಬಿಕೆ ಎಂಬ ಲೈಸೆನ್ಸ್ ನೀಡಿದ ನಮ್ಮ ಮನೆಯವರಿಗೆ ದ್ರೋಹ ಬಗೆಯದ ರೀತಿಯಲ್ಲಿ ಜೀವನ ಮಾಡಬೇಕು. ಸುಸಂಸ್ಕೃತ ಜೀವನ, ಸಮಯ ಪರಿಪಾಲನೆ ಅತೀ ಮುಖ್ಯವಾಗಿದ್ದು, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಅವರು ಕರೆ ನೀಡಿದರು.


ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಇಪ್ಪತ್ತೇಳು ಗ್ರಾಮ ಪಂಚಾಯತ್ ಗಳ ಸ್ವಚ್ಛವಾಹಿನಿಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದಾರೆ. ಸಂಜೀವಿನಿಯ 1432 ಸ್ವಸಹಾಯ ಸಂಘಗಳು ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, 14973 ಸದಸ್ಯರು ಇದರಲ್ಲಿದ್ದಾರೆ. ಇದುವರೆಗೆ 14.64 ಕೋಟಿ ಬ್ಯಾಂಕ್ ಸಾಲ ವಿತರಿಸಲಾಗಿದೆ ಎಂದರು.


ಭಾರತಾಂಬೆ ಸಂಜೀವಿನಿ‌ ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಆಕರ್ಷಿಣಿ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ‌ ವ್ಯಕ್ತಿ ಕಸ್ತೂರಿ‌ ಬೊಳುವಾರು ಮಾತನಾಡಿ, ಆರ್ಥಿಕ‌ ಸಬಲೀಕರಣ ಎನ್ನುವುದು ಮಹಿಳಾ ಶೋಷಣೆಯ ಇನ್ನೊಂದು ಮುಖ ಆಗಬಾರದು, ಈ ಜಾಗೃತಿಯೂ ಎಲ್ಲರಲ್ಲಿಯೂ ಇರಲಿ ಎಂದರು. ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷೆ ಜಯಂತಿ ವಿ. ಪೂಜಾರಿ ಸಂಜೀವಿನಿ ಸಂತೆ ಉದ್ಘಾಟಿಸಿದರು.  ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಯರಾಮ್ ಕೆ., ಬೂಡಾ ಅಧ್ಯಕ್ಷರಾದ  ಬೇಬಿ ಕುಂದರ್, ಸಿಡಿಪಿಓ ಮಮ್ತಾಜ್,  ಬ್ಯಾಂಕ್ ಪ್ರಾಂತೀಯ ಅಧಿಕಾರಿ ದಿನೇಶ್. ಸಂಜೀವಿನೀ ಜಿಲ್ಲಾ ಕಾರ್ಯಕ್ರಮ‌ ವ್ಯವಸ್ಥಾಪಕರಾದ ಹರಿಪ್ರಸಾದ್, ಸಮಾಜ‌ ಕಲ್ಯಾಣ‌ ಅಧಿಕಾರಿ ಜಯಶ್ರೀ, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ವಿಶ್ವನಾಥ್‌ ಬೈಲಮೂಲೆ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಸುಧಾ, ತಾಲೂಕು ವ್ಯವಸ್ಥಾಪಕರಾದ ಪ್ರದೀಪ್‌ ಕಾಮತ್‌, ಸಾಂಘವಿ, ತಾಲೂಕು ಒಕ್ಕೂಟದ ಕಾರ್ಯದರ್ಶಿ ಯಶವಂತಿ, ವಲಯ ಮೇಲ್ವಿಚಾರಕ ಕುಶಾಲಪ್ಪ ಗೌಡ, ವಲಯ ಮೇಲ್ವಿಚಾರಕಿ ದೀಕ್ಷಿತಾ, ನರೇಗಾ ಐಇಸಿ ಸಂಯೋಜಕ ರಾಜೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸೌಮ್ಯಾ ಭಂಡಾರಿಬೆಟ್ಟು ಸ್ವಾಗತಿಸಿದರು. ಕಡೇಶ್ವಾಲ್ಯ ಎಂಬಿಕೆ‌ ಮಮತಾ ವಂದಿಸಿದರು. ವಲಯ ಮೇಲ್ವಿಚಾರಕರಾದ ದೀಕ್ಷಿತಾ, ಕುಸುಮಾ ಕಾರ್ಯಕ್ರಮ‌ ನಿರ್ವಹಿಸಿದರು. ಈ ಸಂದರ್ಭ ತಾಲೂಕು ಮಟ್ಟದ ಸಂಜೀವಿನಿ ಸಂತೆ, ಪ್ರಧಾನಮಂತ್ರಿ ವನಧನ ವಿಕಾಸ ಕೇಂದ್ರದ ಉತ್ಪನ್ನಗಳ ಅನಾವರಣ ಮತ್ತು ಮಾಹಿತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನರೇಗಾ 2025-26 ನೇ ಸಾಲಿನ ಕ್ರಿಯಾಯೋಜನೆಗೆ ಅತಿ ಹೆಚ್ಚು ಬೇಡಿಕೆಯನ್ನು ಸಂಗ್ರಹಿಸಿ ನೀಡಿದ ಒಕ್ಕೂಟದ ಪಶು ಸಖಿ ಮತ್ತು ಕೃಷಿ ಸಖಿಗಳಲ್ಲಿ ತಲಾ ಮೂವರಿಗೆ ಸ್ಮರಣಿಕೆ ಮತ್ತು ಪ್ರಮಾಣ ಪತ್ರವನ್ನು ನೀಡಲಾಯಿತು. ಹಾಗೆಯೇ 2024-25ನೇ ಸಾಲಿನಲ್ಲಿ 200ಕ್ಕಿಂತ ಹೆಚ್ಚು ಇಂಗುಗುಂಡಿ ನಿರ್ಮಿಸಿದ ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಚಿಗುರು ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ಗೌರವ ಸ್ಮರಣಿಕೆಕೆಯನ್ನು ನೀಡಿ ಅಭಿನಂದಿಸಲಾಯಿತು.

You may also like

News

‘ಪಿದಾಯಿ’ ತುಳು ಚಿತ್ರ ಮೇ 9ಕ್ಕೆ ಬೆಳ್ಳಿತೆರೆಗೆ

ನಮ್ಮ ಕನಸು ಬ್ಯಾನರಿನಲ್ಲಿ ಕೆ. ಸುರೇಶ್ ರವರು ನಿರ್ಮಾಣ ಮಾಡಿದ, ರಮೇಶ್ ಶೆಟ್ಟಿಗಾರ್ ಬರೆದು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ನಿರ್ದೇಶನದಲ್ಲಿ ಮೂಡಿ ಬಂದ
News

ಪರಮಪೂಜ್ಯ ಪೋಪ್ ಫ್ರಾನ್ಸಿಸ್‌ರವರಿಗೆ MCC ಬ್ಯಾಂಕ್ ವತಿಯಿಂದ ಗೌರವ ನಮನ

ಮಂಗಳೂರಿನ ಹಂಪನಕಟ್ಟೆಯಲ್ಲಿರುವ MCC ಬ್ಯಾಂಕ್ ಇದರ ಆಡಳಿತ ಕಛೇರಿಯಲ್ಲಿ ಕಥೊಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಪರಮಪೂಜ್ಯ ಪೋಪ್ ಫ್ರಾನ್ಸಿಸ್ ರವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ಎಪ್ರಿಲ್ 24ರಂದು

You cannot copy content of this page