April 27, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕೆವೈಸಿ ದಾಖಲೆಗಾಗಿ ಗ್ರಾಹಕರಿಗೆ ಪದೇ ಪದೇ ಕರೆ ಮಾಡದಿರಿ – ಬ್ಯಾಂಕ್‌ಗಳಿಗೆ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಸೂಚನೆ

ಕೆವೈಸಿ ದಾಖಲೆಗಳಿಗಾಗಿ ಗ್ರಾಹಕರಿಗೆ ಪದೇ ಪದೇ ಕರೆ ಮಾಡುವುದನ್ನು ನಿಲ್ಲಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಸಂಜಯ್ ಮಲ್ಹೋತ್ರಾ ಬ್ಯಾಂಕುಗಳಿಗೆ ಒತ್ತಾಯಿಸಿದ್ದಾರೆ. ಈ ಪದ್ಧತಿಯನ್ನು ಅವರು “ತಪ್ಪಿಸಿಕೊಳ್ಳಬಹುದಾದ ಅನಾನುಕೂಲತೆ” ಎಂದು ಉಲ್ಲೇಖಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ಆರ್‌ಬಿಐ ಒಂಬುಡ್ಸ್‌ಮೆನ್‌ಗಳ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು ಹಣಕಾಸು ಪ್ರಾಧಿಕಾರದಿಂದ ನಿಯಂತ್ರಿಸಲ್ಪಡುವ ಯಾವುದೇ ಘಟಕಕ್ಕೆ ದಾಖಲೆಗಳನ್ನು ಸಲ್ಲಿಸುವುದರಿಂದ ಇತರರು ಕೇಂದ್ರೀಯ ಡೇಟಾಬೇಸ್‌ನಿಂದ ಅವುಗಳನ್ನು ಪ್ರವೇಶಿಸಲು ಅನುಮತಿಸುತ್ತದೆ ಎಂದು ಹೇಳಿದ್ದಾರೆ.

“ಗ್ರಾಹಕರು ಹಣಕಾಸು ಸಂಸ್ಥೆಗೆ ದಾಖಲೆಗಳನ್ನು ಸಲ್ಲಿಸಿದ ನಂತರ, ನಾವು ಮತ್ತೆ ಅದೇ ದಾಖಲೆಗಳನ್ನು ಪಡೆಯಲು ಒತ್ತಾಯಿಸುವುದಿಲ್ಲ ಎಂದು ನಾವು ಖಚಿತಪಡಿಸಿಕೊಳ್ಳಬೇಕು” ಎಂದು ಮಲ್ಹೋತ್ರಾ ಹೇಳಿದ್ದಾರೆ. ಹೆಚ್ಚಿನ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳು ತಮ್ಮ ಶಾಖೆಗಳು ಅಥವಾ ಕಚೇರಿಗಳು ಕೇಂದ್ರೀಯ ಡೇಟಾಬೇಸ್‌ನಿಂದ ಮಾಹಿತಿಯನ್ನು ಹಿಂಪಡೆಯಲು ಅವಕಾಶ ನೀಡಿಲ್ಲ. ಹಾಗಾಗಿ ಪುನರಾವರ್ತಿತ ಕೆವೈಸಿ ವಿನಂತಿಗಳನ್ನು ಮಾಡಲಾಗುತ್ತಿದ್ದು, ಇದು ಗ್ರಾಹಕರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನು ಮೊದಲೇ ಸುಗಮಗೊಳಿಸಬಹುದು ಎಂದು ಹೇಳಿರುವ ಮಲ್ಹೋತ್ರಾರವರು, ಇದು ಎಲ್ಲರ ಹಿತದೃಷ್ಟಿಯಿಂದ ಇರುತ್ತದೆ ಎಂದು ತಿಳಿಸಿದ್ದಾರೆ. ಕೆವೈಸಿ ದಾಖಲೆಗಳನ್ನು ಮರುಸಲ್ಲಿಸಲು ಪದೇ ಪದೇ ವಿನಂತಿಸುವ ಬಗ್ಗೆ ಬ್ಯಾಂಕ್ ಗ್ರಾಹಕರು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ದೂರುಗಳನ್ನು ನೀಡುತ್ತಿರುವ ನಡುವೆ ಅವರು ಈ ಹೇಳಿಕೆ ನೀಡಿದ್ದಾರೆ. ಗ್ರಾಹಕರ ದೂರುಗಳ ಸಂಖ್ಯೆಗಳನ್ನು ಮುಚ್ಚಿಡಲು ಬೇಕಾಗಿ ಅದನ್ನು ತಪ್ಪಾಗಿ ವರ್ಗೀಕರಿಸುವುದರ ವಿರುದ್ಧ ಮಲ್ಹೋತ್ರಾರವರು ಬ್ಯಾಂಕುಗಳಿಗೆ ಎಚ್ಚರಿಕೆ ನೀಡಿದ್ದು, ಅಂತಹ ಕ್ರಮಗಳು “ಸಮಗ್ರ ನಿಯಂತ್ರಕ ಉಲ್ಲಂಘನೆ”ಯಾಗಿದೆ ಎಂದು ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

2023-24ರ ಹಣಕಾಸು ವರ್ಷದಲ್ಲಿ ಬ್ಯಾಂಕುಗಳು ಒಂದು ಕೋಟಿ ಗ್ರಾಹಕರ ದೂರುಗಳನ್ನು ಸ್ವೀಕರಿಸಿವೆ ಮತ್ತು ಇತರ ನಿಯಂತ್ರಿತ ಸಂಸ್ಥೆಗಳ ವಿರುದ್ಧದ ದೂರುಗಳನ್ನು ಸೇರಿಸಿದರೆ ಈ ಸಂಖ್ಯೆ ಹೆಚ್ಚಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ಇವುಗಳಲ್ಲಿ, 57%ರಷ್ಟು ದೂರುಗಳಲ್ಲಿ ಆರ್‌ಬಿಐ ಒಂಬುಡ್ಸ್‌ಮೆನ್‌ಗಳ ಮಧ್ಯಸ್ಥಿಕೆ ಅಥವಾ ಹಸ್ತಕ್ಷೇಪದ ಅಗತ್ಯವಿದೆ ಎಂದು ಅವರು ಉಲ್ಲೇಖಿಸಿದ್ದಾರೆ. “ಇದು ಅತ್ಯಂತ ಅತೃಪ್ತಿಕರ ಪರಿಸ್ಥಿತಿಯಾಗಿದ್ದು, ಇದಕ್ಕೆ ನಮ್ಮ ತುರ್ತು ಗಮನದ ಅಗತ್ಯವಿದೆ ಎಂದು ನೀವೆಲ್ಲರೂ ಒಪ್ಪುತ್ತೀರಿ. ಗ್ರಾಹಕ ಸೇವೆಯನ್ನು ಸುಧಾರಿಸುವುದು ಕೇವಲ ಕರ್ತವ್ಯ ಮಾತ್ರವಲ್ಲ, ಬದಲಾಗಿ ಉದ್ಯಮದಲ್ಲಿನ ಸ್ಪರ್ಧೆಯನ್ನು ಗಮನಿಸಿದರೆ ಬ್ಯಾಂಕುಗಳ ‘ಸ್ವಾರ್ಥ ಹಿತಾಸಕ್ತಿ’ ಕೂಡ ಆಗಿದೆ” ಎಂದು ಅವರು ಹೇಳಿದರು.

ವ್ಯವಸ್ಥಾಪಕ ನಿರ್ದೇಶಕರಿಂದ ಶಾಖಾ ವ್ಯವಸ್ಥಾಪಕರವರೆಗೆ ದೂರುಗಳನ್ನು ಪರಿಹರಿಸಲು ಪ್ರತಿ ವಾರ ಸಮಯವನ್ನು ಮೀಸಲಿಡುವಂತೆ ಮಲ್ಹೋತ್ರಾರವರು ಬ್ಯಾಂಕ್ ನಾಯಕತ್ವಕ್ಕೆ ಸಲಹೆ ನೀಡಿದ್ದಾರೆ. “ಇದು ಎಲ್ಲಾ ಬ್ಯಾಂಕುಗಳಿಗೆ ಅತ್ಯಗತ್ಯವಾಗಿದೆ. ಪ್ರಪಂಚದಾದ್ಯಂತದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇದನ್ನು ತಮ್ಮ ವೇಳಾಪಟ್ಟಿಯಲ್ಲಿ ಸೇರಿಸಿಕೊಳ್ಳುತ್ತಾರೆ. ಇಂತಹ ಸಮಸ್ಯೆಗಳನ್ನು ಪರಿಹರಿಸದೆ ಬಿಟ್ಟರೆ, ಅಂತಹ ಪ್ರತಿಯೊಂದು ಸಮಸ್ಯೆಯೂ ಗ್ರಾಹಕರ ವಿಶ್ವಾಸವನ್ನು ನಾಶಪಡಿಸಲಿದ್ದು, ಅದು ಇಡೀ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕಳಂಕಿತಗೊಳಿಸಲಿದೆ.” ಎಂದು ಅವರು ಹೇಳಿದ್ದಾರೆ.

ದೂರುಗಳನ್ನು ತೊಂದರೆಯಾಗಿ ನೋಡಬಾರದು ಮತ್ತು ಪದೇ ಪದೇ ಬರುವ ದೂರುಗಳು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ವ್ಯವಸ್ಥಿತ ದೋಷಗಳನ್ನು ಬಹಿರಂಗಪಡಿಸುತ್ತವೆ. ದೂರು ಪರಿಹಾರಕ್ಕಾಗಿ ಕೃತಕ ಬುದ್ಧಿಮತ್ತೆಯನ್ನು ಬಳಸಲು ಸೂಚಿಸಿದ ಅವರು, ಗ್ರಾಹಕರ ಗೌಪ್ಯತೆಯನ್ನು ಗೌರವಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ. ಬ್ಯಾಂಕುಗಳು ತಪ್ಪು ಮಾರಾಟ, ಡಿಜಿಟಲ್ ವಂಚನೆ ಮತ್ತು ಗ್ರಾಹಕರು ಎದುರಿಸುತ್ತಿರುವ ಆಕ್ರಮಣಕಾರಿ ವಸೂಲಾತಿ ಪ್ರಕ್ರಿಯೆಗಳಂತಹ ಇತರ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನಹರಿಸಬೇಕು ಎಂದು ಅವರು ಹೇಳಿದ್ದಾರೆ.

You may also like

News

‘ಪಿದಾಯಿ’ ತುಳು ಚಿತ್ರ ಮೇ 9ಕ್ಕೆ ಬೆಳ್ಳಿತೆರೆಗೆ

ನಮ್ಮ ಕನಸು ಬ್ಯಾನರಿನಲ್ಲಿ ಕೆ. ಸುರೇಶ್ ರವರು ನಿರ್ಮಾಣ ಮಾಡಿದ, ರಮೇಶ್ ಶೆಟ್ಟಿಗಾರ್ ಬರೆದು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ನಿರ್ದೇಶನದಲ್ಲಿ ಮೂಡಿ ಬಂದ
News

ಪರಮಪೂಜ್ಯ ಪೋಪ್ ಫ್ರಾನ್ಸಿಸ್‌ರವರಿಗೆ MCC ಬ್ಯಾಂಕ್ ವತಿಯಿಂದ ಗೌರವ ನಮನ

ಮಂಗಳೂರಿನ ಹಂಪನಕಟ್ಟೆಯಲ್ಲಿರುವ MCC ಬ್ಯಾಂಕ್ ಇದರ ಆಡಳಿತ ಕಛೇರಿಯಲ್ಲಿ ಕಥೊಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಪರಮಪೂಜ್ಯ ಪೋಪ್ ಫ್ರಾನ್ಸಿಸ್ ರವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ಎಪ್ರಿಲ್ 24ರಂದು

You cannot copy content of this page