ಕಮಿಷನರೇಟ್ ವ್ಯಾಪ್ತಿಯ ಹೋಂಸ್ಟೇ ರೆಸಾರ್ಟ್ ಗಳಿಗೆ ಕಡ್ಡಾಯ ನೋಂದಣಿ – ಪೊಲೀಸ್ ಆಯುಕ್ತರು

ದಕ್ಷಿಣ ಕನ್ನಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಪ್ರವಾಸಿ ತಾಣಗಳಲ್ಲಿ ನಡೆಸಲಾಗುತ್ತಿರುವ ರೆಸಾರ್ಟ್ ಹೋಂ ಸ್ಟೇಗಳಲ್ಲಿ ಬರುವ ಪ್ರವಾಸಿಗರ ಭದ್ರತೆ ಹಾಗೂ ಸುರಕ್ಷತೆಯ ಕ್ರಮಗಳ ಬಗ್ಗೆ ಮಂಗಳೂರಿನಲ್ಲಿ ಇಂದು ಮಾರ್ಚ್ 19ರಂದು ಬುಧವಾರ ಸಭೆಯನ್ನು ನಡೆಸಲಾಗಿದೆ.
ಕಾನೂನುಬಾಹಿರ ಚಟುವಟಿಕೆ ಹಾಗೂ ಆಹಿತಕರ ಘಟನೆಗಳು ನಡೆಯದಂತೆ, ಎಲ್ಲಾ ಹೋಂ ಸ್ಟೇ ಹಾಗೂ ರೆಸಾರ್ಟ್ ಮಾಲೀಕರು ಕಡ್ಡಾಯವಾಗಿ ನೋಂದಣಿಯನ್ನು ಮಾಡಿಸಲೇಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮುಲೈ ಮುಗಿಲನ್ ಅವರು ತಿಳಿಸಿದರು.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ, ರೆಸಾರ್ಟ್ ಹಾಗೂ ಹೋಂ ಸ್ಟೇಗಳಲ್ಲಿ ಕಡ್ಡಾಯವಾಗಿ ಸರಕಾರ ನೀಡಿದ ಮಾರ್ಗಸೂಚಿಗಳನ್ನು ಡಿಜಿ ಮತ್ತು ಐಜಿಪಿ ರವರ ಪತ್ರ ಸಂಖ್ಯೆ: ಕಾ ಮತ್ತು ಸು (7)/19/2025 ದಿನಾಂಕ:08.03.2025ರ ಉಲ್ಲೇಖದಂತೆ, ಪಾಲಿಸಬೇಕು ಎಂಬುದರ ಬಗ್ಗೆ ಸಲಹೆ ಸೂಚನೆಗಳನ್ನು ನೀಡಲಾಯಿತು.
ಸಭೆಯಲ್ಲಿ ಅನುಪಮ್ ಅಗರ್ ವಾಲ್ ಐಪಿಎಸ್, ಪೊಲೀಸ್ ಆಯುಕ್ತರು ಮಂಗಳೂರು ನಗರ ಇವರ ನೇತೃತ್ವದಲ್ಲಿ, ಮುಲೈ ಮುಗಿಲನ್ ಐಎಎಸ್, ಜಿಲ್ಲಾಧಿಕಾರಿ ಇವರ ಸಹಯೋಗದಲ್ಲಿ ಸಭೆಯನ್ನು ನಡೆಸಲಾಯಿತು.
ಸುಮಾರು 118 ರೇಸಾರ್ಟ್/ಹೋಮ್ ಸ್ಟೇ ಮಾಲೀಕರು ಹಾಜರಿದ್ದರು. ಈ ಸಭೆಯಲ್ಲಿ ಅಬಕಾರಿ ಹಾಗೂ ಪ್ರವಾಸೋದ್ಯಮ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಕೂಡ ಭಾಗವಹಿಸಿದ್ದರು.