SSLC ಪರೀಕ್ಷೆ ಇಂದಿನಿಂದ ಪ್ರಾರಂಭ – ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 92 ಪರೀಕ್ಷಾ ಕೇಂದ್ರ – 29,760 ವಿದ್ಯಾರ್ಥಿಗಳು

ಮಂಗಳೂರು: ಪ್ರಸಕ್ತ ವರ್ಷದ SSLC ಪರೀಕ್ಷೆ ಮಾರ್ಚ್ 21ರಂದು ಶುಕ್ರವಾರ ಆರಂಭವಾಗಲಿದ್ದು, ಜಿಲ್ಲೆಯಲ್ಲಿ 29,760 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ 92 ಪರೀಕ್ಷಾ ಕೇಂದ್ರಗಳ, 1332 ಕೊಠಡಿಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ.
ಮಾರ್ಚ್ 21ರಿಂದ ಏಪ್ರಿಲ್ 4 ರವರೆಗೆ ನಡೆಯಲಿರುವ ಈ ಪರೀಕ್ಷೆ ದಕ್ಷಿಣ ಕನ್ನಡ ಜಿಲ್ಲೆಯ 521 ಶಾಲೆಗಳ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಒಟ್ಟು 2,057 ಪರೀಕ್ಷಾ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಪರೀಕ್ಷೆ ಉಸ್ತುವಾರಿ ವಹಿಸಿದ್ದಾರೆ. ಪ್ರಶ್ನೆ ಪತ್ರಿಕೆಗಳನ್ನು ಖಜಾನೆಯಿಂದ ತರಲು 34 ಪೊಲೀಸ್ ಸಿಬ್ಬಂದಿಗಳನ್ನು ಹಾಗೂ ಪರೀಕ್ಷಾ ಕೇಂದ್ರಗಳ ಭದ್ರತೆಗೆ 184 ಪೊಲೀಸರನ್ನು ನಿಯೋಜಿಸಲಾಗಿದೆ. ಪರೀಕ್ಷೆ ಸುಗಮವಾಗಿ ನಡೆಯಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಲಾಗಿದೆ. ಪರೀಕ್ಷೆ ಬರೆಯಲಿರುವ 29,760 ವಿದ್ಯಾರ್ಥಿಗಳ ಪೈಕಿ 28,446 ವಿದ್ಯಾರ್ಥಿಗಳು ಮೊದಲನೇ ಬಾರಿಗೆ ಪರೀಕ್ಷೆ ಬರೆಯುತ್ತಿದ್ದಾರೆ. 831 ಮಂದಿ ಖಾಸಗಿಯಾಗಿ, 259 ಮಂದಿ ಪುನರಾವರ್ತಿತ ಹಾಗೂ 217 ಮಂದಿ ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳಾಗಿದ್ದಾರೆ.
ಹೊಸ ವಿದ್ಯಾರ್ಥಿಗಳ ಪೈಕಿ 14,735 ಹುಡುಗರು ಹಾಗೂ 13,711 ಹುಡುಗಿಯರು ಪರೀಕ್ಷೆ ಬರೆಯುತ್ತಿದ್ದಾರೆ. ಜಿಲ್ಲೆಯಲ್ಲಿ 8,892 ಸರಕಾರಿ ಶಾಲಾ ವಿದ್ಯಾರ್ಥಿಗಳು, 7,864 ಅನುದಾನಿತ ಶಾಲಾ ವಿದ್ಯಾರ್ಥಿಗಳು ಹಾಗೂ 11,690 ಅನುದಾನ ರಹಿತ ಶಾಲಾ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಪರಿಶಿಷ್ಟ ಜಾತಿಯ 2,475, ಪರಿಶಿಷ್ಟ ಪಂಗಡದ 1,240, ಹಿಂದುಳಿದ ವರ್ಗಗಳ 23,798 ಹಾಗೂ 933 ಸಾಮಾನ್ಯ ವಿದ್ಯಾರ್ಥಿಗಳಾಗಿದ್ದಾರೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ.ಟಿವಿ ಅಳವಡಿಸಲಾಗಿದೆ. ಇದಕ್ಕಾಗಿ 1,678 ಸಿ.ಸಿ. ಕ್ಯಾಮೆರಾಗಳನ್ನು 1,332 ಪರೀಕ್ಷಾ ಕೊಠಡಿಗಳಲ್ಲಿ ಅಳವಡಿಸಲಾಗಿದೆ.
SSLC ಪರೀಕ್ಷೆ ಬರೆಯುವ ವಲಯವಾರು ಅಭ್ಯರ್ಥಿಗಳ ವಿವರ:
ಬಂಟ್ವಾಳ-6,007, ಬೆಳ್ತಂಗಡಿ-4,204, ಮಂಗಳೂರು ಉತ್ತರ-5,443, ಮಂಗಳೂರು ದಕ್ಷಿಣ-5,182, ಮೂಡಬಿದ್ರೆ- 2,006, ಪುತ್ತೂರು- 4,926, ಸುಳ್ಯ- 1,992. ಜಿಲ್ಲೆಯಲ್ಲಿ ಸುಗಮ ರೀತಿಯಲ್ಲಿ ಪರೀಕ್ಷೆ ನಡೆಸಲು ಎಲ್ಲಾ ರೀತಿಯ ಸಿದ್ಧತೆ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.