ಅಸಂಗತ ವಿಡಿಯೋ – ಪೊಲೀಸರ ಸ್ಪಷ್ಟೀಕರಣ

ಕಳೆದ ವರ್ಷ 2024 ಡಿಸೆಂಬರ್ 23ರಂದು ಕುದುರೆಮುಖ ಜಂಕ್ಷನ್ ನಲ್ಲಿ ನಡೆದ ಒಂದು ಘಟನೆಯ ವಿಡಿಯೋ ಒಂದನ್ನು ಅಪರಿಚಿತರು ಚಿತ್ರೀಕರಿಸಿ ಅದಕ್ಕೆ ಕೂಳೂರು ಸೇತುವೆ ಬಳಿ ದರ್ಪ ಮೆರೆದ ಪೊಲೀಸರು ಎಂಬ ಒಕ್ಕಣೆಯೊಂದಿಗೆ ಇಂದು ಮಾರ್ಚ್ 21ರಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದು, ‘ಸತ್ಯಕ್ಕೆ ದೂರವಾದುದು’ ಎಂದು ಮಂಗಳೂರು ಪೊಲೀಸರಿಂದ ಸ್ಪಷ್ಟೀಕರಣ ದೊರಕಿದೆ.
ಕುದುರೆಮುಖ ಜಂಕ್ಷನ್ ನಲ್ಲಿ ಪಾನಮತ್ತ ವ್ಯಕ್ತಿಯೊಬ್ಬ ವಾಹನ ಸಂಚಾರಕ್ಕೆ ಅಡಚಣೆಯನ್ನು ಉಂಟುಮಾಡುತ್ತಿದ್ದು, ಪೊಲೀಸರು ಸಾರ್ವಜನಿಕರ ಸಹಾಯದೊಂದಿಗೆ ಸದರಿ ವ್ಯಕ್ತಿಯನ್ನು ರಸ್ತೆ ಬದಿಗೆ ಕಳುಹಿಸಿದ್ದರು. ಸದ್ರಿ ವ್ಯಕ್ತಿ ತೀರಾ ಕುಡಿದಿದ್ದರಿಂದ ಮಾನಸಿಕ ಸ್ತಿಮಿತವಿಲ್ಲದಂತೆ ಪದೇ ಪದೇ ರಸ್ತೆಗೆ ಬಂದು ವಾಹನ ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿರುವಾಗ ಆಯತಪ್ಪಿ ಕೆಳಗೆ ಬಿದ್ದು ಆತನಿಗೆ ಮೂಗಿನಲ್ಲಿ ರಕ್ತ ಬಂದಿತ್ತು.
ಸಾರ್ವಜನಿಕರ ಸಹಾಯದಿಂದ ಪೊಲೀಸರು ಆ ವ್ಯಕ್ತಿಯನ್ನು ಮೇಲಕ್ಕೆತ್ತಿ, ಉಪಚರಿಸಿ, ಆಸ್ಪತ್ರೆಗೆ ಸಾಗಿಸಲು ವಾಹನದ ಬಳಿ ಕರೆದುಕೊಂಡು ಬರುತ್ತಿರುವಾಗ ಸಾರ್ವಜನಿಕರು ತಪ್ಪಾಗಿ ತಿಳಿದುಕೊಂಡು ಈ ರೀತಿಯ ವಿಡಿಯೋ ವೈರಲ್ ಮಾಡಿದ್ದಾರೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.