April 20, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಗಳ ಮನೆಯಲ್ಲಿ ಸಿಕ್ತು ಕಂತೆ ಕಂತೆ ನೋಟು

ನ್ಯಾಯಾಂಗದಲ್ಲಿ ಭಾರಿ ವಿವಾದಕ್ಕೆ ಚರ್ಚೆಗೆ ಕಾರಣವಾದ ಘಟನೆ

ಕೂಡಲೇ ಸಭೆ ಸೇರಿ ಆಂತರಿಕ ತನಿಖೆ ಪ್ರಾರಂಭಿಸಿದ ಸುಪ್ರೀಂ ಕೋರ್ಟ್ ಕೊಲಿಜಿಯಂ

ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಗಳ ಅಧಿಕೃತ ನಿವಾಸದಲ್ಲಿ ಭಾರಿ ಪ್ರಮಾಣದ ನೋಟಿನ ಕಂತೆಗಳು ಪತ್ತೆಯಾಗಿವೆ. ಇದು ನ್ಯಾಯಾಂಗ ವಲಯದಲ್ಲಿ ಭಾರಿ ಪ್ರಮಾಣದ ಆತಂಕ ಸೃಷ್ಟಿಸಿದೆ. ಇಷ್ಟೊಂದು ದೊಡ್ಡ ಮೊತ್ತದ ದುಡ್ಡು ಪತ್ತೆಯಾಗಲು ಕಾರಣವಾಗಿರುವ ಘಟನೆ ಬಹಳ ಕುತೂಹಲಕಾರಿ ಆಗಿದೆ. ನ್ಯಾಯಮೂರ್ತಿಗಳಾದ ಯಶವಂತ್ ವರ್ಮ ನಗರದಿಂದ ಹೊರಗಿರುವಾಗ ಅವರ ಮನೆಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದೆ. ಕೂಡಲೇ ಮನೆಯವರು ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳದವರಿಗೆ ಕರೆ ಮಾಡಿದ್ದಾರೆ. ಆಗಲೇ ಬಯಲಾಗಿದ್ದು ಈ ಕಂತೆ ಕಂತೆ ನೋಟಿನ ಕಥೆ. ಬಳಿಕ ನ್ಯಾಯಮೂರ್ತಿಗಳಾದ ಯಶವಂತ್ ವರ್ಮರವರನ್ನು ಬೇರೆ ಹೈಕೋರ್ಟಿಗೆ ವರ್ಗಾಯಿಸುವುದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಕೊಲೀಜಿಯಂಗೆ ಅನಿವಾರ್ಯವಾಯಿತು.

ಬೆಂಕಿ ಅವಘಡ ಸಂಭವಿಸಿದಾಗ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಯಶವಂತ್ ವರ್ಮ ನಗರದಲ್ಲಿ ಇರಲಿಲ್ಲ. ಅವರ ಕುಟುಂಬ ಸದಸ್ಯರು ಅಗ್ನಿಶಾಮಕ ದಳದವರಿಗೆ ಹಾಗೂ ಪೊಲೀಸರಿಗೆ ಕರೆ ಮಾಡಿದರು. ಬೆಂಕಿ ನಂದಿಸಿದ ಬಳಿಗ ಕೊಠಡಿಯಲ್ಲಿ ಬಾರಿ ಪ್ರಮಾಣದ ನಗದಿರುವುದು ಪತ್ತೆಯಾಯಿತು. ತಕ್ಷಣ ಲೆಕ್ಕಪತ್ರವಿಲ್ಲದ ಆ ಹಣವನ್ನು ವಶಪಡಿಸಿಕೊಳ್ಳುವ ಸಂಬಂಧ ಅಧಿಕೃತ ಪ್ರಕ್ರಿಯೆ ಆರಂಭಿಸಲಾಯಿತು. ಈ ಆಕಸ್ಮಿಕ ನಗದು ಪತ್ತೆ ಸಂಬಂಧ ಪೊಲೀಸರು ತಮ್ಮ ಹಿರಿಯ ಅಧಿಕಾರಿಗಳಿಗೆ ಹಾಗೂ ಸರಕಾರದ ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಿದರು. ಅಲ್ಲಿಂದ ಮಾಹಿತಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಿಗೆ ತಲುಪಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿಗಳಾದ ಖನ್ನಾ ಕೊಲಿಜಿಯಂ ಸಭೆ ಕರೆದರು. ನ್ಯಾಯಮೂರ್ತಿಗಳಾದ ವರ್ಮಾರವರನ್ನು ತಕ್ಷಣವೇ ವರ್ಗಾವಣೆ ಮಾಡುವ ಒಮ್ಮತದ ನಿರ್ಧಾರವನ್ನು ಕೊಲಿಜಿಯಂ ಕೈಗೊಂಡಿತು.

‘ಅವರಿಗೆ ತಕ್ಷಣದಿಂದ ಜಾರಿಯಾಗುವಂತೆ ಅಲಹಾಬಾದ್ ಹೈಕೋರ್ಟಿಗೆ ವರ್ಗಾಯಿಸಲಾಗಿದೆ. 2021 ಅಕ್ಟೋಬರ್ ನಿಂದ ಅವರನ್ನು ಅಲಹಾಬಾದ್ ಹೈಕೋರ್ಟಿನಿಂದ ದೆಹಲಿಗೆ ವರ್ಗಾಯಿಸಲಾಗಿತ್ತು. ಈ ಪ್ರಕರಣ ನ್ಯಾಯಾಂಗ ವ್ಯವಸ್ಥೆಗೆ ಕಳಂಕ ತರುವುದಾಗಿದ್ದು, ತಕ್ಷಣ ನ್ಯಾಯಮೂರ್ತಿ ವರ್ಮಾ ಅವರ ರಾಜೀನಾಮೆಗೆ ಸೂಚಿಸಲಾಗುತ್ತೆ. ಇದಕ್ಕೆ ನಿರಾಕರಿಸಿದರೆ ಇಲಾಖಾ ವಿಚಾರಣೆಯನ್ನು ಆರಂಭಿಸಿ, ಸಂಸತ್ತಿನಲ್ಲಿ ಅವರ ವಜಾ ನಿರ್ಧಾರವನ್ನು ಕೈಗೊಳ್ಳುವ ಪ್ರಕ್ರಿಯೆ ಆರಂಭಿಸಲಾಗುತ್ತೆ.’ ಎಂದು ಐವರು ಸದಸ್ಯರ ಕೊಲೀಜಿಯಂ ಸ್ಪಷ್ಟಪಡಿಸಿದೆ.

ಇಲಾಖಾ ವಿಚಾರಣೆ ಅಂದ್ರೆ, ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಖನ್ನಾ ಅವರು ನ್ಯಾಯಮೂರ್ತಿ ಯಶವಂತ ವರ್ಮ ಅವರಲ್ಲಿ ಅಧಿಕೃತ ಪ್ರಕ್ರಿಯೆ ಕೇಳಬೇಕು. ಅವರು ಅದಕ್ಕೆ ವಿವರವಾದ ಪ್ರತಿಕ್ರಿಯೆ ನೀಡಬೇಕು. ಅವರು ನೀಡಿದ ಉತ್ತರ ತೃಪ್ತಿದಾಯಕ ಅಲ್ಲದೆ ಇದ್ದರೆ ಹಿರಿಯ ನ್ಯಾಯಾಧೀಶರ ಸಮಿತಿಯೊಂದನ್ನು ರಚಿಸಿ ತನಿಖೆ ಮಾಡಲು ಸೂಚಿಸಲಾಗುವುದು. ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ವಜಾ ಮಾಡುವುದು ಸುಲಭದ ಕೆಲಸವಲ್ಲ. ಅದಕ್ಕೆ ರಾಷ್ಟ್ರಪತಿಗಳ ಆದೇಶವಾಗಬೇಕು. ಅದಕ್ಕೂ ಮೊದಲು ಸಂಸತ್ತಿನ ಎರಡು ಸದನಗಳಲ್ಲಿ ವಿಶೇಷ ಬಹುಮತದಿಂದ ಆ ನಿರ್ಣಯ ಪಾಸ್ ಆಗಬೇಕು. ನ್ಯಾಯಮೂರ್ತಿಗಳಾದ ಯಶವಂತ್ ವರ್ಮರವರ ವಿಷಯದಲ್ಲಿರುವ ಆರೋಪ ಬಹಳ ಗಂಭೀರವಾಗಿದೆ. ದೇಶದ ರಾಜಧಾನಿಯ ಹೈಕೋರ್ಟ್ ನ್ಯಾಯಮೂರ್ತಿಗಳ ಮನೆಯಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿದೆ. ಸಹಜವಾಗಿ ಅವರ ಸಂಬಳದ ದುಡ್ಡಾಗಿರಲು ಸಾಧ್ಯವೇ ಇಲ್ಲ!!  ಹಾಗಾಗಿ ಆ ದುಡ್ಡು ಎಲ್ಲಿಂದ ಬಂತು? ಇದನ್ನು ನ್ಯಾಯಮೂರ್ತಿಗಳಾದ ಯಶವಂತ್ ವರ್ಮರವರು ಸುಪ್ರೀಂ ಕೋರ್ಟ್ ಕೊಲೀಜಿಯಂಗೆ ತೃಪ್ತಿಯಾಗುವಷ್ಟು ವಿವರವಾಗಿ ಹೇಳಬೇಕು.  ಅವರು ಕೊಟ್ಟ ವಿವರಣೆ ಕೊಲೀಜಿಯಮಿಗೆ ಸರಿ ಕಾಣಬೇಕು.

ಆದರೆ ನ್ಯಾಯಾಧೀಶರಾದವರಿಗೆ ಇಷ್ಟೊಂದು ಕಂತೆ ಕಂತೆ ನೋಟು ಎಲ್ಲಿಂದ ಬರುತ್ತೆ? ಅವರು ಹೇಗೆ ಅದನ್ನು ಸಮರ್ಥಿಸಿಕೊಳ್ಳುತ್ತಾರೆ? ಹಾಗಾಗಿ ನ್ಯಾಯಮೂರ್ತಿಗಳಾದ ಯಶವಂತ್ ವರ್ಮರವರು ಈಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದೇ ಅವರು ದುಡ್ಡಿನ ಮೂಲ ಅಕ್ರಮ ಅಲ್ಲ ಎಂದು ಸಾಬೀತುಗೊಳಿಸಬೇಕು. ಇಲ್ಲದಿದ್ದರೆ ತಾನಾಗಿಯೇ ರಾಜೀನಾಮೆ ಕೊಡ್ತೀನಿ ಅಂತ ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ಸುಪ್ರೀಂ ಕೋರ್ಟ್ ತೆಗೆದುಕೊಳ್ಳುವ ಕಠಿಣ ಕ್ರಮಕ್ಕೆ ವಿಚಾರಣೆಗೆ ಎಲ್ಲದಕ್ಕೂ ಸಿದ್ಧವಾಗಬೇಕು.

ಮೊದಲೇ ನ್ಯಾಯಾಂಗ ಕಾರ್ಯ ವೈಖರಿ ಬಗ್ಗೆ ಸಾಕಷ್ಟು ದೂರುಗಳಿವೆ ಅಸಮಾಧಾನಗಳಿವೆ. ಕೆಲವರಿಗೆ ತಕ್ಷಣ ವಿಚಾರಣೆಗೆ ದಿನಾಂಕ ಸಿಕ್ಕಿದರೆ ಇನ್ನೂ ಕೆಲವರಿಗೆ ವರ್ಷಗಟ್ಟಲೆ ದಿನಾಂಕ ಸಿಕ್ಕುವುದಿಲ್ಲ. ಕೆಲವರಿಗೆ ಒಂದೇ ವಿಚಾರಣೆಯಲ್ಲಿ ಜಾಮೀನು ಸಿಕ್ಕಿದ್ರೆ, ಕೆಲವರಿಗೆ ವರ್ಷಗಟ್ಟಲೆ ಜಾಮೀನು ಸಿಗೋದೇ ಇಲ್ಲ. ಇನ್ನು ನ್ಯಾಯಾಧೀಶರ ನೇಮಕಾತಿ, ಬಡ್ತಿ ಇತ್ಯಾದಿ ಪ್ರಕ್ರಿಯೆಗಳ ಬಗ್ಗೆನೂ ತೀವ್ರ ಆಕ್ಷೇಪಗಳಿವೆ. ಇಂತಹ ಸಂದರ್ಭದಲ್ಲಿ ದೆಹಲಿ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿಗಳ ಮನೆಯಲ್ಲೇ ಹೀಗೆ ಕಂತೆ ಕಂತೆ ನೋಟು ಪತ್ತೆಯಾಗಿರುವುದು ದೊಡ್ಡ ಕೋಲಾಹಲಕ್ಕೆ ಕಾರಣವಾಗಿದೆ.

You may also like

News

ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಶೃದ್ಧಾಭಕ್ತಿಯಿಂದ ಶುಭ ಶುಕ್ರವಾರ ಆಚರಣೆ

ಆಧುನಿಕ ಜೀವನದಲ್ಲಿ ನಾವು ಕ್ರಿಸ್ತನಿಗೆ ಯಾವ ರೀತಿಯ ಶಿಲುಬೆಯನ್ನು ನೀಡುತ್ತೇವೆ – ಫಾದರ್ ವಿಜಯ್ ಮಚಾದೊ ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಇಂದು ಎಪ್ರಿಲ್ 18ರಂದು
News

ಯೇಸುವಿನಂತೆ ನಮ್ರತೆ ಹಾಗೂ ಪ್ರೀತಿಯಿಂದ ಸೇವೆ ಸಲ್ಲಿಸಲು ಕರೆ ನೀಡಿದ ಮಂಗಳೂರು ಬಿಷಪ್

ಇಂದು ಕಾಸರಗೋಡಿನ ಬೋವಿಕ್ಕಾನಾ ಚರ್ಚ್ ನಲ್ಲಿ ಬಿಷಪ್ ರಿಂದ ಶುಭ ಶುಕ್ರವಾರ ಹಾಗೂ ನಾಳೆ ಶನಿವಾರ ಮಂಗಳೂರಿನಲ್ಲಿರುವ ರೊಸಾರಿಯೊ ಕಥೆದ್ರಲ್ ನಲ್ಲಿ ಈಸ್ಟರ್ ಹಬ್ಬದ ಆಚರಣೆ ಪರಸ್ಪರ

You cannot copy content of this page