ಮೊಗರ್ನಾಡ್ ಚರ್ಚ್ ನ ‘ಹೊಸಾನ್ನ ವಲಯ’ದಲ್ಲಿ ಸಂಬ್ರಮದ ಮಹಿಳಾ ದಿನಾಚರಣೆ

ದೇವಮಾತ ಮೊಗರ್ನಾಡ್ ಚರ್ಚ್ ಸ್ಥಾಪನೆಯ 250 ವರ್ಷದ ಜುಬಿಲಿ ಆಚರಣೆ ಪ್ರಯುಕ್ತ ಮಾರ್ಚ್ ತಿಂಗಳಲ್ಲಿ 16 ವರ್ಷ ಮೇಲ್ಪಟ್ಟ ಕುವರಿಯರಿಗೆ ಹಾಗೂ ಮಹಿಳೆಯರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಂತೆಯೇ ಚರ್ಚ್ ನ ಐದು ವಲಯಗಳಲ್ಲಿ ಒಂದಾದ ಹೊಸಾನ್ನ ವಲಯದ ನೇತೃತ್ವದಲ್ಲಿ ಮಾರ್ಚ್ 22 ರಂದು ಶನಿವಾರ ಸಂಜೆ ಮಹಿಳಾ ಸಮಾವೇಶ ಬಹಳ ಸಂಭ್ರಮದಿಂದ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಚರ್ಚ್ ಪ್ರಧಾನ ಧರ್ಮ ಗುರುಗಳಾದ ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊ ಮಾತನಾಡಿ “ಹೆಣ್ಣು ಹೀಗೆಯೇ ಎಂಬುದನ್ನು ಪದಗಳಿಂದಾಗಲಿ, ಕೃತಿಗಳಿಂದಾಗಲಿ ವರ್ಣಿಸಲು ಸಾಧ್ಯವಿಲ್ಲ. ಏಕೆಂದರೆ ಪ್ರಕೃತಿಯು ಅವಳೇ, ಸೃಷ್ಟಿಯು ಅವಳೇ. ಎಲ್ಲಾ ಕ್ಷೇತ್ರಗಳಲ್ಲಿ ಛಾಪನ್ನು ಮೂಡಿಸಿರುವ ಮಹಿಳೆಯರು ಕರ್ತವ್ಯದ ಆಗರ ಹಾಗೂ ತಾಳ್ಮೆ ಕರುಣೆಯ ಸಾಗರ” ಎಂದು ಪ್ರಶಂಶಿಸಿದರು.
ದೇವಮಾತ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾದರ್ ನವೀನ್ ಪ್ರಕಾಶ್ ಪಿಂಟೊ, ಡೀಕನ್ ವಂದನೀಯ ಮೆಲ್ವಿನ್ ಡಿಸೋಜಾ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂತೋಷ್ ಡಿಸೋಜ, ಕಾರ್ಯದರ್ಶಿ ವಿಲ್ಫ್ರೆಡ್ ಲೋಬೊ, 21 ಆಯೋಗಗಳ ಸಂಯೋಜಕಿ ಎಮಿಲಿಯಾನ ಡಿಕುನ್ಹಾ, ದೇವಮಾತ ಕಾನ್ವೆಂಟಿನ ಮುಖ್ಯ ಭಗಿನಿ ಆನ್ನಿ ಡಿಸೋಜಾ ಹಾಗೂ ಜುಬಿಲಿ ವರ್ಷದ ಕಾರ್ಯಕ್ರಮಗಳ ಸಂಯೋಜಕ ನವೀನ್ ಡಿಕುನ್ಹಾ ವೇದಿಕೆಯಲ್ಲಿ ಉಪಸ್ಥಿತದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬಂಟ್ವಾಳ ಸರಕಾರಿ ಆಸ್ಪತ್ರೆಯ ನರ್ಸಿಂಗ್ ಅಧಿಕಾರಿ ವಾಣಿ ಕೆ. ಮಹಿಳೆಯರ ದೈಹಿಕ, ಮಾನಸಿಕ ಒತ್ತಡ ಹಾಗೂ ಪೌಷ್ಟಿಕ ಆಹಾರ ಸೇವನೆಯ ಕುರಿತು ಮಾಹಿತಿಯನ್ನು ನೀಡಿದರು. ಸಾಧನೆ ಸೇವೆ ಮಾಡಿದ ವಲಯದ ಕೆಲವು ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಮನೋರಂಜನಾ ಕಾರ್ಯಕ್ರಮ ಹಾಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ವಿಲಿಯಂ ಪಿರೇರಾ ಸಭಿಕರನ್ನು ಸ್ವಾಗತಿಸಿ, ರಾಜೇಶ್ ಡಿಸೋಜ ಧನ್ಯವಾದಗೈದರು. ಸಂತೋಷ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.