ಬಜ್ಪೆ ಚರ್ಚ್ ನ ವಂದನೀಯ ಡಾಕ್ಟರ್ ರೊನಾಲ್ಡ್ ಕುಟಿನ್ಹೊರವರ ಸಮಾಜಹಿತ ಕಾರ್ಯಗಳಿಗೆ ರೋಟರಿ ಸಂಸ್ಥೆಯಿಂದ ಸನ್ಮಾನ

ರೋಟರಿ ಇಂಟರ್ನ್ಯಾಷನಲ್ ನ 3181 ಡಿಸ್ಟ್ರಿಕ್ಟ್ ನ ಜಿಲ್ಲಾ ಗವರ್ನರ್ ವಿಕ್ರಮದತ್ತ ಅವರು ಮಾರ್ಚ್ 25ರಂದು ಬಜ್ಪೆ ರೋಟರಿ ಘಟಕಕ್ಕೆ ಅಧಿಕೃತ ಭೇಟಿಗೆಂದು ಬಂದಾಗ, ಸದಾ ಸಮಾಜಹಿತ ಕಾರ್ಯಗಳನ್ನು ಮಾಡಿದ ಬಜ್ಪೆ ಚರ್ಚ್ ನ ಪ್ರಧಾನ ಧರ್ಮಗುರುಗಳಾದ ವಂದನೀಯ ಡಾಕ್ಟರ್ ರೊನಾಲ್ಡ್ ಕುಟಿನ್ಹೊರವರನ್ನು ಬಜ್ಪೆಯ ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ “ಸಮಾಜದ ಆಗುಹೋಗುಗಳಿಗೆ ಸದಾ ಸ್ಪಂದಿಸುತ್ತಾ ಎಲೆಮರೆಕಾಯಿಯಂತೆ ಪ್ರತಿಫಲ ಬಯಸದೆ ಮಾಡುವ ಕೆಲಸವು ಜನರ ಮನಸ್ಸಿನಲ್ಲಿ ಇರುತ್ತದೆ. ಧಾರ್ಮಿಕ ಕ್ಷೇತ್ರದಲ್ಲಿದ್ದು ಆಧ್ಯಾತ್ಮಿಕ ವಲ್ಲದ ಅವರ ಸೇವಾ ಕಾರ್ಯ ಮೆಚ್ಚಿ ಸನ್ಮಾನಿಸಲಾಗುತ್ತದೆ. ಈ ಸನ್ಮಾನವು ಇತರರನ್ನು ಸಮಾಜ ಮುಖಿಯಾಗಲು ಪ್ರೇರೇಪಿಸಲಿ” ಎಂದರು
ವೇದಿಕೆಯಲ್ಲಿ ಜಿಲ್ಲೆಯ ರೋಟರಿ ಗವರ್ನರ್ MPHF Rtn ವಿಕ್ರಮದತ್ತ, ವಲಯ ಒಂದರ ಸಹಾಯಕ ಗವರ್ನರ್ PHF Rtn ಶರತ್ ಶೆಟ್ಟಿ, ರೋಟರಿಯ ಅಧ್ಯಕ್ಷ ಜೋಕಿಂ ಡಿಕೋಸ್ತ, ವಲಯ ಒಂದರ ವಲಯ ಸೇನಾನಿ ವಂದನ್ ಪಿಂಟೊ ಹಾಗೂ ಕಾರ್ಯದರ್ಶಿ ಗೀತಾ ಲಕ್ಷ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೋಟರಿ ವಲಯ ಒಂದರ, ಮೂಲ್ಕಿ, ಮೂಡಬಿದ್ರೆ, ಕಿನ್ನಿಗೋಳಿ ಕ್ಲಬಿನ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು ಹಾಗೂ ಬಜ್ಪೆ ಕ್ಲಬಿನ ಸದಸ್ಯರು ಹಾಗೂ ಆಹ್ವಾನಿತರು ಹಾಜರಿದ್ದರು. ಸಂತೋಷ ಡಿಸೋಜ ಬಜ್ಪೆ ಸನ್ಮಾನ ಪತ್ರ ವಾಚಿಸಿದರು. ಡಾ. ಶಿಲ್ಪ ರಾಣಿಯವರು ಕಾರ್ಯಕ್ರಮ ನಿರೂಪಿಸಿದರು.