ಸಿಸ್ಟರ್ ಲೂಸಿ ಗ್ರೆಟ್ಟಾ ಇವರ ವಯೋನಿವೃತ್ತಿ ಪ್ರಯುಕ್ತ ಗೌರವಾಭಿನಂದನಾ ಸಮಾರಂಭ

ಅಮ್ಟೂರು ಕರಿಂಗಾನ ಸಂತ ಅಂತೋನಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ
ಅಮ್ಟೂರು ಕರಿಂಗಾನ ಸಂತ ಅಂತೋನಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸಿಸ್ಟರ್ ಲೂಸಿ ಗ್ರೆಟ್ಟಾ ಡಿಸೋಜರವರು ಶಿಕ್ಷಣ ಕ್ಷೇತ್ರದಲ್ಲಿ 37 ವರ್ಷಗಳ ಅವಿರತ ಸೇವೆ ಗೈದು ವಯೋನಿವೃತ್ತಿ ಹೊಂದಿದ ಪ್ರಯುಕ್ತ ಇಂದು ಮಾರ್ಚ್ 28ರಂದು ಶುಕ್ರವಾರ ಶಾಲೆಯಲ್ಲಿ ಗೌರವಾಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಅಮ್ಟೂರು ದೇವ ಮಾತ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ವಂದನೀಯ ಫಾದರ್ ನವೀನ್ ಪ್ರಕಾಶ್ ಪಿಂಟೊರವರು ಮಾತನಾಡಿ, “ಮುಗ್ಧ ಮಕ್ಕಳಲ್ಲಿನ ಅಜ್ಞಾನವನ್ನು ಹೋಗಲಾಡಿಸಿ ಜ್ಞಾನದ ಹಣತೆಯನ್ನು ಹಚ್ಚಿ ಸಮಾಜದಲ್ಲಿ ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು” ಎಂದು ಹೇಳಿದರು. ಸಾವಿರಾರು ಮಕ್ಕಳಿಗೆ ವಿದ್ಯಾದಾನ ನೀಡಿ ನಿವೃತ್ತರಾದ ಶಿಕ್ಷಕಿ ಸಿಸ್ಟರ್ ಲೂಸಿ ಗ್ರೆಟ್ಟಾ ಡಿಸೋಜರವರನ್ನು ಅಭಿನಂದಿಸಿ ಸನ್ಮಾನಿಸಿದರು.
ಮುಖ್ಯ ಅತಿಥಿಗಳಾಗಿ ಮೊಗರ್ನಾಡ್ ದೇವಮಾತ ಚರ್ಚ್ ನ ಉಪಾಧ್ಯಕ್ಷ ಸಂತೋಷ್ ಡಿಸೋಜ, ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಎಲ್ಯಾಸ್ ಡಿಸೋಜ, ರೊನಾಲ್ಡ್ ಫೆರ್ನಾಂಡಿಸ್ ಹಾಗೂ ರೋಜಿ ಡಿಸೋಜ ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ನಿವೃತ್ತ ಶಿಕ್ಷಕರು ಮಕ್ಕಳ ಹೆತ್ತವರು ಹಾಜರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಆನ್ನಿ ಡಿಸೋಜರವರು ಸ್ವಾಗತಿಸಿದರು. ಸಹಶಿಕ್ಷಕಿ ಶಾಂತಿ ಪಿಂಟೊ ಧನ್ಯವಾದವಿತ್ತರು. ಎಮಿಲಿಯಾನ ಡಿಕುನ್ಹಾ ಸನ್ಮಾನ ಪತ್ರ ವಾಚಿಸಿದರು. ನೆರೆದವರೆಲ್ಲರಿಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.