ಬ್ರಾಹ್ಮಣ ಮಹಾಸಭಾದ ಸುವರ್ಣ ಮಹೋತ್ಸವ – ವಿಪ್ರ ಸಮಾಜದ ಬಡ ಕುಟುಂಬಕ್ಕೆ ಮನೆ ನಿರ್ಮಿಸಲು ಸಹಾಯ

ಸಂಘಟನೆಗಳು ಸಮಾಜದ ದೀಪವಾಗಬೇಕು – ಶ್ರೀಪಾದರು
ಸಂಘಟನೆಗಳು ಸಮಾಜದ ದೀಪವಾಗಬೇಕು ಸಮಾಜಕ್ಕೆ ಮಾದರಿಯಂತಹ ಕಾರ್ಯಗಳನ್ನು ಮಾಡಿದಾಗ ಮಾತ್ರ ಸಂಘಟನೆ ಪದದ ಸಾರ್ತ್ಯ ಕಾಣಲು ಸಾಧ್ಯ ಎಂದು ಚಿತ್ರಾಪುರ ಮಠಾಧೀಶರಾದ ಶ್ರೀ ವಿದ್ಯೆಂದ್ರ ತೀರ್ಥ ಶ್ರೀಪಾದರು ನುದಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಆಯೋಜಿಸಲಾದ ಗಾಯತ್ರಿ ಸಂಗಮ ಕಾರ್ಯಕ್ರಮದ ಉಳಿಕೆಯ ಹಣದಿಂದ ಅಜೀರ್ಣವಸ್ಥೆಯಲ್ಲಿರುವ ವಿಪ್ರ ಸಮಾಜದ ತೀರ ಬಡ ಕುಟುಂಬದ ಅರ್ಹರನ್ನು ಗುರುತಿಸಿ ಅವರಿಗೆ ಮನೆ ನಿರ್ಮಿಸಲು ಸಹಾಯ ಮಾಡುವ ಉದ್ದೇಶದಿಂದ ಮೊಂತಿಮಾರ್ ಸಮೀಪದ ಸದಾಶಿವ ಭಟ್ ಅವರಿಗೆ ಎರಡೂವರೆ ಲಕ್ಷ ರೂಪಾಯಿ ಚೆಕ್ ಹಸ್ತಾಂತರಿಸಿ ಶುಭ ಹಾರೈಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಇತ್ತೀಚಿಗೆ ನಡೆದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಉದ್ಯಮಿ ರಘುನಾಥ ಸೋಮಯಾಜಿ ಅವರು ಮಾತನಾಡಿ, ಸಮುದಾಯದ ಆಶಕ್ತ ಬ್ರಾಹ್ಮಣರಿಗೆ ಮನೆ ನಿರ್ಮಾಣಕ್ಕಾಗಿ ಸಹಾಯ ಮಾಡಲು 50ಲಕ್ಷ ರೂಪಾಯಿ ಮೊತ್ತವನ್ನು ದೇಣಿಗೆಯಾಗಿ ನೀಡುತ್ತೇನೆ. ಮಹಾಸಭಾವು ಆಶಕ್ತ ಬ್ರಾಹ್ಮಣರನ್ನು ಗುರುತಿಸಿ ಸೂಚಿಸಬೇಕು. ತಾನು ಮನೆ ಒಂದಕ್ಕೆ 2.50 ಲಕ್ಷ ದೇಣಿಗೆ ನೀಡುತ್ತೇನೆ. ಉಳಿದ ಎರಡೂವರೆ ಲಕ್ಷ ರೂಪಾಯಿಯನ್ನು ಮಹಾಸಭಾವು ಹೊಂದಿಸಿಕೊಳ್ಳಬೇಕೆಂದು ಘೋಷಣೆ ಮಾಡಿದ್ದರು. ಈ ಯೋಜನೆ ಜಾರಿಗೊಳಿಸುವ ಉದ್ದೇಶದಿಂದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಹಾಗೂ ಖ್ಯಾತ ನ್ಯಾಯವಾದಿ ಮಹೇಶ್ ಕಜೆ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಮತ್ತು ಜಿಲ್ಲಾ ಸಂಚಾಲಕರು ತಾಲೂಕು ಸಂಚಾಲಕರೊಂದಿಗೆ ಸಮಾಲೋಚಿಸಿ, ಮೋಂತಿಮಾರು ಸದಾಶಿವ ಭಟ್ ಅವರಿಗೆ ಮನೆ ನಿರ್ಮಾಣಕ್ಕೆ ಸಹಾಯಧನ ನೀಡಲು ತೀರ್ಮಾನಿಸಲಾಯಿತು.
ಮೋಂತಿಮಾರು ಸದಾಶಿವ ಭಟ್ ಅವರು, ತನ್ನ ಬದುಕಿನ 35ಕ್ಕೂ ಅಧಿಕ ವರ್ಷವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ, ರಾಮಚಂದ್ರಪುರ ಮಠ ಮತ್ತು ಕೊಂಡೆವೂರು ಮಠದಲ್ಲಿ ಸೇವೆ ಸಲ್ಲಿಸಿದ್ದರು. ಸಮಾಜಕ್ಕಾಗಿ ತಮ್ಮ ಬದುಕನ್ನೇ ಶ್ರೀಗಂಧದಂತೆ ತೇದುಕೊಂಡಂತಹ ಅವರು, ಅನಿವಾರ್ಯ ಕಾರಣದಿಂದಾಗಿ ತನ್ನ ಹುಟ್ಟೂರಿಗೆ ಬಂದು ದೇವಸ್ಥಾನವೊಂದರ ಪೂಜಾ ಕೈಂಕರ್ಯಕ್ಕೆ ತೊಡಗಿಸಿಕೊಂಡಿದ್ದರು. ಸುಮಾರು 125 ವರ್ಷಕ್ಕೂ ಹಿಂದೆ ನಿರ್ಮಾಣವಾಗಿರುವ ಜೀರ್ಣಾವಸ್ಥೆಯಲ್ಲಿರುವ ಅವರ ಮನೆಯ ಪರಿಸ್ಥಿತಿಯನ್ನು ಪರಿಗಣಿಸಿ ರಾಜ್ಯಾಧ್ಯಕ್ಷರಾದ ಅಶೋಕ್ ಹಾರ್ನಹಳ್ಳಿ ಅವರೊಂದಿಗೆ ಸಮಾಲೋಚನೆ ನಡೆಸಿ ಮನೆ ದುರಸ್ಥಿಗಾಗಿ 5 ಲಕ್ಷ ರೂಪಾಯಿ ದೇಣಿಗೆ ನೀಡಲು ತೀರ್ಮಾನಿಸಲಾಯಿತು.
ಬಳಿಕ ಮಾತನಾಡಿದ ರಾಜ್ಯ ಉಪಾಧ್ಯಕ್ಶ ನ್ಯಾಯವಾದಿ ಮಹೇಶ್ ಕಜೆ, ಈ ಯೋಜನೆ ಅನುಸಾರ ಹಂತ ಹಂತವಾಗಿ ಫಲಾನುಭವಿಗೆ ಅನುದಾನ ನೀಡಲಾಗುವುದು. ಸದುದ್ದೇಶಕ್ಕಾಗಿ ಸಮಾಜದ ದಾನಿಗಳಿಂದ ಸಂಗ್ರಹಿತವಾದ ಹಣವಾಗಿದ್ದು, ಹಣ ಪೋಲಾಗದಂತೆ ಜಾಗೃತೆ ವಹಿಸಲಾಗುವುದು. ಫಲಾನುಭವಿಗಳ ಆಯ್ಕೆಯಲ್ಲೂ ಸಮಗ್ರ ಪರಿಶೀಲನೆ ನಡೆಸಲಾಗುವುದು ಎಂದರು.
ರಘುನಾಥ ಸೋಮಯಾಜಿ ಮಾತನಾಡಿ, ತನ್ನ ಸಮಾಜಮುಖಿ ಚಿಂತನೆಗೆ ಮಂಗಳೂರಿನ ಜಿಲ್ಲಾ ಘಟಕ ಸ್ಪರ್ಧಿಸಿ, ಅತ್ಯಂತ ಯೋಗ್ಯ ಫಲಾನುಭವಿಗಳನ್ನು ಆಯ್ಕೆ ಮಾಡಿದೆ. ಇದರಿಂದಾಗಿ ತನಗೆ ಸಾರ್ಥಕದ ಭಾವನೆ ಮೂಡುತ್ತದೆ. ಬ್ರಾಹ್ಮಣ ಮಹಾಸಭಾವು ತೆಗೆದುಕೊಳ್ಳುವ ಸಮಾಜಮುಖಿ ಕೆಲಸಗಳಿಗೆ ಸದಾ ಕೈ ಜೋಡಿಸುತ್ತೇನೆ ಎಂಬ ಆಶ್ವಾಸನೆ ನೀಡಿದರು.
ರಾಷ್ಟ್ರ, ಧರ್ಮ ಸೇವೆಗಾಗಿ ಬದುಕನ್ನು ಮೀಸಲಿಟ್ಟ ಮೋಂತಿಮಾರು ಸದಾಶಿವ ಭಟ್ ಅವರ ಕುರಿತು ಜಗದೀಶ ಕಾರಂತರು ಮುಡಿಪು ವಿವರ ನೀಡಿದರು. ಜಿಲ್ಲಾ ಪ್ರಧಾನ ಸಂಚಾಲಕ ಶ್ರೀಧರ ಹೊಳ್ಳ ಸ್ವಾಗತಿಸಿ, ಪ್ರಸ್ತಾವಿಕ ಮಾತುಗಳನ್ನಾಡಿದರು. ಸಂಘಟನೆಯ ಯುವ ವಿಭಾಗದ ರಾಜ್ಯ ಸಹಸಂಚಾಲಕ ಸುಬ್ರಮಣ್ಯ ಕೊರಿಯರ್ ವಂದಿಸಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಗಿರಿ ಪ್ರಕಾಶ್ ತಂತ್ರಿ, ಸುಬ್ರಮಣ್ಯ ಸಭಾದ ಉದಯಕುಮಾರ್, ಚಿತ್ಪಾವನ ಸಮಾಜದ ಶ್ರೀಕರ ದಾಮ್ಲೆ, ಲೆಕ್ಕ ಪರಿಶೋಧಕ ಆರ್.ಡಿ. ಶಾಸ್ತ್ರಿ ಉಪಸ್ಥಿತರಿದ್ದರು.