ದ್ವಿತೀಯ PUC ಫಲಿತಾಂಶ ಪ್ರಕಟ

ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ – ದಕ್ಷಿಣ ಕನ್ನಡ ದ್ವಿತೀಯ
2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ 1ರಿಂದ 20ರ ತನಕ ನಡೆದಿದ್ದು ಇಂದು ಎಪ್ರಿಲ್ 8ರಂದು ಮಂಗಳವಾರ ಫಲಿತಾಂಶ ಪ್ರಕಟಗೊಂಡಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಕಚೇರಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದಾರೆ. 73.45% ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿಗಳು ಪಿಯು ಮಂಡಳಿಯ ಅಧಿಕೃತ ವೆಬ್‌ಸೈಟ್ karresults.nic.in ಅಥವಾ kseab.karnataka.gov.in ಮೂಲಕ ಫಲಿತಾಂಶಗಳನ್ನು ಪರಿಶೀಲಿಸಬಹುದಾಗಿದೆ.
ದ್ವಿತೀಯ PUC ಫಲಿತಾಂಶದಲ್ಲಿ ಈ ಬಾರಿ 93.90 ಶೇಕಡಾದೊಂದಿಗೆ ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು, 93.57 ಶೇಕಡಾದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನವನ್ನು ತನ್ನ ಮುಗಿಲಿಗೇರಿಸಿಕೊಂಡಿದೆ. ಬೆಂಗಳೂರು ದಕ್ಷಿಣ ತೃತೀಯ ಸ್ಥಾನವನ್ನು ಪಡೆದರೆ ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ ದೊರೆತಿದೆ.
ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡದ ಕೆನರಾ ಪಿಯು ಕಾಲೇಜು ವಿದ್ಯಾರ್ಥಿನಿ ದೀಪಶ್ರೀ 600 ಕ್ಕೆ 599 ಅಂಕಗಳನ್ನು ಪಡೆಯುವುದರೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಇಂದು ಪಿಯು ಕಾಲೇಜು ವಿದ್ಯಾರ್ಥಿನಿ ಸಂಜನಾ ಬಾಯಿ 600 ಕ್ಕೆ 597 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ದಕ್ಷಿಣ ಕನ್ನಡದ ಎಕ್ಸಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಕಾಮತ್ 599 ಅಂಕದೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ಶೇಕಡಾ 53.29 ಫಲಿತಾಂಶ, ವಾಣಿಜ್ಯ ವಿಭಾಗದಲ್ಲಿ ಶೇಕಡಾ 76.07 ಮತ್ತು ವಿಜ್ಞಾನ ವಿಭಾಗದಲ್ಲಿ ಶೇಕಡಾ 82.54 ಫಲಿತಾಂಶ ಬಂದಿದೆ. ಪರೀಕ್ಷೆಗೆ ಒಟ್ಟು 7,13,862 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. 1171 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಪರೀಕ್ಷೆಗೆ ಹಾಜರಾಗಿದ್ದ 6,37,805 ವಿದ್ಯಾರ್ಥಿಗಳ ಪೈಕಿ 4,68,439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಲಿಂಗವಾರು ಒಟ್ಟು 1,99,227 ಬಾಲಕರು ಮತ್ತು 2,69,212 ಬಾಲಕಿಯರು ತೇರ್ಗಡೆಯಾಗಿದ್ದಾರೆ.