April 27, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಫುಡಾರ್ ಪ್ರತಿಷ್ಠಾನ್ (ರಿ.) ವತಿಯಿಂದ 405 ಸಾಧಕರಿಗೆ ಪ್ರತಿಭಾ ಪುರಸ್ಕಾರ ಕಾರ‍್ಯಕ್ರಮ

ಕಥೊಲಿಕ ಕ್ರೈಸ್ಥ ಸಮುದಾಯಕ್ಕೆ ಸೇರಿದ ಮಂಗಳೂರು ಹಾಗೂ ಉಡುಪಿ ಧರ್ಮಕ್ಷೇತ್ರದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಫುಡಾರ್ ಪ್ರತಿಷ್ಠಾನ್ (ರಿ.) ಸಂಸ್ಥೆಯ ನೇತ್ರತ್ವದಲ್ಲಿ ಸನ್ಮಾನ ಕಾರ್‍ಯಕ್ರಮವನ್ನು ಮಂಗಳೂರಿನ ಮಿಲಾಗ್ರಿಸ್ ಜುಬಿಲಿ ಸಭಾಂಗಣದಲ್ಲಿ ಎಪ್ರಿಲ್ 6ರಂದು ಆದಿತ್ಯವಾರ ನೆರವೇರಿಸಲಾಯಿತು. ಎಸ್.ಎಸ್.ಎಲ್.ಸಿ., ಪಿಯುಸಿ, ಪದವಿ, ಸ್ನಾತಕೋತ್ತರ, ಪಿ.ಎಚ್.ಡಿ., ವಿವಿಧ ಸ್ಪರ್ಧಾತ್ಮಕ ಪರೀಕ್ಶೆಗಳಲ್ಲಿ ಉತ್ತೀರ್ಣರಾದವರು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ, ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸಾಧನೆಗೈದ 405 ಪ್ರತಿಭಾನ್ವಿತರನ್ನು ಸನ್ಮಾನಿಸಲಾಯಿತು.

ಮಂಗಳೂರು ಧರ್ಮಕ್ಷೇತ್ರದ ಶ್ರೇಷ್ಠ ಗುರು ಮೊನ್ಸಿಂಜೊರ್ ಮ್ಯಾಕ್ಸಿಂ ಎಲ್. ನೊರೊನ್ಹಾರವರು ದೀಪ ಬೆಳಗಿಸುವ ಮೂಲಕ ಕಾರ್‍ಯಕ್ರಮವನ್ನು ಉದ್ಘಾಟಿಸಿದರು. ಮಂಗಳೂರು ಧರ್ಮಕ್ಷೇತ್ರದ ಪಾಲನಾ ಸಮಿತಿಯ ಕಾರ್ಯದರ್ಶಿ ಪ್ರೊ. ಡಾ. ಜೋನ್ ಡಿಸಿಲ್ವಾರವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಫುಡಾರ್ ಪ್ರತಿಷ್ಠಾನ್ ಸಂಸ್ಥೆಯ ಅಧ್ಯಕ್ಷ ನೈಜಿಲ್ ಪಿರೇರಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ.) ಇದರ ಅಧ್ಯಕ್ಷ ಸಂತೋಷ್ ಕರ್ನೆಲಿಯೊರವರು ಗೌರವ ಅತಿಥಿಗಳಾಗಿದ್ದರು. ಕಾರ್ಯದರ್ಶಿ ವಿವಿಡ್ ಡಿಸೋಜಾ, ಜೊತೆ ಕಾರ್ಯದರ್ಶಿ ಆಲ್ವಿನ್ ಕ್ವಾಡ್ರಸ್, ನಿರ್ದೇಶಕರುಗಳಾದ ಜೆರಾಲ್ಡ್ ಡಿಕೋಸ್ತ, ಅನಿಲ್ ಲೋಬೊ ಹಾಗೂ ಹೆರಿ ರೇಗೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೇಷ್ಠ ಗುರು ಮೊನ್ಸಿಂಜೊರ್ ಮ್ಯಾಕ್ಸಿಂ ನೊರೊನ್ಹಾರವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಮಾತನಾಡುತ್ತಾ ಸನ್ಮಾನ ಸ್ವೀಕರಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಮತ್ತು ಅವರ ಹೆತ್ತವರಿಗೂ ಅಭಿನಂದಿಸಿದರು. ಉನ್ನತ ಶಿಕ್ಶಣದೊಂದಿಗೆ ಸಾಮಾಜಿಕ ನ್ಯಾಯಕ್ಕಾಗಿ ಧೈರ್ಯದಿಂದ ಎದ್ದು ನಿಲ್ಲುವ ಆತ್ಮಸ್ಥೈರ್ಯವನ್ನು ಯುವಜನಾಂಗವು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರೊ. ಡಾ. ಜೋನ್ ಡಿಸಿಲ್ವಾರವರು ತಮ್ಮ ದಿಕ್ಸೂಚಿ ಭಾಷಣದಲ್ಲಿ ಮಾತನಾಡುತ್ತಾ ಶಿಕ್ಷಿತ ಸಮುದಾಯದವರಾದ ನಾವು ಸರ್ಕಾರಿ ನೌಕರಿಗಾಗಿ ಪ್ರಯತ್ನ ಪಡಬೇಕು ಹಾಗೂ ಯಶಸ್ಸು ಸಿಗುವ ವರೆಗೆ ಪ್ರಯತ್ನ ನಿಲ್ಲಿಸಬಾರದು. ವಿದೇಶದ ದುಡಿಮೆಯ ಒಲವನ್ನು ಮೊಟಕುಗೊಳಿಸಿ, ನಮ್ಮ ನೆಲ, ನಮ್ಮ ದೇಶಕ್ಕಾಗಿ ಸೇವೆಯನ್ನು ನೀಡಿ, ನಮ್ಮ ಪ್ರತಿಭೆಯ ಫಲ ನಮ್ಮ ಸಮಾಜಕ್ಕೆ ಮೊದಲು ದೊರಕುವಂತಾಗಬೇಕು ಎಂದು ಕಿವಿಮಾತು ನುಡಿದರು. ಇಂತಹ ಒಂದು ಸುಂದರವಾದ ಕಾರ್ಯಕ್ರಮವನ್ನು ಹಮ್ಮಿಕೊಂಡು ಪ್ರತಿಭಾನ್ವಿತರನ್ನು ಸನ್ಮಾನಿಸಿದ ಫುಡಾರ್ ಪ್ರತಿಷ್ಠಾನ್ ಸಂಸ್ಥೆಯನ್ನು ಪ್ರಶಂಸಿಸಿದರು.

ಸಂತೋಷ್ ಕರ್ನೆಲಿಯೊರವರು ಮಾತನಾಡುತ್ತಾ, ಶಿಕ್ಷಣವು ನಮ್ಮನ್ನು ಮೌಲ್ಯಾಧಾರಿತ ಹಾಗೂ ಆಧ್ಯಾತ್ಮಿಕತೆಯ ಜೀವನದ ಕಡೆಗೆ ಕೊಂಡೊಯ್ಯಬೇಕೇ ಹೊರತು ಅದರಿಂದ ಹಾಗೂ ಕೌಟುಂಬಿಕ ಸಂಬಂಧಗಳಿಂದ ದೂರವಾಗಲು ಕಾರಣವಾಗಬಾರದು ಎಂದು ಹೇಳಿದರು. ಪುರಸ್ಕೃತರಾದ ವಿದ್ಯಾರ್ಥಿಗಳ ಪರವಾಗಿ ಸೋಹನ್ ಆಳ್ವ, ಆಲ್ಸ್ಟನ್ ಡೇಸಾ, ರಿಶೆಲ್ ಫೆರ್ನಾಂಡಿಸ್ ಹಾಗೂ ಡಾ. ಆನೆಟ್ ಡಿಸೋಜ ತಮ್ಮ ಯಶಸ್ಸಿನ ಕತೆಯನ್ನು ಹಂಚಿಕೊಳ್ಳುತ್ತಾ, ಸನ್ಮಾನ ಕಾರ್ಯಕ್ರಮ ಆಯೋಜಿಸಿದ ಫುಡಾರ್ ಪ್ರತಿಷ್ಠಾನ್ ಸಂಸ್ಥೆಯನ್ನು ವಂದಿಸಿದರು.

ಫುಡಾರ್ ಪ್ರತಿಷ್ಠಾನ್ (ರಿ.) ಸಂಸ್ಥೆಯು 2005 ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, 20 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಕಥೊಲಿಕ ಕ್ರೈಸ್ತ ಸಮುದಾಯದ ಏಳಿಗೆಗಾಗಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರ ಉದ್ಘಾಟನಾ ಕಾರ್ಯವನ್ನು, ಲೋಬನವನ್ನು ಬೆಂಕಿಯ ಕೆಂಡಗಳಿಗೆ ಒಯ್ಯುವುದರ ಮುಕಾಂತರ ವಿಶಿಷ್ಟ ರೀತಿಯಲ್ಲಿ ನೆರವೇರಿಸಲಾಯಿತು. ತಮ್ಮ ಅಧ್ಯಕ್ಷೀಯ ಭಾಷಣವನ್ನು ಮಾಡಿದ, ನೈಜಿಲ್ ಪಿರೇರಾರವರು ಫುಡಾರ್ ಪ್ರತಿಷ್ಠಾನ್ (ರಿ.) ಸಂಸ್ಥೆಗೆ 20 ವರ್ಷಗಳು ತುಂಬಿದ್ದು, ಈ ವರ್ಷ ವಿವಿಧ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಸುಧಾರಣೆಯ ಕಾರ್ಯಕ್ರಮಗಳನ್ನು ಕಥೊಲಿಕ ಕ್ರೈಸ್ತ ಸಮುದಾಯದವರಿಗಾಗಿ ಹಮ್ಮಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಇದರ ಕುರಿತು ಹೆಚ್ಚಿನ ಮಾಹಿತಿಯನ್ನು ವಿವಿಧ ಕಥೊಲಿಕ ಸಂಘಟನೆಗಳ ಮುಖೇನ ನೀಡಲಾಗುವುದು ಎಂದು ತಿಳಿಸಿದರು. ಈ ಬಾರಿ 405 ಪ್ರತಿಭಾನ್ವಿತರಿಗೆ ಸನ್ಮಾನ ಮಾಡಿದ್ದೇವೆ. ಇದಕ್ಕೆ ಕಾರಣವಾದ ಎಲ್ಲಾ ಉದಾರ ಮನಸ್ಸಿನ ದಾನಿಗಳಿಗೆ ಹಾಗೂ ಫುಡಾರ್ ಪ್ರತಿಷ್ಠಾನ್ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ನಿರ್ದೇಶಕರಿಗೂ ಕೃತಜ್ಞತೆಯನ್ನು ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಹಮ್ಮಿಕೊಂಡಿರುವ ಎಲ್ಲಾ ಕಾರ್ಯಕ್ರಮಗಳಿಗೆ ತನು ಮನ ಧನದ ಸಹಕಾರವನ್ನು ನೀಡಲು ವಿನಂತಿಸಿದರು.

ಫುಡಾರ್ ಪ್ರತಿಷ್ಠಾನ್ ಸಂಸ್ಥೆಯ ಸಹ ಕಾರ್ಯದರ್ಶಿ ಆಲ್ವಿನ್ ಕ್ವಾಡ್ರಸ್ ಸ್ವಾಗತಿಸಿ, ಕಾರ್ಯದರ್ಶಿ ವಿವಿಡ್ ಡಿಸೋಜಾ ವಂದನಾರ್ಪಣೆಗೈದರು. ಸಂಸ್ಥೆಯ ಉಪಾಧ್ಯಕ್ಷರಾಗಿರುವ ಅತೀ ವಂದನೀಯ ಫಾದರ್ ವಾಲ್ಟರ್ ಡಿಮೆಲ್ಲೊ ಹಾಗೂ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಇವರ ಅನುಪಸ್ಥಿತಿಯಲ್ಲಿ ಇವರಿಗೆ ಧನ್ಯವಾದ ಕೋರಲಾಯಿತು. ಸನ್ಮಾನ ಕಾರ್ಯಕ್ರಮ ಯಶಸ್ವಿಗೊಳಿಸಲು ಉದಾರ ಮನಸ್ಸಿನ ಧನ ಸಹಾಯ ನೀಡಿದ ಎಲ್ಲಾ ದಾನಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಜ್ಯೋತಿ ಡಿಸೋಜ ಹಾಗೂ ಜೇನ್ ಮತಾಯಸ್ ಕಾರ್ಯಕ್ರಮ ನಿರೂಪಿಸಿದರು. ನೆರೆದ ಎಲ್ಲರಿಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.

You may also like

News

‘ಪಿದಾಯಿ’ ತುಳು ಚಿತ್ರ ಮೇ 9ಕ್ಕೆ ಬೆಳ್ಳಿತೆರೆಗೆ

ನಮ್ಮ ಕನಸು ಬ್ಯಾನರಿನಲ್ಲಿ ಕೆ. ಸುರೇಶ್ ರವರು ನಿರ್ಮಾಣ ಮಾಡಿದ, ರಮೇಶ್ ಶೆಟ್ಟಿಗಾರ್ ಬರೆದು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ನಿರ್ದೇಶನದಲ್ಲಿ ಮೂಡಿ ಬಂದ
News

ಪರಮಪೂಜ್ಯ ಪೋಪ್ ಫ್ರಾನ್ಸಿಸ್‌ರವರಿಗೆ MCC ಬ್ಯಾಂಕ್ ವತಿಯಿಂದ ಗೌರವ ನಮನ

ಮಂಗಳೂರಿನ ಹಂಪನಕಟ್ಟೆಯಲ್ಲಿರುವ MCC ಬ್ಯಾಂಕ್ ಇದರ ಆಡಳಿತ ಕಛೇರಿಯಲ್ಲಿ ಕಥೊಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಪರಮಪೂಜ್ಯ ಪೋಪ್ ಫ್ರಾನ್ಸಿಸ್ ರವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ಎಪ್ರಿಲ್ 24ರಂದು

You cannot copy content of this page