ಆಮ್ಮೆಂಬಳ ಚರ್ಚ್ ನಲ್ಲಿ ಸೈಬರ್ ಕ್ರೈಂ ತಡೆಯುವ ಬಗ್ಗೆ ಜಾಗೃತಿ ಶಿಬಿರ

ಜಾಗೃತಿ ಶಿಬಿರಗಳನ್ನು ಎಲ್ಲಾ ಶಾಲಾ ಕಾಲೇಜುಗಳಲ್ಲೂ ನಡೆಸಬೇಕು – ಫಾದರ್ ಮೈಕಲ್ ಡಿಸಿಲ್ವಾ
“ಪ್ರಸ್ತುತ ಆಧುನಿಕ ಯುಗದಲ್ಲಿ ಸೈಬರ್ ಕ್ರೈಂ ತಡೆಯುವ ಬಗ್ಗೆ, ಅದರ ದುಷ್ಪರಿಣಾಮಗಳ ಬಗ್ಗೆ ಹಾಗೂ ಮೊಬೈಲ್ ಉಪಯೋಗದ ಬಗ್ಗೆ – ಹಿರಿಯರಿಂದ ಹಿಡಿದು ಸಣ್ಣ ಮಕ್ಕಳು ಕೂಡ ಕಡ್ಡಾಯವಾಗಿ ತಿಳಿಯಬೇಕು. ಇಂತಹ ಜಾಗೃತಿ ಶಿಬಿರಗಳನ್ನು ಎಲ್ಲಾ ಶಾಲಾ ಕಾಲೇಜುಗಳಲ್ಲೂ ನಡೆಸಬೇಕು” ಎಂದು ಸಂತ ತೋಮಸರಿಗೆ ಸಮರ್ಪಿತ ಚರ್ಚ್ ಅಮ್ಮೆಂಬಳ ಇದರ ಧರ್ಮಗುರು ವಂದನೀಯ ಫಾದರ್ ಮೈಕಲ್ ಡಿಸಿಲ್ವಾ ಹೇಳಿದರು. ಅವರು ಎಪ್ರಿಲ್ 6ರಂದು ಆದಿತ್ಯವಾರ ಚರ್ಚ್ ಸಭಾಭವನದಲ್ಲಿ ಸಂತ ತೋಮಸರ ಶಿಕ್ಷಣ ಆಯೋಗ, ಸ್ತ್ರೀ ಆಯೋಗ, ಕಥೋಲಿಕ ಸ್ತ್ರೀಯರ ಮಂಡಳಿ ಹಾಗೂ ಚರ್ಚ್ ವತಿಯಿಂದ ನಡೆಸಲಾದ ಜಾಗೃತಿ ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ಸಂಪನ್ಮೂಲ ವ್ಯಕ್ತಿ ರಾಯಲ್ ಪ್ರವೀಣ್ ಡಿಸೋಜ ಇವರು ”ಮೊಬೈಲ್ ನಲ್ಲಿ ಬಹಳ ಆ್ಯಪ್ ಗಳಿವೆ. ಅದಕ್ಕೆ ನಾವು ಹಣ ನೀಡಲಿಲ್ಲ. ಆದರೂ ಅವು ನಮ್ಮ ಮೊಬೈಲ್ ಒಳಗಿವೆ. ನಾವು ಇಡೀ ದಿನ ಮೊಬೈಲ್ ಡಾಟಾ ತೆರೆದಿದ್ದರೆ, ನಮ್ಮ ಖಾಸಗಿ ವಿಷಯಗಳನ್ನು ಕದ್ದು, ನಮ್ಮನ್ನೇ ಬ್ಲಾಕ್ಮೇಲ್ ಮಾಡುವ ಸಾಧ್ಯತೆ ಇದೆ. ಆದುದರಿಂದ ಸೂಕ್ಷ್ಮ ವಿಷಯಗಳಾದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ವಿವರಗಳು, ಪಾಸ್ವರ್ಡ್, ಮುಂತಾದವುಗಳನ್ನು ಮೊಬೈಲ್ ಗ್ಯಾಲರಿಯಲ್ಲಿ ಶೇಖರಿಸಿ ಇಡಬಾರದು. ಯಾರಿಗೂ OTP ನೀಡಬಾರದು. ಮೊಬೈಲ್ ಜಾಗರೂಕತೆಯಿಂದ ಬಳಸಿ” ಎಂದು ಸವಿವರವಾಗಿ ತಿಳಿಹೇಳಿದರು.
ವೇದಿಕೆಯಲ್ಲಿ ಚರ್ಚ್ ಧರ್ಮಗುರು ವಂದನೀಯ ಫಾದರ್ ಮೈಕಲ್ ಡಿಸಿಲ್ವಾ, ಸಂಪನ್ಮೂಲ ವ್ಯಕ್ತಿ ರೋಯಲ್ ಪ್ರವೀಣ್ ಡಿಸೋಜ, ಬ್ರದರ್ ಲೊಯ್ವಿನ್ ರೊಡ್ರಿಗಸ್. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ರೋಬರ್ಟ್ ಡಿಸೋಜಾ, ಕಾರ್ಯದರ್ಶಿ ಲವೀನಾ ರೊಡ್ರಿಗಸ್, 21 ಆಯೋಗಗಳ ಸಂಯೋಜಕ ಜೊಸ್ಸಿ ತಾವ್ರೊ, ಜೆಸಿಂತಾ ಡಿಕುನ್ಹಾ, ಹೆಲೆನ್ ರೋಚ್ ಹಾಗೂ ಸೆಲಿನ್ ಸಿಕ್ವೇರಾ ಉಪಸ್ಥಿತರಿದ್ದರು.
ಶಿಬಿರದಲ್ಲಿ ಮಕ್ಕಳಿಂದ ಹಿಡಿದು ಯುವಜನರು ಹಾಗೂ ಹಿರಿಯ ನಾಗರಿಕರು ಕೂಡ ಭಾಗವಹಿಸಿದ್ದರು. ಜೆಸಿಂತಾ ಡಿಕುನ್ಹಾ ಸ್ವಾಗತಿಸಿದರು. ಹೆಲೆನ್ ರೋಚ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೆಲಿನ್ ಸಿಕ್ವೇರಾ ಧನ್ಯವಾದಗೈದರು. ಟ್ರೆಸ್ಸಿ ರೊಡ್ರಿಗಸ್ ಕಾರ್ಯಕ್ರಮವನ್ನು ನಿರೂಪಿಸಿದರು.