April 27, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಇನ್ನು ಮುಂದೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೂ ಇ-ಸ್ವತ್ತು ವಿತರಣೆ

ಪಂಚಾಯತ್ ರಾಜ್ ಹೊಸ ಅಧಿನಿಯಮ ಜಾರಿ

ಕರ್ನಾಟಕದ ಗ್ರಾಮೀಣ ಭಾಗದ ಆಸ್ತಿ ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು
ಸುಧಾರಣೆಗೆ ತರಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೂ ಇ-ಖಾತಾ ನೀಡುವ ಬಗ್ಗೆ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದ್ದು, ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಕಳೆದ 2025ರ ಮಾರ್ಚ್ 14ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993’ಕ್ಕೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ಈ ತಿದ್ದುಪಡಿಯ ಮೂಲಕ ರಾಜ್ಯದ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಖಾಸಗಿ ಆಸ್ತಿಗಳಿಗೆ ಇ-ಖಾತೆ ನೀಡುವ ಪ್ರಕ್ರಿಯೆ ಆರಂಭವಾಗಲಿದೆ.

ಇ-ಖಾತೆ ಎಂದರೇನು?

ಇ-ಖಾತೆ ಎಂದರೆ ಡಿಜಿಟಲ್ ಆಸ್ತಿ ದಾಖಲೆ ಪದ್ಧತಿ. ಇದನ್ನು ಇ-ಸ್ವತ್ತು ತಂತ್ರಾಂಶದ ಮೂಲಕ ನಿರ್ವಹಿಸಲಾಗುತ್ತದೆ. ಈ ವ್ಯವಸ್ಥೆಯ ಮೂಲಕ ಗ್ರಾಮೀಣ ಪ್ರದೇಶದಲ್ಲಿನ ಮನೆ, ಭೂಮಿ ಮತ್ತು ಕಟ್ಟಡಗಳ ಮಾಲಿಕತ್ವ ವಿಸ್ತೀರ್ಣ, ಬಾಕಿ ತೆರಿಗೆ ಸೇರಿದಂತೆ ಎಲ್ಲಾ ಮಾಹಿತಿಯನ್ನು ಸರ್ಕಾರ ಆನ್‌ಲೈನ್‌ನಲ್ಲಿ ದಾಖಲು ಮಾಡಲಾಗುತ್ತದೆ.

ತಿದ್ದುಪಡಿ ನಿಯಮದಿಂದ ಆಗುವ ಪ್ರಯೋಜನಗಳು:-

199-ಬಿ ಮತ್ತು 199-ಸಿ ಸೆಕ್ಷನ್‌ಗಳ ಸೇರ್ಪಡೆ:- ಗ್ರಾಮೀಣ ಪ್ರದೇಶದ ಎಲ್ಲಾ ಖಾಸಗಿ ಆಸ್ತಿಗಳನ್ನು ಇ-ಸ್ವತ್ತು ವ್ಯಾಪ್ತಿಗೆ ತರಲು ಈ ಎರಡು ಹೊಸ ಸೆಕ್ಷನ್‌ಗಳನ್ನು ಸೇರ್ಪಡಿಸಲಾಗುತ್ತಿದೆ. ತಿದ್ದುಪಡಿಯು ಪ್ರಸ್ತುತ 1993ರ ಪಂಚಾಯತ್ ರಾಜ್ ಕಾಯ್ದೆಯಲ್ಲಿ ಅಸ್ತಿತ್ವದಲ್ಲಿರುವ ಶ್ರೇಣಿಗಳಿಗೆ ಪೂರಕವಾಗಲಿದೆ.

96 ಲಕ್ಷ ಅನಧಿಕೃತ ಆಸ್ತಿಗಳ ನಿಯಂತ್ರಣ:- ಈವರೆಗೆ ಕೇವಲ 44 ಲಕ್ಷ ಆಸ್ತಿಗಳೇ ಇ-ಸ್ವತ್ತು ತಂತ್ರಾಂಶದಲ್ಲಿ ದಾಖಲಾಗಿದ್ದು, ಉಳಿದ 96 ಲಕ್ಷ ಆಸ್ತಿಗಳು ಸಿಸ್ಟಮ್‌ನ ಹೊರಗಿದ್ದವು. ಇವುಗಳ ಮೇಲೆ ಸೂಕ್ತ ಶುಲ್ಕ ಅಥವಾ ದಂಡ ವಿಧಿಸಿ, ಸರಕಾರವು ಇವುಗಳನ್ನು ಇ-ಸ್ವತ್ತು ವ್ಯಾಪ್ತಿಗೆ ತರಲು ಯೋಜಿಸುತ್ತಿದೆ.

ನೋಂದಣಿಯಾದ ಹಾಗೂ ಕ್ರಮಬದ್ಧವಲ್ಲದ ಆಸ್ತಿಗಳ ದಾಖಲೆ:– 2013ರ ನಂತರ ಅಥವಾ ಮೊದಲು ನೋಂದಣಿಯಾದ ಎಲ್ಲಾ ನಿವೇಶನಗಳು ಹಾಗೂ ಕಟ್ಟಡಗಳು ಇ-ಖಾತೆಗೆ ಒಳಪಡುತ್ತವೆ. ಇದರಿಂದ ಆಸ್ತಿ ಮಾರಾಟ ಅಥವಾ ಖರೀದಿಯ ಸಮಯದಲ್ಲಿ ಯಾವುದೇ ಕಾನೂನು ತೊಂದರೆಗಳಿಲ್ಲದೆ ವ್ಯವಹಾರ ನಡೆಸಲು ಸಾಧ್ಯವಾಗುತ್ತದೆ.

ತೆರಿಗೆ ಆಧಾರದ ಮೇಲೆ ಸ್ಥಳೀಯ ಆದಾಯ ಹೆಚ್ಚಳ:- ಗ್ರಾಮ ಪಂಚಾಯತಿಗಳಿಗೆ ನಿಖರವಾದ ಆಸ್ತಿ ತೆರಿಗೆ ಸಂಗ್ರಹಿಸುವ ಅವಕಾಶ ಸಿಗುತ್ತದೆ. ಇದರಿಂದ ಗ್ರಾಮೀಣ ಪ್ರದೇಶದ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಅಗತ್ಯವಿರುವ ಸಂಪತ್ತು ಒದಗುತ್ತದೆ.

ಇ-ಸ್ವತ್ತು ತಂತ್ರಾಂಶದ ಕುರಿತು:-

2013ರ ಜೂನ್ 15ರಂದು ಕರ್ನಾಟಕದಲ್ಲಿ ಇ-ಸ್ವತ್ತು ಎಂಬ ಡಿಜಿಟಲ್ ಪ್ಲಾಟ್‌ಫಾರ್ಮ್ ಪ್ರಾರಂಭವಾಯಿತು. ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಆಸ್ತಿಗಳ ಸಮಗ್ರ ದಾಖಲೆ ಇಂಟರ್‌ನೆಟ್ ಆಧಾರಿತ ವ್ಯವಸ್ಥೆಯಲ್ಲಿ ನಿರ್ವಹಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಇದರಿಂದ ನಕಲಿ ದಾಖಲೆ, ವಿವಾದಾತ್ಮಕ ಆಸ್ತಿ ವ್ಯವಹಾರಗಳಿಗೆ ಕಡಿವಾಣ ಹಾಕಲಾಗುತ್ತದೆ. ಈ ತಿದ್ದುಪಡಿಯ ಮೂಲಕ ಸರ್ಕಾರ ಪಾರದರ್ಶಕ ಆಸ್ತಿ ನಿರ್ವಹಣೆ, ಗ್ರಾಮ ಪಂಚಾಯತಿ ಆದಾಯದಲ್ಲಿ ಏರಿಕೆ ಹಾಗೂ ಆಸ್ತಿ ಖರೀದಿ/ಮಾರಾಟಕ್ಕೆ ಅನುಕೂಲತೆ ಕಲ್ಪಿಸುವಂತಹ ಮೂರು ಪ್ರಮುಖ ಗುರಿಗಳನ್ನು ಹೊಂದಿದೆ. ಆ ಮೂಲಕ ಇನ್ಮುಂದೆ ಇ- ಖಾತೆ ಇದ್ದರೆ ಆಸ್ತಿಯನ್ನು ಖರೀದಿಸಲು ಅಥವಾ ಮಾರಲು ಯಾವುದೇ ಕಾನೂನು ಅಡೆತಡೆಗಳನ್ನು ಎದುರಿಸಬೇಕಾಗಿಲ್ಲ.

ಯಾವೆಲ್ಲ ಆಸ್ತಿಗಳಿಗೆ ಈ ತಿದ್ದುಪಡಿ ಅನ್ವಯವಾಗುತ್ತದೆ?

‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993′ ತಿದ್ದುಪಡಿಯು ಎಲ್ಲ ಖಾಸಗಿ ಆಸ್ತಿಗಳಿಗೆ ಅನ್ವಯವಾಗುತ್ತದೆ. ಸರ್ಕಾರಿ ಭೂಮಿ, ಅರಣ್ಯ ಭೂಮಿ, ಶಾಸನಬದ್ಧ ಸಂಸ್ಥೆಗಳ ಆಸ್ತಿಗಳು ಸ್ಥಳೀಯ ಸಂಸ್ಥೆಗಳ ಆಸ್ತಿಗಳನ್ನು ಹೊರತುಪಡಿಸಿಈ ಕೆಳಗಿನ ಆಸ್ತಿಗಳಿಗೆ ಅನ್ವಯವಾಗಲಿದೆ:

  • ಕ್ರಮಬದ್ಧವಲ್ಲದ ನಿವೇಶನಗಳು
  • ಗುತ್ತಿಗೆದಾರರಿಂದ ನಿರ್ಮಿಸಲಾದ ಮನೆಗಳು
  • ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಖಾಸಗಿ ಕಟ್ಟಡಗಳು
  • 2013ರ ನಂತರ ಮತ್ತು ಮುಂಚಿತವಾಗಿ ನೋಂದಣಿಯಾದ ಆಸ್ತಿಗಳು

ಇ-ಖಾತೆ ವ್ಯವಸ್ಥೆ ಅನ್ವಯವಾಗುವ ಮೂಲಕ ಗ್ರಾಮೀಣ ಪ್ರದೇಶದ ಆಸ್ತಿ ಮಾಲೀಕರಿಗೆ ಬಹುಪಾಲು ಲಾಭವಾಗಲಿದೆ. ಇದಿಂದ ಆಸ್ತಿ ನೋಂದಣಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚುವುದು ಮಾತ್ರವಲ್ಲದೆ, ಗ್ರಾಮೀಣ ಅಭಿವೃದ್ಧಿಗೆ ಅವಶ್ಯಕವಾದ ಆರ್ಥಿಕ ಮೂಲಗಳನ್ನು ಸೃಷ್ಟಿಸಲು ಇದು ಸಹಕಾರಿಯಾಗಲಿದೆ. ಸರ್ಕಾರದ ಈ ತೀರ್ಮಾನ ಗ್ರಾಮೀಣ ಭಾಗದ ಆಸ್ತಿ ಮಾಲೀಕತ್ವದ ದೃಷ್ಟಿಕೋಣದಲ್ಲಿ ಕ್ರಾಂತಿಕಾರಿಯಾಗಿ ಪರಿಗಣಿಸಬಹುದು.

You may also like

News

‘ಪಿದಾಯಿ’ ತುಳು ಚಿತ್ರ ಮೇ 9ಕ್ಕೆ ಬೆಳ್ಳಿತೆರೆಗೆ

ನಮ್ಮ ಕನಸು ಬ್ಯಾನರಿನಲ್ಲಿ ಕೆ. ಸುರೇಶ್ ರವರು ನಿರ್ಮಾಣ ಮಾಡಿದ, ರಮೇಶ್ ಶೆಟ್ಟಿಗಾರ್ ಬರೆದು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ನಿರ್ದೇಶನದಲ್ಲಿ ಮೂಡಿ ಬಂದ
News

ಪರಮಪೂಜ್ಯ ಪೋಪ್ ಫ್ರಾನ್ಸಿಸ್‌ರವರಿಗೆ MCC ಬ್ಯಾಂಕ್ ವತಿಯಿಂದ ಗೌರವ ನಮನ

ಮಂಗಳೂರಿನ ಹಂಪನಕಟ್ಟೆಯಲ್ಲಿರುವ MCC ಬ್ಯಾಂಕ್ ಇದರ ಆಡಳಿತ ಕಛೇರಿಯಲ್ಲಿ ಕಥೊಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಪರಮಪೂಜ್ಯ ಪೋಪ್ ಫ್ರಾನ್ಸಿಸ್ ರವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ಎಪ್ರಿಲ್ 24ರಂದು

You cannot copy content of this page