ಮೋತಿಮಹಲ್ ಹೋಟೆಲ್, 1.70ಎಕ್ರೆ ಭೂಮಿ ಹಾಗೂ ಸುಮಾರು 11.50 ಕೋಟಿ ದಂಡ ಸಮೇತ ಮಂಗಳೂರು ಧರ್ಮಕ್ಷೇತ್ರದ ಸಂಸ್ಥೆಯ ಸುಪರ್ದಿಗೆ

2025 ಎಪ್ರಿಲ್ 30ರ ಒಳಗೆ ದಂಡ ಪಾವತಿಸಲು ಮತ್ತು ಕಟ್ಟಡ ಸಮೇತ ಜಮೀನು ಬಿಟ್ಟು ಕೊಡಲು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಮಂಗಳೂರಿನ ಪ್ರತಿಷ್ಠಿತ ವಕೀಲರಾದ ಎಂ. ಪಿ. ನೊರೊನ್ಹಾ ವಾದಿಸಿದ ದಾವೆ
ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಮಿಲಾಗ್ರಿಸ್ ಚರ್ಚ್ ಹಾಗೂ ಸೈಂಟ್ ಆ್ಯಂಟನಿಸ್ ಚಾರಿಟೇಬಲ್ ಟ್ರಸ್ಟ್ ಮೂಲಿ ಹಾಗೂ ಮೂಲಗೇಣಿ ಹಕ್ಕು ಹೊಂದಿರುವ 1.70 ಎಕರೆ ಭೂಮಿ ಹಾಗೂ ಅದರಲ್ಲಿರುವ ಮೋತಿ ಮಹಲ್ ಚತುರ್ತಾರ ಹೋಟೆಲನ್ನು ಲೀಸ್ಡ್ ಶರ್ತ ಪ್ರಕಾರ ಮೂಲಿಗೆ ಒಪ್ಪಿಸಲು ಹಾಗೂ 2011ರ ನಂತರ ಅದನ್ನು ಒಪ್ಪಿಸದಿದ್ದುದರಿಂದ ರೂಪಾಯಿ ಸುಮಾರು 11.50 ಕೋಟಿ ಪರಿಹಾರವನ್ನು ನೀಡಲು ಎ.ಜೆ. ಶೆಟ್ಟಿ ಆ್ಯಂಡ್ ಕಂಪನಿ ಮುಂದಾಗಿದೆ.
ಸದರಿ ಭೂಮಿಯನ್ನು 50 ವರ್ಷಗಳ ಅವಧಿಗೆ ಮಾಸಿಕ 852.50 ರೂಪಾಯಿ ಪಾವತಿಸುವ ನೆಲೆಯಲ್ಲಿ ಕುಡ್ಪಿ ಶ್ರೀನಿವಾಸ ಶೆಣೈ ಆ್ಯಂಡ್ ಕಂಪನಿಗೆ ಟರ್ಮ್ ಡೀಡ್ ಡೀಲ್ ಪ್ರಕಾರ ತಾರೀಕು 23-09-1961 ರಂದು ನೋಂದಾಯಿಸಲ್ಪಟ್ಟಿತ್ತು. ಅವರು ಮೋತಿಮಹಲ್ ಚತುರ್ತಾರ ಹೋಟೆಲ್ ಹಾಗೂ ಮಧುವನ ರೆಸ್ಟೋರೆಂಟ್ ಆರಂಭಿಸಿದರು.
ನ್ಯಾಯಾಲಯದ ಅನುಮತಿ ಪಡೆದು ಭಾರತೀಯ ಟ್ರಸ್ಟ್ ಕಾಯ್ದೆಯ ಸೆಕ್ಷನ್ 36 ಅಡಿ ಮಾಡಿದ ಲೀಸ್ ಡೀಡ್ ಶರ್ತ ಪ್ರಕಾರ, 50 ವರ್ಷಗಳ ಅವಧಿ ಮುಗಿದ ಕೂಡಲೇ ಕಟ್ಟಡ ಸಹಿತ ಸಂಪೂರ್ಣ ಜಮೀನನ್ನು ಪರಿಹಾರ ಮೊತ್ತ ಕೇಳದೆ ಮೂಲಗೇಣಿ ಮಾಲಕರಿಗೆ ಒಪ್ಪಿಸಬೇಕಿತ್ತು. ಇದರಿಂದಾಗಿ ಧರ್ಮಕ್ಷೇತ್ರದ ನ್ಯಾಯಾಲಯದ ಲೀಸ್ ಡೀಡ್ ಶರ್ತ ವೇ ಪ್ರಮುಖ ಆಧಾರವಾಯಿತು. ಇದಕ್ಕಿಂತ ಮುಂಚೆ ಇದನ್ನೇ ಮೂಲವಾಗಿಟ್ಟುಕೊಂಡು ಮೂರನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದ ತಾರೀಕು 15-02-2018 ಹಾಗೂ ಕರ್ನಾಟಕ ಹೈಕೋರ್ಟ್ ಮೇಲ್ಮನವಿ ತಾರೀಕು 11-09-2024ರ ತೀರ್ಪನ್ನು ಸಮರ್ಥಿಸಿ ಮೇಲಿನ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಲಿದೆ.
ತಾರೀಕು 02-03-1984 ರಂದು 110 ವಾಸ್ತವ್ಯದ ಐಷಾರಾಮಿ ಕೊಠಡಿಗಳು, ಸಭಾಂಗಣಗಳು, ಈಜುಕೊಳವಿದ್ದ ಮೋತಿ ಮಹಲನ್ನು ನೋಂದಾಯಿತ ದಾಖಲೆಗಳ ಮೂಲಕ ಎ.ಜೆ. ಶೆಟ್ಟಿ ಆ್ಯಂಡ್ ಕಂಪನಿಗೆ ಶೆಣೈ ಕಂಪನಿ ವರ್ಗಾಯಿಸಿತು. ಅದರ ಪ್ರಕಾರ ತಾರೀಕು 22-09-2018 ರವರೆಗೆ ಹೋಟೆಲ್ ನಡೆಸಿ, ಪರಿಹಾರ ಕೋರದೆ, ಕಟ್ಟಡ ಸಮೇತ ಜಮೀನನ್ನು ಮೂಲ ಮಾಲಕರಿಗೆ ನೀಡಬೇಕಿತ್ತು. ಆದರೆ ತಾರೀಕು 12-10-2018 ರಂದು ಎ.ಜೆ. ಶೆಟ್ಟಿ ಆ್ಯಂಡ್ ಕಂಪನಿಯು ಹೆಚ್ಚುವರಿ ಬಾಡಿಗೆಯನ್ನು ನಿಗದಿಪಡಿಸಿ ನವೀಕರಣ ಮಾಡಿಸಿಕೊಡಲು ಮೂಲ ಮಾಲಕರಿಗೆ ಪತ್ರ ಬರೆದರೂ, ಆ ಪ್ರಸ್ತಾವನೆ ತಾರೀಕು 08-02-2019 ರಂದು ತಿರಸ್ಕರಿಸಲ್ಪಟ್ಟಿತ್ತು ಮತ್ತು ಲೀಸ್ ಡೀಡ್ ಪ್ರಕಾರ ತಾರೀಕು 22-09-2018 ರಂದು ಜಮೀನನ್ನು ಕಟ್ಟಡ ಸಮೇತ ಮಾಲಕರಿಗೆ ಒಪ್ಪಿಸಲು ಸೂಚಿಸಿದ್ದರು.
ಆದರೆ ಕಟ್ಟಡದ ಸ್ವಾಧೀನತೆಯನ್ನು ಬಿಟ್ಟು ಕೊಡದ ಕಾರಣ ದಿನವೊಂದಕ್ಕೆ ಒಂದು ಲಕ್ಷ ಉತ್ಪತ್ತಿಯನ್ನು ನೀಡುವಂತೆ ಸೈಂಟ್ ಆ್ಯಂಟನಿಸ್ ಚಾರಿಟೇಬಲ್ ಟ್ರಸ್ಟ್ ನ್ಯಾಯಾಲಯದಲ್ಲಿ OS 144/2011 ಕುಡ್ಪಿ ಶ್ರೀನಿವಾಸ್ ಆ್ಯಂಡ್ ಕಂಪನಿಯನ್ನು ಹಾಗೂ ಎ.ಜೆ. ಶೆಟ್ಟಿ ಆ್ಯಂಡ್ ಕಂಪನಿಯನ್ನು ಪ್ರತಿವಾದಿಯನ್ನಾಗಿಸಿ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಲಾಯಿತು. ಮೊದಲನೇ ಪ್ರತಿವಾದಿಯು ಏಕಪಕ್ಷೀಯರಾದರು ಹಾಗೂ ಎರಡನೇ ಪ್ರತಿವಾದಿ ವಕೀಲರ ಮೂಲಕ ಕೋರ್ಟಿಗೆ ಹಾಜರಾದರು.
ಲೀಸ್ ಡೀಡ್ ಶರ್ತ ಪ್ರಕಾರ ಗುತ್ತಿಗೆ ಅವಧಿಯನ್ನು ನವೀಕರಣ ಮಾಡಿಕೊಳ್ಳುವ ಅವಕಾಶ ಇರುವುದರಿಂದ ತಮಗೆ ಮುಂದಿನ ಅವಧಿಗೆ ನವೀಕರಣ ಮಾಡಿಕೊಡುವಂತೆ ಮೂಲ ಮಾಲಕರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಎ.ಜೆ. ಶೆಟ್ಟಿ ಆ್ಯಂಡ್ ಕಂಪನಿಯವರು ಮಂಗಳೂರಿನ ಮಾನ್ಯ 3ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ OS 162/2014 ನಂಬರ್ ದಾವೆಯನ್ನು ಹೂಡಿದರು. ನ್ಯಾಯಾಲಯವು ಎರಡೂ ದಾವೆಗಳನ್ನು ಸೇರಿಸಿ ವಿಚಾರಣೆ ನಡೆಸಿತು.
1️. ಲೀಸ್ ಅವಧಿ ಮುಗಿದ ಮೇಲೆ 2ನೇ ಪ್ರತಿವಾದಿ ಹೋಟೆಲ್ ಕಟ್ಟಡ ಸಹಿತ ಜಮೀನನ್ನು ಯಾವುದೇ ಪರಿಹಾರ ಕೋರದೆ ಮೂಲ ಮಾಲಕರ ವಶಕ್ಕೆ ಒಪ್ಪಿಸಬೇಕೆಂದು ಸೈಂಟ್ ಆ್ಯಂಟನಿಸ್ ಚಾರಿಟೇಬಲ್ ಟ್ರಸ್ಟ್ ಪರವಾಗಿ ಈ ವಾದ ಮಂಡಿಸಲಾಯಿತು.
2️. ಈ ಅಂಶವನ್ನು 2ನೇ ಪ್ರತಿವಾದಿಯು ಅರಿತಿದ್ದು ಒಂದನೇ ಪ್ರತಿವಾದಿಯಿಂದ ಗುತ್ತಿಗೆ ಹಕ್ಕನ್ನು ವರ್ಗಾಯಿಸಿಕೊಂಡಿರುತ್ತಾರೆ.
3️. ಗುತ್ತಿಗೆ ಅವಧಿಯ ನವೀಕರಣವನ್ನು ಹಕ್ಕು ಎಂದು ಪ್ರತಿಪಾದಿಸುವಂತಿಲ್ಲ.
4️. ಎರಡನೇ ಪ್ರತಿವಾದಿಯು ಹೋಟೆಲ್ ವ್ಯವಹಾರದಿಂದ ಪ್ರತಿನಿತ್ಯ ಮೂರು ಲಕ್ಷಕ್ಕೂ ಅಧಿಕ ಆದಾಯ ಗಳಿಸುತ್ತಿದ್ದಾರೆ.
5️. ಪ್ರತಿವಾದಿಗಳು ಶ್ರೀಮಂತ ಪ್ರಭಾವಿಶಾಲಿ ವ್ಯಕ್ತಿಗಳಾಗಿದ್ದು ವಿವಿಧ ಕಡೆಗಳಲ್ಲಿ ಹಲವಾರು ಸ್ಥಿರಾಸ್ತಿ ಹೊಂದಿರುತ್ತಾರೆ.
6️. ಎರಡನೇ ಪ್ರತಿವಾದಿಯು ಒಂದನೇ ಪ್ರತಿವಾದಿಯಿಂದ ಭೋಗ್ಯಕ್ಕೆ ಪಡೆಯುವ ಮೊದಲು ಮೂಲ ಮಾಲಕರಿಂದ ಅನುಮತಿ ಕೇಳಿಲ್ಲ.
7️. ಎರಡನೆಯ ಪ್ರತಿವಾದಿಯು ಕಟ್ಟಡಕ್ಕೆ ಹಾನಿ ಉಂಟು ಮಾಡಿದ್ದಾರೆ. ಆದುದರಿಂದ ದಾವೆಯಲ್ಲಿ ಕೋರಿದಂತೆ ತೀರ್ಪು ಮತ್ತು ಡಿಕ್ರಿಯನ್ನು ನೀಡಬೇಕಾಗಿ ಪ್ರಾರ್ಥಿಸಿದರು.
ಎರಡನೇ ಪ್ರತಿವಾದಿ ಎ.ಜೆ. ಶೆಟ್ಟಿ ಆ್ಯಂಡ್ ಕಂಪನಿಯ ಪರವಾಗಿ ಈ ಕೆಳಗಿನ ವಾದ ಮಂಡಿಸಲಾಯಿತು:-
- ಲೀಸ್ ಡೀಡ್ ಶರ್ತ ಪ್ರಕಾರ ಗುತ್ತಿಗೆ ಅವಧಿಯನ್ನು ನವೀಕರಣ ಮಾಡಿಸಿಕೊಳ್ಳಲು ಎರಡನೇ ಪ್ರತಿವಾದಿ ಹಕ್ಕುಳ್ಳವರಾಗಿರುತ್ತಾರೆ. ಹಾಗೂ ನವೀಕರಣ ಮಾಡಿಕೊಡಲು ವಾದಿಯು ಬದ್ಧರಾಗಿರುತ್ತಾರೆ.
- ಗುತ್ತಿಗೆ ಪಡೆದ ಜಮೀನನಲ್ಲಿ ವಾದಿಯು ಹೋಟೆಲ್ ಕಟ್ಟಡವನ್ನು ನಿರ್ಮಿಸಿಲ್ಲ.
- ಒಂದನೇ ಪ್ರತಿವಾದಿ ಮೆ. ಕುಡ್ಪಿ ಶ್ರೀನಿವಾಸ್ ಶೆಣೈ ಆ್ಯಂಡ್ ಕಂಪನಿಯು ಐಷಾರಾಮಿ ಹೋಟೆಲ್ ಅನ್ನು ನಿರ್ಮಿಸಿದ್ದರಿಂದ ದಿನವೊಂದಕ್ಕೆ 1 ಲಕ್ಷ ಲಾಭಾಂಶ ಉತ್ಪತ್ತಿ ಕೇಳಲು ವಾದಿಗೆ ಯಾವುದೇ ಹಕ್ಕು ಇರುವುದಿಲ್ಲ.
- ಲೀಸ್ ಡೀಡ್ ನಲ್ಲಿ ಒಂದನೇ ಪ್ರತಿವಾದಿಯು ತನ್ನ ಹಕ್ಕನ್ನು ಇತರರಿಗೆ ವರ್ಗಾಯಿಸಬಹುದೆಂಬ ಶರ್ತ ಇದ್ದುದರಿಂದ ಎರಡನೇ ಪ್ರತಿವಾದಿಯು ಭೋಗ್ಯಕ್ಕೆ ಪಡೆದಿರುತ್ತಾರೆ. ಆದುದರಿಂದ ಮುಂದಿನ ಐವತ್ತು ವರ್ಷಗಳ ಕಾಲ ಎರಡನೇ ಪ್ರತಿವಾದಿಗೆ ಗುತ್ತಿಗೆ ಅವಧಿಯನ್ನು ನವೀಕರಿಸಿ ನೀಡುವಂತೆ ವಾದಿಗೆ ನಿರ್ದೇಶಿಸಬೇಕೆಂದು ಪ್ರಾರ್ಥಿಸಿದರು.
ಉಭಯ ಪಕ್ಷದಾರರ ವಾದವನ್ನು ಆಲಿಸಿದ ನ್ಯಾಯಾಲಯವು
- ಲೀಸ್ ಡೀಡ್ ಶರ್ತ ಪ್ರಕಾರ ಲೀಸ್ ಅವಧಿ ಮುಗಿದ ಮೇಲೆ ಯಾವುದೇ ರೀತಿಯ ಪರಿಹಾರ ಕೋರದೆ ಕಟ್ಟಡ ಸಹಿತ ಜಮೀನನ್ನು ಮೂಲ ಮಾಲಕರಿಗೆ ಮರಳಿಸತಕ್ಕದ್ದಾಗಿದೆ.
- ಉಭಯ ಪಕ್ಷಕಾರರು ಒಪ್ಪಿದ್ದಲ್ಲಿ ಮಾತ್ರ ಭೋಗ್ಯ/ಗುತ್ತಿಗೆ ಅವಧಿಯನ್ನು ನವೀಕರಿಸ ಬಹುದಾಗಿದೆ.
- ಮೂಲ ಮಾಲಕರು ನವೀಕರಣದ ಪ್ರಸ್ತಾವನೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿರುತ್ತಾರೆ.
- ಲೀಸ್ ಅವಧಿ ಮುಗಿದ ಬಳಿಕ ಲಾಭಾಂಶ ಉತ್ಪತ್ತಿ ಪಡೆಯಲು ವಾದಿಯು ಅರ್ಹರಾಗಿರುತ್ತಾರೆ. ದಿನವೊಂದಕ್ಕೆ ರೂಪಾಯಿ 50,000ದಂತೆ ಲಾಭಾಂಶ ಉತ್ಪತ್ತಿಯನ್ನು ವಾದಿಗೆ ನೀಡುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಿತು.
- ಗುತ್ತಿಗೆ/ಭೋಗ್ಯ ಅವಧಿಯ ನವೀಕರಣ ಕೋರಿ ಎರಡನೇ ಪ್ರತಿವಾದಿ ಎ.ಜೆ. ಶೆಟ್ಟಿ ಆ್ಯಂಡ್ ಕಂಪನಿಯು ಸಲ್ಲಿಸಿದ ದಾವೆಯನ್ನು ತಿರಸ್ಕರಿಸಿತು.
- ತೀರ್ಪಿನ ದಿನಾಂಕದಿಂದ 30 ದಿನಗಳ ಒಳಗೆ ಸ್ವಾಧೀನವನ್ನು ವಾದಿಗೆ ಬಿಟ್ಟು ಕೊಡುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಿತು.
ಎಂಬ ಅಂಶಗಳನ್ನು ಪರಿಗಣಿಸಿ ದಿನಾಂಕ 15-02-2018 ರಂದು ತೀರ್ಪು ನೀಡಿ ವಾದಿ ಸೈಂಟ್ ಆ್ಯಂಟನಿಸ್ ಚಾರಿಟೇಬಲ್ ಟ್ರಸ್ಟ್ ಸಲ್ಲಿಸಿದ ದಾವೆಯನ್ನು ಪುರಸ್ಕರಿಸಿತು.
ತೀರ್ಪಿನಿಂದ ಭಾದಿತರಾದ ಉಭಯ ಪಕ್ಷಕಾರರು ಮಾನ್ಯ ಕರ್ನಾಟಕ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದರು.
ಎ.ಜೆ. ಶೆಟ್ಟಿ ಆ್ಯಂಡ್ ಕಂಪನಿಯವರು ಸಲ್ಲಿಸಿದ ಮೇಲ್ಮನವಿ RFA 525/2018 ಹಾಗೂ ಸೈಂಟ್ ಆ್ಯಂಟನಿಸ್ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯವರು ಸಲ್ಲಿಸಿದ ಮೇಲ್ಮನವಿ RFA 2328/2019 ಎಂದು ನೊಂದಾಯಿಸಲ್ಪಟ್ಟಿತು.
ಲೀಸ್ ಡೀಡ್ ನವೀಕರಣ, ಲಾಭಾಂಶ ಉತ್ಪತ್ತಿಯನ್ನು ನೀಡುವ ಕುರಿತು ಉಭಯ ಪಕ್ಷಕಾರರ ವಾದವನ್ನು ಆಲಿಸಿದ ಮಾನ್ಯ ಕರ್ನಾಟಕ ಹೈಕೋರ್ಟ್ ನ ವಿಭಾಗೀಯ ಪೀಠವು ವಿಚಾರಣಾ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಮಧ್ಯ ಪ್ರವೇಶಿಸುವ ಯಾವುದೇ ಅಂಶಗಳು ಕಂಡುಬಾರದ ಹಿನ್ನೆಲೆಯಲ್ಲಿ ಮೇಲ್ಮನವಿಗಳನ್ನು ದಿನಾಂಕ 11-09-2024 ರಂದು ವಜಾಗೊಳಿಸಿತು.
ತೀರ್ಪಿನ ದಿನಾಂಕದಿಂದ 60 ದಿನಗಳೊಳಗೆ ಕಟ್ಟಡ ಸಹಿತ ಜಮೀನನ್ನು ಮೂಲ ಮಾಲಕರಿಗೆ ಮರಳಿಸತಕ್ಕದ್ದು ಎಂದು ಹೈಕೋರ್ಟ್ ಆದೇಶಿಸಿತು. ಆದರೂ ಎ.ಜೆ. ಶೆಟ್ಟಿ ಆ್ಯಂಡ್ ಕಂಪನಿಯು, ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿತು. ಇದೀಗ ಹೋಟೆಲ್ ಮೋತಿ ಮಹಲ್ ನ ಕಟ್ಟಡ ಸಹಿತ ಜಮೀನನ್ನು ಮೂಲ ಮಾಲಕರಿಗೆ ಒಪ್ಪಿಸಲು ಮುಂದಾಗಿದೆ.
ಲೀಸ್ ಅವಧಿ ಮುಗಿದ ಬಳಿಕವೂ ಸ್ವಾಧೀನವನ್ನು ಬಿಟ್ಟುಕೊಡದ ಕಾರಣಕ್ಕಾಗಿ ಪ್ರತಿವಾದಿ ಸುಮಾರು 11.50 ಕೋಟಿ ರೂಪಾಯಿಗಳನ್ನು ವಾದಿ ಸೈಂಟ್ ಆ್ಯಂಟನಿಸ್ ಚಾರಿಟೇಬಲ್ ಟ್ರಸ್ಟ್ ಗೆ ನೀಡಲಿದೆ.
2011ರಿಂದ ಮೂಲ ಮಾಲಕರ ಸುಪರ್ದಿಗೆ ಸೇರಬೇಕಿದ್ದ ಮಂಗಳೂರಿನ ಪ್ರತಿಷ್ಠಿತ ಹೋಟೆಲ್ ಮೋತಿ ಮಹಲ್, 2025 ಎಪ್ರಿಲ್ 30ರ ಒಳಗೆ ಸೇರಲಿದೆ. ಸೈಂಟ್ ಆ್ಯಂಟನಿಸ್ ಚಾರಿಟೇಬಲ್ ಟ್ರಸ್ಟ್ ಪರವಾಗಿ ಮಂಗಳೂರಿನ ಪ್ರತಿಷ್ಠಿತ ವಕೀಲರಾದ ಎಂ.ಪಿ. ನೊರೊನ್ಹಾರವರು ಮಂಗಳೂರಿನ ವಿಚಾರಣಾ ನ್ಯಾಯಾಲಯದಲ್ಲಿ ವಾದಿಸಿದ್ದರು.