October 31, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕರಿಯಂಗಳ ಗ್ರಾಮದ ಪೊಳಲಿ ಬಳಿ  ಪುನಶ್ಚೇತನ ಗೊಂಡಿರುವ ಕಾಳಿ ಸರೋವರದ ಹಸ್ತಾಂತರ ಕಾರ್ಯಕ್ರಮ

ನಮ್ಮ ಊರು ನಮ್ಮ ಕೆರೆ ಯೋಜನೆಯಡಿ ಕೆರೆ, ಸರೋವರಗಳು ಉತ್ತಮ ರೀತಿಯಲ್ಲಿ ಅಭಿವೃದ್ಧಿಯಾಗುತ್ತಿದೆ. ಇದರಿಂದಾಗಿ ಸ್ಥಳೀಯ ಬೋರ್‌ವೆಲ್ ಹಾಗೂ ಬಾವಿಗಳಲ್ಲಿ ನೀರು ಮರುಪೂರಣಗೊಂಡಿದೆ. ಅನೇಕ ಕೆರೆಗಳು ಹೂಳು ತುಂಬಿ ಮುಚ್ಚಿಹೋಗಿ ಕ್ರಿಕೆಟ್ ಮೈದಾನದಂತಾಗಿದ್ದು, ರಾಜ್ಯದ್ಯಂತ ಅತಂಹ ಕೆರೆಗಳನ್ನು ಜನರ ಸಹಕಾರದೊಂದಿಗೆ ಪುನರುಜ್ಜೀವನಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ, ಕರಿಯಂಗಳ ಗ್ರಾಮ ಪಂಚಾಯತಿ ಮತ್ತು ಕೆರೆ ಅಭಿವೃದ್ಧಿ ಸಮಿತಿ ಕರಿಯಂಗಳ ಇದರ ಸಹಯೋಗದೊಂದಿಗೆ ಕರಿಯಂಗಳ ಗ್ರಾಮದ ಪೊಳಲಿ ಬಳಿ ಪುನಶ್ಚೇತನ ಗೊಂಡಿರುವ ಕಾಳಿ ಸರೋವರದ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೆರೆಗೆ ಬಾಗಿನ ಅರ್ಪಿಸಿ ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದು ಎಲ್ಲಾ ಕಡೆ ನೀರಿನ ಕೊರತೆ ಎದುರಾಗಿದೆ. ದಕ್ಷಿಣ ಕನ್ನಡ ಜಿಲೆಯಲ್ಲಿ ಸಾಕಷ್ಟು ಮಳೆಯಾದರೂ ಕೂಡ ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗುತ್ತದೆ. ಮನೆಯ ಮುಂದೆ ನಳ್ಳಿ ಇದ್ದರೂ ಅದರಲ್ಲಿ ನೀರೆ ಬಾರದಿದ್ದರೆ ಏನು ಪ್ರಯೋಜನ? ಈ ವಿಚಾರವನ್ನು ಮುಂದಿಟ್ಟುಕೊಂಡು ಶ್ರೀಕ್ಷೇತ್ರ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಕೆರೆ ಪುನಶ್ಚೇತನಗೊಳಿಸಿ ಜಲಸಂಪನ್ಮೂಲವನ್ನು ಉಳಿಸುವ ಕಾರ್ಯ ನಡೆಸಲಾಗುತ್ತಿದೆ. ಕೆರೆಯಿಂದ ಮೇಲೆತ್ತಿದ ಫಲವತ್ತಾದ ಮಣ್ಣನ್ನು ಜನರು ತಮ್ಮ ಕೃಷಿ ಜಮೀನಿಗೆ ಬಳಸುವುದರಿಂದ ಆ ಭೂಮಿಯೂ ಫಲವತ್ತಾಗುತ್ತದೆ ಎಂದರು. ಮುಂದಿನ ದಿನಗಳಲ್ಲಿ ಈ ಕೆರೆಯಲ್ಲೂ ಹೂಳು ತುಂಬಿಕೊಳ್ಳದಂತೆ ರಕ್ಷಿಸುವ ಜವಬ್ದಾರಿ ಗ್ರಾಮಸ್ಥರಿಗಿದ್ದು ಕೆರೆ ನೀರಿನಿಂದ ಸಮೃದ್ಧವಾಗಲಿ ಎಂದು ಹಾರೈಸಿದರು.

ಬಂಟ್ವಾಳ ಶಾಸಕ ರಾಜೇಶ್ ನಾಕ್ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ದೂರದೃಷ್ಟಿ ಯೋಜನೆಯಿಂದಾಗಿ ಕಾಳಿ ಕೆರೆ ಉತ್ತಮವಾಗಿ ಅಭಿವೃದ್ದಿಯಾಗಿದು ಅದನ್ನು ಉಳಿಸುವ ಕಾರ್ಯ ನಮ್ಮೆಲ್ಲರ ಮೇಲಿದೆ ಎಂದರು. ಇಂದು ತಾಲೂಕಿನಾದ್ಯಂತ ನದಿಗಳಿಗೆ ಅಲ್ಲಲ್ಲಿ ಚೆಕ್‌ಡ್ಯಾಂ ನಿರ್ಮಿಸಿದ ಪರಿಣಾಮ ಕೆರೆ, ಬಾವಿಗಳಲ್ಲಿ ನೀರು ತುಂಬಿಕೊಂಡಿದೆ. ನೀರಿನ ವ್ಯವಸ್ಥೆ ಉತ್ತಮವಾಗಿದ್ದರೆ ಕೃಷಿ ಕೆಲಸಗಳು ಹೆಚ್ಚಾಗುತ್ತದೆ. ಇಂತಹ ಕೆಲಸ ೨೫ ವರ್ಷದ ಹಿಂದೆಯೇ ನಡೆಯುತ್ತಿದ್ದರೆ ನಮ್ಮ ಕೃಷಿ ಭೂಮಿಗಳು ಉಳಿಯುತ್ತಿತ್ತು ಎಂದು ತಿಳಿಸಿದರು. ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ ಭೂಮಿಯಲ್ಲಿ ಅಂತರ್ಜಲವನ್ನು ಹೆಚ್ಚಿಸುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆರೆಗಳ ಹೂಳೆತ್ತಿ ಪುನರುಜ್ಜೀವನಗೊಳಿಸುವ ಕಾರ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡುತ್ತಿದೆ ಎಂದು ತಿಳಿಸಿದರು.

ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ ಮಾತನಾಡಿ ಜಿಲ್ಲೆಯ ಒಂದೆರಡು ಕೆರೆಗಳನ್ನು ಅಭಿವೃದ್ಧಿ ಪಡಿಸಬೇಕು ಎನ್ನುವ ನಮ್ಮ ಆಶಯ ಇಂದು ನಿರಂತರವಾಗಿ ಸಾಗಿ ರಾಜ್ಯದಂತ್ಯ ಒಂದು ಸಾವಿರ ಕೆರೆಗಳನ್ನು ಪುನರುಜ್ಜೀವನಗೊಳಿಸುವ ಹಂತಕ್ಕೆ ತಲುಪಿದೆ. ನೀರು ಮನುಷ್ಯರಿಗೆ ಮಾತ್ರವಲ್ಲದೆ ಸಕಲ ಜೀವ ಸಂಕುಲಕ್ಕೆ ಅಗತ್ಯವಾಗಿ ಬೇಕು. ನಗರೀಕರಣದಿಂದಾಗಿ ಕೆರೆಗಳನ್ನು ಮುಚ್ಚಿ ಕಟ್ಟಡ ನಿರ್ಮಿಸಲಾಗುತ್ತಿದೆ. ಕೆರೆಗಳನ್ನು ಕಳಕೊಂಡ ಮೇಲೆ ಅದರ ಬೆಲೆ ಅರಿವಾಗುತ್ತದೆ. ಇಂದು ಕೊಳವೆ ಬಾವಿ ಕೊರೆದರೂ ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ತಿಳಿಸಿದರು. ಕೆರೆ ಹಬ್ಬ, ಬಾಗಿನ ಅರ್ಪಣೆ ಮುಂತಾದ ಕಾರ್ಯಕ್ರಮಗಳನ್ನು ವರ್ಷಕ್ಕೊಮ್ಮೆ ಹಮ್ಮಿಕೊಳ್ಳುವುದರಿಂದ ಕೆರೆಯ ಸ್ಥಿತಿಗತಿಯನ್ನು ನೋಡಿಕೊಳ್ಳಲು ಸಾಧ್ಯವಿದೆ. ಇದೊಂದು ಶಾಶ್ವತವಾದ ಕೆಲಸವಾಗಿದ್ದು ಈ ಕೆಲಸದಿಂದ ಸಿಗುವ ಸಂತೃಪ್ತಿ ಎಲ್ಲಿಯೂ ಸಿಗಲು ಸಾಧ್ಯವಿಲ್ಲ ಎಂದರು.

ಕರಿಯಂಗಳ ಗ್ತಾಮ ಪಂಚಾಯತ್ ಅಧ್ಯಕ್ಷೆ ರಾಧ ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಪೊಳಲಿ ಶ್ರೀರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ, ಕ್ಷೇಮವನ ಟ್ರಸ್ಟ್‌ನ  ಶ್ರದ್ಧಾ ಅಮಿತ್,  ಎಂ.ಆರ್.ಪಿ.ಎಲ್‌.ನ ಮುಖ್ಯಪ್ರಬಂಧಕ  ಪ್ರದೀಪ್ ಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪೊಳಲಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವೆಂಕಟೇಶ್ ನಾವಡ, ಬೂಡ ಅಧ್ಯಕ್ಷ ಬೇಬಿ ಕುಂದರ್, ಎಂಜಿನಿಯರ್ ತಾರಾನಾಥ ಜೆ. ಸಾಲ್ಯಾನ್, ಉದ್ಯೋಗ ಖಾತ್ರಿ ಯೋಜನೆಯ ಎಂಜಿನಿಯರ್ ಸುಶಾಂತ್, ಗುತ್ತಿಗೆದಾರ ಅಬೂಬಕ್ಕರ್, ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ರೊನಾಲ್ಡ್ ಡಿಸೋಜ, ಕರಿಯಂಗಳ ಗ್ರಾಮ ಪಂಚಾಯತಿ ಉಪಾಧ್ಯಕ್ಷ ರಾಜು ಕೋಟ್ಯಾನ್, ಪಿಡಿಓ ವಸಂತಿ, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಸಚಿನ್ ಕುಮಾರ್, ಹಿಂದಿನ ಪಿಡಿಓ ಮಾಲಿನಿ ಉಪಸ್ಥಿತರಿದರು.

ಕರಿಯಂಗಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಹಾಸ ಪಲ್ಲಿಪ್ಪಾಡಿ ಸ್ವಾಗತಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ. ವಂದಿಸಿದರು. ಜನಜಾಗೃತಿ ವೇದಿಕೆ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಗಣೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

You may also like

News

ನವೆಂಬರ್ 2ರಂದು ಮಂಗಳೂರು ಆಟೋರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘದ ಸುವರ್ಣ ಮಹೋತ್ಸವ

ಐತಿಹಾಸಿಕ 50 ವರ್ಷದ ಪಯಣ MLC ಐವನ್ ಡಿಸೋಜ ನೇತೃತ್ವದಲ್ಲಿ ಪತ್ರಿಕಾ ಗೋಷ್ಠಿ ಮಂಗಳೂರು ಆಟೋರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮವು
News

ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿಯವರ ಬಗ್ಗೆ ಅಸಭ್ಯ ಪೋಸ್ಟ್

ಸುಳ್ಯ ಪೊಲೀಸರಿಂದ ಆರೋಪಿ ಬರಿಮಾರು ಪುರುಷೋತ್ತಮ ಆಚಾರ್ಯನ ಬಂಧನ ಸಾಮಾಜಿಕ ಜಾಲತಾಣ Facebook ನಲ್ಲಿ “Purush Acharya” ಎಂಬ ಖಾತೆಯಿಂದ ದಸರಾ ಉದ್ಘಾಟನೆ ಮಾಡಿದ ಬಾನು ಮುಸ್ತಾಕ್

You cannot copy content of this page