ಮೊಗರ್ನಾಡ್ ಚರ್ಚ್ ನಲ್ಲಿ ಪ್ರಥಮ ಪರಮ ಪ್ರಸಾದದ ಸಂಭ್ರಮ
ದೇವಮಾತೆಗೆ ಸಮರ್ಪಿಸಿದ ಮೊಗರ್ನಾಡ್ ಧರ್ಮಕೇಂದ್ರದವು 250ನೇ ಜ್ಯುಬಿಲಿ ಆಚರಿಸುವ ಸಂದರ್ಭದಲ್ಲಿ ಮೇ 11ರಂದು ಆದಿತ್ಯವಾರ ದೇವಾಲಯದ ವ್ಯಾಪ್ತಿಗೆ ಒಳಪಟ್ಟ 26 ಪುಟ್ಟ ಮಕ್ಕಳು ತಮ್ಮ ಜೀವಿತದಲ್ಲಿ ಮೊದಲ ಬಾರಿಗೆ ಪರಮ ಪ್ರಸಾದ ಸ್ವೀಕಾರ ಮಾಡುವ ಸಂಭ್ರಮವು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಗ್ಗೆ 8ಗಂಟೆಗೆ ದಿವ್ಯ ಬಲಿಪೂಜೆ ನಡೆಯಿತು. ಪ್ರಧಾನ ಧರ್ಮಗುರುಗಳಾಗಿ ಎಪ್ರಿಲ್ 30ರಂದು ಗುರುದೀಕ್ಷೆ ಪಡೆದ ನವ ಯಾಜಕ ವಂದನೀಯ ಫಾದರ್ ಮೆಲ್ವಿನ್ ಡಿಸೋಜ ಆಗಮಿಸಿದ್ದರು. ಇವರು ಇತರ ಯಾಜಕರಾದ ಚರ್ಚ್ ಧರ್ಮಗುರು ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊ, ದೇವಮಾತಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ವಂದನೀಯ ಫಾದರ್ ನವೀನ್ ಪ್ರಕಾಶ್ ಪಿಂಟೊ, ವಂದನೀಯ ಫಾದರ್ ಆಸ್ಟಿನ್ ಫೆರ್ನಾಂಡಿಸ್ ಮತ್ತು ಉರ್ವಾ ಚರ್ಚ್ ಪ್ರಧಾನ ಧರ್ಮಗುರು ವಂದನೀಯ ಫಾದರ್ ಬೆಂಜೆಮಿನ್ ಪಿಂಟೊ ಇವರೊಂದಿಗೆ ಬಲಿಪೂಜೆಯನ್ನು ನಡೆಸಿಕೊಟ್ಟರು.

ಪ್ರವಚನದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಫಾದರ್ ಮೆಲ್ವಿನ್, ಮೊದಲ ಬಾರಿ ಪರಮ ಪ್ರಸಾದವನ್ನು ಸ್ವೀಕರಿಸುವಾಗ ಮಕ್ಕಳಲ್ಲಿ ಇರುವ ಸಂತೋಷವು ಜೀವನದ ಅಂತ್ಯದವರೆಗೂ ಅದೇ ಉತ್ಸಾಹ ಇರಬೇಕು. ಸುಖ-ದುಃಖಗಳಲ್ಲೂ ಯೇಸುವನ್ನು ಹಿಂಬಾಲಿಸಬೇಕು. ಪ್ರಭು ಯೇಸುವಿನಲ್ಲಿ ವಿಶ್ವಾಸ ಇಡುವವನು ಯಾವಾಗಲೂ ನಾಚಿಗೆಗೆ ಒಳಪಡುವುದಿಲ್ಲ ಎಂದು ಹೇಳಿದರು.


ಮೊದಲ ಬಾರಿ ಪರಮ ಪ್ರಸಾದ ಸ್ವೀಕರಿಸಿದ 26 ಮಕ್ಕಳು ಹಾಡಿನ ಮುಕಾಂತರ ದೇವರಿಗೆ ಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ನವ ಯಾಜಕ ಫಾದರ್ ಮೆಲ್ವಿನ್ ಡಿಸೋಜರವರಿಗೆ ಶಾಲು ಹೊದಿಸಿ, ಪುಷ್ಪಗಳನ್ನು ನೀಡಿ ಸನ್ಮಾನಿಸಲಾಯಿತು. ಹಾಗೆಯೇ ಕಳೆದ 11 ವರುಷಗಳಿಂದ ಸಂತ ಆಂತೋನಿ ಹಿರಿಯ ಪ್ರಾಥಮಿಕ ಶಾಲೆ ಆಮ್ಟೂರು ಇಲ್ಲಿ ಸಹ ಶಿಕ್ಷಕಿಯಾಗಿ ನಿಷ್ಠಾವಂತ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಭಗಿನಿ ಲೂಸಿ ಗ್ರೆಟ್ಟಾ ಡಿಸೋಜ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಚರ್ಚ್ ಧರ್ಮಗುರು ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊ ಮೊದಲ ಬಾರಿ ಪರಮ ಪ್ರಸಾದ ಸ್ವೀಕರಿಸಿದ ಎಲ್ಲಾ ಮಕ್ಕಳಿಗೆ ಅವರ ಪೋಷಕರಿಗೆ ಶುಭ ಹಾರೈಸಿದರು. ಈ ಪವಿತ್ರ ದಿನವನ್ನು ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲಾ ದಾನಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಚರ್ಚ್ ಉಪಾಧ್ಯಕ್ಷ ಸಂತೋಷ್ ಡಿಸೋಜ, ಕಾರ್ಯದರ್ಶಿ ವಿಲ್ಫ್ರೆಡ್ ಲೋಬೊ, ಆಯೋಗಗಳ ಸಂಯೋಜಕಿ ಎಮಿಲಿಯಾನಾ ಡಿಕುನ್ಹಾ, ಚರ್ಚ್ ಪಾಲನಾ ಸಮಿತಿಯ ಸದಸ್ಯರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

ಮೊದಲ ಬಾರಿ ಪರಮ ಪ್ರಸಾದ ಸ್ವೀಕರಿಸಿದ ಮಕ್ಕಳಿಗೆ ಚರ್ಚ್ ಧರ್ಮಗುರು ಅನಿಲ್ ಕೆನ್ಯೂಟ್ ಡಿಮೆಲ್ಲೊ ಪ್ರಮಾಣ ಪತ್ರಗಳನ್ನು ವಿತರಿಸಿದರು. ಮಕ್ಕಳಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.




