ಇಂದು ಮಂಗಳೂರಿನಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ಪ್ರಜಾಸೌಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆ
ಮಂಗಳೂರಿನ ಪಡೀಲ್ ಎಂಬಲ್ಲಿ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದ ಹತ್ತಿರ ಇಂದು ಮೇ 16ರಂದು ಶುಕ್ರವಾರ ಅಪರಾಹ್ನ 3:30 ಗಂಟೆಗೆ ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಇವರ ದಿವ್ಯ ಹಸ್ತದಲ್ಲಿ ನೂತನವಾಗಿ ನಿರ್ಮಾಣಗೊಂಡ ದಕ್ಷಿಣ ಕನ್ನಡ ಜಿಲ್ಲಾ ಆಡಳಿತ ಕೇಂದ್ರ “ಪ್ರಜಾಸೌಧ” ದ ಉದ್ಘಾಟನೆ ಹಾಗೂ ನನ್ನ ಭೂಮಿ ಪಹಣಿ ವಿತರಣಾ ಸಮಾರಂಭವು ನಡೆಯಲಿದೆ.

ಜಿಲ್ಲಾಡಳಿತ ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ ಗ್ರಹ ಮಂಡಳಿ ಮಂಗಳೂರು ಹಾಗೂ ಸ್ಮಾರ್ಟ್ ಸಿಟಿ ಮಂಗಳೂರು – ಸಂಯುಕ್ತ ಆಶ್ರಯದಲ್ಲಿ ನಡೆಯುವ ಸಮಾರಂಭದಲ್ಲಿ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್, ಕರ್ನಾಟಕ ವಿಧಾನಸಭಾಧ್ಯಕ್ಷರಾದ ಸನ್ಮಾನ್ಯ ಯು.ಟಿ. ಖಾದರ್ ಉಪಸ್ಥಿತರಿರುವರು. ಕಂದಾಯ ಸಚಿವ ಕೃಷ್ಣ ಭೈರೇಗೌಡ, ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ್ ಹಾಗೂ ಗ್ರಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಇವರು ಅವ್ಹಹಾನಿತರಾಗಿದ್ದಾರೆ. ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ.



ಪೋಡಿ ಮುಕ್ತ ಅಭಿಯಾನದಡಿ 7,000 ಫಲಾನುಭವಗಳಿಗೆ ಕಂದಾಯ ಇಲಾಖೆಯ ದಾಖಲೆಗಳನ್ನು ವಿತರಿಸಲಾಗುವುದು. ಒಂದೇ ಸೂರಿನಡಿ ಸಕಲ ಸರಕಾರಿ ಸೇವೆಗಳನ್ನು ನೀಡಲು 23 ಇಲಾಖೆಗಳನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತಿದೆ. 75 ಕೋಟಿ ರೂಪಾಯಿ ವೆಚ್ಚದಲ್ಲಿ ಪಾರಂಪರಿಕ ಶೈಲಿಯಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣವಾಗಿದೆ. 2,53,159.67 ಚದರ ಅಡಿ ವಿಸ್ತೀರ್ಣದ ಈ ಕಟ್ಟಡದ ತಳ ಮಹಡಿಯಲ್ಲಿ ಮಂಗಳೂರು ಒನ್ ಕಚೇರಿ, ಸಾಂಖ್ಯಿಕ ಇಲಾಖೆ, ಅಂಚೆ ಕಚೇರಿ, ಪೊಲೀಸ್ ಚೌಕಿ, ಕ್ಯಾಂಟೀನ್, ಬ್ಯಾಂಕ್ ಖಜಾನೆ, ಮತ್ತು ಭದ್ರತಾ ಕೊಠಡಿ ಜಿಲ್ಲಾ ಆರೋಗ್ಯ ಕೇಂದ್ರ, ದಾಸ್ತಾನು ಕೊಠಡಿ ಹಾಗೂ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತವನ್ನು ಹೊಂದಿರಲಿದೆ.

ಪ್ರಥಮ ಮಹಡಿಯಲ್ಲಿ – ಭೂ ದಾಖಲೆಗಳ ಉಪನಿರ್ದೇಶಕರ ಕಚೇರಿ, ಸಹಾಯಕ ಆಯುಕ್ತರ ಕಚೇರಿ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆ, ಕಂದಾಯ ಇಲಾಖೆ, ದಾಸ್ತಾನು ಕೊಠಡಿ, ಭೂಮಿ ಶಾಖೆ, ಕೆಎಸ್‌ಡಬ್ಲ್ಯೂಎನ್, ರಾಷ್ಟ್ರೀಯ ಮಾಹಿತಿ ಕೇಂದ್ರ, ಆಡಳಿತ ಶಾಖೆ, ಅಪರ ಡಿಸಿ ಕಚೇರಿ, ಸಭಾಂಗಣ, ಡಿ.ಸಿ. ಕೊಠಡಿ, ಜಿಲ್ಲಾಧಿಕಾರಿ ನ್ಯಾಯಾಲಯ, ದಂಡನಾ ಶಾಖೆ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಮುಜರಾಯಿ ತಹಶೀಲ್ದಾರರು, ಮುಜರಾಯಿ ಶಾಖೆ, ತೀರಿಕೆ ಶಾಖೆ, ಕ್ಲಿಯರೆನ್ಸ್ ಸೆಕ್ಷನ್, ಜಿಲ್ಲಾ ನಗರ ಅಭಿವೃದ್ಧಿ ಕೋಶ, ಚುನಾವಣಾ ಶಾಖೆ, ಕಾನೂನು ಶಾಖೆ, ಶಿಷ್ಟಾಚಾರ ಶಾಖೆ ಕೊಠಡಿಗಳನ್ನು ಹೊಂದಿರಲಿದೆ.

ಎರಡನೇ ಮಹಡಿಯಲ್ಲಿ ಕರ್ನಾಟಕ ಸರಕಾರಿ ವಿಮಾ ಇಲಾಖೆ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಅಭಿಲೇಕಖಾಲಯ -1,2,3; ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಸರಕಾರಿ ವಿಮಾ ಇಲಾಖೆ, ಪಿಂಚಣಿ ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣಾ ಇಲಾಖೆ, ಕರ್ನಾಟಕ ರಾಜ್ಯ ಅರಣ್ಯ ಇಲಾಖೆ, ಕೈಗಾರಿಕಾ ನಿಗಮ, ಅರಣ್ಯ ಜೀವಸ್ಥಿತಿ ಮತ್ತು ಪರಿಸರ ಇಲಾಖೆ, ಹಿಂದೂ ಧಾರ್ಮಿಕ ದತ್ತಿ, ಅಭಿಲೇಖಾಲಯ, ನಿರ್ಮಿತಿ ಕೇಂದ್ರ ಅರಣ್ಯ ಕೈಗಾರಿಕಾ ನಿಗಮ, ಅರಣ್ಯ ವ್ಯವಸ್ಥಾಪನಾಧಿಕಾರಿಯವರ ಕಚೇರಿ, ಸಭಾಂಗಣ ದಾಸ್ತಾನು ಕೊಠಡಿಯನ್ನು ಹೊಂದಿರಲಿದೆ.




ಈಗಾಗಲೇ ಸ್ಟೇಟ್ ಬ್ಯಾಂಕ್ ಪಕ್ಕದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಕೊಠಡಿಗಳಿಂದ, ವಿವಿಧ ಇಲಾಖೆಗಳು ತಮ್ಮ ಕಡತಗಳೊಂದಿಗೆ ನೂತನ ಜಿಲ್ಲಾಧಿಕಾರಿ ಕಚೇರಿಗೆ ಸ್ಥಳಾಂತರ ಗೊಳ್ಳುವ ಪ್ರಕ್ರಿಯೆಯು ನಡೆಯುತ್ತಿದೆ.




