ಬಂಟ್ವಾಳ ಕಂಚಿನಡ್ಕ ಬಳಿ ಲಾರಿಗಳ ನಡುವೆ ಅಪಘಾತ – ಬಿಸಿ ಜಲ್ಲಿ ಮಿಶ್ರಿತ ಡಾಮಾರು ಬಿದ್ದು ಚಾಲಕ ಸಾವು
ಕಂಚಿನಡ್ಕ ಪದವು ಎಂಬಲ್ಲಿ ಕೆಂಪು ಕಲ್ಲುಗಳನ್ನು ಸಾಗಿಸುತ್ತಿದ್ದ ಲಾರಿ ಸಜಿಪನಾಡು ಕಡೆಗೆ ಹೋಗುತ್ತಿದ್ದಾಗ ಹಿಂದಿನಿಂದ ಬಿಸಿ ಬಿಟುಮಿನ್ ಸಾಗಿಸುವ ಲಾರಿ ಚಾಲಕನ ನಿರ್ಲಕ್ಷ್ಯತನದ ಚಾಲನೆಯಿಂದಾಗಿ ಡಿಕ್ಕಿ ಹೊಡೆದು ಲಾರಿ ಚಾಲಕ ಸಾವನ್ನಪ್ಪಿದ ಘಟನೆ ನಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಲಾರಿ ಚಾಲಕನ ಮೇಲೆ ಬಿಸಿ ಜಲ್ಲಿ ಮಿಶ್ರಿತ ಡಾಮಾರು ಬಿದ್ದ ಪರಿಣಾಮ ಸಾವನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಕಂಚಿನಡ್ಕ ಬಳಿ ನಡೆದಿದೆ. ಮೃತರನ್ನು ಸಜೀಪನಡು ಗೋಳಿಪಡ್ಪು ನಿವಾಸಿ 45 ವರ್ಷ ಪ್ರಾಯದ ರಫೀಕ್ ಎಂದು ಗುರುತಿಸಲಾಗಿದೆ.

ಲಾರಿಯಲ್ಲಿದ್ದ ಕ್ಲೀನರ್ ಯೂಸುಫ್ ಎಂಬಾತನ ಕೈ ಕಾಲುಗಳ ಮೇಲೆ ಡಾಮರು ಬಿದ್ದಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೊಂದು ಲಾರಿಯ ಚಾಲಕ ರಿಜ್ವಾನ್ ಹಾಗೂ ಅಲ್ಪಾಸ್ ಎಂಬವರಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ಪರಿಣಾಮ ಎಷ್ಟು ತೀವ್ರವಾಗಿತ್ತೆಂದರೆ ಎರಡೂ ಟಿಪ್ಪರ್ ಲಾರಿಗಳು ಪಲ್ಟಿಯಾಗಿ ರಸ್ತೆಯ ಬದಿಯಲ್ಲಿರುವ ಅಡಿಕೆ ತೋಟದಲ್ಲಿ ಪಲ್ಟಿಯಾಗಿ ಬಿದ್ದಿದೆ.

ಟಿಪ್ಪರ್‌ನಲ್ಲಿ ಸಂಗ್ರಹಿಸಲಾದ ಜಲ್ಲಿಕಲ್ಲು ಮಿಶ್ರಿತ ಬಿಸಿ ಡಾಮಾರು ಕೆಂಪು ಕಲ್ಲು ತುಂಬಿದ ಲಾರಿಯ ಚಾಲಕನ ಮೇಲೆ ಚೆಲ್ಲಿದ ಕಾರಣ ಅವರ ಮೈ ಸಂಪೂರ್ಣ ಬೆಂದು ಹೋಗಿದೆ. ಅವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ರಫೀಕ್ ಜೊತೆಗಿದ್ದ ಕ್ಲೀನರ್ ಯೂಸುಫ್ ಅವರ ಮೇಲೂ ಬಿಸಿ ಡಾಮಾರು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.




