ಕರುಂಬಿತ್ತಿಲ್ ಶಿಬಿರ ರಜತ ಮಹೋತ್ಸವ ಆಚರಣೆ
ಮೇ 20 ರಿಂದ ಮೇ 25 ರವರೆಗೆ ಕರುಂಬಿತ್ತಿಲ್ ಶಿಬಿರ

ಕರುಂಬಿತ್ತಿಲ್ ಎಂಬ ಪ್ರಶಾಂತ ವಾತಾವರಣದಲ್ಲಿ ಪ್ರತೀ ಮೇ ತಿಂಗಳಲ್ಲಿ ಒಂದು ಪುಟ್ಟ ಸಂಗೀತ ಲೋಕವೇ ಸೃಷ್ಟಿಯಾಗುತ್ತದೆ. ಮನೆಯ ಸುತ್ತಮುತ್ತಲೂ ಸಂಗೀತದ ವಾತಾವರಣವೇ, ಮೂಲೆಮೂಲೆಗಳಲ್ಲೂ ಸಂಗೀತವು ಮಾರ್ದನಿಸುತ್ತದೆ. ಕಳೆದ 25 ವರ್ಷಗಳಿಂದ, ಅಂದರೆ, 2000 ನೇ ವರ್ಷದಿಂದ ಧರ್ಮಸ್ಥಳದ ನಿಡ್ಲೆ ಎಂಬ ಪುಟ್ಟ ಗ್ರಾಮದಲ್ಲಿ ‘ಕರುಂಬಿತ್ತಿಲ್ ಶಿಬಿರ’ ಎನ್ನುವ ಹೆಸರಿನಲ್ಲಿ ಪ್ರತಿ ವರ್ಷವೂ ಸಂಗೀತ ಶಿಬಿರವು ನಡೆಯುತ್ತಿದೆ. ಈ ಬಾರಿಯ ಶಿಬಿರವು ಮೇ 20 ರಿಂದ ಮೇ 25 ರವರೆಗೆ ನಡೆಯಲಿದೆ. ಕರುಂಬಿತ್ತಿಲ್ ಕುಟುಂಬವೇ ಒಂದು ಸಂಪೂರ್ಣ ಸಂಗೀತಮಯವಾದ ಕುಟುಂಬ. ಪ್ರಖ್ಯಾತ ಪಿಟೀಲು ವಿದ್ವಾಂಸರಾದ ವಿಠ್ಠಲ ರಾಮಮೂರ್ತಿ ಚೆನ್ನೈ ಹಾಗೂ ಅವರ ಸಹೋದರಿಯರು ಸೇರಿ ಕುಟುಂಬ ಸಮಾರಂಭದಂತೆ ಆರಂಭಗೊಂಡ ಈ ಸಂಗೀತ ಶಿಬಿರವು ಇದೀಗ ಸರ್ವ ಸಂಗೀತ ವಿದ್ಯಾರ್ಥಿಗಳು ಕಾತರದಿಂದ ಕಾಯುವ ಸಂಗೀತ ಶಿಬಿರವಾಗಿ ಮಾರ್ಪಟ್ಟಿದೆ. ಕೇವಲ ಕೆಲವೇ ವಿದ್ಯಾರ್ಥಿಗಳಿಂದ ಆರಂಭಗೊಂಡ ಈ ಕರುಂಬಿತ್ತಿಲ್ ಶಿಬಿರವು ಇದೀಗ 200ಕ್ಕೂ ಮಿಕ್ಕಿ ವಿದ್ಯಾರ್ಥಿಗಳನ್ನೊಳಗಂಡ ಬೃಹತ್ ಶಿಬಿರವಾಗಿ ಮಾರ್ಪಟ್ಟಿದೆ.




ಈ ಶಿಬಿರದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ಇತರ ದೂರದೂರಿಂದಲೂ, ವಿದೇಶದಿಂದಲೂ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಒಮ್ಮೆ ಭಾಗವಹಿಸಿದ ಶಿಬಿರಾರ್ಥಿಯು ಮುಂಬರುವ ಶಿಬಿರಗಳಲ್ಲೂ ಭಾಗವಹಿಸಲು ಕಾತರದಿಂದ ಕಾಯುತ್ತಾನೆ. ಪ್ರತಿಯೊಬ್ಬ ಶಿಬಿರಾರ್ಥಿಯೂ ಹಾಗೂ ಭಾಗವಹಿಸುವ ಪ್ರತಿಯೊಬ್ಬ ಕಲಾವಿದನೂ ಕೂಡ ಕರುಂಬಿತ್ತಿಲ್ ಕುಟುಂಬದ ಸದಸ್ಯನೇ ಆಗಿ ಹಿಂತಿರುಗುತ್ತಾನೆ. ಇದು ಈ ಶಿಬಿರದ ಸವಿಶೇಷತೆ. ವಿಶ್ವ ವಿಖ್ಯಾತ ಕಲಾವಿದರಾದ ಲಾಲ್ಗುಡಿ ಜಿ. ಜಯರಾಮನ್, ವಿದ್ವಾನ್ ಬಾಲಮುರಳಿಕೃಷ್ಣ, ವಿದ್ವಾನ್ ಉಮಯಾಳಪುರಂ ಶಿವರಾಮನ್, ವಿದ್ವಾನ್ ಟಿ. ವಿ. ಗೋಪಾಲಕೃಷ್ಣ, ವಿದ್ವಾನ್ ಎಂ. ಚಂದ್ರಶೇಖರ್, ವಿದ್ವಾನ್ ವಿ. ವಿ. ಸುಬ್ರಹ್ಮಣ್ಯಂ, ವಿದ್ವಾನ್ ಟಿ.ಎಂ. ಕೃಷ್ಣ, ವಿದುಷಿ ಬಾಂಬೆ ಜಯಶ್ರೀ, ವಿದ್ವಾನ್ ನೈವೇಲಿ ಸಂತಾನಗೋಪಾಲನ್, ವಿದುಷಿ ಸೌಮ್ಯ , ವಿದ್ವಾನ್ ವಿಜಯಶಿವ, ಮುಂತಾದವರು ಈ ಶಿಬಿರಕ್ಕೆ ಭೇಟಿ ನೀಡಿ ಬಹಳ ಸಂತೋಷ ಪಟ್ಟುಕೊಂಡಿದ್ದಾರೆ.


ಈ ವರ್ಷದ ಕರುಂಬಿತ್ತಿಲ್ ಶಿಬಿರವು ಮೇ 20 ನೇ ತಾರೀಖಿನಂದು ಆರಂಭಗೊಳ್ಳಲಿದೆ. ಈ ಸಲದ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ, ವಿದುಷಿ ಆರ್. ಎನ್. ಶ್ರೀಲತಾ, ವಿದ್ವಾನ್ ನೈವೇಲಿ ಆರ್. ಸಂತಾನಗೋಪಾಲನ್, ವಿದ್ವಾನ್ ಹೊಸಹಳ್ಳಿ ವೆಂಕಟ್ರಾಮ್, ವಿದ್ವಾನ್ ಪ್ರೊ. ವಿ. ವಿ. ಸುಬ್ರಹ್ಮಣ್ಯಂ, ವಿದ್ವಾನ್ ನಾಗೈ ಮುರಳೀಧರನ್, ವಿದ್ವಾನ್ ಶ್ರೀಮುಷ್ಣಮ್ ವಿ. ರಾಜಾರಾವ್, ವಿದ್ವಾನ್ ಮಾರುತಿ ಪ್ರಸಾದ್, ವಿದ್ವಾನ್ ಡಿ. ಶ್ರೀನಿವಾಸ್, ವಿದ್ವಾನ್ ವಿದ್ಯಾಭೂಷಣ ಹಾಗೂ ಇನ್ನಿತರ ಕಲಾವಿದರುಗಳು ಆಗಮಿಸಲಿದ್ದಾರೆ.

ಈ ಸಲದ ಕರುಂಬಿತ್ತಿಲ್ ಶಿಬಿರವು ಅನೇಕ ವಿಸ್ಮಯಕರ ಅನುಭೂತಿಗಳನ್ನು ಸಂಗೀತಾಸಕ್ತ ಶಿಬಿರಾರ್ಥಿಗಳಿಗೆ ನೀಡಲಿದೆ. ವಿಶೇಷ ಕಚೇರಿಗಳು, ಶ್ರೇಷ್ಠ ಕಲಾವಿದರ ವಿಶೇಷ ಸಂದರ್ಶನಗಳು, ಪ್ರತಿ ಶಿಬಿರಾರ್ಥಿಗೂ ಮೃದಂಗ, ವಯೊಲಿನ್ ಜೊತೆ ಪ್ರದರ್ಶನ ನೀಡುವ ಅವಕಾಶ, ಸಂಗೀತ ಕ್ವಿಜ್, ಸಂಗೀತ ಪ್ರಾತ್ಯ ಕ್ಷಿಕೆ, ಯಕ್ಷಗಾನ ಹಾಗೂ ಇನ್ನಿತರ ನೂತನ ಚಟುವಟಿಕೆಗಳು ಈ ಸಲದ ಶಿಬಿರಾರ್ಥಿಗಳಿಗಾಗಿ ಕಾದಿದೆ. ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಸ್ವಾಮೀಜಿಯವರು, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ ವೀರೇಂದ್ರ ಹೆಗ್ಗಡೆ ಯವರು, ಡಾ. ಎಂ. ಮೋಹನ್ ಆಳ್ವ, ಹರೀಶ್ ಪೂಂಜ, ಕ್ಲಿವ್ಲ್ಯಾಂಡ್ ವಿ.ವಿ. ಸುಂದರಂ ಹಾಗೂ ವಿ.ವಿ. ರಮಣಮೂರ್ತಿ ಶಿಬಿರವನ್ನು ತಮ್ಮ ಗೌರವ ಉಪಸ್ಥಿತಿಯಿಂದ ಮೆರುಗುಗೊಳಿಸಲಿದ್ದಾರೆ. ಶಿಬಿರದ ಕೊನೆಯ ದಿನವಾದ 25 ನೇ ತಾರೀಖಿನಂದು ಹೆಸರಾಂತ ವಿದ್ವಾಂಸರಾದ ವಿದ್ಯಾಭೂಷಣ ಅವರಿಂದ ಸಂಗೀತ ಕಛೇರಿ ನಡೆಯಲಿದೆ.
ಹೆಚ್ಚಿನ ವಿವರಗಳಿಗಾಗಿ ನಮ್ಮ FaceBook Page ನ್ನು ನೀವು ಸಂಪರ್ಕಿಸಬಹುದು.
Facebook: https://www.facebook.com/KarunbithilShibira/
Email: [email protected]
ವಿಠ್ಠಲ ರಾಮಮೂರ್ತಿ
Mob: 94440 21850 or 96113 08860




