ಬೆಂಗಳೂರಿನ ಪ್ರತಿಷ್ಠಿತ ವಕೀಲ ಕೆ.ಎನ್. ಜಗದೀಶ್ ಕುಮಾರ್ ರವರು ವಕೀಲ ವೃತ್ತಿಯನ್ನು ಮುಂದುವರಿಸಬಹುದು – ಬಾರ್ ಕೌನ್ಸಿಲ್ ಆಫ್ ಇಂಡಿಯಾ ತೀರ್ಪು
ಕಾನೂನಿನ ಮುಖಾಂತರ ಅನ್ಯಾಯದ ವಿರುದ್ಧ ಹೋರಾಟಕ್ಕೆ ಸಿಕ್ಕ ಜಯ

ಅನ್ಯಾಯದ ವಿರುದ್ಧ ಹೋರಾಟ ನಡೆಸಿ ದೊಡ್ಡ ದೊಡ್ಡ ತಿಮಿಂಗಿಲಗಳಿಗೆ ಕೆಂಗಣ್ಣಾಗಿದ್ದ ಬೆಂಗಳೂರಿನ ಪ್ರಸಿದ್ಧ ಪ್ರತಿಷ್ಠಿತ ವಕೀಲ ಕೆ.ಎನ್. ಜಗದೀಶ್ ಕುಮಾರ್ ರವರು ಯಾವುದೇ ನಿಗದಿತ ಅಥವಾ ಅಪೇಕ್ಷಿತ ಶೈಕ್ಷಣಿಕ ಅರ್ಹತೆ ಇಲ್ಲದೇ ರಾಜ್ಯ ಬಾರ್ ಕೌನ್ಸಿಲ್ ನಲ್ಲಿ ವಕೀಲರಾಗಿ ದಾಖಲಾಗಿದ್ದಾರೆ. ಅವರು ಮಾಡಿದ ಪಿಯುಸಿ ಅಂದರೆ ಪದವಿಪೂರ್ವ ವಿದ್ಯಾಭ್ಯಾಸ ರಾಜಸ್ಥಾನದ ಶಿಕ್ಷಣ ಮಂಡಳಿಯಿಂದ ಅನುಮತಿ ಪಡೆದಿಲ್ಲ. ಆದುದರಿಂದ ಅವರು ಪದವಿ ಹಾಗೂ ಕಾನೂನು ಕೋರ್ಸಿಗೆ ಪ್ರವೇಶ ಪಡೆಯಲು ಅರ್ಹರಲ್ಲ ಎಂದು ಹಿಮಾಂಶು ಭಾಟಿ ಎಂಬವರು ಭಾರತೀಯ ಬಾರ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ ಲಿಖಿತ ದೂರು ನೀಡಿದ್ದರು.




ಬಾರ್ ಕೌನ್ಸಿಲ್ ಆಫ್ ಇಂಡಿಯಾ ಈ ಬಗ್ಗೆ ಕೂಲಂಕುಷ ತನಿಖೆ ನಡೆಸಿ, 2003ರಲ್ಲಿ ವಕೀಲ ಕೆ.ಎನ್. ಜಗದೀಶ್ ಕುಮಾರ್ ಅವರು ಉದಯಪುರದ ಜನಾರ್ಧನರಾಯ್ ನಗರ ರಾಜಸ್ಥಾನ ವಿದ್ಯಾಪೀಠದಿಂದ ಉತ್ತೀರ್ಣರಾಗಿದ್ದಾರೆಂದು ಪ್ರಮಾಣಿಕರಿಸಿದ್ದನ್ನು ಕಂಡುಕೊಂಡಿತು. ಅಂತೆಯೇ 2009ರಲ್ಲಿ ವ್ಯವಹಾರ ನಿರ್ವಹಣೆಯಲ್ಲಿ (ಬಿಬಿಎಂ) ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದಿಂದ ಪದವಿ ಹೊಂದಿದ್ದು ತನಿಖೆಯಿಂದ ಸಾಬೀತಾಯಿತು. ಮುಂದುವರೆದು 2016ರಲ್ಲಿ ವಿವೇಕಾನಂದ ಕಾನೂನು ಕಾಲೇಜಿನಿಂದ ಎಲ್.ಎಲ್.ಬಿ. ಯಶಸ್ವಿಯಾಗಿ ಪೂರ್ಣಗೊಳಿಸಿ 12.7.2018 ರಂದು ದೆಹಲಿ ಬಾರ್ ಕೌನ್ಸಿಲ್ ನ ನೋಂದಣಿ ಸಂಖ್ಯೆ ಡಿ 2091/ 2017 ಆಗಿ ವಕೀಲ ದಾಖಲೆ ದಾಖಲಾತಿ ಪ್ರಮಾಣ ಪತ್ರವೂ ಸರಿಯಾದುದೆಂದು ತಪಾಸಣೆ ನಂತರ ತಿಳಿಯಿತು. ಅವರು ಎಐಬಿಇ-11 ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಭಾರತೀಯ ಬಾರ್ ಕೌನ್ಸಿಲ್ 2018ರ ಮಾರ್ಚ್ 9ರಂದು ವಕೀಲರ ಅಭ್ಯಾಸ ಪ್ರಮಾಣ ಪತ್ರವನ್ನು ನೀಡಿತು.

ಅಂತಿಮವಾಗಿ 1961ರ ವಕೀಲರ ಕಾಯ್ದೆಯಡಿಯಲ್ಲಿ ರಚಿಸಲಾದ ಶಾಸನಬದ್ಧ ಸಂಸ್ಥೆಯಾದ ಬಾರ್ ಕೌನ್ಸಿಲ್ ಆಫ್ ಇಂಡಿಯಾ ನವದೆಹಲಿ ಇವರು ವಕೀಲ ಕೆ.ಎನ್. ಜಗದೀಶ್ ಕುಮಾರ್ ಅವರು ಅಧಿಕೃತವಾಗಿ ವಕೀಲ ವೃತ್ತಿಯನ್ನು ಮುಂದುವರೆಸಬಹುದೆಂದು ಪ್ರಮಾಣ ಪತ್ರವನ್ನು ನೀಡಿದೆ. ಈ ಬಗ್ಗೆ ಮಾತನಾಡಿದ ವಕೀಲ ಕೆ.ಎನ್. ಜಗದೀಶ್ ಕುಮಾರ್ ಅವರು “ನನಗಾದ ಅವಮಾನ ಹಾಗೂ ಅನ್ಯಾಯ ಮತ್ತು ಸತ್ಯ ಎಲ್ಲರಿಗೂ ಗೊತ್ತಾಗಲೇಬೇಕು ಎಂಬುದು ನನ್ನ ಇಚ್ಛೆ. ನಾನು ಬಹಳ ದೊಡ್ಡ ವ್ಯಕ್ತಿಗಳು ಮಾಡುವ ಅನ್ಯಾಯದ ವಿರುದ್ಧ ಹೋರಾಡಿದ್ದೇನೆ. ಆದುದರಿಂದ ನಾನು ವಕೀಲನೇ ಅಲ್ಲ, ನನ್ನ ವಕೀಲರ ಲೈಸೆನ್ಸ್ ಅನ್ನು ರದ್ದು ಪಡಿಸಬೇಕು ಎಂದು ಕೇಳಿದವರಿಗೆ ಇದೀಗ ಸತ್ಯದ ಅರಿವಾಗಿದೆ. ನನ್ನನ್ನು ಇಷ್ಟಪಡುವವರನ್ನು ಹಾಗೂ ವಕೀಲರನ್ನಾಗಿ ಗುರುತಿಸುವವರಿಗೂ ಈಗ ಬಹಳ ಸಂತೋಷವಾಗಿದೆ ಎಂದು ಪತ್ರಿಕಾ ಮಿತ್ರರಿಗೆ ಹೇಳಿದರು.



