RCB ಗೆಲುವಿನ ಸಂಭ್ರಮಾಚರಣೆ ವೇಳೆ ಕಾಲ್ತುಳಿತ
ಪುತ್ತೂರು ಮೂಲದ ವಿದ್ಯಾರ್ಥಿನಿ ಚಿನ್ಮಯಿ ಶೆಟ್ಟಿ ದುರ್ಮರಣ

ಜೂನ್ 3ರಂದು ಮಂಗಳವಾರ ನಡೆದ IPL ಕ್ರಿಕೆಟ್ ಪಂದ್ಯಾವಳಿಯಲ್ಲಿ RCB (ರೊಯೆಲ್ ಚಾಲೆಂಜರ್ಸ್ ಬೆಂಗಳೂರು) ತಂಡದ ಗೆಲುವಿನ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಪುತ್ತೂರು ಮೂಲದ ಯುವತಿ ಕಾಲ್ತುಳಿತಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಮೃತ ಯುವತಿಯನ್ನು 19 ವರ್ಷ ಪ್ರಾಯದ ಚಿನ್ಮಯಿ ಶೆಟ್ಟಿ ಇಂಜಿನೀಯರಿಂಗ್ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಚಿನ್ಮಯಿ ಶೆಟ್ಟಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಇಳಂತಿಲ ಗ್ರಾಮದ ನಿವಾಸಿಯಾಗಿದ್ದಳು. ಇವಳು ಕರುಣಾಕರ ಶೆಟ್ಟಿ ಮತ್ತು ಪೂಜಾ ದಂಪತಿಯ ಪುತ್ರಿ.

ಚಿನ್ಮಯಿ ಶೆಟ್ಟಿ ಕಾಲೇಜಿನಿಂದ ತನ್ನ ಸ್ನೇಹಿತರೊಂದಿಗೆ RCB ತಂಡದ ಗೆಲುವನ್ನು ಸಂಭ್ರಮಿಸಲು ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ತೆರಳಿದ್ದಳು. ಈ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಕಾಲ್ತುಳಿತದಲ್ಲಿ ಸಿಲುಕಿದ ಚಿನ್ಮಯಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವಳನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವಳು ಮೃತಪಟ್ಟಿದ್ದಾಳೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.




