ಸಿಂಗಾಪುರ ಕಂಟೇನರ್ ಹಡಗಿನಲ್ಲಿ ಬೆಂಕಿ – 18 ಮಂದಿಯ ರಕ್ಷಣೆ
ಕೊಲಂಬೊದಿಂದ ಮುಂಬೈಗೆ ಹೋಗುವ ಮಾರ್ಗದಲ್ಲಿ ಕೇರಳದ ಬೇಪೋರ್ ಕರಾವಳಿಯಿಂದ ಸರಿಸುಮಾರು 78 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಎಂ.ವಿ. ವಾನ್ ಹೈ 503 ಹಡಗಿನಿಂದ 18 ಸಿಬ್ಬಂದಿಗಳನ್ನು ಭಾರತೀಯ ನೌಕಪಡೆ ಹಾಗೂ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿಗಳು ರಕ್ಷಿಸಿದ್ದಾರೆ. ರಕ್ಷಿಸಿದವರಲ್ಲಿ ಚೀನಾದ ಎಂಟು, ತೈವಾನ್‌ನ ನಾಲ್ಕು, ಮಯನ್ಮಾರಿನ ನಾಲ್ಕು ಮತ್ತು ಇಂಡೋನೇಷ್ಯಾದ ಇಬ್ಬರಿದ್ದಾರೆ.

ಕೇರಳದ ಕೋಝಿಕ್ಕೋಡ್‌ನ ಬೇಪೋರ್ ಕರಾವಳಿಯ ಬಳಿ ಸರಕು ಹಡಗಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಜೂನ್ 9ರಂದು ಸೋಮವಾರ ಬೆಳಿಗ್ಗೆ ನಡೆದಿದೆ. ಬೆಂಕಿಯ ಪರಿಣಾಮ ಹಡಗಿನಲ್ಲಿದ್ದ ಸುಮಾರು 20 ಕಂಟೇನರ್‌ಗಳು ಸಮುದ್ರಕ್ಕೆ ಬಿದ್ದಿವೆ. 12.5 ಮೀಟರ್ ಡ್ರಾಫ್ಟ್ ಹೊಂದಿರುವ 270 ಮೀಟರ್ ಉದ್ದದ ಹಡಗು ಜೂನ್ 7 ರಂದು ಕೊಲಂಬೊದಿಂದ ಹೊರಟು ಮುಂಬೈಗೆ ಹೋಗುತ್ತಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಕಂಟೇನರ್ ಹಡಗಿನಲ್ಲಿ ಒಟ್ಟು 22 ಸಿಬ್ಬಂದಿಗಳು ಇದ್ದು ಇವರ ಪೈಕಿ 18 ಮಂದಿಯನ್ನು ಭಾರತೀಯ ನೌಕಾಪಡೆಯ ನೌಕೆ INS ಸೂರತ್ ರಕ್ಷಿಸಿದ್ದು, 4 ಸಿಬ್ಬಂದಿಗಳು ನಾಪತ್ತೆಯಾಗಿದ್ದಾರೆ. ಇಬ್ಬರಿಗೆ ಗಂಭೀರ ಗಾಯ, ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. 12 ಮಂದಿ ಸಂಪೂರ್ಣ ಸುರಕ್ಷಿತವಾಗಿದ್ದಾರೆ. ಸಂಪೂರ್ಣ ಸುರಕ್ಷಿತವಾಗಿದ್ದವರನ್ನು ಮಂಗಳೂರಿನ ಹೋಟೆಲಿಗೆ ಸ್ಥಳಾಂತರಿಸಲಾಗಿದೆ.

ಘಟನೆಯಲ್ಲಿ ಗಾಯಗೊಂಡವರನ್ನು ಮಂಗಳೂರಿಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳಿಗೆ ತಕ್ಷಣದ ವೈದ್ಯಕೀಯ ನೆರವು ನೀಡಲು ಸಂಬಂಧಿಸಿದ ಎಲ್ಲ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ.




