ಗೇರುಕಟ್ಟೆ ದಿವಾಕರ ಆಚಾರ್ಯರಿಗೆ ಯಕ್ಷಗಾನ ಡಿಪ್ಲೋಮಾದಲ್ಲಿ ಡಿಸ್ಟಿಂಕ್ಷನ್
ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು 2024- 25 ನೇ ಸಾಲಿನಲ್ಲಿ ಪ್ರಥಮ ಬಾರಿಗೆ ಯಕ್ಷಗಾನ ಸರ್ಟಿಫಿಕೇಟ್ ಮತ್ತು ಡಿಪ್ಲೋಮಾ ಕೋರ್ಸ್ ಗಳಿಗೆ ಇತ್ತೀಚೆಗೆ ಪರೀಕ್ಷೆಗಳನ್ನು ಬೆಂಗಳೂರಿನಲ್ಲಿ ನಡೆಸಿತ್ತು. ಬೆಂಗಳೂರಿನ ಕಲಾ ಕದಂಬ ಆರ್ಟ್ ಸೆಂಟರ್ ನಿರ್ದೇಶಕ ಡಾ. ರಾಧಾಕೃಷ್ಣ ಉರಾಳ ಮಾರ್ಗದರ್ಶದಲ್ಲಿ ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಪರೀಕ್ಷೆಗೆ ಹಾಜರಾದ ದಿವಾಕರ ಆಚಾರ್ಯ ಗೇರುಕಟ್ಟೆ ಇವರು ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ (ಎ+) ಉತ್ತೀರ್ಣರಾಗಿರುತ್ತಾರೆ.


ದಿವಾಕರ ಆಚಾರ್ಯರವರು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾಗಿದ್ದು ಹವ್ಯಾಸಿ ಕಲಾವಿದರಾಗಿ, ಸಂಘಟಕರಾಗಿ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಇವರು ಆನೆಗುಂದಿ ಶ್ರೀ ಸರಸ್ವತಿ ಪೀಠ ಕಟಪಾಡಿ ಪಡುಕುತ್ಯಾರು ಪರಮಪೂಜ್ಯ ಶ್ರೀ ಕಾಳಹಸ್ತೇಂದ್ರ ಸ್ವಾಮಿಗಳ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಕುತ್ಯಾರು ಸೂರ್ಯ ಚೈತನ್ಯ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾಗಿದ್ದಾರೆ.

ಜೊತೆಗೆ ಯಕ್ಷ ಭಾರತಿ ರಿ. ಬೆಳ್ತಂಗಡಿ ಕಾರ್ಯದರ್ಶಿಯಾಗಿ, ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ಅಧ್ಯಕ್ಷರಾಗಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಹವ್ಯಾಸಿ ಕಲಾವಿದರ ಘಟಕದ ಉಪಾಧ್ಯಕ್ಷರಾಗಿ, ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ರಿ. ಬಂಟ್ವಾಳ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಭಾರತ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ಸಿ.ಸಿ.ಆರ್.ಟಿ ಸಂಸ್ಥೆಯು ಹೈದರಾಬಾದ್ ಮತ್ತು ನವದೆಹಲಿಯಲ್ಲಿ ಆಯೋಜಿಸಿದ್ದ ಕಲೆ ಮತ್ತು ಸಾಂಸ್ಕೃತಿಕ ಸನಿವಾಸ ತರಬೇತಿಯಲ್ಲಿ ಇವರು ಭಾಗವಹಿಸಿದ್ದಾರೆ.




