ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ವಾಹನಗಳ ದಾಖಲೆಗಳನ್ನು ಸರಿಪಡಿಸಲು 7 ದಿನಗಳ ಕಾಲಾವಕಾಶ ನೀಡಿದ ಉಡುಪಿ SP
ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳ ವಾಹನಗಳನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಉಪ ವಿಭಾಗಗಳಲ್ಲೂ ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳ ತಪಾಸಣೆ ನಡೆಸಿದ್ದೇವೆ. ನಿಯಮಗಳನ್ನು ಉಲ್ಲಂಘಿಸಿರುವ 208ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಎಲ್ಲಾ ವಾಹನಗಳಿಗೆ ಇನ್ನೊಂದು ವಾರದ ಕಾಲಾವಕಾಶ ನೀಡಲಿದ್ದು, ದಾಖಲೆಗಳು ಸೇರಿದಂತೆ ಎಲ್ಲವನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ. ಉಡುಪಿ ಜಿಲ್ಲೆಯಾದ್ಯಂತ ಜೂನ್ 19ರಂದು ಗುರುವಾರ ನಡೆದ ಪೊಲೀಸರ ವಿಶೇಷ ಅಭಿಯಾನದ ಕುರಿತಂತೆ ನಗರದ ಡಿವೈಎಸ್ ಪಿ ಕಚೇರಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ಹಂಚಿಕೊಂಡ SP ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಗುರುವಾರ ಬೆಳಗ್ಗೆ 7 ರಿಂದ ಮಧ್ಯಾಹ್ನ 12ರವರೆಗೆ ಶಾಲಾ ವಾಹನಗಳ ವಿಶೇಷ ತಪಾಸಣೆ ಅಭಿಯಾನ ಕೈಗೊಂಡಿದ್ದು, ಜಿಲ್ಲೆಯ ಎಲ್ಲಾ ಠಾಣಾ ವ್ಯಾಪ್ತಿಯಲ್ಲೂ ಶಾಲಾ ವಾಹನಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಾಗಿದೆ ಎಂದರು.

ಇಂದಿನ ಅಭಿಯಾನದಲ್ಲಿ ಐವರು ಪೊಲೀಸ್ ನಿರೀಕ್ಷಕರು, 30 ಪೊಲೀಸ್ ಉಪನಿರೀಕ್ಷಕರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಇವರು 930 ವಾಹನಗಳ ತಪಾಸಣೇ, ಪರಿಶೀಲನೆ ನಡೆಸಿದ್ದಾರೆ ಎಂದರು. ಈ ಬಗ್ಗೆ ಸಂಬಂಧಿತ ಶಾಲಾ ಆಡಳಿತ ಮಂಡಳಿಗೆ ಶಾಲೆಯ ಎಲ್ಲಾ ವಾಹನಗಳ ದಾಖಲಾತಿ, ವಾಹನದ ಮಿತಿಗನುಗುಣವಾಗಿ ಮಕ್ಕಳ ಸಂಖ್ಯೆ ಹಾಗೂ ಇತರ ಸುರಕ್ಷತಾ ಕ್ರಮಗಳನ್ನು ಒಂದು ವಾರದ ಒಳಗೆ ಅಳವಡಿಸಿಕೊಳ್ಳುವಂತೆ ಹಾಗೂ ಎಲ್ಲಾ ಸೌಲಭ್ಯ ಮತ್ತು ದಾಖಲಾತಿಗಳನ್ನು ಒಂದು ವಾರದೊಳಗೆ ಸರಿಪಡಿಸಿಕೊಳ್ಳದೇ ಇದ್ದಲ್ಲಿ ಸಂಬಂಧಿತ ಶಾಲಾ ವಾಹನಗಳನ್ನು ಸೀಝ್ ಮಾಡುವ ಬಗ್ಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ ಎಂದರು.

ವಿದ್ಯೋದಯ ಪಬ್ಲಿಕ್ ಸ್ಕೂಲ್ ಗೆ ಬೆದರಿಕೆ ಕರೆ:- ನಾಲ್ಕು ದಿನಗಳ ಹಿಂದೆ ನಗರದ ವಿದ್ಯೋದಯ ಪಬ್ಲಿಕ್ ಸ್ಕೂಲ್ ಗೆ ಇಮೇಲ್ ಬೆದರಿಕೆ ಕರೆ ಬಂದ ಕುರಿತ ತನಿಖೆ ಬಗ್ಗೆ ಪ್ರಶ್ನಿಸಿದಾಗ, ಇದನ್ನು ಇಲ್ಲಿ ಪತ್ತೆ ಹಚ್ಚಲು ಸಾಧ್ಯವಿಲ್ಲ. ರಾಷ್ಟ್ರಮಟ್ಟದಲ್ಲಿ ನ್ಯಾಶನಲ್ ಕೋ ಆರ್ಡಿನೇಶನ್ ಗ್ರೂಪ್ ಇದ್ದು, ಅದಕ್ಕೆ ಕಳುಹಿಸಿದ್ದೇವೆ. ಅವರೇ ಅದನ್ನು ಮಾನಿಟರ್ ಮಾಡುತ್ತಾರೆ ಎಂದು ಹರಿರಾಂ ಶಂಕರ್ ತಿಳಿಸಿದರು.

ನಗರದಲ್ಲಿ 90 ಸಿಸಿಟಿವಿ ಕ್ಯಾಮರಾ: ಉಡುಪಿ ನಗರಸಭೆ ಉಡುಪಿ ನಗರದಾದ್ಯಂತ 90 ಸಿಸಿಟಿವಿ ಕ್ಯಾಮರಾ ಹಾಗೂ ಎರಡು ಟ್ರಾಫಿಕ್ ಸಿಗ್ನಲ್ ಗಳನ್ನು ಆಳವಡಿಸಲು ಮುಂದಾಗಿದ್ದು, ಈಗಾಗಲೇ ಟೆಂಡರ್ ಕರೆಯಲಾಗಿದೆ. ಅಲ್ಲದೇ ಜಿಲ್ಲೆಯ ಎಲ್ಲಾ ಠಾಣಾ ವ್ಯಾಪ್ತಿಗಳಲ್ಲೂ ಸಿಸಿಟಿವಿ ಕ್ಯಾಮರಾಗಳನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.




