October 29, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಅವ್ಯವಸ್ಥೆಯ ಹಾಗೂ ನ್ಯೂನ್ಯತೆಗಳ ಆಗರ – ಮಂಗಳೂರು ಮಹಾನಗರ ಪಾಲಿಕೆ – ಲೋಕಾಯುಕ್ತರಿಂದ ಪರಿಶೀಲನೆ

ನಿಯಮಗಳನ್ನು ಉಲ್ಲಂಪಿಸಿದ ಕಟ್ಟಡಗಳಿಗೆ ಕಾನೂನುಬಾಹಿರವಾಗಿ ಅನುಮತಿ

ಮಂಗಳೂರು ಮಹಾನಗರ ಪಾಲಿಕೆಗೆ ಗೌರವಾನ್ವಿತ ಲೋಕಾಯುಕ್ತರಿಂದ ಸರ್ಚ್ ವಾರಂಟ್ ಪಡೆದು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದ್ದು, ಪರಿಶೀಲನೆ ವೇಳೆ ಮಂಗಳೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗ, ಆರೋಗ್ಯ ವಿಭಾಗ, ಇಂಜಿನಿಯರ್ ವಿಭಾಗ, ಲೆಕ್ಕ ಪತ್ರ ವಿಭಾಗ, ನಗರ ಯೋಜನಾ ವಿಭಾಗ, ಆಯುಕ್ತರ ಕಛೇರಿಯಲ್ಲಿ ಕಡತ ವಿಲೇವಾರಿಯಲ್ಲಿ ಹಲವಾರು ನ್ಯೂನ್ಯತೆಗಳು ಕಂಡುಬಂದಿರುತ್ತದೆ. ಈ ಅವ್ಯವಸ್ಥೆ ಹಾಗೂ ನ್ಯೂನ್ಯತೆಗಳನ್ನು ಕಂಡು ಲೋಕಾಯುಕ್ತ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಮಂಗಳೂರು ಮಹಾನಗರಪಾಲಿಕೆಯ ಮೇಲೆ ಜೂನ್ 21ರಂದು ಶನಿವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಉದಾಹರಣೆಗೆ ನಗರ ಯೋಜನಾ ವಿಭಾಗದಲ್ಲಿ ಬಿಲ್ಡಿಂಗ್ ಬೈಲಾ ನಿಯಮಗಳನ್ನು ಉಲ್ಲಂಘಿಸಿದ ಕಟ್ಟಡಗಳಿಗೆ ಡೆಮೋಲೀಷನ್ ಆರ್ಡರ್ ಹೊರಡಿಸಿದ್ದರು. ಆದರೆ ಟೌನ್ ಪ್ಲಾನಿಂಗ್ ವಿಭಾಗದ ಇಂಜಿನಿಯರ್ ಗಳು ಮತ್ತು ಆಯುಕ್ತರು ಬಿಲ್ಡಿಂಗ್ ಬೈಲಾ ನಿಯಮಗಳನ್ನು ಉಲ್ಲಂಘಿಸಿದ ಕಟ್ಟಡಗಳಿಗೆ ಕಾನೂನುಬಾಹಿರವಾಗಿ ಅನುಮತಿ ನೀಡಿರುವುದಾಗಿ ಮಾಹಿತಿ ಇರುತ್ತದೆ. ಕಟ್ಟಡ ಪರವಾನಿಗೆ ನೀಡುವ ಸಮಯ ಯಾವುದೇ ನಿಬಂಧನೆಗಳನ್ನು ಪಾಲಿಸದೇ ಪರವಾನಿಗೆಯನ್ನು ನೀಡುತ್ತಿರುತ್ತಾರೆ.

ನಗರದ ಒಳಚರಂಡಿ ಮೇಲುಸ್ತುವಾರಿ ವಿಭಾಗದ ಅಧಿಕಾರಿಗಳಾದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಒಳಚರಂಡಿ ವಿಭಾಗದ ಅಧಿಕಾರಿಗಳು – ಎಸ್‌ಟಿಪಿ ಮತ್ತು ವೆಟ್‌ವೆಲ್‌ ಗಳ ನಿರ್ವಹಣೆಯನ್ನು ಸರಿಯಾದ ರೀತಿಯಲ್ಲಿ ನಡೆಸದೇ, ಅಸ್ತಿತ್ವದಲ್ಲಿರುವ ಯುಜಿಡಿ ನೆಟ್‌ವರ್ಕ್‌ಗೆ 25 ಗಿಂತ ಹೆಚ್ಚಿನ ಯುನಿಟ್‌ ಗಳಿರುವ ಅಪಾರ್ಟ್‌ ಮೆಂಟ್ ಕಾಂಪ್ಲೆಕ್ಸ್‌ಗಳಿಂದ ಹೊರಬರುವ ಕೊಳಚೆ ನೀರನ್ನು ಸಂಸ್ಕರಿಸುವ ಸಾಮರ್ಥ್ಯ ಇಲ್ಲದೇ ಇದ್ದರೂ ಹಲವಾರು ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ಗಳಿಗೆ ಅನುಮತಿ ನೀಡಿರುವುದಾಗಿ ಮಾಹಿತಿ ಇರುತ್ತದೆ. ನಗರದ ರಾಜ ಕಾಲುವೆ, ತೋಡುಗಳಿಗೆ ಕಟ್ಟಡಗಳಿಂದ ನೀರು ಅನಧಿಕೃತವಾಗಿ ಹರಿಯಲು ಅವಕಾಶ ಮಾಡಿಕೊಟ್ಟು ಇದರ ಉಲ್ಲಂಘನೆಯ ಕುರಿತು ಯಾವುದೇ ಕ್ರಮ ಕೈಗೊಳ್ಳದೇ ಮಳೆಗಾಲದ ಸಮಯದಲ್ಲಿ ಹಲವಾರು ಪ್ರದೇಶಗಳಲ್ಲಿನ ಚರಂಡಿಯ ನೀರು ಜನವಸತಿ ಪ್ರದೇಶಗಳಿಗೆ ಹರಿದು ಹೋಗಿ ಅನಾರೋಗ್ಯಕರವಾದ ವಾತಾವರಣ ಸೃಷ್ಟಿಮಾಡಿದ್ದಾರೆ ಎನ್ನಲಾಗಿದೆ. ನದಿಗಳ ಹಾಗೂ ತೋಡುಗಳ ಮಾಲಿನ್ಯತೆಗೆ ಕಟ್ಟಡ ನಿರ್ಮಾಣ ಸಮಯ ಯುಜಿಡಿಗೆ ಸಂಬಂಧಿಸಿದ ಷರತ್ತುಗಳನ್ನು ಪಾಲಿಸದೆ ನಿರ್ಲಕ್ಷತನ ತೋರಿರುವುದಾಗಿ ಮಾಹಿತಿ ಇದೆ. ಈ ಬಗ್ಗೆ ಸಮಗ್ರ ವರದಿಯನ್ನು ಲೋಕಾಯುಕ್ತ ಕೇಂದ್ರ ಕಚೇರಿಗೆ ಸಲ್ಲಿಸಲಾಗುವುದು ಎಂಬುದಾಗಿ ಕುಮಾರಚಂದ್ರ ಪೊಲೀಸ್ ಅಧೀಕ್ಷಕರು (ಪ್ರಭಾರ), ಕರ್ನಾಟಕ ಲೋಕಾಯುಕ್ತ, ಮಂಗಳೂರು ಇವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

ಇಂಜಿನಿಯರ್ ವಿಭಾಗದಲ್ಲಿನ ಹಳೆಯ ಕಡತಗಳನ್ನು ಬಾಕಿ ಇರಿಸಿರುವುದು ಕಂಡಿದೆ. ಲೆಕ್ಕ ಪತ್ರ ವಿಭಾಗದಲ್ಲಿ ಕಾಲಮಿತಿಯೊಳಗೆ ಬಿಲ್‌ಗಳನ್ನು ವಿಲೇವಾರಿಗೊಳಿಸದೆ ಬಾಕಿ ಇರಿಸುವುದು ಕಂಡುಬಂದಿದೆ. ಕಂದಾಯ ಮತ್ತು ನಗರ ಯೋಜನಾ ವಿಭಾಗದ ಕಛೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಮಾಹಿತಿಯಿದೆ ಎನ್ನಲಾಗಿದೆ. ಬ್ರೋಕರ್ ಒಬ್ಬರು ಬಳಿ ರೂಪಾಯಿ 5 ಲಕ್ಷ ಹಣ ಪತ್ತೆಯಾಗಿರುತ್ತದೆ. ಆರೋಗ್ಯ ವಿಭಾಗದಲ್ಲಿ ಹಲವಾರು ಉದ್ದಿಮೆ ಪರವಾನಿಗೆಯ ಕಡತಗಳು ಎಂಸಿಸಿ ಟ್ರೇಡ್ ಲೈಸನ್ಸ್ ವೆಬ್‌ಸೈಟ್‌ನಲ್ಲಿ ಬಾಕಿ ಇರುವುದು ಕಂಡು ಬಂದಿರುತ್ತದೆ. ವ್ಯಾಪಾರ ಪರವಾನಿಗೆಗಳನ್ನು ನವೀಕರಿಸಿರುವುದಿಲ್ಲ ಮತ್ತು ಅದಕ್ಕೆ ಅನುಗುಣವಾದ ಶುಲ್ಕವನ್ನು ಸಂಗ್ರಹಿಸಿರುವುದಿಲ್ಲ. ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅಧಿಕಾರಿಯೊಬ್ಬರು ನಿವೃತ್ತರಾಗಿ 15 ವರ್ಷ ಕಳೆದರು ಕೂಡ ಇಲ್ಲಿಯವರೆಗೆ ಅದೇ ಹುದ್ದೆಯಲ್ಲಿ ಮುಂದುವರೆದಿದ್ದಾರೆ. ಇದು ಮಹಾನಗರ ಪಾಲಿಕೆಯ ಆಡಳಿತಾತ್ಮಕ ದುಷ್ಕೃತ್ಯದ ಸ್ಪಷ್ಟ ನಿದರ್ಶನವನ್ನು ಪ್ರತಿಬಿಂಬಿಸುತ್ತದೆ.

ಲೋಕಾಯುಕ್ತ ಅಧಿಕಾರಿಗಳು ತಿಳಿಸಿದಂತೆ ದಿನಾಂಕ 21.06.2025 ರಂದು ಮಂಗಳೂರು ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನ ಪಿ. ಕುಮಾರ್, ಸುರೇಶ್ ಕುಮಾರ್ ಪಿ. ಹಾಗೂ ಪೊಲೀಸ್ ನಿರೀಕ್ಷಕರಾದ ಭಾರತಿ ಜಿ., ಚಂದ್ರಶೇಖರ್ ಕೆ.ಎನ್. ಮತ್ತು ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಂಜುನಾಥ, ರಾಜೇಂದ್ರ ನಾಯ್ಕ್ ಎಂ.ಎನ್. ರವರು ಮಂಗಳೂರು ಮತ್ತು ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಯ ಸಿಬ್ಬಂದಿಯವರೊಂದಿಗೆ ಮಂಗಳೂರು ಮಹಾನಗರ ಪಾಲಿಕೆಯ ಪರಿಶೀಲನೆಗೆ ತೆರಳಿದ್ದರು.

You may also like

News

ಸಿ.ಒ.ಡಿ.ಪಿ. ಹಾಗೂ ಬಾಳೆಪುಣಿ ಪ್ರಗತಿ ಮಹಾ ಸಂಘದಿಂದ ದೀಪಾವಳಿ ಆಚರಣೆ

ಮಹಿಳೆಯು ಶಿಕ್ಷಣದ ಬೆಳಕಿನಿಂದ ಬೆಳಗಿದರೆ ಕತ್ತಲೆಗಳು ದೂರ – ಫಾದರ್ ಅಸಿಸ್ಸಿ ಸಿ.ಒ.ಡಿ.ಪಿ. ಮಂಗಳೂರು ಹಾಗೂ ಬಾಳೆಪುಣಿ ಪ್ರಗತಿ ಮಹಾ ಸಂಘದ ಸದಸ್ಯ ಸಂಘಗಳ ವತಿಯಿಂದ ದೀಪಾವಳಿ
News

ಮಾಹಿತಿ ಆಯೋಗದ ಆದೇಶವನ್ನು ಪಾಲಿಸದೆ ನಿರ್ಲಕ್ಷ್ಯ ತೋರಿದ ಕುಣಿಗಲ್ ತಹಶೀಲ್ದಾರ್ ರಶ್ಮಿ ಇವರಿಗೆ ರೂಪಾಯಿ 25,000 ದಂಡ

ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆಗೆ ಶಿಕ್ಷೆ ಮಾಹಿತಿ ಹಕ್ಕು ಕಾಯ್ದೆ (RTI Act) ಅಡಿಯಲ್ಲಿ ಆಯೋಗದ ಆದೇಶವನ್ನು ಪಾಲಿಸದೆ ನಿರ್ಲಕ್ಷ್ಯ ತೋರಿದ ಕುಣಿಗಲ್ ತಾಲ್ಲೂಕಿನ ತಹಶೀಲ್ದಾರ್ ರಶ್ಮಿ

You cannot copy content of this page