ಸಂಚಾರ ನಿಯಮ ಉಲ್ಲಂಘನೆ – ದಂಡ ಕಟ್ಟದ ಪ್ರಕರಣಕ್ಕೆ ಫುಲ್ ಸ್ಟಾಪ್
ಜುಲೈ 10 ದಂಡ ಕಟ್ಟಲು ಕಡೆಯ ದಿನ:ಕಟ್ಟದೇ ಇದ್ದಲ್ಲಿ ನ್ಯಾಯಾಲಯದ ಮೂಲಕ ಕ್ರಮ – ಪೊಲೀಸ್ ಕಮಿಷನರ್

ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನಗಳ ಮೇಲೆ ಅಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ತೆಗೆದಿರುವ ಭಾವಚಿತ್ರಗಳನ್ನು ಟ್ರಾಫಿಕ್ ಕಂಟ್ರೋಲ್ ಮತ್ತು ಕಮಾಂಡ್ ಸೆಂಟರ್ ನಲ್ಲಿ ಸಿಸಿಟಿವಿಯಲ್ಲಿ ಸೆರೆಯಾಗಿರುವ ವಾಹನ ಚಾಲಕ / ಸವಾರರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನಾಗಿ ದಾಖಲು ಮಾಡಲಾಗಿರುತ್ತದೆ. ವಾಹನ ಚಾಲಕರು ಸವಾರರು ಸಂಚಾರ ಉಲ್ಲಂಘನೆ ಮಾಡಿರುವ ಕುರಿತು ಅಂಚೆ ಮೂಲಕ ನೋಟಿಸುಗಳನ್ನು ನೋಂದಣಿ ಸಂಖ್ಯೆಯ ಮಾಲೀಕರಿಗೆ ಈಗಾಗಲೇ ಕಳುಹಿಸಿದ್ದು ದಂಡವನ್ನು ಕಟ್ಟದೆ ಹಲವಾರು ಪ್ರಕರಣಗಳು ಬಾಕಿ ಇರುತ್ತವೆ.

ಸಂಚಾರ ನಿಯಮ ಉಲ್ಲಂಘನೆಯ ಕುರಿತು ದಂಡ ಪಾವತಿಸದೇ ಇರುವವರ ವಿರುದ್ಧ ಕಾನೂನು ಅಡಿಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದ್ದು, ಪ್ರಥಮ ಹಂತವಾಗಿ ದಂಡ ಪಾವತಿ ಮಾಡಲು ವಾಹನ ನೋಂದಣಿ ಮಾಲಕರಿಗೆ 10-07-2025 ಅಂತಿಮ ದಿನವಾಗಿದೆ. ದಂಡ ಪಾವತಿಸಲು ವಿಫಲರಾಗಿದ್ದಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಕುರಿತು ನೋಂದಣಿ ಮಾಲಕರ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಲಾಗುವುದು. ನಂತರ ನ್ಯಾಯಾಲಯದಿಂದ ಹೊರಡಿಸುವ ಸಮನ್ಸ್/ವಾರಂಟ್ ಪ್ರಕ್ರಿಯೆಗಳು ಮುಂದುವರೆಯುತ್ತದೆ.

ಆದುದರಿಂದ ನೋಟಿಸು ಸ್ವೀಕೃತಿಯಾಗಿರುವ ವಾಹನದ ನೋಂದಣಿ ಮಾಲಕರು ದಂಡವನ್ನು ಕೂಡಲೇ ಪಾವತಿ ಮಾಡಿ ಮುಂದೆ ಆಗುವ ಪರಿಣಾಮಗಳಿಗೆ ಅವಕಾಶವನ್ನು ನೀಡದಂತೆ ಕೋರಲಾಗಿದೆ. ಮಂಗಳೂರು ನಗರದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಗಳಲ್ಲಿರುವ ಡಿವೈಸ್ ಗಳಲ್ಲಿ ಪರಿಶೀಲಿಸಲು ಹಾಗೂ ದಂಡ ಪಾವತಿಸಲು ಅವಕಾಶ ಇರುತ್ತದೆ. ಅಂತೆಯೇ ಕರ್ನಾಟಕ ರಾಜ್ಯದ ಯಾವುದೇ ಅಂಚೆ ಕಚೇರಿಯಲ್ಲಿ ವಿಚಾರಿಸಲು ಹಾಗೂ ದಂಡ ಪಾವತಿಸಲು ಅವಕಾಶವನ್ನು ನೀಡಲಾಗಿದೆ. ತಮ್ಮ ಸಮೀಪದ ಯಾವುದೇ ಕರ್ನಾಟಕ ಒನ್ ನಲ್ಲಿಯೂ ದಂಡ ಪಾವತಿಸಬಹುದಾಗಿದೆ.




