ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮದ 5ನೇ ವಾರ್ಷಿಕೋತ್ಸವದ ಪ್ರಯುಕ್ತ 91 ತಾಲೂಕು ಸಮಿತಿಗಳ ಸ್ವಯಂ ಸೇವಕರಿಗೆ ತುರ್ತು ಸ್ಪಂದನೆ ಮತ್ತು ಕೌಶಲ್ಯಾಭಿವೃದ್ಧಿ ತರಭೇತಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಧರ್ಮಸ್ಥಳ, ಜನಜಾಗೃತಿ ಪ್ರಾದೇಶಿಕ ವಿಭಾಗ ಬೆಳ್ತಂಗಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬೆಳ್ತಂಗಡಿ, ಗುರುವಾಯನಕೆರೆ ವತಿಯಿಂದ ಕರ್ನಾಟಕ ರಾಜ್ಯದಲ್ಲಿರುವ ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮದ 5 ನೇ ವಾರ್ಷಿಕೋತ್ಸವದ ಪ್ರಯುಕ್ತ 91 ತಾಲೂಕು ಸಮಿತಿಗಳ ಸ್ವಯಂ ಸೇವಕರಿಗೆ ಹಮ್ಮಿಕೊಳ್ಳಲಾಗುವ ತುರ್ತು ಸ್ಪಂದನೆ ಮತ್ತು ಕೌಶಲ್ಯಾಭಿವೃದ್ಧಿ ತರಭೇತಿಗೆ ಚಾಲನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿ ಧರ್ಮಸ್ಥಳದಲ್ಲಿ ಜೂನ್ 27ರಂದು ಶುಕ್ರವಾರ ನೀಡಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಆಪತ್ತುಗಳು ಬಂದಾಗ ಎದುರಿಸಲು ನಮ್ಮ ಶೌರ್ಯ ತಂಡವು ಸೇವಾ ಮನೋಭಾವದಿಂದ ಸಜ್ಜಾಗಿದೆ. ಸಾಹಸ ಧೈಯದಿಂದ ಶೌರ್ಯ ತಂಡ ಉತ್ತಮವಾಗಿ ಕೆಲಸವನ್ನು ಮಾಡುತ್ತಿದೆ ಎಂದರು. ಟೀಮ್ ಕಮಾಂಡರ್ ಎನ್.ಡಿ.ಆರ್.ಎಫ್., ಗುಂಟೂರು, ಆಂಧ್ರಪ್ರದೇಶ ಇನ್ ಸ್ಪೆಕ್ಟರ್ ಶಾಂತಿಲಾಲ್ ಜಟಿಯಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘಟನೆಗಳು ಸಮಾಜಕ್ಕೆ ಶಕ್ತಿಯಾಗಿ ಕೆಲಸ ಮಾಡುತ್ತಿದೆ. ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಜನಸೇವೆ ನಡೆಯುತ್ತಿದೆ ಎಂದರು. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಮಾತನಾಡಿ ಶೌರ್ಯ ವಿಪತ್ತು ಕಾರ್ಯಕ್ರಮಕ್ಕೆ 5 ವರ್ಷ ತುಂಬುತ್ತಿದೆ. ವಿಪತ್ತು ಸಂಭವಿಸಿದಾಗ ತರಭೇತಿ ತಂಡ ಘಟನಾ ಸ್ಥಳಕ್ಕೆ ಬರುವಾಗ ಸಮಯ ಹೆಚ್ಚಾಗುತ್ತದೆ. ಈ ಬಗ್ಗೆ ಸಮಾಜದ ಉನ್ನತಿಗೆ ಶಾಶ್ವತ ಪರಿಹಾರ ನೀಡುವ ಸದುದ್ದೇಶದಿಂದ ಖಾವಂದರು ಸಂಕಲ್ಪ ಮಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡ ರಚನೆ ಮಾಡಿದ್ದಾರೆ ಎಂದರು.

ಜಿಲ್ಲಾ ವಿಪತ್ತು ನಿರ್ವಹಣಾ ಕೋಶ, ದಕ್ಷಿಣ ಕನ್ನಡ ಜಿಲ್ಲೆ ವಿಪತ್ತು ನಿರ್ವಹಣಾ ಅಧಿಕಾರಿ ವಿಜಯ್ ಪೂಜಾರಿ, ಎನ್.ಡಿ.ಆರ್.ಎಫ್. ವಿನೋದ್ ಆರ್ಯ, ಯೋಜನಾಧಿಕಾರಿಗಳಾದ ಯಶೋಧರ ಕೆ., ಅಶೋಕ ಬಿ. ಉಪಸ್ಥಿತರಿದ್ದರು.
ವಿಪತ್ತು ಸಾಧಕರಿಗೆ ಪ್ರಶಸ್ತಿ ಗೌರವ: ಶೌರ್ಯ ವಿಪತ್ತು ಸಾಧಕ ಪ್ರಶಸ್ತಿಯನ್ನು ರವೀಂದ್ರ ಉಜಿರೆ, ಅವಿನಾಶ್, ದಿನೇಶ್ ಶೆಟ್ಟಿ ನಾರಾವಿ, ವಿಶ್ವನಾಥ್ ತೆಂಕಕಾರಂದೂರು, ಸಾಧಕ ಸಂಯೋಜಕಿ ಪ್ರಶಸ್ತಿಯನ್ನು ವಸಂತಿ, ಸವಿತಾ ಪಿರೇರಾ ಪಡೆದರು. ಸಾಧಕ ಘಟಕ ಪ್ರಶಸ್ತಿಯನ್ನು ಶಿಶಿಲ – ಅರಸಿನಮಕ್ಕಿ, ಮಡಂತ್ಯಾರು ಘಟಕ ಪಡೆಯಿತು. ಪ್ರಾದೇಶಿಕ ನಿರ್ದೇಶಕರು ವಿವೇಕ್ ವಿ. ಪಾಯಿಸ್ ಸ್ವಾಗತಿಸಿದರು. ಬೆಳ್ತಂಗಡಿ ಮತ್ತು ಗುರುವಾಯನಕೆರೆ ಯೋಜನಾ ವ್ಯಾಪ್ತಿಯ ಸ್ವಯಂಸೇವಕರು ಸಹಕರಿಸಿದರು.




